ದೂರು ಬಂದ ಕೂಡಲೇ ಬಂಧಿಸುವಂತಿಲ್ಲ: ಕಾಯಿದೆ ಎಬ್ಬಿಸಿದ ಬಿರುಗಾಳಿ
Team Udayavani, Mar 24, 2018, 7:30 AM IST
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಾಡಿರುವ ಕೆಲವು ಬದಲಾವಣೆಗಳು ದೇಶಾದ್ಯಂತ ಭಾರೀ ಚರ್ಚೆಗೀಡಾಗಿವೆ. ಸಮಾಜದ ದುರ್ಬಲ ವರ್ಗದವರ ಹಿತರಕ್ಷಣೆಗಾಗಿ ರೂಪುಗೊಂಡ ಈ ಕಾಯಿದೆ ವ್ಯಾಪಕವಾಗಿ ದುರುಪಯೋಗವಾಗುತ್ತಿರುವುದನ್ನು ಗಮನಿಸಿದ ಜಸ್ಟಿಸ್ ಆದರ್ಶ್ ಕೆ. ಗೋಯಲ್ ಮತ್ತು ಜಸ್ಟಿಸ್ ಉದಯ್ ಯು. ಲಲಿತ್ ಅವರ ವಿಭಾಗಪೀಠ ಮಾ. 20ರಂದು ನೀಡಿದ ತೀರ್ಪಿನಲ್ಲಿ ಸ್ವಯಂ ಪ್ರೇರಣೆಯಿಂದ ಎಫ್ಐಆರ್ ದಾಖಲಿಸಿಕೊಳ್ಳುವುದು ಮತ್ತು ನಿರೀಕ್ಷಣಾ ಜಾಮೀನು ನೀಡದಿರುವ ಅಂಶಗಳನ್ನು ರದ್ದುಪಡಿಸಿದೆ. ಅರ್ಥಾತ್ ದೂರು ಬಂದ ಕೂಡಲೇ ಪೊಲೀಸರು ಯಾರನ್ನಾದರೂ ಹೋಗಿ ಬಂಧಿಸುವಂತಿಲ್ಲ. ಬಂಧನಕ್ಕೂ ಮೊದಲು ಪ್ರಾಥಮಿಕ ತನಿಖೆ ಕೈಗೊಳ್ಳಬೇಕು ಹಾಗೂ ಆರೋಪಿಗೆ ನಿರೀಕ್ಷಣಾ ಜಾಮೀನು ಪಡೆಯುವ ಹಕ್ಕು ಇದೆ ಎಂದಿದೆ ತೀರ್ಪು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಒದಗಿಸಿರುವ ಅಂಕಿಅಂಶಗಳ ಪ್ರಕಾರ 2015ರಲ್ಲಿ ಈ ಕಾಯಿದೆಯಡಿಯಲ್ಲಿ ಶೇ. 16 ಸುಳ್ಳು ಪ್ರಕರಣಗಳು ದಾಖಲಾಗಿವೆ ಮತ್ತು ಈ ಪೈಕಿ ಶೇ. 75 ಪ್ರಕರಣಗಳಲ್ಲಿ ಆರೋಪಿಗಳನ್ನು ನ್ಯಾಯಾಲಯಗಳು ಖುಲಾಸೆಗೊಳಿಸಿವೆ ಇಲ್ಲವೇ ಕೇಸು ಬಿದ್ದು ಹೋಗಿದೆ.ಈ ಅಂಕಿಅಂಶದ ಆಧಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಕಾಯಿದೆ ದುರಪ ಯೋಗ ವಾಗುತ್ತಿರುವ ತೀರ್ಮಾನಕ್ಕೆ ಬಂದಿದೆ. ಇದಕ್ಕೆ ಇತ್ತೀಚೆಗಿನ ಉದಾಹರ ಣೆಯಾಗಿ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹೆಸರಿಸಿದೆ. ಪಾಂಡ್ಯ ಫೇಸ್‌ಬುಕ್‌ನಲ್ಲಿ ಕಳೆದ ವರ್ಷ ಡಾ| ಅಂಬೇಡ್ಕರ್ ವಿರುದ್ಧ ಹಾಕಿದ್ದಾರೆ ಎನ್ನಲಾಗಿರುವ ಕಮೆಂಟ್ ಒಂದರ ವಿರುದ್ಧ ಕೇಸ್ ದಾಖಲಾಗಿದೆ. ಈ ಪ್ರಕರಣಕ್ಕೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯಿದೆಯನ್ನು ಅನ್ವಯಿಸುವುದಾದರೆ ತಕ್ಷಣ ಪಾಂಡ್ಯ ಬಂಧನವಾಗಬೇಕಿತ್ತು. ಆದರೆ ಈ ಫೇಸ್‌ಬುಕ್ ಖಾತೆಯೇ ನಕಲಿ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಆದರೂ ಪಾಂಡ್ಯ ವಿರುದ್ಧದ ಕೇಸ್ ಹಿಂದೆಗೆಯಲಾಗಿಲ್ಲ.
