“ಆನ್‌ಲೈನ್‌ನಲ್ಲೇ ದೂರು ದಾಖಲೆ’ ಸಲಹೆ: ಎಚ್ಚೆತ್ತುಕೊಳ್ಳಲಿ ರೈಲ್ವೇ
Team Udayavani, Jan 19, 2019, 12:30 AM IST
ರೈಲುಗಳಲ್ಲಿ ಎಷ್ಟೇ ಸುರಕ್ಷತಾ ಕ್ರಮ ಕೈಗೊಂಡರೂ ಇಂದಿಗೂ ಕಳ್ಳತನ ಮತ್ತು ದರೋಡೆಯಂಥ ಕೃತ್ಯಗಳು ನಿಂತಿಲ್ಲ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಗೃಹಸಚಿವರು ಇಂಥ ಘಟನೆಗಳು ನಡೆದಾಗ ಆನ್‌ಲೈನ್‌ನಲ್ಲಿ ದೂರು ದಾಖಲಿಸುವ ವ್ಯವಸ್ಥೆ ಬೇಕು ಎಂದು ರೈಲ್ವೆ ಇಲಾಖೆಗೆ ಸೂಚಿಸಿದ್ದಾರೆ. ಸದ್ಯಕ್ಕಂತೂ ಸಂತ್ರಸ್ತರು ದೂರು ಸಲ್ಲಿಸಲು ರೈಲ್ವೆ ಪೊಲೀಸ್ ಠಾಣೆಗೆ ಹೋಗಬೇಕು. ಅಲ್ಲಿ ದೂರು ಸಲ್ಲಿಕೆಯಾದ ಮೇಲೆ ಅದನ್ನು ರಾಜ್ಯಕ್ಕೆ ಕಳುಹಿಸಲಾಗುತ್ತದೆ, ಅಲ್ಲಿಂದ ಸಂಬಂಧಿತ ಜಿಲ್ಲೆಗೆ ಮತ್ತು ತದನಂತರ ನಿರ್ದಿಷ್ಟ ಠಾಣೆಗೆ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆ ಎಷ್ಟು ಜಟಿಲವಾಗಿದೆಯೆಂದರೆ ಪೀಡಿತರು ಅಲೆದೂ ಅಲೆದೂ ಮತ್ತಷ್ಟು ಹೈರಾಣಾಗುತ್ತಾರೆ. ಹೀಗಾಗಿ ಬಹುತೇಕ ಬಾರಿ ಜನರು ತಮ್ಮ ಹಣೆಬರಹವನ್ನು ಶಪಿಸಿಕೊಂಡು ಸುಮ್ಮನಾಗಿಬಿಡುತ್ತಾರೆ. ರೈಲ್ವೆ ಇಲಾಖೆಯ ಪ್ರಕಾರ ವಾರ್ಷಿಕವಾಗಿ ರೈಲ್ವೆ ಪ್ರಯಾಣಿಕರಿಂದ 24,000 ಕಳ್ಳತನದ ಕೇಸುಗಳು ದಾಖಲಾಗುತ್ತವೆ. ಆದರೆ, ದಾಖಲಾಗದ ಪ್ರಕರಣಗಳೆಷ್ಟೋ?
