ಸಮಗ್ರ ಅಭಿವೃದ್ಧಿಯೊಂದಿಗೆ ನವ ಕರ್ನಾಟಕ ನಿರ್ಮಾಣ
Team Udayavani, Apr 12, 2022, 6:00 AM IST
ಅತಿಥಿ ಸಂಪಾದಕರಾಗಿ ಸೋಮವಾರ ಉದಯವಾಣಿ ಮಣಿಪಾಲ ಆವೃತ್ತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯದಲ್ಲಿ ತಲ್ಲೀನ.
ಅಭಿವೃದ್ಧಿ ಎಂಬ ಚಕ್ಕಡಿಗೆ ಎರಡು ಚಕ್ರಗಳು. ಒಂದು ಸರಕಾರ, ಮತ್ತೂಂದು ನಾಗರಿಕರು. ಎರಡೂ ಚಕ್ರಗಳು ಸರಿದೂಗಿ ಸಾಗಿದಾಗ ಪ್ರಗತಿಯ ಚಕ್ಕಡಿ ಸರಾಗವಾಗಿ ಸಾಗುತ್ತದೆ. ಇದು ತುಟಿಯ ಮೇಲಿನ ಮಾತಲ್ಲ; ಅಂತರಂಗದ ಅಭಿಪ್ರಾಯ.
ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟ ದಲ್ಲೂ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದು ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಗುರಿ ನಮ್ಮ ಸರಕಾರದ್ದು. ಕಳೆದೆರಡು ವರ್ಷಗಳಲ್ಲಿ ಇಡೀ ವಿಶ್ವವನ್ನೇ ಬಾಧಿಸಿದ ಕೊರೊನಾ ಸಾಂಕ್ರಾಮಿಕ ಜನತೆಯ ಆರೋಗ್ಯ, ಜನಜೀವನ ಮಾತ್ರವಲ್ಲದೆ ವಾಣಿಜ್ಯ-ವ್ಯವಹಾರದ ಮೇಲೂ ಬೀರಿದ ಪರಿಣಾಮ ಅಪಾರ. ಇದು ಆರ್ಥಿಕತೆಗೆ ಕೊಟ್ಟ ಹೊಡೆತವೂ ಎಲ್ಲರಿಗೆ ತಿಳಿದಿರುವ ಸಂಗತಿ. ಆದರೆ ಈ ಎಲ್ಲ ಸವಾಲುಗಳನ್ನು ಸರಕಾರ ಸಮರ್ಥವಾಗಿ ಮೆಟ್ಟಿನಿಲ್ಲುವ ಪ್ರಾಮಾಣಿಕ ಪ್ರಯತ್ನ ನಡೆಸಿರುವುದು ಸ್ಪಷ್ಟ. ಈ ಅವಧಿಯಲ್ಲಿ ಸರಕಾರದ ಬೊಕ್ಕಸದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದರೂ ಲಾಕ್‌ಡೌನ್ ಅವಧಿಯ ಹೊರತಾಗಿ ಅಭಿ ವೃದ್ಧಿ ಯೋಜನೆಗಳಾಗಲೀ ಜನಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಾಗಲೀ ಎಲ್ಲೂರಾಜಿಯಾಗಿಲ್ಲ. ರಾಜ್ಯದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ಆರು ತಿಂಗಳುಗಳಿಂದ ರಾಜ್ಯದಲ್ಲಿ ಆರ್ಥಿಕ ಚೇತರಿಕೆ ಕಂಡುಬಂದ ಪರಿಣಾಮವಾಗಿ 2021-22ನೇ ಸಾಲಿನ ರಾಜ್ಯದ ಆದಾಯ ಸಂಗ್ರಹದಲ್ಲಿ ಗುರಿಮೀರಿದ ಸಾಧನೆಯಾಗಿದೆ. ಆರ್ಥಿಕ ಶಿಸ್ತನ್ನು ತರಲು ನಾವು ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿರುವ ಪರಿಣಾಮವಾಗಿ ಈ ಬಾರಿ ಬಜೆಟ್ ಗಾತ್ರವನ್ನು 2,65,720 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಾಧ್ಯವಾಯಿತು.
ಸರಕಾರದ ಆದ್ಯತಾ ವಲಯದಲ್ಲಿರುವ ಕ್ಷೇತ್ರಗಳು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ. ಕೃಷಿ ರಂಗಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ರೈತರ ಬದುಕನ್ನು ಹಸನಾಗಿಸಲು ಪಣ ತೊಡಲಾಗಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸಿಕೊಡಲು ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಗ್ರಾಮೀಣ ಪ್ರದೇಶ ಗಳಲ್ಲಿ ಜನಜೀವನಕ್ಕೆ ಅವಶ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲು ನಾವು ಬದ್ಧ. ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ಭೂರಹಿತರಿಗೆ ನಿವೇಶನ, ವಸತಿ, ಕುಡಿಯುವ ನೀರು, ಶೌಚಾಲಯಗಳ ನಿರ್ಮಾಣ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವತ್ಛತೆ ಮತ್ತು ನೈರ್ಮಲ್ಯಕ್ಕೆ ವಿಶೇಷ ಒತ್ತು, ಆರೋಗ್ಯ ಕೇಂದ್ರಗಳು… ಹೀಗೆ ಅಗತ್ಯ ಸೌಕರ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
ರಾಜ್ಯದ ಪ್ರಗತಿಯಲ್ಲಿ ಎಲ್ಲ ವರ್ಗಗಳನ್ನು ಒಳಗೊಂಡಿರುವ ಯೋಜನೆಗಳನ್ನು ರೂಪಿ ಸುವ ಮುಖಾಂತರ ಮಹಿಳೆ, ಪ. ಜಾತಿ- ಪ. ಪಂಗಡಗಳ ಜನರಿಗೆ ವಿಶೇಷ ಅವಕಾಶ ಮಾಡಿಕೊಟ್ಟು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಸ್ವಾಭಿಮಾನದ ಬದುಕನ್ನು ನಡೆಸಲು ಈ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ನಮ್ಮ ಸರಕಾರ E-education, E- employment, E- empowerment ಎಂಬ ಈ ಮೂರು E ನೀತಿಯ ಆಧಾರದ ಮೇಲೆ ದುರ್ಬಲ ವರ್ಗದವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ.
ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ವೇಳೆ ನಗರಗಳತ್ತ ಮಾತ್ರ ಗಮನಹರಿಸುತ್ತಿಲ್ಲ. ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗು ತ್ತಿದೆಯಷ್ಟೇ ಅಲ್ಲ; ಅವುಗಳ ಅನುಷ್ಠಾನಕ್ಕೆ ಹೆಚ್ಚಿನ ಆಸ್ಥೆ ವಹಿಸಲಾಗಿದೆ. ಕೈಗಾರಿಕೆ, ಐಟಿ-ಬಿಟಿ ಕಂಪೆನಿಗಳ ಸ್ಥಾಪನೆಯ ವಿಷಯ ದಲ್ಲೂ ಇದೇ ನಿಲುವು. ಈವರೆಗೆ ಮೆಟ್ರೋ ನಗರಗಳಲ್ಲೇ ಹೂಡಿಕೆಗೆ ಹೂಡಿಕೆದಾರರು ಆಸಕ್ತಿ ತೋರುತ್ತಿದ್ದರು. ಈಗ ನಮ್ಮ ಸರಕಾರ ಎರಡು ಮತ್ತು ಮೂರನೇ ಸ್ತರದ ನಗರಗಳತ್ತ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಕೈಗೊಂಡಿದೆ. ಐಟಿ-ಬಿಟಿ ಕಂಪೆನಿಗಳು ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಅತ್ಯವಶ್ಯಕವಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಹೊಸ ಸ್ಥಳಗಳನ್ನು ಅಭಿವೃದ್ಧಿಗೆ ಗುರುತಿಸಲಾಗುತ್ತಿದೆ. ಇದರಿಂದ ರಾಜಧಾನಿ ಬೆಂಗಳೂರಿನ ಮೇಲಿನ ವಿಪರೀತ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಪದವಿಹಂತದಲ್ಲಿ ನೂತನ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಶಿಕ್ಷಣ ನೀತಿಯನ್ನು ಎಲ್ಲ ಹಂತಗಳಲ್ಲೂ ಜಾರಿಗೆ ತರಲಾಗು ವುದು. ರಾಜ್ಯದೆಲ್ಲೆಡೆ ಗುಣಮಟ್ಟದ ಶಿಕ್ಷಣ ಲಭಿಸುವಂತೆ ಮಾಡಲು ದೇಶ ಮಾತ್ರವಲ್ಲದೆ ವಿಶ್ವದ ಪ್ರಮುಖ ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತಾಂತ್ರಿಕ ಮತ್ತು ಕೈಗಾರಿಕೆ ತರಬೇತಿ ಶಿಕ್ಷಣ ದಲ್ಲಿಯೂ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗಿದೆ. ಉದ್ಯಮಿಗಳ ನೆರವಿನೊಂದಿಗೆ ಕೌಶಲಾಧಾರಿತ ಮತ್ತು ಪ್ರಾಯೋಗಿಕ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಲಾಗಿದೆ.
ಯಾವುದೇ ಪ್ರದೇಶವಾರು, ಜಾತಿ, ಮತಗಳ ಭೇದವಿಲ್ಲದೆ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗು ತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಕನಸನ್ನುನನಸಾಗಿಸುವಲ್ಲಿ ಯಾವುದೇ ರಾಜಿ ಇಲ್ಲ. ಇಂಥದೊಂದು ಮಹಾತ್ಕಾರ್ಯದಲ್ಲಿ ಸರಕಾರ ತನ್ನ ಪಾತ್ರವನ್ನು ನಿರ್ವಹಿಸಲಿದೆ. ಆದರೆ ಜನರು ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಸಹಯೋಗ ನೀಡಿದಾಗ ಮಾತ್ರ ಸಂಪೂರ್ಣ ಯಶಸ್ಸು ಮತ್ತು ಸಮಗ್ರ ಅಭಿವೃದ್ಧಿ ಸಾಧ್ಯ. ಹಾಗಾಗಿ ಸರಕಾರದ ಪರಿಶ್ರಮಕ್ಕೆ ಜನರ ಸಹಯೋಗದ ಪರಿಮಳ ಸೇರಬೇಕು ಎಂಬುದು ನಮ್ಮ ಅಭಿಲಾಷೆ. ಆಗ ಮಾತ್ರ ಕನ್ನಡ ನಾಡಿನ ಕಂಪು ಜಗದಗಲಕ್ಕೂ ವಿಸ್ತರಿಸಲು ಸಾಧ್ಯ. ಅದಾಗಲಿ. ಆ ಮೂಲಕ ಸರ್ವಾಂಗೀಣ ಅಭಿವೃದ್ಧಿಯ ಸಶಕ್ತ ನವ ಕರ್ನಾಟಕ ರೂಪು ಗೊಳ್ಳುತ್ತದೆಂಬುದು ನಮ್ಮ ನಿರೀಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ
Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.