ಧರಣಿ ಹೆಸರಲ್ಲಿ ದೆಹಲಿ ಆಡಳಿತ ಬಲಿ ಸಿಎಂ ಹುದ್ದೆಗೆ ಭೂಷಣವಲ್ಲ
Team Udayavani, Jun 19, 2018, 9:25 AM IST
ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಮೂವರು ಸಂಪುಟದ ಸದಸ್ಯರೊಂದಿಗೆ ಲೆಫ್ಟಿನೆಂಟ್ ಗವರ್ನರ್ ಅವರ ನಿವಾಸದಲ್ಲಿ ಕಳೆದ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಧರಣಿ ಮೂಲಕವೇ ರಾಜಕೀಯ ಪ್ರವೇಶಿಸಿದ ಕೇಜ್ರಿವಾಲ್ ಮುಖ್ಯಮಂತ್ರಿಯಾದ ಮೇಲೂ ಧರಣಿ ರಾಜಕೀಯ ಮುಂದುವರಿಸಿದ್ದಾರೆ. ಐಎಎಸ್ ಅಧಿಕಾರಿಗಳ ಮುಷ್ಕರ ಹಿಂಪಡೆಯುವಂತೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಆದೇಶಿಸಬೇಕು, ಬಡವರ ಮನೆಗಳಿಗೆ ರೇಷನ್ ಒದಗಿಸುವ ತಮ್ಮ ಪ್ರಸ್ತಾಪಕ್ಕೆ ಕೇಂದ್ರ ಅನುಮತಿ ನೀಡಬೇಕು ಎಂಬುದು ಧರಣಿ ನಿರತ ಮುಖ್ಯಮಂತ್ರಿಯ ಬೇಡಿಕೆ. 8 ದಿನಗಳಲ್ಲಿ ಈ ಪ್ರಹಸನ ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ. ಕರ್ನಾಟಕ ಸಹಿತ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೂ ಇದರಲ್ಲಿ ರಂಗಪ್ರವೇಶ ಮಾಡುವ ಮೂಲಕ ರಾಜಕೀಯ ಶಕ್ತಿ ಪ್ರದರ್ಶನವೂ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ದೆಹಲಿ ಮುಖ್ಯಮಂತ್ರಿಯ ಈ ಧರಣಿಯನ್ನು ಟೀಕಿಸುತ್ತಿದ್ದರೆ, ಉಳಿದ ಪ್ರಾದೇಶಿಕ ಪಕ್ಷಗಳು ಬಹುತೇಕ ಕೇಜ್ರಿವಾಲ್ ಬೆಂಬಲಕ್ಕೆ ನಿಂತು ಕೇಂದ್ರ ಸರ್ಕಾರವನ್ನು ಜರೆದಿವೆ. ಈ ಪ್ರಕರಣವೀಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಲೆಫ್ಟಿನೆಂಟ್ ಗವರ್ನರ್ ಅವರ ನಿವಾಸ ಪ್ರವೇಶಿಸಲು ನಿಮಗೆ ಅನುಮತಿ ಕೊಟ್ಟವರು ಯಾರು ಎಂದು ಕೇಜ್ರಿವಾಲ್‌ರನ್ನು ನ್ಯಾಯಾಲಯ ಪ್ರಶ್ನಿಸಿದೆ.
ಆಡಳಿತಕ್ಕೆ ಬಂದ ಲಾಗಾಯ್ತಿನಿಂದ ಒಂದಿಲ್ಲೊಂದು ವಿವಾದಗಳನ್ನು ಆಮ್ ಆದ್ಮಿ ಪಕ್ಷ ಮೈಮೇಲೆಳೆದುಕೊಳ್ಳುತ್ತಾ ಬಂದಿದೆ. ಸ್ವತ್ಛ ಆಡಳಿತದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದ ಆಪ್‌ನ ಸಾಲು ಸಾಲು ಶಾಸಕರು ವಿವಿಧ ಹಗರಣಗಳಲ್ಲಿ ಜೈಲು ಸೇರಿದ್ದಾರೆ. ಮುಖ್ಯಮಂತ್ರಿಯ ಕಚೇರಿಯಲ್ಲೇ ಮುಖ್ಯ ಕಾರ್ಯದರ್ಶಿ ಮೇಲೆ ಆಪ್ ಶಾಸಕರಿಂದ ನಡೆಯಿತೆನ್ನಲಾದ ಹಲ್ಲೆಯೇ ಈ ಒಟ್ಟಾರೆ ಪ್ರಹಸನದ ಮೂಲವಾಗಿದೆ. ಆ ಹಲ್ಲೆಯನ್ನು ವಿರೋಧಿಸಿ ಐಎಎಸ್ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ ಎಂದು ಕೇಜ್ರಿವಾಲ್ ಸರ್ಕಾರ ಆರೋಪಿಸುತ್ತಿದೆ. ಆದರೆ ನಾವು ಮುಷ್ಕರ ನಡೆಸುತ್ತಿಲ್ಲ. ನಮ್ಮನ್ನು ರಾಜಕೀಯಕ್ಕೆ ಎಳೆಯಬೇಡಿ. ನಾವು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. ಸದ್ಯಕ್ಕಂತೂ ಇದು ಬಗೆಹರಿಯದ ಸಮಸ್ಯೆಯಂತೆ ಕಾಣುತ್ತಿದೆ.
