Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ
Team Udayavani, Jul 27, 2024, 3:45 PM IST
ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಸುಳ್ಳು ದಾಖಲೆಪತ್ರಗಳನ್ನು ಸಲ್ಲಿಸಿ, ನಿಗದಿತ ಅವಕಾಶಗಳಿಗಿಂತ ಅಧಿಕ ಬಾರಿ ಪರೀಕ್ಷೆಗೆ ಹಾಜರಾದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ತಾನು ನಡೆಸುವ ಎಲ್ಲ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಗಟ್ಟಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ. ವಿವಿಧ ಸರಕಾರಿ ಹುದ್ದೆಗಳ ನೇಮಕಕ್ಕಾಗಿ ನಡೆಸಲಾಗುವ ಎಲ್ಲ ತೆರನಾದ ಸ್ಪರ್ಧಾತ್ಮಕ
ಪರೀಕ್ಷೆಗಳನ್ನು ಇನ್ನಷ್ಟು ಪಾರದರ್ಶಕ ಮತ್ತು ವಿಶ್ವಾಸಾರ್ಹವನ್ನಾಗಿಸಲು ಯುಪಿಎಸ್‌ಸಿ ಈ ಮಹತ್ತರ ನಿರ್ಧಾರ ಕೈಗೊಂಡಿದೆ.
ಪ್ರಸಕ್ತ ಸಾಲಿನ ನೀಟ್-ಯುಜಿ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಸಹಿತ ವಿವಿಧ ಅಕ್ರಮಗಳು ನಡೆದು ಭಾರೀ ವಿವಾದಕ್ಕೀಡಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಇದರ ಬೆನ್ನಲ್ಲೇ ಪ್ರೊಬೆಷನರಿ ಐಎಎಸ್
ಅಧಿಕಾರಿಯಾಗಿರುವ ಪೂಜಾ ಖೇಡ್ಕರ್ ಅವರ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಪರೀಕ್ಷಾ ಅಕ್ರಮಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶ್ವಾಸಾರ್ಹತೆಯ ಬಗೆಗೆ ದೇಶದ ಜನತೆಯಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ಈ ಹಿನ್ನೆಲೆಯಲ್ಲಿ ಎನ್‌ಟಿಎ ತನ್ನ ಪರೀಕ್ಷಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲು ಮುಂದಡಿ ಇರಿಸಿರುವಂತೆಯೇ ಈಗ ಯುಪಿಎಸ್‌ಸಿ ಕೂಡ ವಿವಿಧ ಹುದ್ದೆಗಳಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ತಂತ್ರಜ್ಞಾನವನ್ನು ಬಳಸಿಕೊಂಡು ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಯುಪಿಎಸ್‌ಸಿ ಪ್ರತೀ ವರ್ಷ ಕೇಂದ್ರ ಸರಕಾರದ ಗ್ರೂಪ್ ಎ ಹುದ್ದೆಗಳಾದ ಐಎಎಸ್, ಐಪಿಎಸ್, ಐಎಫ್ಎಸ್, ಐಇಎಸ್, ಐಎಸ್‌ಎಸ್, ಐಇಎಸ್ ಮಾತ್ರವಲ್ಲದೆ ರಕ್ಷಣ ಇಲಾಖೆಗೆ ಸಂಬಂಧಿಸಿದ ವಿವಿಧ ಪರೀಕ್ಷೆಗಳು ಮತ್ತು ಕೆಲವು ಗ್ರೂಪ್ ಬಿ ಪರೀಕ್ಷೆಯನ್ನೂ ನಡೆಸುತ್ತದೆ. ಈ ಪರೀಕ್ಷೆಗಳಿಗೆ ಪ್ರತೀ ವರ್ಷ ಹತ್ತು ಲಕ್ಷಕ್ಕೂ ಅಧಿಕ ಮಂದಿ ಹಾಜರಾಗುತ್ತಾರೆ.
