ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್; ಅತ್ಯಗತ್ಯ ಕ್ರಮ
Team Udayavani, Dec 27, 2021, 6:10 AM IST
ಕೊರೊನಾ ಮತ್ತು ಇದರ ಹೊಸ ರೂಪಾಂತರಿ ಒಮಿಕ್ರಾನ್ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಇತರೆ ರೋಗಗಳಿಂದ ನರಳುತ್ತಿರುವ 60 ವರ್ಷ ದಾಟಿದ ವೃದ್ಧರಿಗೆ ಬೂಸ್ಟರ್ ಲಸಿಕೆ ನೀಡಲು ಮುಂದಾಗಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡವರು ಮತ್ತು ಮುಂಚೂಣಿ ಕಾರ್ಯಕರ್ತರ ಸುರಕ್ಷತೆ ಅತ್ಯಂತ ಪ್ರಮುಖವಾದದ್ದು. ಜಗತ್ತಿನಾದ್ಯಂತ ಒಮಿಕ್ರಾನ್ ಭೀತಿ ಶುರುವಾದಾಗಲೇ, ಬೂಸ್ಟರ್ ಮತ್ತು ಹೆಚ್ಚುವರಿ ಲಸಿಕೆಗಾಗಿ ಒತ್ತಡ ಆರಂಭವಾಗಿತ್ತು. ಇದಕ್ಕೆ ಕಾರಣವೂ ಇದೆ. ಜನವರಿಯಲ್ಲಿ ದೇಶಾದ್ಯಂತ ಲಸಿಕಾ ಅಭಿಯಾನ ಶುರುವಾಗಿದ್ದು, ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ದಾಟಿದ ವೃದ್ಧರಿಗೆ ಲಸಿಕೆ ನೀಡಲಾಗಿತ್ತು. ಈ ಲೆಕ್ಕಾಚಾರದಲ್ಲಿ ತೆಗೆದುಕೊಂಡರೆ ಇವರು ಲಸಿಕೆ ಪಡೆದು ಆಗಲೇ 11 ತಿಂಗಳು ಪೂರೈಸಿದೆ. ಅಲ್ಲದೆ ಲಸಿಕೆಯ ಪರಿಣಾಮವೂ ಇಷ್ಟರ ಹೊತ್ತಿಗೆ ಕಡಿಮೆಯಾಗಿರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆಗ ಮೊದಲ ಡೋಸ್ ಪಡೆದ 28 ದಿನದಲ್ಲೇ ಎರಡನೇ ಡೋಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು, ದಾದಿಯರು, ಇತರ ಆರೋಗ್ಯ ಸೇವಾ ಕಾರ್ಯಕರ್ತರು, ಪೊಲೀಸರು ಸೇರಿದಂತೆ ಬಹುತೇಕ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಈಗ ಬೂಸ್ಟರ್ ಡೋಸ್ ಬೇಕಾಗಿದೆ. ಇದನ್ನು ನಮ್ಮ ತಜ್ಞ ವೈದ್ಯರಷ್ಟೇ ಅಲ್ಲ, ವಿದೇಶಗಳಲ್ಲೂ ಬೂಸ್ಟರ್ ಡೋಸ್ ಬಗ್ಗೆ ಪ್ರತಿಪಾದಿಸಲಾಗಿದೆ. ಇವರ ಆರೋಗ್ಯ ಉತ್ತಮವಾಗಿದ್ದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲ ರೀತಿಯ ಶಕ್ತಿ ಸಿಕ್ಕಂತಾಗುತ್ತದೆ. ಹೀಗಾಗಿ ಕೇಂದ್ರ ಸರಕಾರ ಬೂಸ್ಟರ್ ಡೋಸ್ ನೀಡಲು ಮುಂದಾಗಿರುವುದು ಎಲ್ಲಾ ರೀತಿಯಲ್ಲೂ ಸ್ವಾಗತಾರ್ಹ ಕ್ರಮವೇ ಆಗಿದೆ. ಇನ್ನು ಇತರ ರೋಗಗಳಿಂದ ನರಳುತ್ತಿರುವ 60 ವರ್ಷ ದಾಟಿದ ವೃದ್ಧರಿಗೂ ಸದ್ಯ ಬೂಸ್ಟರ್ ಡೋಸ್‌ನ ಅಗತ್ಯವಿದೆ. ಕಾರಣ, ಇವರಿಗೂ ಲಸಿಕೆ ನೀಡಿ ಆಗಲೇ 8 ತಿಂಗಳಿಗಿಂತ ಹೆಚ್ಚೇ ಆಗಿದೆ.
ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಪ್ರಮುಖ ಸಂಗತಿ ಎಂದರೆ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಮುಂದಾಗಿರುವುದು. ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಕೆಲವು ದೇಶಗಳಲ್ಲಿ 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಒಮಿಕ್ರಾನ್ ಆರಂಭವಾಗುವ ಮುನ್ನವೇ ಮಕ್ಕಳಿಗೆ ಲಸಿಕೆ ನೀಡುವ ಕುರಿತಂತೆ ಚರ್ಚೆಗಳು ಶುರುವಾಗಿದ್ದವು. ಕೊರೊನಾ ಮೂರನೇ ಅಲೆ ಬಂದರೆ, ಅದು ಮಕ್ಕಳನ್ನೇ ಹೆಚ್ಚಾಗಿ ಕಾಡುವ ಸಂಭವವಿದೆ ಎಂದೂ ಹೇಳಲಾಗುತ್ತಿತ್ತು. ಮಕ್ಕಳು ಲಸಿಕೆ ಪಡೆದಿಲ್ಲವಾದ ಕಾರಣದಿಂದ ಇವರೇ ಕೊರೊನಾಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ತಜ್ಞ ವೈದ್ಯರೇ ಹೇಳಿದ್ದರು. ಈಗ ಮೊದಲ ಹಂತದಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುತ್ತಿರುವ ಉತ್ತಮವಾದ ಕ್ರಮವೇ. ದೇಶದಲ್ಲಿ 15ರಿಂದ 18 ವರ್ಷದ ನಡುವಿನ 7.4 ಕೋಟಿ ಮಕ್ಕಳು ಇದ್ದಾರೆ. 3 ಕೋಟಿ ಮುಂಚೂಣಿ, ಆರೋಗ್ಯ ಕಾರ್ಯಕರ್ತರು ಮತ್ತು ಇತರ ರೋಗಗಳಿಂದ ನರಳುತ್ತಿರುವ 60 ವರ್ಷ ಮೀರಿದವರು 10 ಕೋಟಿ ಮಂದಿ ಇದ್ದಾರೆ. ಅವರಿಗೆ ಲಸಿಕೆ ನೀಡಲು ಸರಕಾರ ಸಿದ್ಧತೆ ಮಾಡಿಕೊಳ್ಳಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.