ಅಧಿಕಾರಿಗಳ ಲಂಚಗುಳಿತನ: ಮೇಲಿಂದ ವ್ಯವಸ್ಥೆ ಸ್ವಚ್ಛವಾಗಲಿ
Team Udayavani, Sep 20, 2018, 6:00 AM IST
ಸರಕಾರಿ ಕಚೇರಿಗಳಲ್ಲಿ ಇನ್ನೂ ಒಂದು ಲಂಚದ ವ್ಯವಸ್ಥೆಯಿದೆ. ಅದು ಕೆಳಗಿನ ಅಧಿಕಾರಿಗಳು ತಮ್ಮ ಕೆಲಸ ಮಾಡಿಸಿಕೊಳ್ಳಲು ಮೇಲಧಿಕಾರಿಗಳಿಗೆ ಲಂಚ ಕೊಡುವುದು.
ಸರಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ಲಂಚ ಕೊಡಬೇಕು ಎನ್ನುವುದು ಗಂಭೀರ ವಿಷಯ. ಅಧಿಕಾರಿಗಳ ಲಂಚಗುಳಿತನವನ್ನು ತಡೆಯಲು ಎಷ್ಟೇ ಕಠಿಣ ಕಾನೂನುಗಳನ್ನು ತಂದರೂ ಅದು ಯಾವುದಾದರೊಂದು ರೂಪದಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಲೇ ಇರುತ್ತದೆ. ಹಾಗಾಗಿ ಯಾರಾದರೂ ಅಧಿಕಾರಿ ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದರು ಎನ್ನುವಾಗ ಅಚ್ಚರಿಯೆನಿಸದು.
ಇದು ತೀರಾ ಮಾಮೂಲು ಸುದ್ದಿ ಎಂಬಂತೆ ಈ ವ್ಯವಸ್ಥೆಗೆ ನಾವು ಒಗ್ಗಿ ಹೋಗಿದ್ದೇವೆ. ಇದೇ ವೇಳೆ ಸರಕಾರಿ ಕಚೇರಿಗಳಲ್ಲಿ ಇನ್ನೂ ಒಂದು ಲಂಚದ ವ್ಯವಸ್ಥೆಯಿದೆ. ಅದು ಕೆಳಗಿನ ಅಧಿಕಾರಿಗಳು ತಮ್ಮ ಕೆಲಸ ಮಾಡಿಸಿಕೊಳ್ಳಲು ಮೇಲಧಿಕಾರಿಗಳಿಗೆ ಲಂಚ ಕೊಡುವುದು. ಪ್ರಾಯಶಃ ಈ ಲಂಚದ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ. ಈ ಮಾದರಿಯ ಪ್ರಕರಣಗಳು ಬೆಳಕಿಗೆ ಬರುವುದು ಅಪರೂಪಕ್ಕೊಮ್ಮೆ. ಆದರೆ ಇಂಥ ಒಂದು ವ್ಯವಸ್ಥೆ ಮೇಲಿನಿಂದ ಹಿಡಿದು ಕೆಳಗಿನ ತನಕ ಹರಡಿಕೊಂಡಿದೆ ಎನ್ನುವುದಕ್ಕೆ ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಘಟನೆಯೇ ಸಾಕ್ಷಿ.
ಇಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗ್ರಾಮ ಪಂಚಾಯತ್ ಕ್ರಿಯಾ ಯೋಜನೆಯ ಕಡತ ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಕೆಲವು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಕಾರ್ಯ ನಿರ್ವಹಣಾಧಿಕಾರಿಯ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಭಾರ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಕಾರ್ಯನಿರ್ವಹಣಾಧಿಕಾರಿಯನ್ನು ಸದ್ಯ ಈ ಹೊಣೆಯಿಂದ ಮುಕ್ತಿಗೊಳಿಸಲಾಗಿದ್ದರೂ ಈ ಪ್ರಕರಣ ಸರಕಾರಿ ಇಲಾಖೆಗಳಲ್ಲಿರುವ ಲಂಚವಾತಾರದ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ. ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಣ ನೀಡಲು ಲಂಚ ಪಡೆಯುತ್ತಿದ್ದೇನೆ ಎಂದು ಈ ಅಧಿಕಾರಿ ಶಾಸಕರ ಎದುರೇ ಒಪ್ಪಿಕೊಂಡಿದ್ದರು.