ಹೀಗಾಗಿ ಈ ಎಲ್ಲ ಪರೀಕ್ಷೆಗಳಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕೃತಕ ಬುದ್ಧಿಮತ್ತೆ, ಸಿಸಿಟಿವಿ, ಫೇಸ್ ರೆಕಗ್ನಿಶನ್, ಆಧಾರ್ ಆಧಾರಿತ ಬೆರಳಚ್ಚು ಪರಿಶೀಲನೆ, ಇ-ಪ್ರವೇಶ ಪತ್ರಗಳ ದೃಢೀಕರಣಕ್ಕಾಗಿ ಕ್ಯುಆರ್ ಕೋಡ್ ಸ್ಕ್ಯಾನಿಂಗ್ ತಂತ್ರಜ್ಞಾನ ಆದಿಯಾಗಿ ಆಧುನಿಕ ತಂತ್ರಜ್ಞಾನವನ್ನು ಪರೀಕ್ಷಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಬಳಸಲು ಯುಪಿಎಸ್‌ಸಿ ಉದ್ದೇಶಿಸಿದೆ. ಅಷ್ಟು ಮಾತ್ರವಲ್ಲದೆ ಈ ಎಲ್ಲ ತಾಂತ್ರಿಕ ಸೇವೆಯನ್ನು ಒದಗಿಸಲು ಸಾರ್ವಜನಿಕ ಕಂಪೆನಿಗಳಿಂದ ಬಿಡ್ ಅನ್ನು ಆಹ್ವಾನಿಸಿದೆ.
ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಇನ್ನಷ್ಟು ವಿಶ್ವಾಸಾರ್ಹವನ್ನಾಗಿಸಲು ಯುಪಿಎಸ್‌ಸಿಯ ಈ ನಿರ್ಧಾರ ಸಹಕಾರಿ. ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ತೋರುವ ಅರ್ಹ ಪ್ರತಿಭಾನ್ವಿತರಿಗೆ ಈ ಉನ್ನತ ಹುದ್ದೆಗಳು ಲಭಿಸುವುದನ್ನು ಖಾತರಿಪಡಿಸಿದಂತಾಗಲಿದೆ.
ಪರೀಕ್ಷೆಯ ಸಂದರ್ಭದಲ್ಲಿ ಇಷ್ಟೊಂದು ಕಠಿನತಮ ನಿಲುವನ್ನು ಅನುಸರಿಸುವುದರಿಂದ ಉನ್ನತ ಹುದ್ದೆಗಳ ಆಕಾಂಕ್ಷಿಗಳು ಸಂಕಷ್ಟಕ್ಕೊಳಗಾಗದಂತೆ ಎಚ್ಚರ ವಹಿಸುವ ಮಹತ್ತರ ಹೊಣೆಗಾರಿಕೆಯೂ ಯುಪಿಎಸ್‌ಸಿಯ ಮೇಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯ ಸಂದರ್ಭದಲ್ಲಿ ವ್ಯಕ್ತಿಯ ಖಾಸಗಿ ಮತ್ತು ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುತ್ತಿದ್ದು ಇವು ಇನ್ನಿಲ್ಲದ ಸಮಸ್ಯೆಗಳನ್ನು ತಂದೊಡ್ಡುತ್ತಿವೆ.
ಯುಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರತಿಯೊಂದು ಹಂತದಲ್ಲೂ ತಂತ್ರಜ್ಞಾನ ಬಳಕೆಯಾಗುವುದರಿಂದ ಇಂತಹ ಸಾಧ್ಯತೆಗಳು ಅಧಿಕವಾಗಿದ್ದು, ಈ ಬಗ್ಗೆ ಯುಪಿಎಸ್‌ಸಿ ಹೆಚ್ಚಿನ ಗಮನ ಹರಿಸಬೇಕಿದೆ. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಭರದಲ್ಲಿ ಲಕ್ಷಾಂತರ ಸಂಖ್ಯೆಯ ಅಭ್ಯರ್ಥಿಗಳ ವೈಯಕ್ತಿಕ ಮತ್ತು ಖಾಸಗಿ ಮಾಹಿತಿಗಳು ಸೋರಿಕೆಯಾಗಿ ಸೈಬರ್ ದಂಧೆಕೋರರ ಕೈವಶವಾಗಿ ಮತ್ತೂಂದು ಬಲುದೊಡ್ಡ ತಲೆನೋವು ಸೃಷ್ಟಿಯಾಗದಂತೆ ಅಗತ್ಯ ಮುಂಜಾಗ್ರತೆ ಕೈಗೊಳ್ಳುವುದು ಅತ್ಯಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.