ಬುಲಂದ್‌ಶಹರ್ ಘಟನೆ : ಸಮಾಜದ ಸ್ವಾಸ್ಥ್ಯಕ್ಕೆ ಕಂಟಕ
Team Udayavani, Dec 6, 2018, 6:00 AM IST
ಉತ್ತರ ಪ್ರದೇಶದಲ್ಲಿ ಮತ್ತೂಮ್ಮೆ ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ನಡೆದಿದೆ. ಬುಲಂದ್‌ಶಹರ್‌ನಲ್ಲಿ ನಡೆದ ಈ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ, ಓರ್ವ ನಾಗರಿಕ ಸಾವನ್ನಪ್ಪಿದ್ದು, ಈ ಘಟನೆ ರಾಜ್ಯದ ಕಾನೂನು ಮತ್ತು ವ್ಯವಸ್ಥೆ ಪಾಲನೆಯ ಕುರಿತು ಸರಕಾರ ನೀಡುತ್ತಿರುವ ಹೇಳಿಕೆಗಳನ್ನು ಅಪಹಾಸ್ಯ ಮಾಡುವಂತಿದೆ. ಆಘಾತಕಾರಿ ವಿಷಯವೆಂದರೆ ಈಗ ಗೋರಕ್ಷಣೆಯ ಸೋಗು ಹಾಕಿಕೊಂಡಿರುವ ಸಮಾಜ ಘಾತುಕರು ಪೊಲೀಸ್ ಠಾಣೆಯ ಮೇಲೆಯೇ ಆಕ್ರಮಣ ಎಸಗುವಷ್ಟು ಧೈರ್ಯ ಮೈಗೂಡಿಸಿಕೊಂಡಿರುವುದು. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯನ್ನೇ ಕಲ್ಲು ಎಸೆದು ಸಾಯಿಸುವುದು ಮತ್ತು ಪೊಲೀಸ್ ಠಾಣೆ ಮತ್ತು ವಾಹನಗಳಿಗೆ ಕಿಚ್ಚಿಕ್ಕುವುದನ್ನು ಅರಾಜಕತೆ ಎಂದೇ ಹೇಳಬೇಕಾಗುತ್ತದೆ.
2017ರಲ್ಲಿ ನಡೆದ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಹದಗೆಟ್ಟ ಕಾನೂನು ಮತ್ತು ವ್ಯವಸ್ಥೆ ಪಾಲನೆಯೇ ಮುಖ್ಯ ವಿಷಯವಾಗಿತ್ತು. ಕಾನೂನು ಪಾಲನೆಯನ್ನು ಹಳಿಗೆ ತರುತ್ತೇನೆ ಎಂದು ಹೇಳಿದ್ದ ಬಿಜೆಪಿಯ ಪರವಾಗಿ ಮತದಾರರು ಒಲವು ತೋರಿಸಿದ್ದು, ಅಭೂತಪೂರ್ವ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶದಂತೆ ಕಾನೂನು ಪಾಲನೆಗೆ ತೊಡಕಾಗಿದ್ದ ಪುಂಡುಪೋಕರಿಗಳ ವಿರುದ್ಧ ಆರಂಭದಲ್ಲಿ ಪೊಲೀಸರು ಕಠಿಣ ಕ್ರಮಕೈಗೊಂಡಿದ್ದರು. ಕೆಲವು ಎನ್‌ಕೌಂಟರ್‌ಗಳು ಕೂಡಾ ನಡೆದಿದ್ದು, ಅವುಗಳು ವಿವಾದಕ್ಕೂ ತುತ್ತಾಗಿವೆ. ಈ ಕ್ರಮಗಳ ಬಳಿಕ ಕಾನೂನು ಪಾಲನೆ ಸುವ್ಯವಸ್ಥಿತಗೊಂಡಿದೆ ಎಂದು ಸರಕಾರ ಹೇಳಿಕೊಳ್ಳುತ್ತಿದ್ದರೂ ಅದು ಗುಂಪು ಹಿಂಸಾಚಾರದ ರೂಪದವಲ್ಲಿ ಮರುಕಳಿಸಿರುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಬೇಕಾದ ಹೊಣೆ ಈಗ ಸರಕಾರದ್ದು.
ಈ ಹಿಂದೆ ಸಮಾಜವಾದಿ ಪಾರ್ಟಿಯ ಸರಕಾರ ಇದ್ದಾಗ ದಾದ್ರಿಯಲ್ಲಿ ಮೊಹಮ್ಮದ್ ಅಖಾಕ್ ಎಂಬುವರನ್ನು ಮನೆಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿದ್ದಾರೆ ಎಂಬ ಅನುಮಾನದಲ್ಲಿ ಉದ್ರಿಕ್ತ ಗುಂಪೊಂದು ಥಳಿಸಿ ಕೊಂದಿತ್ತು. ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಈ ಘಟನೆಯ ಆರೋಪಿಗಳನ್ನು ಬಳಿಕ ಬಂಧಿಸಿದರೂ ಅವರು ಜಾಮೀನಿನಲ್ಲಿ ಬಿಡುಗಡೆ ಯಾಗಿದ್ದಾರೆ. ಸೋಮವಾರ ಹತ್ಯೆಯಾಗಿರುವ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಆರಂಭದಲ್ಲಿ ದಾದ್ರಿ ಪ್ರಕರಣದ ತನಿಖಾಧಿಕಾರಿಯಾಗಿದ್ದರು ಹಾಗೂ ಆರೋಪಿಗಳ ವಿರುದ್ಧವಾದ ಬಲವಾದ ಸಾಕ್ಷ್ಯ ಸಂಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರತೀಕಾರ ತೀರಿಸಲು ಸೋಮವಾರದ ಘಟನೆಯನ್ನು ಬಳಸಿಕೊಳ್ಳಲಾಗಿದೆ ಎಂದು ಅನುಮಾನವೂ ವ್ಯಕ್ತವಾಗಿದೆ.
