ಪರಿಣಾಮಕಾರಿ ಉಗ್ರ ದಮನ
Team Udayavani, Nov 20, 2017, 11:36 AM IST
ಜಮ್ಮು-ಕಾಶ್ಮೀರದಲ್ಲಿ ಸಹಜ ಪರಿಸ್ಥಿತಿ ನೆಲೆಗೊಳ್ಳುವಂತೆ ಮಾಡಲು ನರೇಂದ್ರ ಮೋದಿ ಸರಕಾರ ಎಲ್ಲ ವಿಧದಲ್ಲೂ ಪ್ರಯತ್ನಿಸುತ್ತಿರುವುದನ್ನು ಸದ್ಯದ ಬೆಳವಣಿಗೆಗಳ ಖಚಿತಪಡಿಸಿವೆ. ಒಂದೆಡೆ ಮಾತುಕತೆಯ ಮೂಲಕ ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಇತ್ತೀಚೆಗಷ್ಟೇ ಗುಪ್ತಚರ ಪಡೆಯ ಮಾಜಿ ಅಧಿಕಾರಿ ದಿನೇಶ್ವರ್ ಶರ್ಮ ಅವರನ್ನು ನೇಮಿಸಿದೆ. ಇದೇ ವೇಳೆ ಇನ್ನೊಂದೆಡೆ ಶಾಂತಿಗೆ ಕಂಟಕವಾಗಿರುವ ಉಗ್ರರನ್ನು ಪರಿಣಾಮಕಾರಿ ಯಾಗಿ ದಮನಿಸಲು ಭದ್ರತಾ ಪಡೆಗೆ ಮುಕ್ತ ಅಧಿಕಾರವನ್ನು ನೀಡಲಾಗಿದೆ. ಅದರ ಪರಿಣಾಮ ಈಗ ಗೋಚರಿಸಲಾರಂಭಿಸಿದೆ. ಶನಿವಾರ ರಾತ್ರಿ ಕಾಶ್ಮೀರದ ಬಂಡಿಪೋರದಲ್ಲಿ ಭದ್ರತಾ ಪಡೆಗಳು ಸಂಯೋಜಿತ ಕಾರ್ಯಾಚರಣೆ ನಡೆಸಿ ಆರು ಉಗ್ರರನ್ನು ಕೊಂದು ಹಾಕಿವೆ. ಇವರಲ್ಲಿ ಮುಂಬಯಿ ಮೇಲಾದ ಭಯೋತ್ಪಾದಕ ದಾಳಿಯ ಸೂತ್ರಧಾರ ಝಕೀವುರ್ ರೆಹಮಾನ್ ಲಿಖೀÌಯ ಸೋದರ ಸಂಬಂಧಿ ಓವೈದ್ ಕೂಡ ಸೇರಿದ್ದಾನೆ. ಒಂದೇ ದಿನದಲ್ಲಿ ಇಷ್ಟೊಂದು ಉಗ್ರರನ್ನು ಹತ್ಯೆ ಮಾಡಿರುವುದು ಇತ್ತೀಚೆಗಿನ ದಿನಗಳಲ್ಲಿ ಸೇನಾ ಕಾರ್ಯಾಚರಣೆಗೆ ಸಿಕ್ಕಿರುವ ದೊಡ್ಡ ಮಟ್ಟದ ಯಶಸ್ಸು ಎನ್ನಬಹುದು. ಪಠಾಣ್‌ಕೋಟ್ ದಾಳಿ ಮತ್ತು ಉರಿ ಸೇನಾ ನೆಲೆಗಳ ಮೇಲಾದ ದಾಳಿಗಳ ಬಳಿಕ ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಅತ್ಯಂತ ಕಠಿಣ ನಿಲುವು ತಳೆದಿರುವ ಕೇಂದ್ರ ಸಾಮ, ದಾನ, ಬೇಧ ,ದಂಡ ಸೇರಿದಂತೆ ಭಯೋತ್ಪಾದನೆಗೆ ನಿಗ್ರಹ ಕ್ಕಾಗಿರುವ ಎಲ್ಲ ಮಾರ್ಗವನ್ನು ಮುಕ್ತವಾಗಿ ಬಳಸಿಕೊಳ್ಳುತ್ತಿದೆ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನ ಭಯೋತ್ಪಾದನೆಗೆ ಪೋಷಿಸುತ್ತಿರುವ ದೇಶ ಎಂಬ ನಂಬಿಕೆ ಹುಟ್ಟಿಸಲು ಸಾಧ್ಯವಾಗಿರುವುದು ಭಾರತದ ರಾಜತಾಂತ್ರಿಕ ನಡೆಗೆ ಸಿಕ್ಕಿರುವ ಅತಿ ದೊಡ್ಡ ಗೆಲುವು.
