ದಿಕ್ಸೂಚಿಯಾಗಲಿರುವ ಫಲಿತಾಂಶ
Team Udayavani, Dec 18, 2017, 12:06 PM IST
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ವರ್ಷಾಂತ್ಯದ ಈ ಮತ ಸಮರ ಅತ್ಯಂತ ರೋಚಕವೂ ಕುತೂಹಲಕಾರಿಯೂ ಆಗಿದೆ. ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾದರೆ ಈ ಸಲವೂ ಬಿಜೆಪಿ ನಿರಾಯಾಸವಾಗಿ ಗೆಲ್ಲಲಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಸಿಗಲಿದೆ. ಅಂತೆಯೇ ಗುಜರಾತಿನಲ್ಲೂ 110ರಿಂದ 115ರ ತನಕ ಸ್ಥಾನಗಳು ದಕ್ಕಬಹುದು ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳಿವೆ. ಆದರೆ ಎಲ್ಲ ಸಮಯದಲ್ಲಿ ಸಮೀಕ್ಷೆಗಳ ಫಲಿತಾಂಶ ನಿಜವಾಗಬೇಕೆಂದೇನೂ ಇಲ್ಲ. ಅಂತಿಮವಾಗಿ ಫಲಿತಾಂಶ ನಿರ್ಧರಿಸುವುದು ಮತದಾರರು. ಅವರ ಮನಸ್ಸಿನಲ್ಲೇನಿದೆ ಎನ್ನುವುದು ಯಾವ ಸಮೀಕ್ಷಾಕಾರನಿಗೂ ತಿಳಿದಿರುವುದಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ. ಬಹುತೇಕ ಸಮೀಕ್ಷೆಗಳು ಬಿಜೆಪಿ 220ರಿಂದ 250 ಸ್ಥಾನಗಳನ್ನು ಗೆದ್ದು ಸರಳ ಬಹುಮತದೊಂದಿಗೆ ಸರಕಾರ ಸ್ಥಾಪಿಸಲಿವೆ ಎಂದೇ ಭವಿಷ್ಯ ನುಡಿದಿದ್ದವು. ಆದರೆ ಫಲಿತಾಂಶ ಪ್ರಕಟವಾದಾಗ ಬಿಜೆಪಿ 325 ಸ್ಥಾನಗಳನ್ನು ಗೆದ್ದಿತ್ತು. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಫಲಿತಾಂಶ ವಿಚಾರದಲ್ಲೂ ಹೀಗೆ ಆಗಬಾರದೆಂದೇನೂ ಇಲ್ಲದಿರುವುದರಿಂದ ಯಾವ ಪಕ್ಷವೂ ಸಮೀಕ್ಷೆಯನ್ನು ನಂಬಿಕೊಂಡು ನಿರುಮ್ಮಳವಾಗಿರುವುದು ಸಾಧ್ಯವಿಲ್ಲ.
ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ಪಕ್ಷಗಳ ಪಾಲಿಗೆ ವಿಧಾನಸಭೆ ಚುನಾವಣೆ ಪ್ರತಿಷ್ಠೆಯ ವಿಷಯವಾಗಿತ್ತು. ಅದರಲ್ಲೂ ಗುಜರಾತ್ ಫಲಿತಾಂಶ ಇದಕ್ಕೂ ಹೆಚ್ಚಿನ ಮಹತ್ವ ಹೊಂದಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತವರು ರಾಜ್ಯ. ಈ ರಾಜ್ಯದ ಫಲಿತಾಂಶ ಮುಂದಿನ ಚುನಾವಣೆಗಳ ಮೇಲೆ ಮಾತ್ರವಲ್ಲದೆ ದೇಶದ ಭವಿಷ್ಯದ ದಿಕ್ಸೂಚಿಯೂ ಆಗಲಿದೆ ಎಂಬುದೇ ಇಷ್ಟೊಂದು ಮಹತ್ವ ಬರಲು ಕಾರಣ. ಕಳೆದ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಇನ್ನೂ ಒಂದು ಅವಧಿಗೆ ಅಧಿಕಾರ ಬಯಸುತ್ತಿದೆ. ಇಷ್ಟು ವರ್ಷ ಮೋದಿಯವರ ಅಭಿವೃದ್ಧಿಯ ಅಜೆಂಡಾವೇ ಚುನಾವಣೆಯ ಮುಖ್ಯ ವಿಷಯವಾಗಿತ್ತು. ಮೋದಿ ದಿಲ್ಲಿಗೆ ಹೋದ ಪರಿಣಾಮವಾಗಿ ಗುಜರಾತಿನಲ್ಲೊಂದು ನಿರ್ವಾತ ಸೃಷ್ಟಿಯಾಗಿರುವುದು ಚುನಾವಣೆ ಸಂದರ್ಭದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಹೀಗಾಗಿ ಕಡೆಗೂ ಚುನಾವಣೆಯ ಸಾರಥ್ಯವನ್ನು ಮೋದಿಯೇ ವಹಿಸಬೇಕಾಯಿತು. ಒಂದು ಮಾತಂತೂ ಸತ್ಯ, ಬಿಜೆಪಿ ಮತ್ತು ಕಾಂಗ್ರೆಸ್ ಈ ಚುನಾವಣೆಯಲ್ಲಿ ಸಾಕಷ್ಟು ಬೆವರು ಹರಿಸಿವೆ. ಪ್ರಚಾರದಲ್ಲಾದರೂ ವಿಪಕ್ಷವಾಗಿ ಕಾಂಗ್ರೆಸ್ ಪ್ರಬಲ ಸ್ಪರ್ಧೆಯೊಡ್ಡುವಲ್ಲಿ ಸಫಲವಾಗಿದೆ. ಹಾಗೆಯೇ ಈ ಚುನಾವಣೆ ಅತ್ಯಂತ ಕೀಳುಮಟ್ಟದ ಆರೋಪ ಮತ್ತು ಪ್ರತ್ಯಾರೋಪಗಳಿಗೂ ಸಾಕ್ಷಿಯಾದದ್ದು ಪ್ರಜಾತಂತ್ರದ ದುರಂತ.
ಹಾಗೆ ನೋಡಿದರೆ ಗುಜರಾತ್ ಫಲಿತಾಂಶ ಕಾಂಗ್ರೆಸಿಗಿಂತಲೂ ಬಿಜೆಪಿಗೆ ಬಲು ಮುಖ್ಯ. ಗೆದ್ದರೆ ಇದು ಜಿಎಸ್‌ಟಿ, ನೋಟು ರದ್ದು ಮುಂತಾದ ಕ್ರಾಂತಿಕಾರಿ ನಿರ್ಧಾರಗಳಿಗೆ ಸಿಕ್ಕಿದ ಗೆಲುವು. ಕಳೆದ ಎರಡು ದಶಕಗಳಲ್ಲಿ ಬಿಜೆಪಿ ಸರಕಾರ ಅಭಿವೃದ್ಧಿಗೆ ಜನರು ಒತ್ತಿದ ಅಂಗೀಕಾರದ ಮುದ್ರೆ ಎನ್ನಬಹುದು. ಅಂತೆಯೇ ಮೋದಿಯ ವರ್ಚಸ್ಸು ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇನ್ನೊಂದು ಪುರಾವೆ ಸಿಕ್ಕಿದಂತಾಗುತ್ತದೆ. ಆದರೆ ಸೋಲುವುದು ಬೇಡ, 100ಕ್ಕಿಂತ ಕಡಿಮೆ ಸ್ಥಾನಗಳು ಬಂದರೂ ಕೂಡ ಬಿಜೆಪಿ ನೈತಿಕವಾಗಿ ಸೋತಂತಯೇ ಆಗುತ್ತದೆ. ತವರು ರಾಜ್ಯದಲ್ಲಿ ಕನಿಷ್ಠ ಕೈಯಲ್ಲಿರುವ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರೆ ಬಿಜೆಪಿ ಬಹಳಷ್ಟು ಕಳೆದುಕೊಳ್ಳಬೇಕಾದೀತು. ಆದರೆ ಕಾಂಗ್ರೆಸ್ ಪಾಲಿಗೆ ಈ ಭೀತಿಯಿಲ್ಲ. ಗುಜರಾತ್ ಅಥವಾ ಹಿಮಾಚಲ ಪ್ರದೇಶ ಸೋಲು ಈ ಪಕ್ಷದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಕ್ಕೇನೂ ಕಾರಣವಾಗುವುದಿಲ್ಲ. ಹೆಚ್ಚೆಂದರೆ ರಾಹುಲ್ ಗಾಂಧಿ ಅದ್ಯಕ್ಷ ಪಟ್ಟಕ್ಕೇರಿದ ಬಳಿಕ ಎದುರಿಸಿದ ಮೊದಲ ಸೋಲು ಎಂಬ ಟೀಕೆಗೊಳಗಾಗಬಹುದು ಅಷ್ಟೆ. ಆದರೆ ಎಲ್ಲ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಕಾಂಗ್ರೆಸ್ ಗೆದ್ದರೆ ಅದು ಗುಜರಾತ್ ಮಾತ್ರವಲ್ಲದೆ ಇಡೀ ದೇಶದಲ್ಲಿ ಒಂದಕ್ಕಿಂತ ಹೆಚ್ಚು ಪರಿಣಾಮಗಳನ್ನು ಉಂಟು ಮಾಡಲಿದೆ. ಏನಾಗಬಹುದು ಎಂದು ತಿಳಿಯಲು ಇನ್ನು ಉಳಿದಿರುವುದು ಕೆಲವು ತಾಸುಗಳು ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.