ದೆಹಲಿಯು ಉಳಿದ ರಾಜ್ಯಗಳಂತೆ ಪೂರ್ಣ ರಾಜ್ಯದ ಸ್ಥಾನಮಾನ ಹೊಂದಿಲ್ಲ. 1993ರಲ್ಲಿ ಮಾಡಿದ ಸಂವಿಧಾನದ 69ನೇ ತಿದ್ದುಪಡಿಯ ಪ್ರಕಾರ, ದೆಹಲಿ ಸರ್ಕಾರವು ಶಿಕ್ಷಣ, ಸಾರಿಗೆ, ಆರೋಗ್ಯ ಇತ್ಯಾದಿ ವಿಷಯಗಳಲ್ಲಿ ಪೂರ್ಣ ಅಧಿಕಾರ ಹೊಂದಿದ್ದರೂ, ಪೊಲೀಸ್, ಭೂಮಿಯಂತಹ ವಿಚಾರಗಳಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿಲ್ಲ. ಇವುಗಳಿಗೆ ಕೇಂದ್ರದ ಜತೆ ಸಹಕಾರ ಅತ್ಯಗತ್ಯ. 1952ರಲ್ಲಿ ದೆಹಲಿ ಸರ್ಕಾರ ಅಸ್ತಿತ್ವಕ್ಕೆ ಬಂತಾದರೂ 1956ರಲ್ಲಿ ಅದನ್ನು ರದ್ದುಗೊಳಿಸಲಾಯಿತು. ಬಳಿಕ ಸಂವಿಧಾನ ತಿದ್ದುಪಡಿ ತಂದು 1993ರಲ್ಲಿ ಮೊದಲ ವಿಧಾನಸಭೆ ರಚನೆಗೊಂಡಿತು.
1993ರ ಬಳಿಕ ದೆಹಲಿ ಸರ್ಕಾರದ ಕಾರ್ಯವ್ಯಾಪ್ತಿಯ ಸಂಬಂಧ ಕಾನೂನಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಇದೀಗ ಆಪ್ ಹೀಗೆ ಮೂರು ಪಕ್ಷಗಳು ಇಲ್ಲಿ ಅಧಿಕಾರಕ್ಕೇರಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೊಂದಿಗೆ ಆಪ್ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದೆ. ಇದು ಉಭಯ ಸರ್ಕಾರಗಳ ಮಧ್ಯೆ ಆಡಳಿತಾತ್ಮಕ ಸಂಘರ್ಷಕ್ಕೆ ನಾಂದಿ ಹಾಡಿರುವುದು ಸ್ಪಷ್ಟ. ಕೇಂದ್ರ- ದೆಹಲಿ ಸರ್ಕಾರದ ತಿಕ್ಕಾಟ ಇದು ಮೊದಲಲ್ಲ. ಕೇಜ್ರಿವಾಲ್ ದೆಹಲಿಯಲ್ಲಿ ಅಧಿಕಾರಕ್ಕೇರಿದಂದಿನಿಂದ ಇದು ನಡೆದು ಬಂದಿದೆ. ಇದೇ ರೀತಿಯ ಧರಣಿಯನ್ನೂ ಸಿಎಂ ಕೇಜ್ರಿವಾಲ್ ಕೈಗೊಂಡಿದ್ದಿದೆ.
ಎಲ್ಲಾ ರಾಜ್ಯಗಳ ನೀತಿ ನಿರ್ಧಾರ ಚರ್ಚಿಸುವ, ದೇಶದ ಭವಿಷ್ಯದ ಕಾರ್ಯಸೂಚಿ ನಿರ್ಧರಿಸುವ ನೀತಿ ಆಯೋಗದ ಸಭೆಗೆ ಭಾಗವಹಿಸದೆ ಧರಣಿ ಕುಳಿತಿದ್ದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರವೊಂದು ರಾಜ್ಯಪಾಲರಿಗೆ ಅಥವಾ ಕೇಂದ್ರ ಸರ್ಕಾರಕ್ಕೆ ತನ್ನ ಅಹವಾಲು ಸಲ್ಲಿಸಲು ಧರಣಿಯ ಮಾರ್ಗವನ್ನು ಹಿಡಿಯುವುದು ಎಷ್ಟರಮಟ್ಟಿಗೆ ಸರಿ? ತಮ್ಮೆಲ್ಲಾ ಆಡಳಿತ ಕಾರ್ಯವನ್ನು ಬದಿಗಿಟ್ಟು ಏಳೆಂಟು ದಿನಗಳ ಕಾಲ ಧರಣಿ ನಡೆಸುತ್ತಾ ಕೂರುವುದು ಮುಖ್ಯಮಂತ್ರಿ ಹುದ್ದೆಗೆ ಘನತೆ ತರುವುದಿಲ್ಲ.ಆಡಳಿತಾತ್ಮಕ ಸಂಗತಿಗಳನ್ನು ರಾಜಕೀಯ ಪ್ರಹಸನಗೊಳಿಸುವುದು ಸಲ್ಲ. ಆಡಳಿತದಲ್ಲಿರುವ ಪಕ್ಷಗಳು ಬೇರೆಯಾದರೂ, ಆಡಳಿತ ವಿಚಾರದಲ್ಲಿ ರಾಜಕೀಯ ಸೂಕ್ತವಲ್ಲ. ಕೇಂದ್ರ ಸರ್ಕಾರ ಹಾಗೂ ಲೆಫ್ಟಿನೆಂಟ್ ಜನರಲ್ ಹಾಗೂ ಐಎಎಸ್ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಇನ್ನಾದರೂ ಬೀದಿ ನಾಟಕ ನಿಲ್ಲುವುದೊಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.