ಬ್ರಿಕ್ಸ್ ಘೋಷಣೆ ರಾಜತಾಂತ್ರಿಕ ಗೆಲುವು: ಚೀನಕ್ಕೆ ತಕ್ಕ ಶಾಸ್ತಿ
Team Udayavani, Sep 5, 2017, 7:49 AM IST
ಭಯೋತ್ಪಾದನೆ ಅಸ್ತ್ರ ಬಳಸುವ ಆಟವನ್ನು ಹೆಚ್ಚು ಸಮಯ ಮುಂದುವರಿಸಿಕೊಂಡು ಹೋಗುವುದು ಅಸಾಧ್ಯ ಎನ್ನುವುದು ಪಾಕ್‌ಗೆ ಮನವರಿಕೆಯಾಗಬಹುದು.
ಚೀನಾದ ಕ್ಸಿಯಾಮೆನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶದಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ರಾಜತಾಂತ್ರಿಕ ಹೋರಾಟಕ್ಕೆ ಇನ್ನೊಂದು ಮಹತ್ತರ ಗೆಲುವು ಲಭಿಸಿದೆ. ಪಾಕಿಸ್ಥಾನ ದಲ್ಲಿ ಕಾರ್ಯಾಚರಿಸುತ್ತಿರುವ ಲಷ್ಕರ್-ಎ-ತಯ್ಯಬ, ಜೈಶ್-ಎ- ಮೊಹಮ್ಮದ್, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ಥಾನ್, ಹಿಜ್ಬುಲ್ ತಹ್ರೀರ್, ಹಕ್ಕಾನಿ ಭಯೋತ್ಪಾದಕ ಸಂಘಟನೆಗಳನ್ನು ಹೆಸರಿಸಿ ಕ್ಸಿಯಾಮೆನ್ ಘೋಷಣೆಯನ್ನು ಹೊರಡಿಸಲಾಗಿದೆ. ಮಾಮೂಲಾಗಿ ಬ್ರಿಕ್ಸ್‌ನಂತಹ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಭಯೋತ್ಪಾದನೆ ವಿರುದ್ಧ ನಿರ್ಣಯಗಳನ್ನು ಕೈಗೊಳ್ಳುವಾಗ ಸಂಘಟನೆಗಳನ್ನು ಹೆಸರಿಸುವ ಪರಿಪಾಠವಿಲ್ಲ. ಒಟ್ಟಾರೆಯಾಗಿ ಭಯೋತ್ಪಾದನೆಯ ನಿಗ್ರಹ ಎಂದು ಹೇಳುವುದು ವಾಡಿಕೆ. ಇದೇ ಮೊದಲು ಬ್ರಿಕ್ಸ್ ಸಮಾವೇಶದಲ್ಲಿ ಪಾಕಿಸ್ಥಾನದ ಉಗ್ರಸಂಘಟನೆಗಳನ್ನು ಹೆಸರಿಸಲಾಗಿದೆ. ಪಾಕ್ ಬೆಂಬಲಕ್ಕೆ ನಿಲ್ಲುವ ಮೂಲಕ ಭಾರತವನ್ನು ಮಣಿಸಬಹುದು ಎಂದು ಭಾವಿಸಿದ್ದ ಚೀನಕ್ಕೆ ಅದರದ್ದೇ ನೆಲದಲ್ಲಿ ಸ್ಪಷ್ಟ ಸಂದೇಶವೊಂದು ರವಾನೆಯಾಗಿದೆ.