ಈ ನಿಟ್ಟಿನಲ್ಲಿ ಪ್ರಯಾಣಿಕ ಸ್ನೇಹಿ ಆನ್‌ಲೈನ್ ದೂರು ದಾಖಲಾತಿ ವ್ಯವಸ್ಥೆ ಒಳ್ಳೆಯ ಪರಿಕಲ್ಪನೆ ಎನ್ನಬಹುದು. ಇದೇನಾದರೂ ಜಾರಿಗೆ ಬಂದರೆ ರೈಲ್ವೆ ಇಲಾಖೆಯ ಮೇಲಿನ ಭರವಸೆಯೂ ಹೆಚ್ಚಲಿದೆ. ಆದಾಗ್ಯೂ ರೈಲುಗಳಲ್ಲಿ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸುವ ಸಲಹೆ ಈಗಿನದ್ದಲ್ಲ. ಜಿಪಿಎಸ್, ಆನ್‌ಲೈನ್ ಸೂಚನೆಗಳನ್ನು ಕಳುಹಿಸುವ ಆಪತ್ಕಾಲಿಕ ಎಲೆಕ್ಟ್ರಾನಿಕ್ ಯಂತ್ರ ವ್ಯವಸ್ಥೆಯನ್ನು ಪ್ರತಿ ಬೋಗಿಯಲ್ಲೂ ಅಳವಡಿಸುವ ಬಗ್ಗೆ ಬಹಳ ಹಿಂದೆಯೇ ರೈಲ್ವೇ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಕಳ್ಳತನ ಅಥವಾ ದುರ್ಘಟನೆಯಂಥ ಸನ್ನಿವೇಶದಲ್ಲಿ ಯಾತ್ರಿಗಳು ಉಳಿದ ಸ್ಟೇಷನ್‌ಗಳಿಗೆ ಅಥವಾ ಮುಖ್ಯಾಲಯಕ್ಕೆ ಸಂದೇಶ ಕಳುಹಿಸುವ ಟೆಕ್ನಾಲಜಿಯನ್ನು ಅಳವಡಿಸುವ ಬಗ್ಗೆ ಮಾತನಾಡುತ್ತಲೇ ಬರಲಾಗಿದೆ. ಆದರೆ ಈ ನಿಟ್ಟನಲ್ಲಿ ಕೆಲಸಗಳು ಆಗಿಲ್ಲ. ಆದಾಗ್ಯೂ ಜನರ ಸುರಕ್ಷತೆಗಾಗಿ ಹೆಚ್ಚುವರಿ ರೈಲ್ವೆ ಪೊಲೀಸರನ್ನು ನೇಮಿಸಲಾಗಿದೆ ಮತ್ತು ಆಪತ್ಕಾಲಕ್ಕೆ ಸಂಪರ್ಕಿಸಬೇಕಾದ ನಂಬರ್‌ಗಳನ್ನು ಬೋಗಿಗಳಲ್ಲಿ ನಮೂದಿಸಲಾಗಿರುತ್ತದೆಯಷ್ಟೆ. ಆದರೂ ಕಳ್ಳತನದಂಥ ಘಟನೆಗಳು ನಿಲ್ಲುತ್ತಿಲ್ಲವೆಂದರೆ ರೈಲ್ವೆ ಪೊಲೀಸ್ ಸಕ್ಷಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದೇ ಅರ್ಥ ಬರುತ್ತದೆ.
ತಿಂಗಳ ಹಿಂದೆ, ಅಂದರೆ ಡಿಸೆಂಬರ್‌ನಲ್ಲಿ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲಿನಲ್ಲಿ ಮತ್ತು ಮೈಸೂರು ತಾಳಗುಪ್ಪ ರೈಲಿನಲ್ಲೂ ದರೋಡೆ ನಡೆದು ಸುದ್ದಿಯಾಗಿತ್ತು. ಆದಾಗ್ಯೂ ಈ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರಾದರೂ, ರೈಲ್ವೆ ಈಗಲೂ ಎಷ್ಟು ಅಸುರಕ್ಷಿತ ಎನ್ನುವುದಕ್ಕೆ ಇದೊಂದು ಉದಾಹರಣೆ. ಇನ್ನು, ಇತ್ತೀಚೆಗಷ್ಟೇ ಬಿಹಾರದಲ್ಲಿ ನಡೆದ ಭೀಕರ ರೈಲು ದರೋಡೆಯೂ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತದೆ. ಸುಮಾರು ಎರಡು ಗಂಟೆಯವರೆಗೆ ದರೋಡೆ ನಡೆದರೂ ಅದನ್ನು ತಡೆಯುವಂಥ ಯಾವ ದಾರಿಯೂ ಪ್ರಯಾಣಿಕರ ಎದುರು ಇರಲಿಲ್ಲ.
