ತಾಲಿಬಾನ್ ಜತೆ ಮಾತುಕತೆ ರದ್ದು ಭಾರತ ನಿರಾಳ
Team Udayavani, Sep 10, 2019, 5:43 AM IST
ತಾಲಿಬಾನ್ ಜತೆಗಿನ ಶಾಂತಿ ಮಾತುಕತೆಯನ್ನು ರದ್ದುಪಡಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಅನಿರೀಕ್ಷಿತವಾಗಿದ್ದರೂ ಇದು ಅಮೆರಿಕ ಮಾತ್ರವಲ್ಲದೆ ಭಾರತವೂ ಸೇರಿದಂತೆ ಏಶ್ಯಾದ ಹಿತಾಸಕ್ತಿಗಳ ರಕ್ಷಣೆಗೆ ಪೂರಕವಾಗಿರುವ ನಿರ್ಧಾರ ಎಂಬ ಕಾರಣಕ್ಕೆ ಸ್ವಾಗತಾರ್ಹವಾಗಿದೆ. ಈ ನಿರ್ಧಾರದಿಂದಾಗಿ ಪಾಕಿಸ್ತಾನ ಮತ್ತು ಚೀನ ಹೊರತುಪಡಿಸಿದರೆ, ಉಳಿದೆಲ್ಲ ದೇಶಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.
ಅಫ್ಘಾನಿಸ್ಥಾನದಿಂದ ಹಂತ ಹಂತವಾಗಿ ಭದ್ರತಾ ಪಡೆಯನ್ನು ಹಿಂದೆಗೆದುಕೊಳ್ಳುವ ಸಲುವಾಗಿ ಅಮೆರಿಕ ತಾಲಿಬಾನ್ ಜತೆಗೆ ರಹಸ್ಯ ಶಾಂತಿ ಒಪ್ಪಂದ ನಡೆಸುತ್ತಿತ್ತು. ಅಫ್ಘಾನಿಸ್ಥಾನದಲ್ಲಿರುವ ಅಮೆರಿಕ ಸೈನಿಕರನ್ನು ವಾಪಸು ಕರೆಸಿಕೊಳ್ಳುವುದು, ಇದಕ್ಕೆ ಪ್ರತಿಯಾಗಿ ತಾಲಿಬಾನ್ ಹಿಂಸೆಯ ಮಾರ್ಗವನ್ನು ತೊರೆದು ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಒಪ್ಪಂದದ ಸ್ಥೂಲ ನೋಟವಾಗಿತ್ತು. ಈ ಪ್ರಕಾರ 135 ದಿನಗಳಲ್ಲಿ ಅಮೆರಿಕದ 5000 ಸೈನಿಕರು ವಾಪಾಸಾಗಬೇಕಿತ್ತು. ಮುಂದಕ್ಕೆ ಹಂತಹಂತವಾಗಿ ಉಳಿದ 9500 ಅಮೆರಿಕ ಯೋಧರು ಹಾಗೂ 8,600 ನ್ಯಾಟೊ ಸೈನಿಕರನ್ನು ವಾಪಾಸು ಕರೆಸಿಕೊಳ್ಳಬೇಕಿತ್ತು. ಒಂದು ವೇಳೆ ಈ ಒಪ್ಪಂದ ಕಾರ್ಯಗತವಾಗಿದ್ದೇ ಆಗಿದ್ದರೆ ಅಫ್ಘಾನಿಸ್ಥಾನದಲ್ಲಿ ಮತ್ತೆ ತಾಲಿಬಾನ್ ಪ್ರಬಲವಾಗಿ, ರಕ್ತದೋಕುಳಿ ಹರಿಯುತ್ತಿತ್ತು. ಇದೇ ಅವಕಾಶಕ್ಕಾಗಿ ಕಾದು ಕುಳಿತಿರುವ ಪಾಕಿಸ್ಥಾನ ತಾಲಿಬಾನ್ ಉಗ್ರರ ಮೂಲಕ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಪ್ರಯತ್ನಿಸುತ್ತಾ ಬಂದಿದೆ. ಈ ಕಾರಣಕ್ಕಾಗಿಯೇ ತಾಲಿಬಾನ್ ಜತೆಗಿನ ಅಮೆರಿಕದ ಶಾಂತಿ ಮಾತುಕತೆ ಭಾರತಕ್ಕೆ ಆತಂಕವನ್ನುಂಟು ಮಾಡಿತ್ತು. ಶಾಂತಿ ಮಾತುಕತೆಗೆ ಆರಂಭದಿಂದಲೇ ಅಮೆರಿಕದಲ್ಲಿ ವಿರೋಧವಿತ್ತು. ಅಫ್ಘಾನಿಸ್ಥಾನದಲ್ಲಿ ರಾಯಭಾರಿಗಳಾಗಿ ಸೇವೆ ಸಲ್ಲಿಸಿದ್ದ ಮೂವರು ಹಿರಿಯ ಅಧಿಕಾರಿಗಳು ಇದು ದುಡುಕಿನ ನಿರ್ಧಾರ ಎಂದು ಬಲವಾಗಿ ಆಕ್ಷೇಪಿಸಿದ್ದರು.
