Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Team Udayavani, Nov 15, 2024, 11:34 AM IST
ಜಮ್ಮು-ಕಾಶ್ಮೀರದಲ್ಲಿ ಕಳೆದೊಂದು ತಿಂಗಳಿಂದೀಚೆಗೆ ಉಗ್ರರ ದಾಳಿಗಳು ಹೆಚ್ಚಾಗತೊಡಗಿವೆ. ಪಾಕ್ ಪ್ರೇರಿತ ಉಗ್ರರು ರಾಜ್ಯದ ಅಲ್ಲಲ್ಲಿ ದಾಳಿಗಳನ್ನು ನಡೆಸುವ ಮೂಲಕ ಭದ್ರತಾ ಪಡೆಗಳಿಗೆ ಸವಾಲೊಡ್ಡುತ್ತಲೇ ಬಂದಿದ್ದಾರೆ. ಗುಪ್ತಚರ ದಳಗಳು ಮತ್ತು ಭದ್ರತಾ ಪಡೆಗಳ ಹದ್ದುಗಣ್ಣಿನ ಹೊರತಾಗಿಯೂ ಪಾಕ್ ಪ್ರೇರಿತ ಉಗ್ರರು ದೇಶದ ಗಡಿಯೊಳಕ್ಕೆ ನುಸುಳಿ ನಾಗರಿಕರು, ವಲಸೆ ಕಾರ್ಮಿಕರು ಮತ್ತು ಭದ್ರತಾ ಸಿಬಂದಿಯನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುವ ಮೂಲಕ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಕಳೆದ 15 ದಿನಗಳ ಅವಧಿಯಲ್ಲಿ 11 ಬಾರಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದೆ. ಪ್ರಸಕ್ತ ವರ್ಷ ಈವರೆಗೆ 25 ಭಯೋತ್ಪಾದಕ ಕೃತ್ಯಗಳು ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದು ಇದರಲ್ಲಿ 24 ಮಂದಿ ಭದ್ರತಾ ಸಿಬಂದಿ ಹುತಾತ್ಮರಾಗಿದ್ದಾರೆ.
ಇದೇ ಅವಧಿಯಲ್ಲಿ ಭದ್ರತಾ ಪಡೆಗಳು 60ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿವೆ. ಇದರ ಹೊರತಾಗಿಯೂ ಕಾಶ್ಮೀರ ಕಣಿವೆ ಮಾತ್ರವಲ್ಲದೆ ಜಮ್ಮು ಪ್ರದೇಶದಲ್ಲೂ ಉಗ್ರರು ತಮ್ಮ ಅಸ್ತಿತ್ವವನ್ನು ಸ್ಥಾಪಿಸುವ ಪ್ರಯತ್ನದಲ್ಲಿ ನಿರತವಾಗಿರುವುದು ಮತ್ತು ಪದೇಪದೆ ತಮ್ಮ ಕಾರ್ಯತಂತ್ರವನ್ನು ಬದಲಾಯಿಸುತ್ತಿರುವುದರಿಂದಾಗಿ ಭದ್ರತಾ ಪಡೆಗಳಿಗೆ ಉಗ್ರರನ್ನು ಮಟ್ಟ ಹಾಕುವುದು ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ.