ಎಲ್ಲ ಜನಪರ ಕಾಯಿದೆಯಂತೆಯೇ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ದುರ್ಬಳಕೆಯಾಗುತ್ತಿರುವುದು ಸುಳ್ಳಲ್ಲ. ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಮತ್ತು ರಾಜಕೀಯ ದುರುದ್ದೇಶದಿಂದ ಆಗಾಗ ಕಾಯಿದೆಯನ್ನು ಬಳಸಿಕೊಳ್ಳಲಾಗುತ್ತಿದೆ. ಚಿಕ್ಕಪುಟ್ಟ ಜಗಳಗಳು ಕೂಡಾ ಎಸ್‌ಸಿ/ಎಸ್‌ಟಿ ಕಾಯಿದೆಯಡಿಯಲ್ಲಿ ದಾಖಲಾಗುತ್ತವೆ. ಪೊಲೀಸರು ಕೂಡಾ ಕೆಲವೊಮ್ಮೆ ಎಸ್‌ಸಿ/ಎಸ್‌ಟಿ ಕಾಯಿದೆ ಅನ್ವಯಿಸುವ ಬೆದರಿಕೆಯೊಡ್ಡಿ ಲಂಚ ಕೀಳುವುದು ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸರಿ ಎನ್ನಬಹುದು. ಆದರೆ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಕೇಸು ದಾಖಲಿಸಲು ಹಿರಿಯ ಪೊಲೀಸ್ ಅಧೀಕ್ಷಕರ (ಎಸ್‌ಎಸ್‌ಪಿ) ಅನುಮತಿ ಪಡೆಯಬೇಕೆನ್ನುವ ಅಂಶ ಪ್ರಾಯೋಗಿಕವಲ್ಲ. ಇದು ಸಹಜ ನ್ಯಾಯ ನಿರಾಕರಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆಯಿದೆ ಎಂಬ ದೂರಿನಲ್ಲಿ ಹುರುಳಿದೆ. ಎಲ್ಲ ನಗರಗಳಲ್ಲಿ ಎಸ್‌ಎಸ್‌ಪಿಗಳಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಜನರು ಎಸ್‌ಎಸ್‌ಪಿಯನ್ನು ಹುಡುಕಿಕೊಂಡು ಎಲ್ಲಿಗೆ ಹೋಗಬೇಕು? ಹಳ್ಳಿಯಲ್ಲಿ ನಡೆದಿರುವ ಪ್ರಕರಣದ ಕೇಸು ದಾಖಲಾಗಲು ಎಸ್‌ಎಸ್‌ಪಿಯ ಬಳಿಗೆ ಹೋಗಿ ಅನುಮತಿ ಪಡೆದುಕೊಂಡು ಬರುವುದು ಕಾರ್ಯಸಾಧುವೆ? ಇಂತಹ ಸಂದರ್ಭದಲ್ಲಿ ದಲಿತರು ದೂರು ನೀಡುವುದು ಹೇಗೆ ಎನ್ನುವ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಸಮಾಧಾನಕರ ಉತ್ತರ ಕೊಟ್ಟಿಲ್ಲ. ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಾದರೂ ಪೊಲೀಸರು ಎಫ್ಐಆರ್ ದಾಖಲಿಸಲು ದೀರ್ಘ ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ಇಂತಹ ಒಂದು ನಿಯಮವೂ ಸೇರ್ಪಡೆಯಾದರೆ ಎಫ್ಐಆರ್ ದಾಖಲಾತಿ ಮತ್ತಷ್ಟು ವಿಳಂಬವಾಗಬಹುದು.