ತಾಲಿಬಾನ್‌ನಂಥ ಉಗ್ರ ಸಂಘಟನೆ ಯಾವ ರೀತಿಯಲ್ಲೂ ನಂಬಿಕೆಗೆ ಯೋಗ್ಯವಲ್ಲ. ಒಪ್ಪಂದದ ಷರತ್ತುಗಳನ್ನು ಅದು ಪಾಲಿಸುತ್ತದೆ ಎನ್ನುವುದಕ್ಕೆ ಯಾವ ಖಾತರಿಯೂ ಇರಲಿಲ್ಲ ಎಂದು ಅವರು ಮೊದಲೇ ಎಚ್ಚರಿಸಿದ್ದರು. ಒಂಬತ್ತು ಸುತ್ತಿನ ಮಾತುಕತೆ ನಡೆದು ಇನ್ನೇನು ಕೊನೆಯ ಸುತ್ತಿನಲ್ಲಿ ಶಾಂತಿ ಒಪ್ಪಂದಕ್ಕೆ ಅಂಕಿತ ಬೀಳಬೇಕೆಂಬ ಹೊತ್ತಿನಲ್ಲಿ ಟ್ರಂಪ್ ಮನಸು ದಿಢೀರ್ ಬದಲಾಗಿದೆ. ಇದಕ್ಕೆ ಕಾರಣವಾಗಿರುವುದು ಕಳೆದ ವಾರ ಕಾಬೂಲ್ನಲ್ಲಿ ತಾಲಿಬಾನ್ ಉಗ್ರರು ಆತ್ಮಾಹುತಿ ದಾಳಿಯಲ್ಲಿ ಓರ್ವ ಅಮೆರಿಕನ್ ಯೋಧ ಸೇರಿ 12 ಮಂದಿಯನ್ನು ಕೊಂದಿರುವ ಘಟನೆ. ತಾಲಿಬಾನ್ ಹಿಂಸಾ ಮಾರ್ಗ ತೊರೆಯುವುದು ಅಸಾಧ್ಯ ಎಂಬುದು ಕೊನೆಗಾದರೂ ಟ್ರಂಪ್‌ಗೆ ಮನವರಿಕೆಯಾದದ್ದು ಸುದೈವ.
ಶಾಂತಿ ಒಪ್ಪಂದದಿಂದಾಗಿ ಅಫ್ಘಾನಿಸ್ಥಾನ ಮರಳಿ ಉಗ್ರರ ತೆಕ್ಕೆಗೆ ಬೀಳುತ್ತಿತ್ತು. ಅಲ್ಲಿ ಮತ್ತೆ ಅಲ್ ಕಾಯಿದಾ ತನ್ನ ನೆಲೆ ಸ್ಥಾಪಿಸುತ್ತಿತ್ತು. ಇಷ್ಟು ಮಾತ್ರವಲ್ಲದೆ ಈಗ ಐಸಿಸ್ ಉಗ್ರ ಸಂಘಟನೆಯೂ ಅಫ್ಘಾನಿಸ್ಥಾನದಲ್ಲಿ ಬೇರು ಬಿಟ್ಟಿದ್ದು, ಅದರ ಜಾಲ ವಿಸ್ತರಣೆಗೂ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತಿತ್ತು. ಈ ಎಲ್ಲ ಬೆಳವಣಿಗೆಗಳ ಮೊದಲ ಬಲಿಪಶು ಭಾರತವೇ ಆಗುತ್ತಿತ್ತು. ಹೇಗಾದರೂ ಮಾಡಿ ಕಾಶ್ಮೀರದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಬೇಕೆಂದು ಹವಣಿಸುತ್ತಿರುವ ಅಲ್ಲಿನ ಉಗ್ರ ಸಂಘಟನೆಗಳಿಗೆ ಪಕ್ಕದಲ್ಲೇ ಉಗ್ರರದ್ದೇ ರಾಜ್ಯಭಾರವಿರುವ ದೇಶವಿದ್ದರೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಷ್ಟು ಖುಷಿಯಾಗುತ್ತಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಟ್ರಂಪ್ ನಿರ್ಧಾರದಿಂದ ಹೆಚ್ಚು ಲಾಭವಾಗಿರುವುದು ಭಾರತಕ್ಕೆ. ಹಾಗೆಂದು ಭಾರತ ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆಯಾಗಬಾರದೆಂದು ಪ್ರತಿಪಾದಿಸುತ್ತಿಲ್ಲ. ಆದರೆ ಶಾಂತಿ ಸ್ಥಾಪನೆಗಾಗಿ ಮಾಡಿಕೊಂಡ ಒಪ್ಪಂದ ಕುರಿಮಂದೆಯನ್ನು ಕಾಯಲು ತೋಳವನ್ನು ನೇಮಿಸಿದಂತಾಗಬಾರದು ಎಂಬುದಷ್ಟೇ ಭಾರತದ ಕಾಳಜಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Mother: ತಾಯಿಯ ಮಡಿಲು ನೆಮ್ಮದಿಯ ನೆರಳು
Mannagudda: ಗುಜರಿ ಕಾರುಗಳ ಪಾರ್ಕಿಂಗ್; ಸಾರ್ವಜನಿಕರಿಗೆ ಸಮಸ್ಯೆ
Determination- Success: ವಿದ್ಯಾರ್ಥಿಗಳ ಯಶಸ್ಸಿನ ಮೆಟ್ಟಿಲು ದೃಢ ನಿರ್ಧಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.