ಹಾಲಿ ವರ್ಷ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಉಗ್ರರ ಸಂಖ್ಯೆ ದ್ವಿಶತಕ ತಲುಪಿದೆ. ನಿರ್ದಿಷ್ಟವಾಗಿ ಲಷ್ಕರ್ ಎ ತಯ್ಯಬ ಮತ್ತು ಹಿಜ್ಬುಲ್ ಮುಜಾಹಿದ್ ಉಗ್ರ ಸಂಘಟನೆಗಳಿಗೆ ಮಾರಕ ಪ್ರಹಾರ ನೀಡುವಲ್ಲಿ ಭದ್ರತಾ ಸಿಬಂದಿಗಳು ಸಫಲರಾಗಿದ್ದಾರೆ. ಲಷ್ಕರ್ ಕಮಾಂಡರ್‌ಗಳಾದ ಅಬು ದುಜಾನ, ಬಶೀರ್ ಲಷ್ಕರಿ, ಅಜಾದ್ ಮಲಿಕ್, ಸಜ್ಜದ್ ಗಿಲ್ಕರ್, ಅಬು ಇಸ್ಮಾಯಿಲ್, ಆರಿಫ್ ಲಿಲ್ಲಾರಿ, ಹಿಜ್ಬುಲ್‌ನ ಸಬjರ್ ಅಹಮದ್ ಭಟ್ ಸೇರಿದಂತೆ ಹಲವು ಉಗ್ರರು ಸೇನೆಯ ಗುಂಡೇಟು ತಿಂದು ಸಾವನ್ನಪ್ಪಿದ್ದಾರೆ. 110 ಪಾಕ್ ಮೂಲದ ಮತ್ತು 80 ಸ್ಥಳೀಯ ಉಗ್ರರನ್ನು ಕೊಂದಿದ್ದೇವೆ ಎಂದು ಸೇನಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಈ ಮೂಲಕ ಕಾಶ್ಮೀರದಲ್ಲಿ ಗಣನೀಯವಾದ ಬದಲಾವಣೆ ತರಲು ಸಾಧ್ಯವಾಗಿದೆ ಎನ್ನುವುದು ಸೇನೆಯ ಹೇಳಿಕೆ. ಈ ಮಾತು ತುಸು ನಿಜವೂ ಹೌದು. ಕೆಲ ದಿನಗಳ ಹಿಂದೆಯಷ್ಟೇ ಲಷ್ಕರ್ ಸೇರಿದ ಯುವ ಫುಟ್ಬಾಲ್ ಆಟಗಾರನೊಬ್ಬ ಮನಸು ಬದಲಾಯಿಸಿ ಮರಳಿ ಬಂದಿದ್ದಾನೆ. ಉಗ್ರ ಸಂಘಟನೆ ಸೇರುವುದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವುದು ನಿಧಾನವಾಗಿಯಾದರೂ ಕಾಶ್ಮೀರದ ಯುವಕರಿಗೆ ಮನವರಿಕೆಯಾದರೆ ಅದೇ ದೊಡ್ಡ ಗೆಲುವು. ಹಿಂಸಾಚಾರ ತೊರೆದು ಮುಖ್ಯವಾಹಿನಿಗೆ ಬರುವವರನ್ನು ಗೌರವ ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಅವರಿಗೆ ಯಾವುದೇ ಕಿರುಕುಳ ನೀಡುವುದಿಲ್ಲ ಎಂದು ಸೇನೆ ಭರವಸೆ ನೀಡಿದೆ.
