ಆಯ್ಕೆ ವಿಧಾನ ಬದಲಾಗಬೇಕಿದೆ ಜನರ ಪ್ರಶಸ್ತಿಯಾಗಲಿ
Team Udayavani, Oct 27, 2018, 6:00 AM IST
ರಾಜ್ಯೋತ್ಸವ ಪ್ರಶಸ್ತಿಗಾಗಿ ಲಾಬಿ- ಇದು ಪ್ರತಿ ವರ್ಷ ನವಂಬರ್ ತಿಂಗಳು ಸಮೀಪಿಸುತ್ತಿರುವಾಗ ಕೇಳಿ ಬರುವ ಒಂದು ಸಾಮಾನ್ಯ ಸುದ್ದಿ. ರಾಜ್ಯೋತ್ಸವ ಸಂದರ್ಭದಲ್ಲಿ ಸರಕಾರ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೀಡುವ ರಾಜ್ಯದ ಪರಮೋಚ್ಚ ಪ್ರಶಸ್ತಿಯಿದು. ಸಹಜವಾಗಿಯೇ ಈ ಪ್ರಶಸ್ತಿ ಪಡೆಯಬೇಕೆಂಬ ಆಕಾಂಕ್ಷೆ ಬಹಳಷ್ಟು ಮಂದಿಯಲ್ಲಿ ಇರುತ್ತದೆ. ಆದರೆ ಇತ್ತೀಚೆಗಿನ ವರ್ಷಗಳಿಂದ ಈ ಪ್ರಶಸ್ತಿ ಪಡೆಯಲು ನಡೆಯುತ್ತಿರುವ ಪೈಪೋಟಿಯನ್ನು ನೋಡುವಾಗ ಬೇಸರವಾಗುತ್ತದೆ. ಲಾಬಿ ಮಾಡುವುದೇ ಪ್ರಶಸ್ತಿ ಪಡೆಯಲು ಇರುವ ಮಾನದಂಡ ಎಂಬಂತೆ ಪ್ರತಿಬಿಂಬಿತವೂ ಆಗುತ್ತಿರುವುದು ಪ್ರಶಸ್ತಿಯ ಹಿರಿಮೆಯನ್ನು ಕಡಿಮೆಗೊಳಿಸುತ್ತಿದೆ.
ಒಂದು ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರೆಂದರೆ ವಿಶೇಷವಾದ ಸ್ಥಾನವಿತ್ತು. ಸಮಾಜದಲ್ಲಿ ಅವರು ಬಹಳ ಗೌರವಾದರಗಳಿಗೆ ಪಾತ್ರರಾಗುತ್ತಿದ್ದರು. ಆದರೆ ಈಗೀಗ ವರ್ಷದಿಂದ ವರ್ಷಕ್ಕೆ ನಿಧಾನವಾಗಿ ಮಹತ್ವ ಕಳೆದುಕೊಳ್ಳುತ್ತಿರುವುದು, ಸಾಮಾನ್ಯ ಎಂಬಂತಾಗಿರುವುದು ಬೇಸರ ತರುವಂಥದ್ದು. ನಿರ್ದಿಷ್ಟ ಸಂಖ್ಯೆಯಲ್ಲಿನ ಅಸ್ಪಷ್ಟತೆ, ಆಯ್ಕೆಯಲ್ಲಿನ ಪಾರದರ್ಶಕತೆ ಕೊರತೆ, ಆಯ್ಕೆಗೆ ವಿಶೇಷವಾದ ವ್ಯವಸ್ಥೆ ಇಲ್ಲದಿರುವುದು-ಇತ್ಯಾದಿ ಹಲವು ಅಂಶಗಳು ಪ್ರಶಸ್ತಿಯ ಮಹತ್ವವನ್ನು ಕುಂದಿಸುತ್ತಿವೆ. 2010ರಲ್ಲಿ 159 ಮಂದಿಯನ್ನು ಪ್ರಶಸ್ತಿಗಾಗಿ
ಆಯ್ಕೆ ಮಾಡಲಾಗಿತ್ತು.
