ಒತ್ತುವರಿ ತೆರವು: ಪಕ್ಷಾತೀತವಾಗಿ ಕೈ ಜೋಡಿಸಿ ಇಚ್ಛಾಶಕ್ತಿ ಪ್ರದರ್ಶಿಸಲಿ
Team Udayavani, Sep 21, 2022, 6:00 AM IST
ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಪ್ರವಾಹ ವಿಧಾನಮಂಡಲದ ಉಭಯ ಸದನಗಳಲ್ಲಿ ದೊಡ್ಡ ಮಟ್ಟದಲ್ಲೇ ಪ್ರತಿಧ್ವನಿಸಿ ಅಂತಿಮವಾಗಿ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಕುರಿತು ಸಮಗ್ರ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಭವಿಷ್ಯದಲ್ಲಿ ಬೆಂಗಳೂರು ಮಳೆ ನೀರಿನಲ್ಲಿ ಮುಳುಗುವುದನ್ನು ತಪ್ಪಿಸಲು ಹಾಗೂ ಹಿಂದಿನ ವರ್ಷಗಳ ಕರಾಳ ಪ್ರಕರಣಗಳು ಮರುಕಳಿಸದಿರಲು ಇಂತದ್ದೊಂದು ಕಠಿನ ನಿಲುವಿನ ಆವಶ್ಯಕತೆ ಇತ್ತು. ಬೆಂಗಳೂರಿನಲ್ಲಿ ಕಳೆದ ಹತ್ತು-ಹದಿನೈದು ವರ್ಷಗಳಿಂದ ಮಳೆಯಿಂದ ಪ್ರವಾಹ ಉಂಟಾದ ಸಂದರ್ಭದಲ್ಲಿ ಒಂದೆರಡು ದಿನ ಸದ್ದು ಮಾಡಿ ಒತ್ತುವರಿ ತೆರವು “ಶಾಸ್ತ್ರ’ ಮುಗಿಸಿ ಮೌನವಾಗಿದ್ದೇ ಹೆಚ್ಚು.
ಆದರೆ ಈ ಬಾರಿ ವಿಧಾನಮಂಡಲ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆದು ಬ್ರ್ಯಾಂಡ್ ಬೆಂಗಳೂರು ಉಳಿಯಲು ಮುಲಾಜಿಲ್ಲದೆ ಒತ್ತುವರಿ ತೆರವು ಆಗಬೇಕು. ಯಾರೇ ಪ್ರಭಾವಿಗಳಿದ್ದರೂ ಬಿಡಬಾರದು ಎಂಬ ಒಕ್ಕೊರಲ ಧ್ವನಿ ಕೇಳಿ ಬಂದಿತು. ಇದರ ಫಲವಾಗಿ ಮುಖ್ಯಮಂತ್ರಿಯವರು ಸಮಗ್ರ ತನಿಖೆಗೆ ವಹಿಸುವುದಾಗಿ ಹೇಳಿ ತಮ್ಮ ನಿಲುವು ಸಹ ಪ್ರತಿಪಾದಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಒತ್ತುವರಿ ತೆರವು ವಿಚಾರದಲ್ಲಿ ಆಯ್ದ ಒತ್ತುವರಿಗಳ ತೆರವು ನಿಲ್ಲಿಸಲು ಪರೋಕ್ಷ ಒತ್ತಡಗಳೂ ಪ್ರಾರಂಭವಾಗಿವೆ. ಇದಕ್ಕೆ ಸಾಕ್ಷಿ ಪ್ರಾರಂಭದಲ್ಲಿದ್ದ ತೆರವು ರಭಸ ಒಂದೆರಡು ದಿನಗಳಿಂದ ನಿಧಾನಗೊಂಡಿರುವುದು.
ಈ ವಿಚಾರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಇಚ್ಛಾಶಕ್ತಿ ಪ್ರದರ್ಶಿಸಿ ಸರಕಾರದ ಜತೆ ಕೈ ಜೋಡಿಸಬೇಕಾಗಿದೆ. ಯಾರೇ ಇದ್ದರೂ ತೆರವು ಮಾಡಿ ಎಂದು ಮಾತನಾಡಿ ಅನಂತರ ಮೌನ ವಹಿಸುವುದು ಅಥವಾ ಪರೋಕ್ಷ ಒತ್ತಡ ಹಾಕಿಸುವ ಪ್ರಯತ್ನಗಳು ಉದ್ದೇಶಿತ ಗುರಿ ಈಡೇರಿಕೆಗೆ ಅಡ್ಡಿಯಾಗಬಹುದು. ಬೆಂಗಳೂರಿನಲ್ಲಿ ಕೆರೆ ಮತ್ತು ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಆಡಳಿತ ಪಕ್ಷದಷ್ಟೇ ಹೊಣೆಗಾರಿಕೆ ವಿಪಕ್ಷಗಳ ಮೇಲೂ ಇದೆ. ಅಷ್ಟೇ ಜವಾಬ್ದಾರಿ ಅಧಿಕಾರಿ ವರ್ಗದ ಮೇಲೂ ಇದೆ. ಎಲ್ಲರೂ ಒಗ್ಗೂಡಿದರೆ ಮಾತ್ರ ಬದಲಾವಣೆ ಅಥವಾ ಸುಧಾರಣೆ ಸಾಧ್ಯ. ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಂಡು ಸರಕಾರದ ಗಟ್ಟಿ ತೀರ್ಮಾನಕ್ಕೆ ಜತೆಗೂಡಬೇಕು.
ಬೆಂಗಳೂರಿನಲ್ಲಿ ಯಾವುದೇ ಪಕ್ಷದ ಶಾಸಕರು ಇರಲಿ, ಮಾಜಿ ಶಾಸಕರು ಇರಲಿ. ಖುದ್ದು ಮುಂದೆ ನಿಂತು ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು.ಆ ಮೂಲಕ ಒತ್ತುವರಿದಾರರಿಗೆ ಕಠಿನ ಸಂದೇಶ ರವಾನೆಯಾಗುವಂತೆ ಮಾಡಬೇಕು.
ಇಲ್ಲಿ ಮತ್ತೂಂದು ಅಂಶ ಎಂದರೆ ಕೆರೆ ಮತ್ತು ರಾಜಕಾಲುವೆ ಒತ್ತುವರಿಗೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಬಗ್ಗೆಯೂ ಕ್ರಮ ಕೈಗೊಳ್ಳುವ ಬದ್ಧತೆ ತೋರಬೇಕಾಗಿದೆ. ಪ್ರಸ್ತುತ ಅವರು ಕೆಲಸದಲ್ಲಿ ಇರಲಿ ಅಥವಾ ನಿವೃತ್ತಿಯಾಗಿರಲಿ, ತಪ್ಪು ಮಾಡಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಮುಂದೆ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ತಪ್ಪು ಮಾಡಲು ಹಿಂಜರಿಯುವಂತಾಗುತ್ತದೆ. ಈ ವಿಚಾರದಲ್ಲೂ ಪಕ್ಷಾತೀತವಾಗಿಯೇ ಯೋಚಿಸಬೇಕಾಗುತ್ತದೆ.
ಅಲ್ಲದೆ ಈ ವಿಚಾರದಲ್ಲಿ ಮಾತಿನ ಶೂರತ್ವ ತೋರುವುದಕ್ಕಿಂತ ಬದಲಾಗಿ, ಕಾರ್ಯೋನ್ಮುಖರಾಗುವುದು ಉತ್ತಮ. ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ಒತ್ತುವರಿ ತೆರವು ಮಾಡಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.