ಬೋಗಸ್ ಮತದಾನ ಪ್ರಜಾತಂತ್ರಕ್ಕೆ ಕಳಂಕ
Team Udayavani, May 4, 2019, 6:00 AM IST
ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಬೋಗಸ್ ಮತದಾನವಾಗಿರುವುದನ್ನು ಚುನಾವಣಾ ಆಯೋಗ ದೃಢಪಡಿಸಿದೆ. ಬೋಗಸ್ ಮತದಾನ ಪ್ರಜಾತಂತ್ರ ವ್ಯವಸ್ಥೆಗೆ ಮಾಡುವ ಅವಮಾನ. ಇದರಿಂದ ಚುನಾವಣೆಯ ವಿಶ್ವಾಸಾರ್ಹತೆ, ಘನತೆ ಮತ್ತು ನೈತಿಕತೆ ನಾಶವಾಗುತ್ತದೆ. ಆದರೂ ಈ ಪಿಡುಗು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಮುಂದುವರಿ ದುಕೊಂಡು ಬಂದಿದೆ.
ಮತಪತ್ರಗಳ ಮೂಲಕ ಮತದಾನ ಮಾಡುತ್ತಿದ್ದ ಕಾಲದಲ್ಲಿ ಬೋಗಸ್ ಮತದಾನ ವ್ಯಾಪಕವಾಗಿತ್ತು. ಬಿಹಾರ, ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಪಕ್ಷಗಳ ಮುಖಂಡರು ಮತಗಟ್ಟೆಯನ್ನು ವಶಪಡಿಸಿಕೊಂಡು ಸಾರಾಸಗಟಾಗಿ ಬೋಗಸ್ ಮತ ಹಾಕಿದ ವರದಿಗಳು ಬರುತ್ತಿದ್ದವು. ಆದರೆ ಹೆಚ್ಚು ಸುಶಿಕ್ಷಿತವಾಗಿರುವ ದಕ್ಷಿಣ ಭಾರತಕ್ಕೆ ಬೋಗಸ್ ಮತದಾನ ಅಪರಿಚಿತವಲ್ಲದಿದ್ದರೂ ಅದು ಉತ್ತರದಷ್ಟು ವ್ಯಾಪಕವಾಗಿರಲಿಲ್ಲ. ಮತಯಂತ್ರ ಆವಿಷ್ಕಾರವಾದ ಬಳಿಕ ಹಾಗೂ ಚುನಾವಣಾ ಆಯೋಗ ಜಾರಿಗೆ ತಂದ ಗುರುತಿನ ಕಾರ್ಡು ಕಡ್ಡಾಯದಂಥ ಸುಧಾರಣಾ ಕ್ರಮಗಳಿಂದ ಬೋಗಸ್ ಮತದಾನ ಗಣನೀಯವಾಗಿ ಕಡಿಮೆಯಾಗಿದೆ. ಚುನಾವಣಾ ಅಕ್ರಮಗಳಿಗೆ ಕುಖ್ಯಾತವಾಗಿದ್ದ ಉತ್ತರದ ರಾಜ್ಯಗಳಲ್ಲಿ ಈ ಕ್ರಮಗಳಿಂದಾಗಿ ಶಿಸ್ತುಬದ್ಧವಾಗಿ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿದೆ. ಆದರೆ ಈಗ ಶೇ. 100 ಸಾಕ್ಷರತೆಯನ್ನು ಸಾಧಿಸಿರುವ, ಬುದ್ಧಿವಂತರ ನಾಡೆಂದು ಅರಿಯಲ್ಪಡುವ ಕೇರಳದಲ್ಲಿ ಬೋಗಸ್ ಮತದಾನ ನಡೆದಿರುವುದು ತಲೆತಗ್ಗಿಸಬೇಕಾದ ವಿಚಾರ.
