Editorial: ಸಂಚಾರ, ಪಾರ್ಕಿಂಗ್; ಸಮನ್ವಯದ ಕ್ರಮ ಆಗಬೇಕು
Team Udayavani, Jan 6, 2025, 1:18 PM IST
ಸಾಂದರ್ಭಿಕ ಚಿತ್ರ
ಮಂಗಳೂರಿನಲ್ಲಿಯೂ ಬೆಂಗಳೂರು ಮಾದರಿಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆಯೇ ಎಂಬ ಪ್ರಶ್ನೆ ನಗರದ ಜನರಲ್ಲಿ ಮೂಡಿದೆ. ಇದಕ್ಕೆ ಕಾರಣ ಇತ್ತೀಚೆಗಿನ ದಿನಗಳಲ್ಲಿ ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್, ಪಾರ್ಕಿಂಗ್ ಅವ್ಯವಸ್ಥೆ. ಈ ಸಮಸ್ಯೆ ನಗರ ಬೆಳೆಯುತ್ತ ಬಂದಂತೆ ಹೆಚ್ಚುತ್ತ ಹೋಗಿದ್ದು ಈಗ ಉಲ್ಬಣಾವಸ್ಥೆ ತಲುಪುತ್ತಿರುವಂತಿದೆ.
ಸಮಸ್ಯೆಯನ್ನು ಬಗೆಹರಿಸಬೇಕೆಂಬ ಉದ್ದೇಶದಿಂದ ಆಡಳಿತ ವರ್ಗ, ಜನಪ್ರತಿನಿಧಿಗಳು ನಡೆಸಿರುವ ಪ್ರಯತ್ನಗಳು ಫಲ ನೀಡುತ್ತಿಲ್ಲ. ಒಂದೆಡೆ ಪಾಲಿಕೆ, ಇನ್ನೊಂದೆಡೆ ಪೊಲೀಸರು ಆಗಿಂದಾಗ್ಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಅವು ಅನುಷ್ಠಾನಗೊಳ್ಳುವಲ್ಲಿ ವೈಫಲ್ಯ ಕಾಣುತ್ತಿವೆ. ರಸ್ತೆಗಳು ಅಗಲಗೊಂಡರೂ ಫುಟ್‌ಪಾತ್‌ಗಳ ನಿರ್ಮಾಣವಾದರೂ ಸಂಚಾರ ಸಮಸ್ಯೆ ಪರಿಹಾರ ಕಾಣುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ವಾಣಿಜ್ಯ ಕಟ್ಟಡಗಳು ತಮ್ಮದೇ ಆದ ಪಾರ್ಕಿಂಗ್ ವ್ಯವಸ್ಥೆ ಹೊಂದದೆ ಇರುವುದು. ತಳ ಅಂತಸ್ತನ್ನು ಪಾರ್ಕಿಂಗ್‌ಗಾಗಿ ಮೀಸಲಿಡಬೇಕೆಂಬ ನಿಯಮವನ್ನು ಬಹುತೇಕ ಕಟ್ಟಡಗಳು ಗಾಳಿಗೆ ತೂರಿವೆ.
ಇದರ ಜತೆಗೆ ರಸ್ತೆ, ಫುಟ್‌ಪಾತ್‌ಗಳಲ್ಲಿಯೇ ವ್ಯಾಪಾರ ಮತ್ತೆ ಮುಂದುವರಿದಿದೆ. ಬೀದಿ ಬದಿ ವ್ಯಾಪಾರಸ್ಥರನ್ನು ತೆರವು ಮಾಡಿದ ಅನಂತರ ಕೆಲವೆಡೆ ವಾಹನ ಸಂಚಾರಕ್ಕೆ ಅನುಕೂಲವಾಗಿದೆಯಾದರೂ ಅನೇಕ ಕಡೆ ಮತ್ತೆ ಅಂತಹ ವ್ಯಾಪಾರಸ್ಥರು ಹಿಂದಿನಂತೆಯೇ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಇವೆಲ್ಲವುಗಳ ನಡುವೆ ಸಂಚಾರ ನಿಯಂತ್ರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ ಪೊಲೀಸರು ಮತ್ತು ಪಾಲಿಕೆಯ ನಡುವೆ ಸಮನ್ವಯದ ಕೊರತೆಯಿಂದಾಗಿ ಕೆಲವು ಕ್ರಮಗಳು ಫಲ ನೀಡುತ್ತಿಲ್ಲ. ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡದ ಕಟ್ಟಡಗಳ ಮಾಲಕರ ವಿರುದ್ಧ ಕ್ರಮ ಕೈಗೊಂಡು ಪಾರ್ಕಿಂಗ್‌ಗೆ ವ್ಯವಸ್ಥೆಯಾಗುವಂತೆ ನೋಡಿಕೊಳ್ಳಬೇಕು, ರಸ್ತೆ ಆಕ್ರಮಿಸಿಕೊಂಡಿರುವ ವ್ಯಾಪಾರಸ್ಥರನ್ನು ತೆರವುಗೊಳಿಸಬೇಕು.
ಟ್ರಾಫಿಕ್ ನಿರ್ವಹಣೆಗಾಗಿ ಪೊಲೀಸರು ಇತ್ತೀಚೆಗೆ ಕೈಗೊಂಡ ಕೆಲವು ಕ್ರಮಗಳನ್ನು ಒತ್ತಡಗಳ ಕಾರಣದಿಂದ ವಾಪಸ್ ಪಡೆದಿರುವುದು, ಬದಲಾವಣೆಗಳನ್ನು ಮಾಡಿರುವುದು ಕೂಡ ಇದೆ. ಇದು ಪೊಲೀಸರಿಗೆ ಅಡ್ಡಿಯಾಗುತ್ತಿದೆ. ಹಾಗಾಗಿ ಅವರು ಕೂಡ ಹೊಸ ಸುಧಾರಣ ಕ್ರಮಗಳನ್ನು ಕೈಗೊಳ್ಳಲು ಹಿಂದೇಟು ಹಾಕುವಂತಾಗಿದೆ. ಸಮನ್ವಯ, ಸಾಕಷ್ಟು ಪೂರ್ವ ಯೋಜಿತ ಮತ್ತು ಶಾಶ್ವತ ಕ್ರಮಗಳಿಗೆ ಮುಂದಾಗಬೇಕಿದೆ.
ರಸ್ತೆ ಅಗೆತ, ದುರಸ್ತಿ ಕಾಮಗಾರಿಗಳು ತ್ವರಿತವಾಗಿ ಮುಗಿಸಬೇಕು ಎಂಬುದು ಪೊಲೀಸರ ಬೇಡಿಕೆ. ಆದರೆ ಇದಕ್ಕೆ ಪೂರಕ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ಅವರ ಆರೋಪ. ಪೊಲೀಸರು, ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಾಗ್ಗೆ ಸಭೆ ಸೇರಿ ಸಂಚಾರ, ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಚರ್ಚಿಸದಿದ್ದರೆ, ಅಗತ್ಯ ಕ್ರಮ ಕೈಗೊಳ್ಳಲು ಜಂಟಿಯಾಗಿ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳದೆ ಹೋದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ರಸ್ತೆ ಸುರಕ್ಷ ಸಮಿತಿ, ಸಾರ್ವಜನಿಕ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಸೇರಿಸಿಕೊಂಡು ದೂರದೃಷ್ಟಿಯಿಂದ ಯೋಜನೆ ರೂಪಿಸುವ ಆವಶ್ಯಕತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.