Election ಪ್ರಚಾರಕ್ಕೆ ಮಕ್ಕಳ ಬಳಕೆ ಸಲ್ಲದು ; ತಾಕೀತು
Team Udayavani, Feb 6, 2024, 6:32 AM IST
ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಲು ಕೆಲವೇ ದಿನಗಳು ಬಾಕಿ ಇರುವಂತೆಯೇ ಚುನಾವಣ ಆಯೋಗ ನಿರ್ದೇಶನವೊಂದನ್ನು ಹೊರಡಿಸಿ ಈ ಬಾರಿ ಯಾವುದೇ ಕಾರಣಕ್ಕೆ ಮತ್ತು ಯಾವುದೇ ರೂಪದಲ್ಲಿ ಚುನಾವಣ ಪ್ರಚಾರದಲ್ಲಿ ಮಕ್ಕಳನ್ನು ಬಳಸಕೂಡದು ಎಂದು ತಾಕೀತು ಮಾಡಿದೆ. ಈ ಹಿಂದೆ ಹಲವು ಬಾರಿ ಚುನಾವಣ ಆಯೋಗ ಸೂಚನೆ ನೀಡಿತ್ತಾದರೂ, ಈ ಸಲ “ಶೂನ್ಯ ಸಹನಾ’ ನಿಲುವು ತಳೆಯುವುದಾಗಿ ಸ್ಪಷ್ಟಪಡಿಸಿದೆ.
ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿರುವ ಆಯೋಗವು, ಜಿಲ್ಲಾ ಚುನಾವಣಾಧಿಕಾರಿಗಳು ಇದರ ಜವಾಬ್ದಾರಿ ಹೊರಬೇಕು ಎಂದು ಕಟ್ಟುನಿಟ್ಟಾಗಿ ಹೇಳಿರುವುದು ಸ್ವಾಗ ತಾರ್ಹ. ಹಿಂದೆ ಹಲವು ಬಾರಿ ಇಂಥ ನಿರ್ದೇಶನ ಬಂದಿತ್ತಾದರೂ, ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಿರುವ ಉದಾಹರಣೆ ಕಡಿಮೆಯೇ. ಮಕ್ಕಳನ್ನು ಎಗ್ಗಿಲ್ಲದೆ ಚುನಾವಣ ಪ್ರಚಾರಕ್ಕೆ ಬಳಸುತ್ತಿದ್ದ ಹಲವು ಉದಾಹರಣೆಗಳಿವೆ. ಬ್ಯಾನರ್ ಹಿಡಿಯುವುದರಿಂದ ಹಿಡಿದು, ಮನೆ ಮನೆಗೆ ಪ್ರಚಾರಕ್ಕೆ ತೆರಳುವವರೆಗೆ ಶಾಲಾ ಮಕ್ಕಳನ್ನು ಬಳಸುತ್ತಿರುವುದು ನಡೆಯುತ್ತಲೇ ಇದೆ. ಶಾಲಾ ಮಕ್ಕಳಿಗೆ ಹಣವನ್ನು ನೀಡಿ ಮನೆ ಮನೆಗೆ ಕರಪತ್ರ ಹಾಕಲು ಬಳಸಿಕೊಂಡಿರುವುದು ಸಾಮಾನ್ಯ ಎನಿಸಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪ್ರಚಾರ ರ್ಯಾಲಿಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಜನರನ್ನು ಭಾವನಾತ್ಮಕ ಬಲೆಗೆ ಬೀಳಿಸುತ್ತಿರುವುದೂ ಆಯೋಗದ ಗಮನಕ್ಕೆ ಬಂದಿದ್ದು ಸ್ತುತ್ಯರ್ಹ. ಮಕ್ಕಳ ಚಿತ್ರವನ್ನು ಬಳಸುವುದಾಗಲಿ, ಮಕ್ಕಳ ಧ್ವನಿಯಲ್ಲಿ ಹಾಡು ಹೇಳಿಸುವುದು ಸಹ ಅಪರಾಧವಾಗುತ್ತದೆ.
ಹಿಂದೆ ಕೆಲವು ಸಂದರ್ಭಗಳಲ್ಲಿ ವೋಟಿಂಗ್ ಮೆಷಿನ್‌ನ್ನು ಸಾಗಿಸಲು ಕೂಡ ಮಕ್ಕಳನ್ನು ಬಳಸಿಕೊಂಡ ನಿದರ್ಶನಗಳೂ ನಮ್ಮ ಕಣ್ಣ ಮುಂದಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸುವ ವಿವಿಧ ಸಂಸೈ, ಸಂಘಟನೆಗಳು ಚುನಾವಣ ಆಯೋಗಕ್ಕೆ ಮತ್ತು ರಾಜಕೀಯ ಪಕ್ಷಗಳಿಗೆ ಒತ್ತಡ ಹೇರುತ್ತಲೇ ಬಂದಿತ್ತು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಕಳೆದ ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕವಾದ ಮಾರ್ಗಸೂಚಿಯನ್ನು ಹೊರಡಿಸಿ ಮಕ್ಕಳ ಬಳಕೆಗೆ ಕಡಿವಾಣ ಹಾಕಲು ಮುಂದಾಗಿತ್ತು. ಆದರೆ ಈ ಪ್ರಯತ್ನಗಳು ಸಮರ್ಪಕವಾಗಿ ಗುರಿ ಮುಟ್ಟಿರಲಿಲ್ಲ. 2014ರಲ್ಲಿ ಬಾಂಬೆ ಹೈಕೋರ್ಟ್ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಆದೇಶವನ್ನು ನೀಡಿತ್ತು.
ಈ ಸಲ ಚುನಾವಣ ಆಯೋಗ “ಶೂನ್ಯ ಸಹನಾ’ ನಿಲುವು ತಳೆಯುವುದಾಗಿ ಹೇಳಿರುವುದು ಕೊಂಚ ಭರವಸೆ ಮೂಡಿಸಿದೆ. ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳು ಈ ನಿಟ್ಟಿನಲ್ಲಿ ವೈಯಕ್ತಿಕವಾಗಿ ಜವಾಬ್ದಾರಿ ಹೊರಬೇಕೆಂದು ಸೂಚಿಸಿದೆ. ತಂತಮ್ಮ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಇಂಥ ವಿದ್ಯಮಾನಗಳು ನಡೆದಲ್ಲಿ, ಅದನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಕಠಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ. ಇದರ ಜತೆಗೆ ರಾಜಕೀಯ ಪಕ್ಷಗಳು ಸಹ ಈ ನಿಟ್ಟಿನಲ್ಲಿ ಗಂಭೀರ ಗಮನಹರಿಸಬೇಕು. ಮಕ್ಕಳ ಮನಸ್ಸಿನಲ್ಲಿ ರಾಜಕೀಯ ಭಾವನೆಗಳು ಮೂಡಿಸುವುದಾಗಲಿ, ಮತದಾರರನ್ನು ಸೆಳೆಯಲು ಮಕ್ಕಳನ್ನು ಬಳಸಿಕೊಳ್ಳುವುದಾಗಲಿ ಮಾಡಕೂಡದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.