ಬುಲಂದ್‌ಶಹರ್‌ನ ಅರಣ್ಯದಲ್ಲಿ ಗೋವಿನ ಅವಶೇಷಗಳು ಸಿಕ್ಕಿದ್ದೇ ಹಿಂಸಾಚಾರಕ್ಕೆ ಹೇತುವಾಗಿದೆ. ಜನರು ಈ ಅವಶೇಷಗಳನ್ನು ಟ್ರಾಕ್ಟರ್‌ನಲ್ಲಿ ಹೇರಿಕೊಂಡು ಬಂದು ಪೊಲೀಸ್ ಠಾಣೆಯೆದುರು ಪ್ರತಿಭಟನೆ ನಡೆಸಿದ್ದಾರೆ. ಇದು ಬಳಿಕ ಹಿಂಸಾಚಾರಕ್ಕೆ ತಿರುಗಿದಾಗ ಕಲ್ಲೇಟಿಗೆ ಇನ್ಸ್ ಪೆಕ್ಟರ್ ಸಿಂಗ್ ಬಲಿಯಾಗಿದ್ದಾರೆ ಹಾಗೂ ಗೋಲಿಬಾರಿನಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ. ರಾಜಕೀಯ ಕುಮ್ಮಕ್ಕು ಇಲ್ಲದೆ ಇಂಥ ಘಟನೆಗಳು ನಡೆಯವು. ರಾಜಕೀಯ ವ್ಯಕ್ತಿಗಳು ಈ ಘಟನೆಯಲ್ಲಿ ಪ್ರತ್ಯಕ್ಷ ಪಾತ್ರ ಧಾರಿಗಳಲ್ಲದಿದ್ದರೂ ಈ ಮಾದರಿಯ ಹಿಂಸಾಚಾರವನ್ನು ನಡೆಸಿದರೂ ರಾಜಕೀಯ ಕೃಪಾಕಟಾಕ್ಷವಿದ್ದರೆ ಕಾನೂನಿನ ಉರುಳಿನಿಂದ ಸುಲಭವಾಗಿ ಪಾರಾಗಬಹುದು ಎಂಬ ಅಭಯದ ಮನಃಸ್ಥಿತಿ ಗುಂಪು ಹಿಂಸಾಚಾರಕ್ಕೆ ಪ್ರೇರಣೆ ನೀಡುತ್ತದೆ. ಗುಂಪಿನಲ್ಲಿ ಹಿಂಸಾಚಾರ ನಡೆಸಿದರೆ ಸಿಕ್ಕಿಬೀಳುವ ಸಾಧ್ಯತೆಗಳು ಕಡಿಮೆ ಎಂಬ ಹುಂಬ ಧೈರ್ಯವೂ ಇರುತ್ತದೆ.
ಇತರ ಹಲವು ರಾಜ್ಯಗಳಂತೆ ಉತ್ತರ ಪ್ರದೇಶದಲ್ಲೂ ಗೋ ಹತ್ಯೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಬುಲಂದ್‌ಶಹರ್‌ನ ಕಾಡಿನಲ್ಲಿ ಸಿಕ್ಕಿರುವುದು ಗೋವಿನ ಅವಶೇಷವಾಗಿದ್ದರೆ ಆ ಆರೋಪಿಗಳಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಹಾಗೆಂದು ಜನರೇ ಕಾನೂನು ಕೈಗೆತ್ತಿಕೊಳ್ಳುವುದು ಸರ್ವಥಾ ಸರಿಯಲ್ಲ. ರಾಜ್ಯದಲ್ಲಿ ಹಿಂಸೆ ಕೆರಳಿಸಲು ಅವಕಾಶವನ್ನು ಎದುರು ನೋಡುತ್ತಿರುವ ಸಂಘಟಿತ ಗುಂಪೊಂದು ಇದೆ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ಪೊಲೀಸರಿಗೆ ಮತ್ತು ಗುಪ್ತಚರ ಪಡೆಗೆ ಈ ಗುಂಪಿನ ಬಗ್ಗೆ ಯಾವುದೇ ಮಾಹಿತಿಯಿಲ್ಲವೆ? ಇದ್ದರೆ ಅದನ್ನು ಮಟ್ಟ ಹಾಕಲು ಕೈಗೊಂಡಿರುವ ಕ್ರಮಗಳೇನು ಎನ್ನುವ ಪ್ರಶ್ನೆಗೆ ಉತ್ತರಿಸುವ ಹೊಣೆ ಸರಕಾರದ್ದು. ಚುನಾವಣೆ ಆಸುಪಾಸಿನಲ್ಲೇ ಮತೀಯ ಧ್ರುವೀಕರಣಕ್ಕೆ ಕಾರಣವಾಗುವ ಈ ಮಾದರಿಯ ಘಟನೆಗಳು ನಡೆಯುತ್ತಿರುವುದರ ಹಿಂದಿನ ಮರ್ಮವೇನು ಎನ್ನುವುದನ್ನು ಕೂಡಾ ಕಂಡುಕೊಳ್ಳಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.