ಸಚಿವ ಸಂಪುಟ ವಿಸ್ತರಣೆ: ಆಯ್ಕೆಯನ್ನು ಸಮರ್ಥಿಸುವ ರೀತಿಯಲ್ಲಿ ಕೆಲಸ ಮಾಡಿ
Team Udayavani, Feb 7, 2020, 6:02 AM IST
2-3 ಸಲ ಶಾಸಕರಾಗಿ ಆಯ್ಕೆಯಾದವರು ಸಚಿವ ಸ್ಥಾನ ಬಯಸುವುದೂ ತಪ್ಪಲ್ಲ. ಹಾಗೆಂದು ಎಲ್ಲರನ್ನೂ ಸಚಿವರನ್ನಾಗಿ ಮಾಡುವುದು ಅಸಾಧ್ಯ. 32 ಮಂದಿಗಷ್ಟೇ ಸಚಿವರಾಗಲು ಅವಕಾಶವಿರುವುದರಿಂದ ಉಳಿದವರು ತಮ್ಮ ಸರದಿಗಾಗಿ ಕಾಯಬೇಕಷ್ಟೆ. ಆದರೆ ಜನಸೇವೆ ಮಾಡಲು ಸಚಿವರಾಗಲೇಬೇಕು ಎಂಬ ಮನೋಭಾವದಿಂದ ಅವರು ಹೊರಬೇಕು.
ಅಂತೂ ಇಂತೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಆರು ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಿದೆ. ಹಿಂದಿನ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರಕಾರದಿಂದ ಹೊರಬಂದು ಅನರ್ಹತೆಯ ಕಳಂಕ ಅಂಟಿಸಿಕೊಂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರ ಪೈಕಿ ಹತ್ತು ಮಂದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಹತ್ತು ಮತ್ತು ಮೂಲ ಬಿಜೆಪಿಯ ಮೂವರನ್ನು ಸೇರಿಸಿಕೊಂಡು ಪೂರ್ಣ ಪ್ರಮಾಣದ ಸಂಪುಟ ರಚಿಸುವ ಕಾರ್ಯತಂತ್ರ ಹೆಣೆಯಲಾಗಿತ್ತಾದರೂ ಯೋಗೀಶ್ವರ್ ಅವರನ್ನು ಸೇರಿಸುವ ವಿಚಾರವಾಗಿ ಅಸಮಾಧಾನದ ಅಲೆಗಳು ಎದ್ದಾಗ ಹತ್ತು ಮಂದಿಯನ್ನಷ್ಟೇ ಸೇರಿಸಿಕೊಳ್ಳಲಾಯಿತು. ಇನ್ನೀಗ ಸಂಪುಟವನ್ನು ಪುನಾರಚಿಸುವ ಕಸರತ್ತು ನಡೆಯಲಿದೆ.
ಹಿಂದಿನ ಸರಕಾರದಲ್ಲಿ ಅನರ್ಹಗೊಂಡಿದ್ದ 17 ಶಾಸಕರ ಪೈಕಿ 15 ಮಂದಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಪೈಕಿ ಗೆದ್ದಿರುವುದು 13 ಮಂದಿ. ಬಿಜೆಪಿ ಸರಕಾರ ಇಂದು ಅಧಿಕಾರದಲ್ಲಿರಲು ಈ 17 ಮಂದಿ ಶಾಸಕರೇ ಕಾರಣ. ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ವರಿಷ್ಠರು ವಾಗ್ಧಾನ ನೀಡಿದ್ದರು ಎನ್ನುವ ಮಾತೂ ಇದೆ. ಈ ಕಾರಣಕ್ಕೆ ಸಚಿವ ಹುದ್ದೆ ವಂಚಿತರಲ್ಲಿ ಅಸಮಾಧಾನವೂ ಇದೆ. ಕೆಲವರು ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮೂಲ ಬಿಜೆಪಿಗರು ಮತ್ತು ವಲಸೆ ಬಿಜೆಪಿಗರು ಎಂಬ ಗುಂಪುಗಳೂ ಸೃಷ್ಟಿಯಾಗಿರುವುದರಿಂದ ಎಲ್ಲರನ್ನೂ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಅನಿವಾರ್ಯತೆ ಯಡಿಯೂರಪ್ಪನವರಿಗಿದೆ.
