ನೀತಿ ಸಂಹಿತೆ ಹಲ್ಲಿಲ್ಲದ ಹಾವು
Team Udayavani, Apr 6, 2019, 6:00 AM IST
ಚುನಾವಣೆಗೆ ದಿನಾಂಕ ಘೋಷಣೆಯಾದ ಮರುಗಳಿಗೆಯಿಂದಲೇ ಚುನಾವಣ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಚುನಾವಣೆ ನಡೆಯುವಷ್ಟು ಕಾಲ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂದು ಹೇಳುವ ಮಾರ್ಗದರ್ಶಿ ಸೂಚನೆಗಳೇ ಈ ನೀತಿ ಸಂಹಿತೆ. ಮತದಾರರಿಗೆ ಆಮಿಷವೊ ಡ್ಡುವುದು, ಹಣ ಮತ್ತು ಉಡುಗೊರೆಗಳನ್ನು ಹಂಚುವುದು, ಧಾರ್ಮಿಕ ಭಾವನೆಯನ್ನು ಕೆರಳಿಸುವ ಭಾಷಣ ಮಾಡುವುದು, ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳನ್ನು ಚುನಾವಣ ಪ್ರಚಾರಕ್ಕೆ ಬಳಸುವುದನ್ನು ತಡೆಯುವುದು ಹೀಗೆ ನೀತಿ ಸಂಹಿತೆಯಡಿಯಲ್ಲಿ ಅನೇಕ ನಿರ್ಬಂಧಗಳಿ ರುತ್ತವೆ.ಚುನಾವಣ ಕಾಲದಲ್ಲಿ ನೀತಿ ಸಂಹಿತೆಯ ಉಲ್ಲಂಘನೆ ಎನ್ನುವುದು ಒಂದು ಮಾಮೂಲು ಸುದ್ದಿ. ಎಲ್ಲ ಪಕ್ಷಗಳು ಒಂದಲ್ಲ ಒಂದು ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಆಯೋಗದ ಕೆಂಗಣ್ಣಿಗೆ ಗುರಿಯಾಗುತ್ತವೆ. 2014ರ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಎಸ್‌ಪಿ ನಾಯಕ ಅಜಾಮ್ ಖಾನ್ ಅವರಿಗೆ ಚುನಾವಣ ಆಯೋಗ ಸಂಹಿತೆ ಉಲ್ಲಂ ಸಿದ ಆರೋಪದಲ್ಲಿ ಚುನಾವಣ ಪ್ರಚಾರ ಮಾಡುವುದನ್ನು ನಿಷೇಧಿಸಿತ್ತು. ಕ್ಷಮೆಯಾಚಿಸಿದ ಬಳಿಕವಷ್ಟೇ ಅವರಿಗೆ ಪ್ರಚಾರ ಮಾಡಲು ಅನುಮತಿ ಸಿಕ್ಕಿತ್ತು. ಈ ವರ್ಷ ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿದ್ದಾರೆ.
