![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jun 5, 2024, 6:00 AM IST
ದೇಶ ಮಾತ್ರವಲ್ಲದೆ ಇಡೀ ವಿಶ್ವದ ಜನತೆ ಅತ್ಯಂತ ಕಾತರ, ಕುತೂಹಲದ ದೃಷ್ಟಿ ಬೀರಿದ್ದ ಮತ್ತು ಬಲು ನಿರೀಕ್ಷಿತ ಲೋಕಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಎಲ್ಲ ನಿರೀಕ್ಷೆಗಳಿಗೂ ಮೀರಿ ದೇಶದ ಮತದಾರರು ಈ ಬಾರಿ ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ಸಂಪೂರ್ಣ ಬಹುಮತವನ್ನು ನೀಡದೆ ಮೈತ್ರಿ ಸರಕಾರ ರಚನೆಯ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ. ಈ ಫಲಿತಾಂಶವನ್ನು ಸಾರಾಸಗಟಾಗಿ “ವಿಭಜಿತ ತೀರ್ಪು’ ಎಂದು ತೀರ್ಮಾನಿಸಲಾಗದು. ಒಂದೇ ಮಾತಿನಲ್ಲಿ ಹೇಳುವುದಾದರೆ ಇದೊಂದು ಅತ್ಯಂತ ಸಮತೋಲಿತ ಮತ್ತು ಸಂತುಲಿತ ಫಲಿತಾಂಶ. ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಡಳಿತ ಮತ್ತು ವಿಪಕ್ಷಗಳೆರಡೂ ಜತೆಗೂಡಿ ಮುನ್ನಡೆಸಬೇಕು ಎಂಬ ಸ್ಪಷ್ಟ ಸಂದೇಶವನ್ನು ದೇಶದ ಪ್ರಬುದ್ಧ ಮತದಾರರು ರಾಜಕೀಯ ಪಕ್ಷಗಳು ಮತ್ತದರ ನಾಯಕರಿಗೆ ರವಾನಿಸಿದ್ದಾರೆ.
ಈ ಬಾರಿ ಎಲ್ಲ ಮತದಾನೋತ್ತರ ಸಮೀಕ್ಷೆಗಳು, ಚುನಾವಣ ತಂತ್ರಜ್ಞರು ಮತ್ತು ರಾಜಕೀಯ ವಿಶ್ಲೇಷಕರ ಭವಿಷ್ಯ ಹುಸಿಯಾಗಿದೆ. ಒಂದೂವರೆ ದಶಕದ ಬಳಿಕ ಇಂತಹ ಪರಿಸ್ಥಿತಿ ರೂಪುಗೊಂಡಿದೆಯಾದರೂ ಹಾಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸರಳ ಬಹುಮತ ಲಭಿಸಿದೆ. ಆದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೋತ್ತರ ಮೈತ್ರಿಗೂ ಅವಕಾಶವಿರುವುದರಿಂದ ಹಾಲಿ ವಿಪಕ್ಷ ಪಾಳಯ ಸರಕಾರ ರಚಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಬಿಜೆಪಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಅವರು ಬಿಜೆಪಿ ಸಂಸದೀಯ ಪಕ್ಷದ ನಾಯಕನಿಗೆ ಸರಕಾರ ರಚನೆಗೆ ಮೊದಲ ಆಹ್ವಾನ ನೀಡಬೇಕಿರುವುದರಿಂದ ಈ ಬಾರಿಯೂ ಎನ್‌ಡಿಎ ಸತತ ಮೂರನೇ ಅವಧಿಗೆ ಸರಕಾರ ರಚಿಸುವುದು ಖಚಿತ. ಆದರೆ ಇಲ್ಲಿ ಗಮನೀಯ ವಿಷಯ ಎಂದರೆ ಕಳೆದೆರಡು ಅವಧಿಗಿಂತ ಹೆಚ್ಚು ಪ್ರಬಲ ವಿಪಕ್ಷ ಆಡಳಿತದ ಮೇಲೆ ನಿಗಾ ಇರಿಸಲಿದೆ ಎಂಬುದು.