ಕೇಂದ್ರ ಸರಕಾರದ ಕಠಿನ ಧೋರಣೆ ಮತ್ತು ಭದ್ರತಾ ಪಡೆಗಳ ನಿರ್ದಾಕ್ಷಿಣ್ಯ ಕ್ರಮದ ಫಲವಾಗಿ ಜಮ್ಮು-ಕಾಶ್ಮೀರದಲ್ಲಿ ಜನಜೀವನ ಕಳೆದ ಕೆಲವು ವರ್ಷಗಳಿಂ ದೀಚೆಗೆ ಸಹಜ ಸ್ಥಿತಿಗೆ ಮರಳಿತ್ತು. ಜಮ್ಮು-ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆದು ಚುನಾಯಿತ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉಗ್ರರ ಉಪಟಳ ಒಂದಿಷ್ಟು ಅಧಿಕವಾಗಿರುವುದು ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿಸಿದೆ. ಸದ್ಯ ಕಣಿವೆ ಪ್ರದೇಶದಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ತೀವ್ರ ಇಳಿಮುಖವಾಗಿದೆಯಾದರೂ ಸಕ್ರಿಯ ಪಾಕ್ ಉಗ್ರರ ಸಂಖ್ಯೆ ಒಂದಿಷ್ಟು ಅಧಿಕವಾಗಿದೆ. ಸ್ಥಳೀಯರು ಉಗ್ರ ಚಟುವಟಿಕೆಗಳಿಂದ ಹಿಂದೆ ಸರಿದಿರುವುದರಿಂದಾಗಿ ಪಾಕಿಸ್ಥಾನದ ನಿರುದ್ಯೋಗಿ ಮತ್ತು ಅನಕ್ಷರಸ್ಥ ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಈ ಯುವಕರಿಗೆ ಉಗ್ರ ಚಟುವಟಿಕೆಗಳ ತರಬೇತಿ ನೀಡಿ ಗಡಿಯಿಂದ ಭಾರತದ ಗಡಿಯೊಳಕ್ಕೆ ನುಸುಳಿಸಲಾಗುತ್ತಿದೆ. ಜತೆಯಲ್ಲಿ ಉಗ್ರರು ನಿರಂತರವಾಗಿ ತಮ್ಮ ಕಾರ್ಯತಂತ್ರ ಮತ್ತು ಗುರಿಯನ್ನು ಬದಲಾಯಿಸುತ್ತಿರುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರು ಇಂತಹ ಕಾರ್ಯಗಳಲ್ಲಿ ನಿರತವಾಗಿರುವುದರಿಂದ ಹಿಂಸಾಕೃತ್ಯಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಭದ್ರತಾ ಪಡೆಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ಕಾರ್ಯಾಚರಣೆಯಲ್ಲೂ ಭಾರತೀಯ ಭದ್ರತಾ ಪಡೆಗಳು ಉಗ್ರರನ್ನು ಸದೆಬಡಿಯುತ್ತಲೇ ಬಂದಿವೆಯಾದರೂ ಪಾಕಿಸ್ಥಾನ ನಿರಂತರವಾಗಿ ಉಗ್ರರನ್ನು ರವಾನಿಸುತ್ತಿರುವುದರಿಂದಾಗಿ ಉಗ್ರರ ದಮನ ನಿತ್ಯ ನಿರಂತರ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ.
ಪಾಕಿಸ್ಥಾನದ ಈ ಷಡ್ಯಂತ್ರ ಮತ್ತು ಭಯೋತ್ಪಾದಕರ ಬದಲಾಗುತ್ತಿರುವ ಕಾರ್ಯತಂತ್ರದ ಕುರಿತಂತೆ ಕೇಂದ್ರ ಸರಕಾರ ಮತ್ತು ಭದ್ರತಾ ಪಡೆಗಳು ತಮ್ಮ ರಣತಂತ್ರದಲ್ಲಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡಲೇಬೇಕು. ಗಡಿ ಪ್ರದೇಶದಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸುವುದರ ಜತೆಯಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಕಣಿವೆ ರಾಜ್ಯದ ಶಾಂತಿ-ಸುವ್ಯವಸ್ಥೆಯನ್ನು ಕೆಡಿಸಿ, ಆ ಮೂಲಕ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಸುವ ಪಾಕ್ ಪ್ರೇರಿತ ಉಗ್ರರು ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ಷಡ್ಯಂತ್ರಕ್ಕೆ ಅವಕಾಶ ನೀಡಕೂಡದು. ಈ ವಿಷಯದಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ, ಒತ್ತಡಕ್ಕೆ ಮಣಿಯದೆ ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.