ಬೆಟ್ಟಿಂಗ್‌ಗೆ ಕಡಿವಾಣ: ಶೀಘ್ರ ಕಾನೂನು ಜಾರಿಯಾಗಲಿ
Team Udayavani, Feb 15, 2024, 6:00 AM IST
ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ವ್ಯಾಪಕವಾಗಿದ್ದು, ಲಕ್ಷಾಂತರ ಮಂದಿ ಈ ಜಾಲಕ್ಕೆ ಸಿಲುಕಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜತೆಯಲ್ಲಿ ಆನ್‌ಲೈನ್ ಗೇಮಿಂಗ್ ಕೂಡ ರಾಜ್ಯದಲ್ಲಿ ಆಳವಾಗಿ ಬೇರೂರಿದ್ದು ಜನರು ವಂಚನೆ ಗೊಳಗಾಗುತ್ತಿದ್ದಾರೆ. ಈ ಬೆಟ್ಟಿಂಗ್ ದಂಧೆಯಿಂದ ಹಣ ಕಳೆದುಕೊಂಡವರು ಮತ್ತು ವಂಚನೆಗೊಳಗಾದವರು ಅನ್ಯ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿರುವ ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ರಾಜ್ಯಕ್ಕೆ ಅನ್ವಯವಾಗುವಂತೆ ಕ್ರಿಕೆಟ್ ಬೆಟ್ಟಿಂಗ್ ಸಹಿತ ಆನ್‌ಲೈನ್ ಬೆಟ್ಟಿಂಗ್‌ಗೆ ಕಡಿವಾಣ ಹಾಕಲು ಪ್ರತ್ಯೇಕ ಕಾನೂನು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದೆ.
ಹಾಲಿ ಜಾರಿಯಲ್ಲಿರುವ ಕಾನೂನಿನಡಿಯಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದರೂ ದಂಧೆಗೆ ಕಡಿವಾಣ ಹಾಕಲು ಸರಕಾರದಿಂದ ಸಾಧ್ಯವಾಗುತ್ತಿಲ್ಲ. ಬೆಟ್ಟಿಂಗ್ ದಂಧೆಕೋರರನ್ನು ಬಂಧಿಸಿ, ನ್ಯಾಯಾಲಯದ ವಶಕ್ಕೊಪ್ಪಿಸಿದರೂ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಮತ್ತೆ ದಂಧೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಸಹಿತ ಆನ್‌ಲೈನ್ ಬೆಟ್ಟಿಂಗ್‌ಗೆ ಕಡಿವಾಣ ಹಾಕಲು ಶೀಘ್ರದಲ್ಲಿಯೇ ಕಾನೂನು ಒಂದನ್ನು ರೂಪಿಸಿ, ಜಾರಿಗೊಳಿಸಲು ಸರಕಾರ ಚಿಂತಿಸಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ರಾಜ್ಯ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರಕಾರದ ಈ ಚಿಂತನೆ ಸ್ವಾಗತಾರ್ಹವಾಗಿದ್ದು, ಆದಷ್ಟು ಶೀಘ್ರದಲ್ಲಿ ಇಂತಹ ಕಾನೂನನ್ನು ರೂಪಿಸಿ, ಜಾರಿಗೊಳಿಸಲು ಸರಕಾರ ಮುಂದಾಗಬೇಕಿದೆ. ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವ ದಿಸೆಯಲ್ಲಿ ಸರಕಾರ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಅದು ಯಶಸ್ವಿಯಾಗಿಲ್ಲ. ಈ ದಂಧೆ ದೇಶವ್ಯಾಪಿಯಾಗಿರುವುದರಿಂದ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳು ದಂಧೆಕೋರರ ಮೇಲೆ ಅಷ್ಟೇನೂ ಪರಿಣಾಮ ಬೀರುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತನ್ನ ಕಾರ್ಯವ್ಯಾಪ್ತಿಯಲ್ಲಿ ಆನ್‌ಲೈನ್ ಬೆಟ್ಟಿಂಗ್‌ಗೆ ನಿಯಂತ್ರಣ ಹೇರಲು ಕಾನೂನು ಜಾರಿಗೊಳಿಸಲು ಮುಂದಾಗಿರುವುದು ನ್ಯಾಯೋಚಿತವೆ. ಆದರೆ ಕಳೆದ ಕೆಲವು ವರ್ಷಗಳಿಂದ ರಾಜ್ಯ ಸರಕಾರ ಈ ಮಾತನ್ನು ಹೇಳುತ್ತಲೇ ಬಂದಿದೆಯಾದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಹಿಂದೆಯೂ ಸಚಿವ ಪರಮೇಶ್ವರ್ ಅವರು ಆನ್‌ಲೈನ್ ಬೆಟ್ಟಿಂಗ್‌ಗೆ ಕಡಿವಾಣ ಹಾಕಲು ಕಾನೂನು ರೂಪಿಸುವುದಾಗಿ ಭರವಸೆ ನೀಡಿದ್ದರು.
ಈಗ ವಿಧಾನಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ವ್ಯಾಪಕವಾಗಿರುವ ಸಂಬಂಧ ತೀವ್ರ ಕಳವಳ ವ್ಯಕ್ತಪಡಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ ವೇಳೆ ಸಚಿವರು ಮತ್ತದೇ ಭರವಸೆಯನ್ನು ನೀಡಿದ್ದಾರೆ. ಇನ್ನಾದರೂ ಸರಕಾರ ತನ್ನ ಚಿಂತನೆ ಯನ್ನು ಕಾರ್ಯಗತಗೊಳಿಸುತ್ತ ಪ್ರಾಮಾಣಿಕ ಪ್ರಯತ್ನ ನಡೆಸಬೇಕು.
ಆನ್‌ಲೈನ್ ಬೆಟ್ಟಿಂಗ್ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವುದರಿಂದ ಈ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗದಿದ್ದರೂ ದಂಧೆಕೋರರ ಮೇಲೆ ನಿಗಾ ಇರಿಸಲು ಮತ್ತು ಜನಸಾಮಾನ್ಯರು ಈ ಜಾಲಕ್ಕೆ ಸಿಲುಕದಂತೆ ಎಚ್ಚರ ವಹಿಸಲು ಸಾಧ್ಯವಿದೆ. ಹೀಗಾಗಿ ರಾಜ್ಯ ಸರಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆಯನ್ನು ನಿಯಂತ್ರಿಸಲು ಸೈಬರ್ ತಂತ್ರಜ್ಞರು, ಕಾನೂನು ತಜ್ಞರೊಂದಿಗೆ ವಿಸ್ತೃತ ಸಮಾಲೋಚನೆಗಳನ್ನು ನಡೆಸಿ ಕಠಿಣ ಕಾನೂನು ಒಂದನ್ನು ರೂಪಿಸಿ, ಜಾರಿಗೊಳಿಸಬೇಕು. ಆ ಮೂಲಕ ಬೆಟ್ಟಿಂಗ್ ದಂಧೆಕೋರರಿಗೆ ಕಡಿವಾಣ ಹಾಕಿ, ರಾಜ್ಯದ ಜನರ ಹಿತವನ್ನು ರಕ್ಷಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.