ರಾಜಕೀಯ ಲೆಕ್ಕಾಚಾರಗಳೇನೇ ಇರಲಿ, ದೇಶದ ಜನತೆ ನೀಡಿದ ತೀರ್ಪನ್ನು ಎಲ್ಲರೂ ಗೌರವಿಸಬೇಕಿದೆ. ಚುನಾವಣ ಫಲಿತಾಂಶವನ್ನು ಎಲ್ಲ ಪಕ್ಷಗಳು ಮತ್ತು ನಾಯಕರು ಅತ್ಯಂತ ಸಮಚಿತ್ತದಿಂದ, ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಬೇಕು. ಮತದಾರರು ನೀಡಿರುವ ತೀರ್ಪಿನ ಒಳಮರ್ಮವನ್ನು ಇತ್ತಂಡಗಳೂ ಅರಿತುಕೊಂಡು ತಮ್ಮ ಮುಂದಿನ ಹೆಜ್ಜೆ ಇರಿಸಬೇಕು. ಹೊಸ ಸರಕಾರ ರಚನೆ ಪ್ರಕ್ರಿಯೆ ಸಂವಿಧಾನಬದ್ಧವಾಗಿ ನಡೆಯುವಂತಾಗಲು ಎಲ್ಲ ಪಕ್ಷಗಳೂ ರಾಷ್ಟ್ರಪತಿ ಅವರಿಗೆ ಅನುವು ಮಾಡಿಕೊಡಬೇಕು. ಯಾವ ಕಾರಣಕ್ಕೂ ರಾಜಕೀಯ ಮೇಲಾಟಕ್ಕೆ ಆಸ್ಪದ ನೀಡದೆ ದೇಶ ಮತ್ತು ಜನತೆಯ ಹಿತವನ್ನು ಲಕ್ಷ್ಯದಲ್ಲಿರಿಸಿ ಸ್ಥಿರ ಸರಕಾರ ರಚನೆಗೆ ಪ್ರಥಮ ಆದ್ಯತೆ ನೀಡಬೇಕು. ದೇಶದ ಅಭಿವೃದ್ಧಿ, ಇಡೀ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ದೇಶದ ಆರ್ಥಿಕತೆಯ ನಾಗಾಲೋಟಕ್ಕೆ ತಡೆಯಾಗದಂತೆ ಅತ್ಯಂತ ವಿವೇಚನೆಯ ಮತ್ತು ಎಚ್ಚರಿಕೆಯ ನಡೆಯನ್ನಿರಿಸಬೇಕು. ದೇಶದ ಪ್ರಗತಿಯ ಜತೆಜತೆಯಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಇಡೀ ದೇಶವನ್ನು ಮತ್ತು ಜನರನ್ನು ಜತೆಯಾಗಿ ಕರೆದೊಯ್ಯುವ ಮಹತ್ತರ ಹೊಣೆಗಾರಿಕೆ ಹೊಸ ಸರಕಾರದ ಮೇಲಿದೆ.
ಈ ಬಾರಿಯ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ವಿಶ್ವದಾಖಲೆ ನಿರ್ಮಿಸಿ, ಪ್ರಜಾತಂತ್ರದ ಮೇಲಿನ ತಮ್ಮ ದೃಢವಿಶ್ವಾಸವನ್ನು ಸಾರಿ ಹೇಳಿದ್ದರು. ಈಗ ರಾಜಕೀಯ ಪಕ್ಷಗಳೂ ಇಂತಹುದೇ ಬದ್ಧತೆ ಮತ್ತು ಪ್ರಬುದ್ಧತೆಯನ್ನು ಮೆರೆದು, ಸದೃಢ ಸರಕಾರ ರಚಿಸಿ, ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸುವ ಮೂಲಕ ಪ್ರಜಾತಂತ್ರದ ಹಿರಿಮೆಯನ್ನು ಎತ್ತಿ ಹಿಡಿಯಬೇಕು.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.