ಚುನಾವಣೆ ಕಾಲದಲ್ಲಿ ಆಯೋಗಕ್ಕೆ ಚುನಾವಣೆ ನಡೆಸುವುದರ ಜತೆಗೆ ನೀತಿ ಸಂಹಿತೆ ಉಲ್ಲಂ ಸುವವರ ಮೇಲೆ ಕಣ್ಣಿಡುವ ಹೆಚ್ಚುವರಿ ಹೊಣೆಗಾರಿಕೆಯೂ ಇದೆ. ಪ್ರತಿ ವರ್ಷ ನೂರಾರು ನೀತಿ ಸಂಹಿತೆ ಉಲ್ಲಂಘನೆ ದೂರುಗಳು ದಾಖಲಾಗುತ್ತವೆ. ಆದರೆ ಅನಂತರ ಏನಾಗುತ್ತದೆ ಎನ್ನುವುದು ಮಾತ್ರ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ನೀತಿ ಸಂಹಿತೆ ಕುರಿತು ವಿವಿಧ ಪಕ್ಷಗಳು ಪರಸ್ಪರರ ವಿರುದ್ಧ ಆರೋಪಗಳನ್ನು ಮಾಡುವಾಗ ಇದೇನೋ ಒಂದು ಬಹಳ ಕಠಿನ ಶಾಸನದಂತೆ ಕಾಣಿಸಬಹುದು. ನಿಜವಾಗಿ ನೀತಿ ಸಂಹಿತೆ ಎನ್ನುವುದು ಒಂದು ಹಲ್ಲಿಲ್ಲದ ಹಾವು. ಇದು ಬರೀ ಭುಸುಗುಟ್ಟುವುದಕ್ಕಷ್ಟೇ ಸೀಮಿತ. ಚುನಾವಣ ನೀತಿ ಸಂಹಿತೆಗೆ ಶಾಸನದ ಸ್ಥಾನಮಾನ ಇಲ್ಲ. ಇದು ಚುನಾವಣ ಆಯೋಗ ರೂಪಿಸಿದ ಕೆಲವೊಂದು ಮಾರ್ಗದರ್ಶಿ ಸೂಚಿಗಳನ್ನಷ್ಟೇ ಒಳಗೊಂಡಿದೆ. ಇದನ್ನು ಉಲ್ಲಂ ಸಿದವರನ್ನು ದಂಡನೆಗೊಳಪಡಿಸುವ ಅಧಿಕಾರವೂ ಆಯೋಗಕ್ಕೆ ಇಲ್ಲ.
ಮುಕ್ತ ಮತ್ತು ಪಾರದರ್ಶಕವಾದ ಚುನಾವಣೆ ನಡೆಸುವ ಸಲುವಾಗಿ ಆಯೋಗ ನೀತಿ ಸಂಹಿತೆಯನ್ನು ಜಾರಿಗೆ ತಂದಿದೆ. ಎಲ್ಲ ರಾಜಕೀಯ ಪಕ್ಷಗಳು ಇದಕ್ಕೆ ಸಹಮತ ವ್ಯಕ್ತಪಡಿಸಿವೆ ಎಂಬ ಕಾರಣಕ್ಕೆ ಇದು ಪ್ರತಿ ಚುನಾವಣೆ ಸಂದರ್ಭದಲ್ಲಿ ಜಾರಿಯಲ್ಲಿರುತ್ತದೆ. ಶಾಸನಾತ್ಮಕ ಸ್ಥಾನಮಾನ ಇಲ್ಲದ ಕಾರಣ ನೀತಿ ಸಂಹಿತೆ ಉಲ್ಲಂ ಸಿದವರನ್ನು ಯಾವುದೇ ಸೆಕ್ಷನ್‌ನಡಿಯಲ್ಲಿ ವಿಚಾರಣೆಗೊಳಪಡಿಸುವುದು ಸಾಧ್ಯವಿಲ್ಲ.