ಈಗ ರಾಜಕೀಯ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಅಧಿಕಾರದ ಆಶೆ ಇರುತ್ತದೆ. 2-3 ಸಲ ಶಾಸಕರಾಗಿ ಆಯ್ಕೆಯಾದವರು ಸಚಿವ ಸ್ಥಾನ ಬಯಸುವುದೂ ತಪ್ಪಲ್ಲ. ಹಾಗೆಂದು ಎಲ್ಲರನ್ನೂ ಸಚಿವರನ್ನಾಗಿ ಮಾಡುವುದು ಅಸಾಧ್ಯ. 32 ಮಂದಿಗಷ್ಟೇ ಸಚಿವರಾಗಲು ಅವಕಾಶವಿರುವುದರಿಂದ ಉಳಿದವರು ತಮ್ಮ ಸರದಿಗಾಗಿ ಕಾಯಬೇಕಷ್ಟೆ. ಆದರೆ ಜನಸೇವೆ ಮಾಡಲು ಸಚಿವರಾಗಲೇಬೇಕು ಎಂಬ ಮನೋಭಾವದಿಂದ ಅವರು ಹೊರಬೇಕು. ನೀತಿ ನಿಯಮಗಳು, ಪರಿಸ್ಥಿತಿ, ಅನಿವಾರ್ಯತೆ ಹೀಗೆ ಈ ಎಲ್ಲ ಅಂಶಗಳನ್ನು ಅವರು ಗಮನಿಸಬೇಕು. ಸಚಿವರನ್ನಾಗಿ ಮಾಡಿಲ್ಲ ಎಂದು ಕೊರಗುತ್ತಾ ಇರುವುದು ಅಥವಾ ಭಿನ್ನಮತೀಯ ಚಟುವಟಿಕೆಗಳನ್ನು ಪ್ರಾರಂಭಿಸುವುದು ಸರಿಯಾದ ನಡೆಯಲ್ಲ. ಹಾಲಿ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಅಪೇಕ್ಷಿತರ ಪಟ್ಟಿ ಬಹಳ ದೊಡ್ಡದಿದೆ. ಹೀಗಿರುವಾಗ ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರಿಗೆ ಅಸಮಾಧಾನವಾಗುವುದು ಸಹಜವೇ. ಎಲ್ಲರನ್ನೂ ಖುಷಿಪಡಿಸಲಂತೂ ಸಾಧ್ಯವಿಲ್ಲ. ಹಾಗೆಂದು ಸಚಿವ ಹುದ್ದೆ ಸಿಗದವರು ಇದನ್ನು ಬೀದಿರಂಪ ಮಾಡಬಾರದು.
ಸಚಿವ ಸಂಪುಟ ರಚಿಸುವಾಗ ಪ್ರಾದೇಶಿಕತೆ, ಜಾತಿ, ಧರ್ಮಗಳ ಲೆಕ್ಕಾಚಾರ ಸಾಮಾನ್ಯ. ಅದರಲ್ಲೂ ಈಗ ಪ್ರಾದೇಶಿಕತೆಯ ವಿಚಾರ ಮುಂಚೂಣಿಯಲ್ಲಿದೆ. ಹಾಲಿ ಸಂಪುಟದಲ್ಲಿ ಬೆಂಗಳೂರು, ಬೆಳಗಾವಿ ಮತ್ತು ಉತ್ತರ ಕರ್ನಾಟಕ ಭಾಗಗಳಿಗೆ ಮಣೆ ಹಾಕಲಾಗಿದೆ. ಕರಾವಳಿ ಸೇರಿದಂತೆ ಉಳಿದ ಭಾಗಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಬೇಗುದಿ ಇದೆ. ಅಧಿಕಾರ ಸೂತ್ರ ಹಿಡಿದಿರುವವರು ಈ ವಿಚಾರದತ್ತ ಗಮನ ಹರಿಸುವುದು ಅಗತ್ಯ. ಆಯಾಯ ಪ್ರದೇಶಗಳ ಧ್ವನಿಯಾಗಲಾದರೂ ಒಬ್ಬರು ಪ್ರಮುಖ ಸ್ಥಾನದಲ್ಲಿರಬೇಕೆಂದು ಆ ಭಾಗದ ಜನರು ಬಯಸುವುದು ತಪ್ಪಲ್ಲ. ಹೀಗಿರುವಾಗ ಅಧಿಕಾರ ತಂದುಕೊಡುವ ಅಥವಾ ಮತ ತಂದುಕೊಡುವ ಭಾಗಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದರೆ ಅದು ಆಡಳಿತ ನಡೆಸುವವರೇ ಅಸಮತೋಲನಕ್ಕೆ ಕಾರಣರಾದಂತಾಗುತ್ತದೆ.
ಹಿಂದಿನ ಪಕ್ಷಕ್ಕೆ ರಾಜೀನಾಮೆ ನೀಡಿದ 13 ಮಂದಿ ಉಪಚುನಾವಣೆಯಲ್ಲಿ ಗೆದ್ದು ಬರಲು ಜನರು ಅವರ ಮೇಲಿಟ್ಟ ವಿಶ್ವಾಸವೇ ಕಾರಣ. ಇದೀಗ ಈ ಪೈಕಿ 10 ಮಂದಿ ಸಚಿವರೂ ಆಗಿದ್ದಾರೆ. ಇನ್ನೀಗ ಖಾತೆಗಾಗಿ ಪಟ್ಟು ಹಿಡಿಯದೆ ಸಿಕ್ಕಿದ ಖಾತೆಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ. ಸರಕಾರಕ್ಕೆ, ಪಕ್ಷಕ್ಕೆ ಮಾತ್ರವಲ್ಲದೆ ಜನರಿಗೂ ಒಳ್ಳೆಯದಾಗುವ ರೀತಿಯಲ್ಲಿ ತಮಗೆ ಸಿಗುವ ಇಲಾಖೆಯಲ್ಲಿ ಧನಾತ್ಮಕವಾದ ಪರಿಣಾಮಗಳನ್ನು ಉಂಟು ಮಾಡಿದರೆ ಅವರು ಸಚಿವರಾಗಿರುವುದಕ್ಕೂ ಸಾರ್ಥಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.