ಸರಕಾರಿ ಇಲಾಖೆಗಳಲ್ಲಿ ಲಂಚಕ್ಕೂ ಹೀಗೆ ಶ್ರೇಣೀಕೃತ ವ್ಯವಸ್ಥೆಯನ್ನು ಮಾಡಿಟ್ಟುಕೊಂಡಿ ರುವುದು ತುಸು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಮೇಲಧಿಕಾರಿ ತನ್ನ ಕೆಳಗಿನ ಅಧಿಕಾರಿಯನ್ನು, ಆತ ತನ್ನಿಂದ ಕೆಳಗಿನ ಅಧಿಕಾರಿಯನ್ನು ಲಂಚಕ್ಕೆ ಪೀಡಿಸುವುದೇ ಈ ಶ್ರೇಣೀಕೃತ ವ್ಯವಸ್ಥೆ. ಈ ಸರಪಣಿಯ ಕೊಟ್ಟಕೊನೆಯ ಅಧಿಕಾರಿ ಜನರಿಂದ ಲಂಚ ಪಡೆದು ಪಾವತಿಸಬೇಕಾಗುತ್ತದೆ. ಈ ವ್ಯವಸ್ಥೆ ಬರೀ ಆರ್ಥಿಕ ಇಲಾಖೆ ಎಂದಲ್ಲ ಪ್ರತಿ ಸರಕಾರಿ ಇಲಾಖೆಯಲ್ಲೂ ಇದೆ. ಕೆಲವು ಶಿಕ್ಷಕರು ತಮ್ಮ ಸಂಬಳ ಬಿಡುಗಡೆಗೆ ಹಣ ನೀಡಬೇಕಾದ ಸ್ಥಿತಿ, ಸರಕಾರಿ ಬಸ್ಸಿನ ನಿರ್ವಾಹಕ ತನ್ನ ಮಾರ್ಗಕ್ಕಾಗಿ ಇಲಾಖೆಯ ಇನ್ಯಾರಿಗೋ ಹಣ ಕೊಡುವ ಸ್ಥಿತಿ, ಪೊಲೀಸ್ ಇಲಾಖೆಯಲ್ಲಿ ಸಾಹೇಬರಿಗೆ ಕೊಡಲು ಬೇಕು ಎಂದು ಹೇಳಿ ಕಿರಿಯ ಅಧಿಕಾರಿಗಳು ತೆಗೆದುಕೊಳ್ಳುವ ಲಂಚ ಎಲ್ಲವೂ ಸಾಮಾನ್ಯ ಆರೋಪದಂತಿಲ್ಲ. ತಮ್ಮ ಇಲಾಖೆಯೊಳಗೆ ಇರುವ ಈ ಲಂಚಗುಳಿತನದ ಬಗ್ಗೆ ಅಧಿಕಾರಿಗಳು ಬಾಯಿ ಬಿಡುವುದು ಬಹಳ ವಿರಳ. ಹಾಗೊಂದು ವೇಳೆ ಬಹಿರಂಗಗೊಳಿಸಿದರೂ ಅವರಿಗೆ ವರ್ಗಾವಣೆ, ಬಡ್ತಿ ತಡೆ ಹಿಡಿಯುವುದು, ವ್ಯತಿರಿಕ್ತ ವರದಿ ರವಾನಿಸುವಂಥ ಕಿರುಕುಳಗಳು ಕಾದಿರುತ್ತವೆ. ವ್ಯವಸ್ಥೆಯಿಂದ ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸಲು ಮಾಡುವ ಪ್ರಯತ್ನ ಘೋರವಾಗಿ ವಿಫಲಗೊಳ್ಳಲೂ ಇಲಾಖೆಯೊಳಗಿನ ಈ ವ್ಯವಸ್ಥೆಯೂ ಒಂದು ಕಾರಣ. ಮೇಲಧಿಕಾರಿಗೆ ಲಂಚ ನೀಡಿದವ ಅದನ್ನು ತನ್ನ ಕೆಳಗಿನ ಅಧಿಕಾರಿಯಿಂದ ವಸೂಲು ಮಾಡಿಯೇ ಮಾಡುತ್ತಾನೆ. ಹೀಗೆ ಅದು ಸರಪಣಿಯಾಗಿ ಸಾಗಿ ಬರುವುದರಿಂದ ದುರಸ್ತಿ ಕಾರ್ಯ ಮೇಲಿನಿಂದಲೇ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಒಂದಷ್ಟು ಪ್ರಯತ್ನಗಳನ್ನು ಮಾಡಿದೆ. ಲಂಚ ಕೊಟ್ಟವರಿಗೂ 7 ವರ್ಷ ತನಕ ಶಿಕ್ಷೆ ವಿಧಿಸುವಂಥ ಕಾನೂನು ಈ ಮಾದರಿಯ ಪ್ರಯತ್ನಗಳಲ್ಲಿ ಒಂದು. ಆದರೆ ಇದರಿಂದಲೂ ಹೆಚ್ಚೇನೂ ಫಲವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಲಂಚ ಹೀಗೆ ವ್ಯಾಪಕವಾಗಲು ಕಾನೂನು ತನ್ನ ಕೆಲಸವನ್ನು ಸಕ್ಷಮವಾಗಿ ಮಾಡದಿರುವುದೂ ಒಂದು ಕಾರಣ. ಕರ್ನಾಟಕದಲ್ಲಿ ಲಂಚ ಪಡೆಯುವಾಗಲೇ ಸಿಕ್ಕಿ ಬಿದ್ದ ಪ್ರಕರಣಗಳಲ್ಲಿ ಕೂಡಾ ಶೇ. ಹತ್ತು ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಇತ್ತೀಚೆಗಷ್ಟೆ ವರದಿಯೊಂದು ತಿಳಿಸಿತ್ತು. ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಬೇಕಾದರೆ ಇಡೀ ವ್ಯವಸ್ಥೆ ಪಾರದರ್ಶಕಗೊಳ್ಳಬೇಕು. ವಿಶ್ವಾಸಾರ್ಹತೆ, ಕಾರ್ಯಾನುಷ್ಠಾನ, ಪ್ರಾಮಾಣಿಕತೆ , ದಕ್ಷತೆ, ಬದ್ಧತೆ ಇವೆಲ್ಲ ಹೆಚ್ಚಬೇಕು. ಇದಾಗಬೇಕಿದ್ದರೆ ಆಡಳಿತದಲ್ಲಿ ಭಾರೀ ಎನ್ನುವಂಥ ಬದಲಾವಣೆಗಳಾಗಬೇಕು. ಈ ಬದಲಾವಣೆಯಾಗಬೇಕಾದರೆ ಮೊದಲು ರಾಜಕೀಯ ವ್ಯವಸ್ಥೆ ಸ್ವತ್ಛವಾಗಬೇಕು. ಆದರೆ ರಾಜಕೀಯ ವ್ಯವಸ್ಥೆಯನ್ನು ಸ್ವತ್ಛಗೊಳಿಸುವ ಪ್ರಯತ್ನಗಳು ಪದೇ ಪದೇ ವಿಫಲಗೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.