ಪ್ರಶಸ್ತಿ ಪ್ರದಾನದ ಕೊನೆ ಕ್ಷಣದವರೆಗೂ ಪುರಸ್ಕೃತರ ಪಟ್ಟಿ ಪರಿಷ್ಕೃತವಾಗುತ್ತಲೇ ಇದ್ದ ಪ್ರಸಂಗಗಳೂ ನಡೆದಿವೆ. ಕೆಲವೊಮ್ಮೆ ವೇದಿಕೆಯಲ್ಲಿ ದಿಢೀರನೆ ಪ್ರಕಟಿಸಿದ್ದೂ ಇದೆ. ಇಷ್ಟೇ ಅಲ್ಲ. ಕೆಲ ವರ್ಷಗಳ ಹಿಂದೆ ರಾಜ್ಯೋತ್ಸವ ಪ್ರಶಸ್ತಿಗೆ ನಡೆಯುವ ಲಾಬಿ ಹೈಕೋರ್ಟಿನ ಮೆಟ್ಟಿಲನ್ನೂ ಏರಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯವೇ ಯೋಗ್ಯರು ಮತ್ತು ಅರ್ಹರನ್ನು ಪ್ರಶಸ್ತಿಗೆ ಆರಿಸುತ್ತಿಲ್ಲ, ರಾಜ್ಯೋತ್ಸವ ಪ್ರಶಸ್ತಿಗೆ ಪಡೆಯುವ ಅರ್ಜಿ ಒಂದು ರೀತಿಯಲ್ಲಿ ಟೆಂಡರ್‌ಗೆ ಕರೆಯುವ ಅರ್ಜಿಯಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಬಳಿಕವೂ ಪರಿಸ್ಥಿತಿ ಬದಲಾಗಿಲ್ಲ.
ಯೋಗ್ಯ ವ್ಯಕ್ತಿಗಳಿಗೆ ಬದುಕಿರುವವರೆಗೂ ಪ್ರಶಸ್ತಿ ಸಿಗುವುದಿಲ್ಲ. ಅವರು ಸಾಯುವ ತನಕ ಎಲೆಮರೆಯ ಕಾಯಿಯಾಗಿಯೇ ಇರುತ್ತಾರೆ. ಆದರೆ ಲಾಬಿ ಮಾಡಿದವರು, ವಶೀಲಿಬಾಜಿ ನಡೆಸಿದವರು, ರಾಜಕೀಯ ನಾಯಕರ ಮನೆ ಕಚೇರಿಗಳಿಗೆ ಎಡತಾಕಿ ಶಿಫಾರಸು ಮಾಡಿಸಿಕೊಂಡವರ ಹೆಸರು ಪ್ರಶಸ್ತಿಗೆ ಪರಿಗಣಿಸಲ್ಪಡುತ್ತದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಿರುವುದು ಸ್ಪಷ್ಟ.
ಈಗ ಪ್ರಶಸ್ತಿ ಹಂಚಿಕೆಗೆ ಯೋಗ್ಯತೆಗಿಂತಲೂ ಜಾತಿವಾರು ಪ್ರಾತಿನಿಧ್ಯ, ಪ್ರಾದೇಶಿಕತೆ, ರಾಜಕೀಯ ಒಲವುಗಳೇ ಮುಖ್ಯವಾಗುತ್ತದೆ. ಕನಿಷ್ಠ ಜಿಲ್ಲೆಗೊಂದು, ಜಾತಿಗೊಂದಾದರೂ ಪ್ರಶಸ್ತಿ ನೀಡಬೇಕೆಂಬ ಅಲಿಖೀತ ನಿಯಮವನ್ನು ಅನುಸರಿಸಲಾಗುತ್ತಿದೆ.ಜಾತಿಗಿಂತಿಷ್ಟು, ಪಕ್ಷಕ್ಕಿಂತಿಷ್ಟು, ಜಿಲ್ಲೆಗಿಂತಿಷ್ಟು ಎಂದು ವಿಂಗಡಿಸಿದ ಬಳಿಕ ಉಳಿದ ಪ್ರಶಸ್ತಿಯನ್ನು ಒಂದಷ್ಟು ಮಂದಿಗೆ ಹಂಚುವುದು ವಾಡಿಕೆಯಾಗಿದೆ.