ಬೋಗಸ್ ಮತದಾನದ ಮೂರು ಪ್ರಕರಣಗಳು ದೃಢಪಟ್ಟಿದ್ದು, ಈ ಮೂರೂ ಪ್ರಕರಣಗಳಲ್ಲಿ ಆಡಳಿತರೂಢ ಸಿಪಿಎಂ ಕಾರ್ಯಕರ್ತರೇ ಬೋಗಸ್ ಮತದಾನ ಮಾಡಿದ್ದಾರೆ.ಇದರಿಂದ ಪರೋಕ್ಷವಾಗಿ ಸರಕಾರವೇ ಇಲ್ಲಿ ಬೋಗಸ್ ಮತದಾನಕ್ಕಾಗಿ ಕುಮ್ಮಕ್ಕು ಕೊಟ್ಟಂತಾಗಿದೆ. ಇದು ಇನ್ನೂ ಆಘಾತಕಾರಿಯಾದ ವಿಚಾರ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಕೇರಳದಲ್ಲಿ ಬೋಗಸ್ ಮತದಾನ ನಡೆದ ಬಗ್ಗೆ ದೂರುಗಳು ಬಂದಿದ್ದವು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬರೀ 89 ಮತಗಳಿಂದ ಪರಾಜಯ ಕಂಡಿದ್ದ ಬಿಜೆಪಿ ಅಭ್ಯರ್ಥಿ ಬೋಗಸ್ ಮತದಾನವಾಗಿದೆ ಎಂದು ನ್ಯಾಯಾಲಯದ ಕಟ್ಟೆಯೇರಿದ್ದರು.ಊರಲಿಲ್ಲದವರ ಮತವನ್ನು ಬೇರೆ ಯಾರೋ ಚಲಾಯಿಸಿದ ಹಲವು ಪ್ರಕರಣಗಳನ್ನು ಅವರು ಬೆಟ್ಟು ಮಾಡಿ ತೋರಿಸಿದರೂ ಇದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸಾಧ್ಯವಾಗದೆ ಅವರು ಕೇಸ್ ಹಿಂದೆಗೆದುಕೊಂಡಿದ್ದಾರೆ. ಆದರೆ ಈ ಸಲ ಬೋಗಸ್ ಮತದಾನವಾಗಿರುವ ದೃಶ್ಯಗಳು ಮತಗಟ್ಟೆಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಚುನಾವಣಾ ಆಯೋಗ ಈ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಕೇಸ್ ದಾಖಲಿಸಿಕೊಂಡಿದೆ. ಇದಲ್ಲದೆ ಅಂಚೆ ಮತದಲ್ಲೂ ಬೋಗಸ್ ಮತಗಳನ್ನು ಚಲಾಯಿಸಲಾಗಿದೆ. ಪೊಲೀಸರ ಹೆಸರಲ್ಲಿ ಅಂಚೆಮತಪತ್ರಗಳನ್ನು ಸಂಗ್ರಹಿಸಿ ಬಳಿಕ ಮತ ಚಲಾಯಿಸಲಾಗಿದೆ. ಇದನ್ನು ಮಾಡಿದವರು ಕೂಡಾ ಸಿಪಿಎಂ ಪಕ್ಷದ ಪರವಾಗಿರುವವರು. ವಿಪರ್ಯಾಸವೆಂದರೆ ಮತಯಂತ್ರಗಳ ಸಾಚಾತನದ ಬಗ್ಗೆ ಸಂಶಯ ವ್ಯಕ್ತಪಡಿಸುವ ಪಕ್ಷದ ನಾಯಕರೇ ಆರಂಭದಲ್ಲಿ ಬೋಗಸ್ ಮತದಾನವನ್ನು ಬಲವಾಗಿ ಸಮರ್ಥಿಸಿಕೊಂಡದ್ದು. ಸಿಪಿಎಂ ನಾಯಕಗಢಣ ಒಕ್ಕೂರಲಿನಿಂದ ಬೋಗಸ್ ಮತದಾನವಾಗಿಲ್ಲ. ಇದೆಲ್ಲ ರಾಜ್ಯಕ್ಕೆ ಕಳಂಕ ಹಚ್ಚುವ ಪ್ರಯತ್ನ ಎಂದು ವಾದಿಸಿತ್ತು. ಇದೀಗ ಬೆಳಕಿಗೆ ಬಂದಿರುವ ಸಾಕ್ಷ್ಯಗಳು ಅವರ ಸುಳ್ಳುಗಳನ್ನು ಬಯಲಾಗಿಸಿವೆ. ಇನ್ನೂ ಆಘಾತಕಾರಿ ವಿಷಯವೆಂದರೆ ಬೋಗಸ್ ಮತದಾನಕ್ಕೆ ಸಹಾಯ ಮಾಡಿರುವುದು ಮತಗಟ್ಟೆಯ ಕೆಲವು ಅಧಿಕಾರಿಗಳು ಮತ್ತು ಪೊಲೀಸರು. ಇದು ಬೇಲಿಯೇ ಹೊಲ ಮೇಯ್ದ ಪ್ರಕರಣಕ್ಕೊಂದು ಸ್ಪಷ್ಟ ಉದಾಹರಣೆ. ಬೋಗಸ್ ಮತದಾನಕ್ಕೆ ಸಂಬಂಧಿಸಿದಂತೆ ಇಷ್ಟರ ತನಕ ಮೂವರ ವಿರುದ್ಧ ಕೇಸ್ ದಾಖಲಾಗಿದೆ. ಈ ಪೈಕಿ ಓರ್ವ ಸಿಪಿಎಂನ ಪಂಚಾಯತ್ ಸದಸ್ಯ ಹಾಗೂ ಓರ್ವ ಮಹಿಳೆ.
ಬೋಗಸ್ ಮತದಾನ ಪಾರದರ್ಶಕ, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಪ್ರಜಾತಂತ್ರದ ಆಶಯವನ್ನೇ ಭಂಗಗೊಳಿಸುತ್ತದೆ. ಇದೀಗ ಚುನಾವಣಾ ಆಯೋಗ ಈ ಪ್ರಕರಣಗಳನ್ನು ಅತ್ಯಂತ ಕ್ಷಿಪ್ರವಾಗಿ ಬಗೆಹರಿಸುವ ಹೊಣೆಗಾರಿಕೆಯನ್ನು ಹೊಂದಿದೆ. ಜನಾದೇಶವನ್ನು ಅಕ್ರಮವಾಗಿ ಬದಲಾಯಿಸುವ ಪ್ರಕ್ರಿಯೆ ಒಂದು ಗಂಭೀರ ಅಪರಾಧ ಎಂದು ಪರಿಗಣಿಸುವ ಅಗತ್ಯವಿದ್ದು, ಇದಕ್ಕೆ ಸಂಬಂಧಪಟ್ಟ ಕಾನೂನುಗಳಿಗೆ ತಿದ್ದುಪಡಿ ಮಾಡಿ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಸಿಗುವಂತಾದರೆ ಮುಂದಕ್ಕೆ ಇಂಥ ಪಿಡುಗನ್ನು ನಿಯಂತ್ರಿಸಬಹುದು. ಇದು ಸಾಧ್ಯವಾಗಬೇಕಾದರೆ ಚುನಾವಣಾ ಆಯೋಗ ಪ್ರಕರಣಗಳನ್ನು ಕ್ಷಿಪ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸಿ ಬೋಗಸ್ ಮತ ಹಾಕಿವದವರಿಗೆ, ಅವರಿಗೆ ಕುಮ್ಮಕ್ಕು ಕೊಟ್ಟವರಿಗೆ ಮತ್ತು ಸಹಕರಿಸಿದವರಿಗೆ ಕಠಿನ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇದೇ ವೇಳೆ ಬೋಗಸ್ ಮತದಾನದಿಂದಾಗಿರುವ ಹಾನಿಯನ್ನು ಸರಿಪಡಿಸುವ ಹೊಣೆಯೂ ಚುನಾವಣಾ ಆಯೋಗದದ್ದು. ಎಲ್ಲೆಲ್ಲ ಅಂಥ ಮತದಾನವಾಗಿದೆಯೋ ಅಲ್ಲೆಲ್ಲ ಮರುಮತ ನಡೆಸಬೇಕು. ಚುನಾವಣೆ ಪ್ರಕ್ರಿಯೆಯಲ್ಲಿ ಜನರಿಗೆ ವಿಶ್ವಾಸ ಉಳಿಯುವಂತೆ ಮಾಡಲು ಇಂಥ ಕ್ರಮಗಳು ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.