ಚೀನದಲ್ಲೇ ಪಾಕಿಸ್ಥಾನದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳು ನಿರ್ಣಯ ಅಂಗೀಕರಿಸಿವೆ ಎನ್ನುವುದು ಇಲ್ಲಿ ಗಮನಾರ್ಹ ಅಂಶ. ಪಾಕ್ ಭಯೋತ್ಪಾದಕತೆಯ ಪೋಷಕ ಎಂದು ಇಡೀ ಜಗತ್ತೇ ಸಾರಿ ಹೇಳುತ್ತಿದ್ದರೂ ಕೇಳದೆ ಅದಕ್ಕೆ ಬೆಂಬಲ ನೀಡುತ್ತಾ ತನ್ನ ಮೊಂಡು ವಾದವನ್ನು ಮಂಡಿಸುತ್ತಿದ್ದ ಚೀನಕ್ಕೆ ಬ್ರಿಕ್ಸ್ ಶೃಂಗದಲ್ಲಿ ತಕ್ಕ ಶಾಸ್ತಿಯಾದಂತಾಗಿದೆ. ಜೈಶ್-ಎ-ಮುಹಮ್ಮದ್ ಸ್ಥಾಪಕ ಅಜರ್ ಮೊಹಮ್ಮದ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆಗೊಳಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಕ್ರಿಯೆಗೆ ಹಾಗೂ ಭಾರತ ಪರ ಮಾಣು ಪೂರೈಕೆದಾರರ ಗುಂಪಿಗೆ ಸೇರುವ ಪ್ರಯತ್ನಕ್ಕೆ ಅಡ್ಡವಾಗಿ ನಿಂತಿರುವುದೇ ಚೀನ. ಏನೇನೋ ನೆಪ ಹೇಳಿಕೊಂಡು ಪಾಕ್ ವಾದಕ್ಕೆ ಬೆಂಗಾವಲಾಗಿ ನಿಂತಿದ್ದ ಚೀನದ ಆಟ ಇನ್ನು ಹೆಚ್ಚು ಕಾಲ ನಡೆಯುವ ಸಾಧ್ಯತೆಯಿಲ್ಲ. ಬ್ರಿಕ್ಸ್ ಶೃಂಗದಲ್ಲೇ ಜೈಶ್ ವಿರುದ್ಧ ನಿರ್ಣಯ ಅಂಗೀಕಾರವಾಗಿರುವುದರಿಂದ ಇನ್ನು ಚೀನ ಅಜರ್ ಮೊಹಮ್ಮದ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂಬ ಹಳೇ ವಾದವನ್ನು ಮಂಡಿಸಿ ಕಾಲಹರಣ ಮಾಡುವಂತಿಲ್ಲ. ಒಂದೇ ವಾರದಲ್ಲಿ ಭಯೋತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನಕ್ಕೆ ಆಗಿರುವ ಎರಡನೇ ಮುಖ ಭಂಗವಿದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಘೋಷಿಸಿದ ಅಫ್ಘಾನಿಸ್ಥಾನ ನೀತಿಯಲ್ಲಿ ಪಾಕಿಸ್ಥಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು ಮಾತ್ರವಲ್ಲದೆ, ಆ ದೇಶಕ್ಕೆ ನೀಡುತ್ತಿರುವ ಆರ್ಥಿಕ ಮತ್ತು ಶಸ್ತ್ರಾಸ್ತ್ರಗಳ ನೆರವನ್ನು ಪರಾಮರ್ಶಿಸುವುದಾಗಿ ಹೇಳಿದ್ದಾರೆ. ಡೋಕ್ಲಾಂ ಬಿಕ್ಕಟ್ಟಿನಿಂದಾಗಿ ಬ್ರಿಕ್ಸ್ ಶೃಂಗದಲ್ಲಿ ಭಾರತ ಭಾಗವಹಿಸು ವುದೇ ಅನುಮಾನವಾಗಿತ್ತು. ಚೀನಕ್ಕೆ ಡೋಕ್ಲಾಗಿಂತಲೂ ಬ್ರಿಕ್ಸ್ ಹೆಚ್ಚು ಮುಖ್ಯವಾಗಿದ್ದ ಕಾರಣ ಶೃಂಗಕ್ಕೆ ಕೆಲ ದಿನಗಳು ಬಾಕಿಯಿರುವಾಗ ಹಠಾತ್ ಎಂದು ಗಡಿ ಬಿಕ್ಕಟ್ಟು ಬಗೆಹರಿಯಿತು. ಅನಂತರ ಚೀನ ಬ್ರಿಕ್ಸ್ ಶೃಂಗದಲ್ಲಿ ಭಯೋತ್ಪಾದನೆ ವಿಚಾರ ಬೇಡ ಎಂಬ ಮನದಿಂಗಿತವನ್ನು ಪರೋಕ್ಷವಾಗಿ ತಿಳಿಸಿ ಪೂಸಿ ಹೊಡೆಯುವ ಪ್ರಯತ್ನವನ್ನೂ ಮಾಡಿತು. ಆದರೆ ಶೃಂಗದ ಎರಡನೇ ದಿನ ಭಯೋತ್ಪಾದನೆಯೇ ಚರ್ಚೆಯ ಮುಖ್ಯ ವಿಷಯವಾದಾಗ ಇಕ್ಕಟ್ಟಿಗೆ ಸಿಲುಕಿದ ಚೀನ ಕ್ಸಿಯಾಮೆನ್ ಘೋಷಣೆಗೆ ಸಹಮತ ವ್ಯಕ್ತಪಡಿಸುವುದು ಅನಿವಾರ್ಯವಾಯಿತು. ಇದರೊಂದಿಗೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ಜಾಗತಿಕ ದೃಷ್ಟಿಕೋನವನ್ನು ಬದಲಾಯಿಸಲು ಭಾರತ ನಡೆಸುತ್ತಿರುವ ಪ್ರಯತ್ನ ನಿರ್ಣಾಯಕ ಹಂತಕ್ಕೆ ಬಂದಿದ್ದು, ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಮಸ್ಯೆಯಾಗಿದ್ದ ಉಗ್ರವಾದಕ್ಕೆ ಜಾಗತಿಕ ಆಯಾಮ ನೀಡುವ ತಂತ್ರ ಫಲಿಸಿದೆ. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ ಉಗ್ರವಾದ ಅತಿ ದೊಡ್ಡ ಬೆದರಿಕೆ ಎಂದು ಭಾರತ ದಶಕಗಳಿಂದ ಪ್ರತಿಪಾದಿಸುತ್ತಾ ಬಂದಿದ್ದರೂ ಕ್ಯಾರೇ ಎನ್ನದಿದ್ದ ಬಲಾಡ್ಯ ದೇಶಗಳು ತಮಗೆ ಭಯೋತ್ಪಾದನೆಯ ತೀವ್ರತೆಯ ಅನುಭವವಾದ ಬಳಿಕ ಧೋರಣೆಯನ್ನು ಬದಲಾಯಿಸಿಕೊಂಡಿರುವುದು ಈ ನಿಟ್ಟಿನಲ್ಲಿ ಆಗಿರುವ ಅತಿ ದೊಡ್ಡ ಬೆಳವಣಿಗೆ.
ಕ್ಸಿಯಾಮೆನ್ ಘೋಷಣೆಯ ಮೂಲಕ ಪಾಕ್ ಮತ್ತು ಚೀನದ ಮಧುರ ಸ್ನೇಹ ಇದೇ ರೀತಿ ಮುಂದುವರಿಯುತ್ತದೆ ಎಂದು ಹೇಳುವಂತಿಲ್ಲ. ಸ್ನೇಹದ ನಡುವೆ ಹುಳಿ ಹಿಂಡುವ ಭಾರತದ ಪ್ರಯತ್ನ ಫಲಿಸಿ ಒಂದು ವೇಳೆ ಚೀನದ ಸ್ನೇಹವೂ ಕೈತಪ್ಪಿದರೆ ಜಗತ್ತಿನಲ್ಲಿ ಪಾಕಿಸ್ಥಾನದ ಅಕ್ಷರಶಃ ಒಂಟಿಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಯೋತ್ಪಾದನೆ ಎಂಬ ಅಸ್ತ್ರ ಬಳಸಿ ಚುಚ್ಚಿ ಚುಚ್ಚಿ ಸಾಯಿಸುವ ಆಟವನ್ನು ಹೆಚ್ಚು ಸಮಯ ಮುಂದುವರಿಸಿಕೊಂಡು ಹೋಗುವುದು ಅಸಾಧ್ಯ ಎನ್ನುವುದು ಪಾಕ್‌ಗೆ ಮನವರಿಕೆಯಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.