ಹಠಮಾರಿತನ ಬೇಡ ನ್ಯಾಯಾಂಗದ ಅಸಹಾಯಕತೆ
Team Udayavani, Aug 8, 2017, 7:36 AM IST
ನ್ಯಾಯಾಧೀಶರ ನೇಮಕಾತಿಗೆ ನ್ಯಾಯಾಂಗ, ಶಾಸಕಾಂಗದ ನಡುವೆ ಸಮನ್ವಯತೆ ಇರುವುದು ಅನಿವಾರ್ಯ. ಹೀಗಾಗಿ ಎರಡೂ ಹಠಮಾರಿತನ ಬಿಟ್ಟು ಈ ಕಗ್ಗಂಟನ್ನು ಬಗೆಹರಿಸಿಕೊಳ್ಳಬೇಕು.
ನ್ಯಾಯಾಧೀಶರನ್ನು ನೇಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಜಾತಂತ್ರದ ಎರಡು ಮುಖ್ಯ ಅಂಗಗಳಾಗಿರುವ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಶುರುವಾಗಿರುವ ತಿಕ್ಕಾಟ ಸದ್ಯಕ್ಕೆ ಕೊನೆಯಾಗುವ ಲಕ್ಷಣಗಳಿಲ್ಲ. ಒಂದೆಡೆ ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಸರಕಾರ ಬಯಸಿದ್ದರೆ ಇನ್ನೊಂದೆಡೆ ಸರ್ವೋಚ್ಚ ನ್ಯಾಯಾಲಯ ಮತ್ತು ವಿವಿಧ ಹೈಕೋರ್ಟ್‌ಗಳು ನ್ಯಾಯಾಧೀಶರ ನೇಮಕಾತಿಯಲ್ಲಿ ಸರಕಾರ ಹಸ್ತಕ್ಷೇಪ ನಡೆಸುವುದನ್ನು ವಿರೋಧಿಸುತ್ತಿವೆ. ಇದರ ಪರಿಣಾಮ ಏನಾಗಿದೆ ಎಂದರೆ ಪ್ರಸ್ತುತ ಸುಪ್ರೀಂ ಕೋರ್ಟ್ ಒಂದರಲ್ಲೇ ಸುಮಾರು 59,000 ಸಾವಿರ ಪ್ರಕರಣಗಳು ಬಾಕಿಯುಳಿದಿವೆ. ಹೈಕೋರ್ಟ್‌ಗಳಲ್ಲಿ ಅಂದಾಜು 40 ಲಕ್ಷ ಮತ್ತು ಕೆಳಗಿನ ನ್ಯಾಯಾಲಯಗಳಲ್ಲಿ ಸುಮಾರು 2.5 ಕೋಟಿ ಪ್ರಕರಣಗಳಿವೆ. ಒಂದೊಂದು ಪ್ರಕರಣವೂ ಇತ್ಯರ್ಥವಾಗಲು ವರ್ಷಗಟ್ಟಲೆ ಹಿಡಿಯುತ್ತದೆ. ಆಮೆಗತಿಯ ನ್ಯಾಯದಾನ ಪದ್ಧತಿಯಿಂದಾಗಿ ಇಡೀ ನ್ಯಾಯಾಂಗ ವ್ಯವಸ್ಥೆಯೇ ನಿಷ್ಕ್ರಿಯವಾಗಿರುವಂತೆ ಕಾಣಿಸುತ್ತಿದೆ. ಒಂದೊಂದು ಪ್ರಕರಣವೂ ಇತ್ಯರ್ಥವಾಗಲು ವರ್ಷಗಟ್ಟಲೆ ತೆಗೆದುಕೊಂಡರೆ ವ್ಯವಸ್ಥೆಯಲ್ಲಿ ತನ್ನಿಂದತಾನೇ ಭ್ರಷ್ಟಾಚಾರ ನುಸುಳಿ ಕೊಳ್ಳುತ್ತದೆ ಮತ್ತು ಇದು ಕ್ರಮೇಣ ಎಲ್ಲೆಡೆ ವ್ಯಾಪಿಸುತ್ತಾ ಹೋಗುತ್ತದೆ.