ಹೀಗಾಗಿ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಒಂದಲ್ಲ ಒಂದು ವಿವಾದ ಸುತ್ತಿಕೊಳ್ಳುತ್ತದೆ. ಹೀಗಾಗಿ ಸರಕಾರ ಕೊಡುವ ಪ್ರಶಸ್ತಿ ಸ್ವೀಕರಿಸುವುದೆಂದರೆ ಒಂದು ಬಗೆಯ ಮುಜುಗರ ಸನ್ನಿವೇಶವಾಗಿಯೂ ಮಾರ್ಪಡುತ್ತಿದೆ. ಇದರಿಂದ ಪ್ರಶಸ್ತಿಯ ಮೌಲ್ಯ ಕಡಿಮೆಯಾಗುವುದಲ್ಲದೆ ಪ್ರಶಸ್ತಿ ಕೊಡುವವರ ಮೌಲ್ಯವೂ ನಗಣ್ಯವಾಗುತ್ತದೆ ಎಂಬುದನ್ನು ಆಡಳಿತಗಾರರು ಗಮನಿಸಬೇಕು. ಅರ್ಹತೆಯಿಂದಲೇ ಪ್ರಶಸ್ತಿ ಸಿಕ್ಕಿದ್ದರೂ ಅವರನ್ನು ಸಮಾಜ ಬೇರೆಯದ್ದೇ ದೃಷ್ಟಿಯಿಂದ ನೋಡುತ್ತದೆ.
ಹೀಗಾಗುವುದನ್ನು ತಪ್ಪಿಸಲು ಪ್ರಶಸ್ತಿ ಆಯ್ಕೆ ವಿಧಾನವನ್ನೇ ಆಮೂಲಾಗ್ರವಾಗಿ ಬದಲಾಯಿಸುವುದು ಅಗತ್ಯ. ಹೀಗಿರುವ ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯುವ ವಿಧಾನಕ್ಕಿಂತ ಭಿನ್ನವಾದ ವಿಧಾನವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಪದ್ಮ ಪ್ರಶಸ್ತಿಗಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕ್ರಮವನ್ನೂ ಗಮನಿಸಬಹುದು. ಪದ್ಮ ಪ್ರಶಸ್ತಿಗೆ ಯಾರು ಬೇಕಾದರೂ ಸಾಧಕರನ್ನು ಶಿಫಾರಸು ಮಾಡಬಹುದು ಎಂಬ ನಿಯಮ ಬಂದ ಬಳಿಕ ಅರ್ಹರಿಗೆ ಪ್ರಶಸ್ತಿ ಸಿಕ್ಕಿರುವುದನ್ನು ಗಮನಿಸಬಹುದು.
ಈ ವ್ಯವಸ್ಥೆಯ ಬಳಿಕ ಪದ್ಮ ಪ್ರಶಸ್ತಿಗಳು ವಿವಾದಕ್ಕೀಡಾಗಿಲ್ಲ ಎನ್ನುವುದೂ ಗಮನಾರ್ಹ ಅಂಶ. ಇದಕ್ಕಾಗಿ ಕೇಂದ್ರ ಸರಕಾರ ಆನ್‌ಲೈನ್ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ರಾಜ್ಯೋತ್ಸವವೂ ಈ ರೀತಿಯಾದ ನೂತನ ವ್ಯವಸ್ಥೆಗಳನ್ನು ಮಾಡಿಕೊಂಡರೆ ಪ್ರಶಸ್ತಿಗೂ ಮೌಲ್ಯ, ಕೊಡುವವರಿಗೂ ಮೌಲ್ಯ ಹಾಗೂ ಅದನ್ನು ಸ್ವೀಕರಿಸುವವರಿಗೂ ಗೌರವ ಸಿಕ್ಕೀತು. ರಾಜ್ಯೋತ್ಸವ ಪ್ರಶಸ್ತಿ ನಿಜವಾದ ಅರ್ಥದಲ್ಲಿ ಜನರ ಪ್ರಶಸ್ತಿಯಾದೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.