ಕಳೆದ ವರ್ಷ ಬುರಾನ್ ವಾನಿಯ ಹತ್ಯೆ ಬಳಿಕ ಹಿಂಸಾಚಾರ ತಾರಕಕ್ಕೇ ಇಡೀ ಕಣಿವೆಯ ಹೊತ್ತಿ ಉರಿದಾಗ ಇನ್ನೆಂದೂ ಕಾಶ್ಮೀರ ಸಹದ ಸ್ಥಿತಿಗೆ ಬರುವುದಿಲ್ಲ ಎಂಬ ಭೀತಿ ಕಾಡಿತ್ತು. ಆದರೆ ಎಲ್ಲೆಡೆಯಿಂದ ಟೀಕೆಗಳಿಗೆ ಗುರಿಯಾಗಿದ್ದ ಸರಕಾರ ಅನಂತರ ದೃಢ ನಡೆಗಳನ್ನು ಇಟ್ಟ ಪರಿಣಾಮವಾಗಿ ಇಂದು ಮತ್ತೆ ಶಾಂತಿಯ ವಾತಾವರಣ ಸೃಷ್ಟಿಯಾಗುವ ನಿರೀಕ್ಷೆ ಮೂಡಿದೆ. ಇದೇ ವೇಳೆ ಶ್ರೀನಗರದ ಝಕುರಾದಲ್ಲಿ ಕೆಲ ದಿನಗಳ ಹಿಂದೆ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ಉಗ್ರ ತನ್ನವ ಎಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿರುವುದು ಮಾತ್ರ ಕಳವಳಕ್ಕೆ ಕಾರಣವಾಗಿದೆ. ಹಿಂಸಾಚಾರ ಪರಾಕಾಷ್ಠೆ ತಲುಪಿದ ದಿನಗಳಲ್ಲೂ ಐಸಿಸ್‌ಗೆ ಕಾಲೂರಲು ಸಾಧ್ಯವಾಗಿಲ್ಲ ಎಂದು ಭದ್ರತಾ ಪಡೆಗಳು ಭಾವಿಸಿದ್ದವು. ಆದರೆ ಇದೀಗ ಏಕಾಏಕಿ ಐಸಿಸ್ ಕಾಶ್ಮೀರದಲ್ಲಿ ಮೊದಲ ಕಾರ್ಯಾಚರಣೆ ಹೇಳಿಕೊಂಡಿ ರುವುದು ಎಷ್ಟು ಸತ್ಯ ಎನ್ನುವ ಪ್ರಶ್ನೆಯೂ ಇದೆ. ಇರಾಕ್ ಮತ್ತು ಸಿರಿಯಾದಲ್ಲಿ ಅಳಿವಿನಂಚಿಗೆ ತಲುಪಿರುವ ಐಸಿಸ್ ಈಗ ಜಗತ್ತಿನ ಯಾವುದೇ ಭಾಗದಲ್ಲಿ ಭಯೋತ್ಪಾದಕ ದಾಳಿ ನಡೆದರೂ ಇದು ತನ್ನದೇ ಕೃತ್ಯ ಎಂದು ಹೇಳಿಕೊಂಡು ಪ್ರಚಾರ ಪಡೆದುಕೊಳ್ಳುವ ಮಟ್ಟಕ್ಕೆ ತಲುಪಿದೆ. ಕಾಶ್ಮೀರದ ಎನ್‌ಕೌಂಟರನ್ನು ಕೂಡ ಐಸಿಸ್ ಇದೇ ರೀತಿ ತನ್ನ ಪ್ರಚಾರಕ್ಕೆ ಬಳಸಿಕೊಂಡಿರುವ ಸಾಧ್ಯತೆಯೂ ಇದೆ. ಹಾಗೆಂದು ಐಸಿಸ್ ಪ್ರಸ್ತುತಿಯನ್ನು ಸಂಪೂರ್ಣ ನಿರ್ಲಕ್ಷಿಸಲು ಅಸಾಧ್ಯ. ಏಕೆಂದರೆ ಕೇರಳ ಮಹಾರಾಷ್ಟ್ರದಲ್ಲಿ ಈಗಾಗಲೇ ಅದರ ಬೀಜಾಂಕುರವಾಗಿದೆ ಎನ್ನುವುದು ನೆನಪಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.