ರೈಲುಗಳಲ್ಲಿ ಕಳ್ಳತನದ ಘಟನೆಗಳು ಸಹಜವೆನ್ನಿಸುವಷ್ಟರ ಮಟ್ಟಿಗೆ ಆಗುತ್ತಲೇ ಇರುತ್ತವೆ. ಪ್ರತಿಯೊಂದು ರೈಲಿನಲ್ಲೂ ಒಬ್ಬರಲ್ಲ ಒಬ್ಬರು ತಮ್ಮ ಮೊಬೈಲ್, ಪರ್ಸ್ ಕಳೆದುಕೊಂಡು ಪರದಾಡುವುದು ಗೋಚರಿಸುತ್ತದೆ. ಪರ್ಸ್ ಅಥವಾ ಲಗೇಜು ಕಳೆದುಕೊಂಡ ಅನೇಕರು ಮುಂದಿನ ಸ್ಟೇಷನ್ನಿನಲ್ಲಿ ಇಳಿದು ಪ್ರಕರಣ ದಾಖಲಿಸುವುದಕ್ಕೆ ಹೋಗುವುದಿಲ್ಲ. ಕೆಲವರಿಗೆ ಇಳಿದು ಸ್ಟೈಷನ್ನಿನಲ್ಲಿ ಗಂಟೆಗಟ್ಟಲೇ ಕಾಯ್ದು ದೂರು ದಾಖಲಿಸುವುದಕ್ಕೆ ಪುರುಸೊತ್ತೂ ಇರುವುದಿಲ್ಲ, ಇನ್ನೂ ಕೆಲವರಿಗೆ ಪೊಲೀಸರನ್ನು ಕಂಡರೆ ಹೆದರಿಕೆಯಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಸುರಕ್ಷತಾ ಕ್ರಮಗಳು ಸುಧಾರಿಸುವುದಾದರೂ ಹೇಗೆ? ಈ ಹಿನ್ನೆಲೆಯಲ್ಲಿಯೇ ರಾಜ್‌ನಾಥ್ ಸಿಂಗ್ ಅವರು “ಪೊಲೀಸರು ಪ್ರಯಾಣಿಕ ಸ್ನೇಹಿಯಾಗಿರಬೇಕು’ ಎಂದು ಹೇಳಿದ್ದಾರೆ ಎನಿಸುತ್ತದೆ.
ಇದೇನೇ ಇದ್ದರೂ ಇಂದು ಭಾರತೀಯ ರೈಲ್ವೆ ಆನ್‌ಲೈನ್ ಬುಕಿಂಗ್ ವ್ಯವಸ್ಥೆಯಲ್ಲಿ ಬಹುದೊಡ್ಡ ಹೆಜ್ಜೆಯಿಟ್ಟು ಮುಂದೆ ಸಾಗುತ್ತಿದೆ. ರೈಲ್ವೆಗೆ ಸಂಬಂಧಿಸಿದ ಮಾಹಿತಿಗಳನ್ನು ತಲುಪಿಸುವುದಕ್ಕಾಗಿಯೇ ಅನೇಕ ವೆಬ್‌ಸೈಟ್‌ಗಳು, ಆ್ಯಪ್‌ಗ್ಳನ್ನು ಖಾಸಗಿ ಕಂಪನಿಗಳು ನಡೆಸುತ್ತಿವೆ. ಇದೆಲ್ಲ ಇದ್ದರೂ, ಅದೇಕೆ ಈಗಲೂ ರೈಲ್ವೆ ಇಲಾಖೆ ಸುರಕ್ಷತೆ ಸಂಬಂಧಿ ವಿಚಾರದಲ್ಲಿ ಆಧುನಿಕ ತಂತ್ರಜ್ಞಾನದ ಆಸರೆ ಪಡೆಯಲು ನಿರಾಸಕ್ತಿ ತೋರಿಸುತ್ತಿದೆಯೋ ತಿಳಿಯದು. ಈ ವಿಚಾರದಲ್ಲಿ ವಿಳಂಬ ಸರಿಯಲ್ಲ. ಕೂಡಲೇ ಆನ್‌ಲೈನ್‌ನಲ್ಲಿ ದೂರು ದಾಖಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲೇಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.