ಹೆಚ್ಚೆಂದರೆ ಆಯೋಗ ನೀತಿ ಸಂಹಿತೆ ಉಲ್ಲಂ ಸಿದ ನಾಯಕ ಅಥವಾ ಪಕ್ಷಕ್ಕೆ ನೊಟೀಸು ಜಾರಿಗೊಳಿಸಬಹುದು. ಈ ನೊಟೀಸಿಗೆ ಅವರು ತಪ್ಪನ್ನು ಒಪ್ಪಿಕೊಂಡ, ನಿರಾಕರಿಸಿದ ಅಥವಾ ಕ್ಷಮೆಯಾಚಿಸಿದ ಲಿಖೀತ ಉತ್ತರ ನೀಡಬೇಕು. ತಪ್ಪು ಸಾಬೀತಾದರೆ ಆಯೋಗ ಲಿಖೀತವಾಗಿ ವಾಗ್ಧಂಡನೆ ವಿಧಿಸುತ್ತದೆ. ಹೆಚ್ಚೆಂದರೆ ಪ್ರಚಾರದಲ್ಲಿ ಭಾಗಿಯಾಗುವುದನ್ನು ತಡೆಯಬಹುದು. ಇದಕ್ಕಿಂತ ಹೆಚ್ಚಿನ ಅಧಿಕಾರ ಆಯೋಗಕ್ಕೆ ಇಲ್ಲ. ಹಾಗೇನಾದರೂ ಹಣ, ಶರಾಬು ಹಂಚಿದ ಅಥವಾ ಮತದಾರರನ್ನು ಧರ್ಮ ಅಥವಾ ಜಾತಿಯ ಆಧಾರದಲ್ಲಿ ವಿಭಜಿಸಿದಂಥ ಗಂಭೀರವಾದ ಉಲ್ಲಂಘನೆಯಾಗಿದ್ದರೆ ಭಾರತೀಯ ದಂಡ ಸಂಹಿತೆಯಡಿಯಲ್ಲಿ ಅಥವಾ ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಶಿಫಾರಸು ಮಾಡಬಹುದು. ದ್ವೇಷದ ಕಿಡಿ ಹೊತ್ತಿಸುವ ಭಾಷಣ ಮಾಡಿದ್ದರೆ ಅಥವಾ ಧಾರ್ಮಿಕ ಸ್ಥಳಗಳ ದುರ್ಬಳಕೆಯಾಗಿದ್ದರೆ ಅಪರಾಧ ದಂಡ ಸಂಹಿತೆಯಡಿ ಕೇಸು ದಾಖಲಿಸಲು ಸೂಚಿಸಬಹುದಷ್ಟೆ.
ನೀತಿ ಸಂಹಿತೆ ಎನ್ನುವುದು ಶಾಸನಕ್ಕಿಂತ ಹೆಚ್ಚಾಗಿ ನೈತಿಕತೆಯ ಬಲವನ್ನು ಆಧರಿಸಿಕೊಂಡಿದೆ. ಇದು ಅದರ ಹಿರಿಮೆಯೂ ಹೌದು ದೌರ್ಬಲ್ಯವೂ ಹೌದು. ನೀತಿ ಸಂಹಿತೆ ಉಲ್ಲಂ ಸಿದವರಿಗೆ ಮತದಾರರೇ ಸರಿಯಾದ ಪಾಠ ಕಲಿಸುತ್ತಾರೆ ಎನ್ನುವುದು ಚುನಾವಣ ಆಯೋಗದ ನಂಬಿಕೆ. ಆದರೆ ನೊಟೀಸಿಗೆ ಅಥವಾ ಗದರಿಕೆಗೆ ಮಣಿಯುವಷ್ಟು ಸೂಕ್ಷ್ಮ ಸಂವೇದನೆಯುಳ್ಳ ನಾಯಕರು ಈಗ ಇದ್ದಾರೆಯೇ? ನೀತಿ ಸಂಹಿತೆ ಉಲ್ಲಂ ಸಿದ ಆರೋಪ ಹೊತ್ತು ಕೂಡಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಅಭ್ಯರ್ಥಿ ಆಯೋಗದ ನೊಟೀಸಿಗೆ ಕವಡೆ ಕಿಮ್ಮತ್ತನ್ನಾದರೂ ನೀಡುತ್ತಾನೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಿಲ್ಲ. ಶಾಸನಾತ್ಮಕ ಬೆಂಬಲ ಬಂದರೆ ನೀತಿ ಸಂಹಿತೆ ತುಸು ಪ್ರಬಲವಾಗಬಹುದು ಎಂಬ ವಾದವಿದ್ದರೂ ಆಮೆನಡಿಗೆಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂಥ ಪ್ರಕರಣಗಳು ಇತ್ಯರ್ಥವಾಗಲು ಎಷ್ಟು ವರ್ಷ ಹಿಡಿಯಬಹುದು ಎನ್ನುವುದನ್ನು ಅಂದಾಜಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.