ಅಪಾಯಕಾರಿ ಅಪೌಷ್ಟಿಕತೆ: ಬಲಿಯಾಗದಿರಲಿ ಮಕ್ಕಳು
Team Udayavani, Sep 25, 2019, 5:00 AM IST
ಭಾರತದ ಅತಿದೊಡ್ಡ ಸಂಪನ್ಮೂಲವೇ ಜನರು ಎಂದು ನಾವು ಎಷ್ಟೇ ಹೆಮ್ಮೆಯ ಮಾತನಾಡಿದರೂ, ಜನರು ಈಗಲೂ ದುಃಸ್ಥಿತಿಯಲ್ಲೇ ಇದ್ದಾರೆ ಎನ್ನುವುದು ವಾಸ್ತವ. ಭಾರತದಲ್ಲಿ ಇನ್ನೂ ಅಪೌಷ್ಟಿಕತೆ ತಾಂಡವವಾಡುತ್ತಿರುವುದು ನಿಜಕ್ಕೂ ಚಿಂತಿಸಲೇಬೇಕಾದ ವಿಷಯ. ಆಫ್ರಿಕಾದ ಕೆಲ ರಾಷ್ಟ್ರಗಳ ಮಹಿಳೆಯರಿಗಿಂತಲೂ ಭಾರತದಲ್ಲಿ ಅಧಿಕ ಪ್ರಮಾಣದ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ದೇಶದ ಮಕ್ಕಳ ಮರಣ ಪ್ರಮಾಣದಲ್ಲಿ ಅಪೌಷ್ಟಿಕತೆಯೇ ಮುಖ್ಯ ಕೊಲೆಗಡುಕ ಎನ್ನುತ್ತಿದೆ ಇತ್ತೀಚಿನ ಒಂದು ವರ ದಿ. ಆದಾಗ್ಯೂ 1990-2017ರ ನಡುವೆ ಕುಪೋಷಣೆಯಿಂದಾಗಿ ಆಗುವ ಮರಣ ಪ್ರಮಾಣ ಬಹಳ ತಗ್ಗಿದೆ ಎಂದು ಈ ವರದಿ ಹೇಳುತ್ತದಾದರೂ, ಸದ್ಯದಲ್ಲೇ ಸಮಸ್ಯೆ ಪೂರ್ಣ ಪರಿಹಾರ ಆಗುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ.
ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ, ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿರುವ ಸಮೀಕ್ಷೆಯ ವರದಿಯು ಇಡೀ ದೇಶವೇ ತಲೆತಗ್ಗಿಸುವಂಥ ಅಂಶಗಳನ್ನು ಒಳಗೊಂಡಿದೆ. ಐದು ವರ್ಷದ ವಯೋಮಾನದೊಳಗಿನ 68 ಪ್ರತಿಶತ ಮಕ್ಕಳು ಅಪೌಷ್ಟಿಕತೆಯಿಂದಾಗಿ ಸಾವನ್ನಪ್ಪುತ್ತಿವೆ ಎನ್ನುತ್ತದೆ
ಈ ವರದಿ. 2020ರ ವೇಳೆಗೆ ದೇಶದಲ್ಲಿ ಅಪೌಷ್ಟಿಕತೆಯ ಕಾರಣದಿಂದಾಗಿ ಆಗುತ್ತಿರುವ ಮಕ್ಕಳ ಮತ್ತು ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವುದಕ್ಕಾಗಿ ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್ ಅನುಷ್ಠಾನಕ್ಕೆ ತರಲಾಗಿದೆಯಾದರೂ ಈಗಿನ ಅಂಕಿಅಂಶಗಳು, ಈ ಗುರಿ ತಲುಪಲು ಇನ್ನೂ ವರ್ಷಗಳೇ ಹಿಡಿಯಲಿವೆ ಎಂಬ ಪರೋಕ್ಷ ಸಂದೇಶವನ್ನು ಸಾರುತ್ತಿವೆ.
ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ ಮಕ್ಕಳು-ತಾಯಂದಿರು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದಾರೆ. ಪೌಷ್ಟಿಕಾಂಶದ ಕೊರತೆಯಿದ್ದಾಗ ಅನೇಕ ರೋಗಗಳಿಗೆ ಈಡಾಗುವ ಅಪಾಯವೂ ಇರುತ್ತದೆ. ಕಡಿಮೆ ತೂಕವಿರುವ ಮಕ್ಕಳಲ್ಲಿ 47 ಪ್ರತಿಶತ ಮಕ್ಕಳ ಮಾನಸಿಕ ಮತ್ತು ಶಾರೀರಿಕ ವಿಕಾಸ ಮಂದಗತಿಯಲ್ಲಿ ಆಗುತ್ತಿದೆ. ಅಪೌಷ್ಟಿಕತೆಗೆ ಬಡತನ, ಅನಕ್ಷರತೆಯೊಂದಿಗೆ ನೇರ ಸಂಬಂಧವಿದೆ. ಬಡವರಿಗೆ ಒಂದು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದೇ ಕಷ್ಟವಾಗಿರುವಾಗ ಪೌಷ್ಟಿಕ ಆಹಾರಯುಕ್ತ ಭೋಜನ ಸೇವಿಸುವುದು ದೂರದ ಮಾತಾಯಿತು. ಇಂದಿಗೂ ಭಾರತದಲ್ಲಿ 30 ಪ್ರತಿಶತಕ್ಕೂ ಹೆಚ್ಚು ಬಡವರು ಪ್ರತಿ ದಿನ 1800 ಕ್ಯಾಲರಿಗಳಿಗಿಂತಲೂ ಕಡಿಮೆ ಕ್ಯಾಲರಿಯ ಆಹಾರ ಸೇವಿಸುತ್ತಿದ್ದಾರೆ. ಅದರಲ್ಲೂ ಗರ್ಭಾವಸ್ಥೆಯ ವೇಳೆಯಲ್ಲಿ ಪೌಷ್ಟಿಕಾಂಶಗಳ ಕೊರತೆಯು ತಾಯಿಯ ಮೇಲಷ್ಟೇ ಅಲ್ಲದೇ ಮಗುವಿಗೂ ಮಾರಕವಾಗಿ ಬದಲಾಗುತ್ತಿದೆ. ಅಪೌಷ್ಟಿಕತೆಯು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಲೇ ಇದೆ. ಅದಾಗ್ಯೂ ಸರ್ಕಾರಗಳು ಬಡವರಿಗಾಗಿಯೇ ಆಹಾರ ಪೂರೈಕೆ ಯೋಜನೆಗಳನ್ನು ತಂದಿವೆ ಎನ್ನುವುದೇನೋ ಸತ್ಯ. ಆದರೆ ಬಡವರ ಹೊಟ್ಟೆ ತುಂಬಿಸುವುದಷ್ಟೇ ಯೋಜನೆಗಳ ಗುರಿಯಾಗಬಾರದು. ಬಹುತೇಕ ರಾಜ್ಯಗಳಲ್ಲಿ ಆಹಾರ ವಿತರಣೆಯ ಅಡಿಯಲ್ಲಿ ಅಕ್ಕಿ, ಗೋದಿ ಅಥವಾ ಜೋಳವನ್ನು ನೀಡಲಾಗುತ್ತದೆ. ಆದರೆ ಇದರಿಂದ ಅಪೌಷ್ಟಿಕತೆಯ ಸಮಸ್ಯೆ ಪರಿಹಾರವಾಗದು.
ಪೌಷ್ಟಿಕ ಆಹಾರಕ್ಕೆ ಮನುಷ್ಯರನ್ನು ಸರ್ವತೋಮುಖವಾಗಿ ರೂಪಾಂತರಿಸುವ ಶಕ್ತಿಯಿದೆ. ಮಗುವಿನ ಮೊದಲ 1,000 ದಿನಗಳು ಅದರ ಜೀವನಕ್ಕೆ ದಿಕ್ಸೂಚಿಯಾಗಿ ನಿಲ್ಲುತ್ತವೆ. ಈ ಅವಧಿಯಲ್ಲಿ ಅಪೌಷ್ಟಿಕತೆ ಅವನ್ನು ಕಾಡಲೇಬಾರದು. ಏಷ್ಯಾದ ಸೂಪರ್ ಪವರ್ ಆಗುವ ಉತ್ಸಾಹದಲ್ಲಿ ಮುನ್ನುಗ್ಗುತ್ತಿರುವ ಭಾರತವು ತನ್ನದೇ ಕೋಟ್ಯಂತರ ಜನರು ಪೌಷ್ಟಿಕ ಆಹಾರವಿಲ್ಲದೇ ಪರದಾಡುತ್ತಿರುವುದನ್ನು ಕಡೆಗಣಿಸಲೇಬಾರದು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಲ್ಲೇಖಾರ್ಹ ಹೆಜ್ಜೆ ಇಡುತ್ತಿವೆಯಾದರೂ, ಅವು ತಮ್ಮ ಪ್ರಯತ್ನಕ್ಕೆ ಮತ್ತಷ್ಟು ವೇಗ ಕೊಡಲೇಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.