ಇದೇ ತೀರ್ಪಿನಲ್ಲಿ ನ್ಯಾಯಾಲಯ ಜಾತ್ಯತೀತ ನೆಲೆಯಲ್ಲಿ ಕಾಯಿದೆಯನ್ನು ಪುನರ್ ಮನನ ಮಾಡಿಕೊಳ್ಳಬೇಕೆಂಬ ಸಲಹೆಯನ್ನೂ ನೀಡಿದೆ. ಅಂದರೆ ಜಾತ್ಯತೀತ ತತ್ವಗಳನ್ನು ಒಪ್ಪಿಕೊಂಡ ಮೇಲೆ ಜಾತಿಗೊಂದು, ಪಂಗಡಕ್ಕೊಂದು ಪ್ರತ್ಯೇಕ ಕಾನೂನು ಬೇಕೆ ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತಿದೆ. ಜಾತಿರಹಿತ ಸಮಾಜ ನಿರ್ಮಾಣದ ಆಶಯ ಇದರ ಹಿಂದೆ ಇದೆ. ಆದರೆ ದೇಶದಿಂದ ಜಾತಿ ಪದ್ಧತಿ ಹೋಗಬೇಕೆಂಬ ಇಚ್ಛೆ ಯಾವ ಪಕ್ಷಕ್ಕೂ ಇಲ್ಲ. ಎಲ್ಲ ಪಕ್ಷಗಳು ಜಾತಿ, ಧರ್ಮ, ಪಂಗಡಗಳ ನಡುವೆ ಸಮಾಜವನ್ನು ವಿಭಜಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯದ ಮಾತು ಯಾರಿಗೆ ಪಥ್ಯವಾದೀತು? ಪ್ರಸ್ತುತ ರಾಜಕೀಯ ಪಕ್ಷಗಳು ಈ ಅಂಶವನ್ನು ಬದಿಗಿಟ್ಟು ನ್ಯಾಯಾಲಯ ಮೊದಲು ಹೇಳಿದ ತಕ್ಷಣ ಬಂಧಿಸುವಂತಿಲ್ಲ ಮತ್ತು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಬೇಕೆನ್ನುವ ಅಂಶವನ್ನು ಹಿಡಿದುಕೊಂಡು ಕಾಯಿದೆ ದುರ್ಬಲಗೊಂಡಿದೆ ಎಂದು ಆಪಾದಿಸುತ್ತಿವೆ. ಬಹುತೇಕ ಎಲ್ಲ ಪಕ್ಷಗಳು ತೀರ್ಪಿನ ಪರಾಮರ್ಶೆಗೆ ಮೇಲ್ಮನವಿ ಸಲ್ಲಿಸಲು ಮತ್ತು ಪ್ರಕರಣವನ್ನು ಸಂವಿಧಾನ ಪೀಠಕ್ಕೊಪ್ಪಿಸುವಂತೆ ಆಗ್ರಹಿಸಲು ಸರಕಾರವನ್ನು ಒತ್ತಾಯಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.