ಸುಪ್ರೀಂ ಕೋರ್ಟಿನ ವಿಶ್ರಾಂತ ಮುಖ್ಯ ನ್ಯಾಯಾಧೀಶ ಟಿ. ಎಸ್. ಠಾಕೂರ್ ನ್ಯಾಯಾಧೀಶರ ನೇಮಕ ವಿಳಂಬದಿಂದಾಗಿ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ನೆನೆಸಿಕೊಂಡು ಪ್ರಧಾನಮಂತ್ರಿಯ ಎದುರೇ ಕಣ್ಣೀರು ಸುರಿಸಿದ ದಯನೀಯ ಸ್ಥಿತಿಗೂ ಈ ದೇಶ ಸಾಕ್ಷಿಯಾಗಿದೆ. ಆದರೂ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಬೇಕೆಂಬ ಇಚ್ಛಾಶಕ್ತಿ ಉಂಟಾಗಿಲ್ಲ ಎನ್ನುವುದು ವಿಷಾದದ ಸಂಗತಿಯೇ ಸರಿ. ಪ್ರಸ್ತುತ ಕೆಳಹಂತದ ನ್ಯಾಯಾಲಯಗಳಲ್ಲಿ ಸುಮಾರು 4500 ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ. ಈ ಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರ ಇರುವುದು ಆಯಾಯ ರಾಜ್ಯಗಳ ಹೈಕೋರ್ಟ್‌ಗಳಿಗೆ. ಈ ನೇಮಕ ಅಧಿಕಾರವನ್ನು ತನ್ನ ಸ್ವಾಧೀನಕ್ಕೆ ತರುವ ಸಲುವಾಗಿ ಸರಕಾರ ಅಖೀಲ ಭಾರತ ನ್ಯಾಯಾಂಗ ನೇಮಕ ಆಯೋಗ ರಚಿಸುವ ಪ್ರಸ್ತಾವವನ್ನು ಎಲ್ಲ ರಾಜ್ಯಗಳ ಹೈಕೋರ್ಟುಗಳಿಗೆ ರವಾನಿಸಿತ್ತು. ಕರ್ನಾಟಕವೂ ಸೇರಿದಂತೆ 9 ರಾಜ್ಯದ ಹೈಕೋರ್ಟ್‌ಗಳು ಈ ಪ್ರಸ್ತಾವವನ್ನು ಖಡಾಖಂಡಿತವಾಗಿ ತಿರಸ್ಕರಿಸಿವೆ. 8 ಹೈಕೋರ್ಟ್‌ಗಳು ಬದಲಾವಣೆಗಳನ್ನು ಸೂಚಿಸಿವೆ. ಅಂದರೆ ಸರಕಾರದ ಪ್ರಯತ್ನಕ್ಕೆ ನ್ಯಾಯಾಂಗ ಅಡ್ಡಗಾಲು ಹಾಕಿದೆ. ಇದರಿಂದಾಗಿ ಸದ್ಯಕ್ಕೆ ನ್ಯಾಯಾಧೀಶರ ನೇಮಕಾತಿ ನಡೆಯುವಂತಿಲ್ಲ. ಒಂದು ವೇಳೆ ಈ ಪ್ರಸ್ತಾವ ಸರಿಯಿಲ್ಲ ಎಂದಾದರೆ ನ್ಯಾಯಾಲಯಗಳು ಪರ್ಯಾಯ ವ್ಯವಸ್ಥೆಯೊಂದನ್ನು ತತ್‌ಕ್ಷಣವೇ ಸೂಚಿಸಬೇಕು. ಇಲ್ಲದಿದ್ದರೆ ಬಾಕಿಯುಳಿದಿರುವ ಪಟ್ಟಿಗೆ ಇನ್ನೊಂದಷ್ಟು ಸಾವಿರ ಪ್ರಕರಣಗಳು ಸೇರ್ಪಡೆಯಾಗುವುದಲ್ಲದೆ ಇನ್ನೇನೂ ಲಾಭವಿಲ್ಲ.
ಸರಕಾರಿ ನೌಕರರನ್ನು ಆರಿಸಲು ಬಳಸುವ ಲೋಕಸೇವಾ ಆಯೋಗ ವಿಧಾನವನ್ನು ನ್ಯಾಯಾಧೀಶರನ್ನು ಆರಿಸಲು ಬಳಸುವುದು ಉತ್ತಮ ವಿಧಾನಗಳಲ್ಲಿ ಒಂದು. ಇದನ್ನು ಒಂದಷ್ಟು ಪರಿಷ್ಕರಿಸಿದರೆ ಸಾಕು. ಆದರೆ ನ್ಯಾಯಾಂಗ ಈ ಪದ್ಧತಿಯನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದೆ. ಲೋಕಸೇವಾ ಆಯೋಗ ನೇಮಕಾತಿ ಸಂದರ್ಭದಲ್ಲಿ ನಡೆಯುವ ಭ್ರಷ್ಟಾಚಾರ ನ್ಯಾಯಾಧೀಶರ ನೇಮಕಾತಿಯಲ್ಲೂ ನಡೆಯುವ ಸಾಧ್ಯತೆಯಿದೆ ಎಂಬ ಅಂಜಿಕೆ ಇದಕ್ಕೆ ಕಾರಣ. ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯಲ್ಲೂ ಎಲ್ಲವೂ ಸರಿಯಿಲ್ಲ. ಕೊಲಿಜಿಯಂ ರದ್ದುಪಡಿಸಲು ಸರಕಾರ ಪ್ರಯತ್ನಿಸುತ್ತಿದ್ದರೆ ಇದೇ ವ್ಯವಸ್ಥೆ ಮುಂದುವರಿಯಬೇಕೆಂದು ನ್ಯಾಯಾಂಗ ಪಟ್ಟು ಹಿಡಿದಿದೆ. ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ರದ್ದಾದ ಬಳಿಕ ಕೊಲಿಜಿಯಂನಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಿ ಸರಕಾರ ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕೃತವಾಗಿದ್ದು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನೇಮಕಾತಿಯನ್ನು ನ್ಯಾಯಾಂಗವೇ ಮಾಡಿಕೊಳ್ಳಬೇಕು ಎಂದಿದೆ.
ನ್ಯಾಯಾಂಗ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎನ್ನುವ ವಾದ ಸರಿ. ಆದರೆ ನ್ಯಾಯಾಧೀಶರ ನೇಮಕಾತಿಗೆ ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಸಮನ್ವಯತೆ ಇರುವುದು ಮಾತ್ರ ಅನಿವಾರ್ಯ. ಹೀಗಾಗಿ ನ್ಯಾಯಾಂಗ ಮತ್ತು ಶಾಸಕಾಂಗ ಎರಡೂ ಹಠಮಾರಿತನ ಬಿಟ್ಟು ಈ ಕಗ್ಗಂಟನ್ನು ಬಗೆಹರಿಸಿಕೊಳ್ಳಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.