ಜೀವನ್ಮುಖಿಯ ನಿರ್ಗಮನ
Team Udayavani, Sep 26, 2020, 12:05 PM IST
ಕನ್ನಡ ಮನಗಳಲ್ಲಿ ದಶಕಗಳಿಂದ ದೊಡ್ಡ ಸ್ಥಾನದಲ್ಲಿ ಆಸೀನರಾಗಿದ್ದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಅಗಲಿದ ಸುದ್ದಿಯು ಇಡೀ ಕರುನಾಡಿನ ಜನ ಕಂಬನಿ ಮಿಡಿಯುವಂತೆ ಮಾಡಿದೆ. ರಾಜ್ಯವೆಂದಷ್ಟೇ ಅಲ್ಲ, ಭಾರತದ ಬಹುತೇಕ ಚಿತ್ರರಂಗಗಳಲ್ಲಿ ತಮ್ಮ ಹಾಡುಗಳ ಮೂಲಕ ಸಂಗೀತಪ್ರಿಯರಿಗೆ ಆಪ್ತರಾಗಿದ್ದವರು ಅವರು.
ಎಸ್‌ಪಿಬಿ ಕೇವಲ ಗಾಯಕರಾಗಿಯಷ್ಟೇ ಅಲ್ಲ, ಸಹೃದಯಿ ವ್ಯಕ್ತಿಯಾಗಿಯೂ ಗುರುತಿಸಿ ಕೊಂಡವರು. “ಅವರ ಹಾಡೂ ಮಧುರ, ಮಾತೂ ಮಧುರ, ಮನಸ್ಸೂ ಮಧುರ’ ಎನ್ನುವುದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಎಸ್‌ಪಿಬಿ ಅವರ ಬಗ್ಗೆ ಹೇಳಿದ್ದ ಮಾತು. ಈ ಮಾತನ್ನು ನಿಸ್ಸಂಶಯವಾಗಿ ಎಲ್ಲರೂ ಒಪ್ಪುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರಿಗೆ ಧ್ವನಿಯಾಗಿ, ಕನ್ನಡದ ಗಾನಲೋಕದ ಪ್ರತಿನಿಧಿಯಾಗಿದ್ದ ಅವರು, ಕಿರಿಯ ಸಂಗೀತಗಾರರನ್ನು, ಜನರನ್ನು ಅತ್ಯಾಪ್ತವಾಗಿ ಮಾತನಾಡಿಸುವ, ಮಾರ್ಗದರ್ಶನ ನೀಡುವ, ಹುರಿದುಂಬಿಸುವ ಮೂಲಕ ಮನೆಯ ಹಿರಿಯರಂತೆಯೇ ಆಗಿ ಹೋಗಿದ್ದರು. ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದಲ್ಲಿ ಬಾಲಸುಬ್ರಹ್ಮಣ್ಯಂ ಅವರ ಮಗು ಸಮಾನ ಮನಸ್ಸು, ಮುಗ್ಧತೆ, ಮಂದಹಾಸವನ್ನು ಕನ್ನಡದ ಪ್ರೇಕ್ಷಕರು ವರ್ಷಗಳವರೆಗೆ ಕಣ್ತುಂಬಿಕೊಂಡಿದ್ದರು.
ಒಬ್ಬ ವ್ಯಕ್ತಿಗೆ ಜೀವಮಾನದಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಕೇಳುವುದಕ್ಕೇ ಆಗುವುದಿಲ್ಲ, ಅಂಥದ್ದರಲ್ಲಿ ಎಸ್‌ಪಿಬಿ ಅಷ್ಟು ಹಾಡುಗಳನ್ನು ಹಾಡುತ್ತಾರೆಂದರೆ, ಸಂಗೀತವೇ ಅವರ ಶ್ವಾಸೋಚ್ಛಾಸವಾಗಿ ಬದಲಾಗಿತ್ತು ಎನ್ನುವುದಕ್ಕೆ ಸಾಕ್ಷಿ. ಸಂಗೀತದಲ್ಲಿ ಸಾಧನೆಗೆ ಶ್ರದ್ಧೆ, ಭಕ್ತಿ, ಪ್ರೀತಿ, ಸಂಯಮ ಎಂಬ ನಾಲ್ಕು ಸೂತ್ರಗಳು ಬಹಳ ಮುಖ್ಯ ಎನ್ನುತ್ತಿದ್ದ ಅವರು, ಇಳಿ ವಯಸ್ಸಿನಲ್ಲೂ ನಿರಂತರ ಕಾರ್ಯಕ್ರಮಗಳನ್ನು ಕೊಡುತ್ತಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್…ಹೀಗೆ ಯಾವ ಭಾಷೆಯಾದರೂ ಅದನ್ನು ಸುಲಲಿತವಾಗಿ ಮಾತನಾಡುತ್ತಿದ್ದದ್ದು, ಆ ಭಾಷೆಯಲ್ಲಿನ ಕವಿಗಳು, ಸಂಗೀತ ಗಾರರು, ಸಂಗೀತ ಪರಂಪರೆಯ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದದ್ದು ಅವರ ಗರಿಮೆ. ಇದು ಅವರ ದೊಡ್ಡ ಗುಣವೂ ಹೌದು.
ಅತ್ಯಂತ ಜೀವನ್ಮುಖೀಯಾಗಿದ್ದ ಎಸ್‌ಪಿಬಿ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಯುವ ಅಭಿಮಾನಿಗಳ ಜತೆ ನಿರಂತರ ಸಂಪರ್ಕ ದಲ್ಲಿರುತ್ತಿದ್ದರು, ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ತಮಗೆ ಕೋವಿಡ್ ಸೋಂಕು ತಗಲಿದೆ ಎನ್ನುವುದನ್ನು ತಿಳಿದಾಗ ಈ ಕುರಿತು ವೀಡಿಯೋ ಮಾಡಿ, ಯಾರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ, ಬೇಗನೇ ಚೇತರಿಸಿಕೊಂಡು ಬರುತ್ತೇನೆ ಎಂದು ಭರವಸೆಯ ಧ್ವನಿಯಲ್ಲಿಯೇ ಹೇಳಿದ್ದರು. ಆ ಭರವಸೆ ಹುಸಿಯಾಗಿಬಿಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಹೋಗಿ ಬನ್ನಿ ಬಾಲಸುಬ್ರಹ್ಮಣ್ಯಂ ಅವರೇ… ನಿಮ್ಮ ಸಂಗೀತ, ನಿಮ್ಮ ನೆನಪು ಚಿರಸ್ಥಾಯಿಯಾಗಿ ಉಳಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IRACON: ಸಂಧಿವಾತ ಸಮಸ್ಯೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ ಶರಣಪ್ರಕಾಶ್ ಪಾಟೀಲ್
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.