ಚುನಾವಣ ಬಾಂಡ್ ಗೊಂದಲ ಬಗೆಹರಿಯಲಿ
Team Udayavani, Mar 29, 2019, 5:19 AM IST
ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಮತ್ತು ರಾಜಕೀಯ ಕ್ಷೇತ್ರಕ್ಕೆ ಕಪ್ಪುಹಣ ಹರಿದು ಬರುವುದನ್ನು ತಡೆಯುವ ಮಹಾನ್ ಉದ್ದೇಶದಿಂದ ಸರಕಾರ ಕಳೆದ ವರ್ಷ ಪ್ರಾರಂಭಿಸಿದ್ದ ಚುನಾವಣ ಬಾಂಡ್ ತನ್ನ ಮೂಲ ಉದ್ದೇಶಕ್ಕೆ ಮಾರಕವಾಗುವಂತಿದೆ. ಚುನಾವಣ ಬಾಂಡ್ ಪದ್ಧತಿಯಲ್ಲಿ ಗಂಭೀರವಾದ ಲೋಪಗಳಿವೆ ಮತ್ತು ದೇಣಿಗೆಯ ಪಾರದರ್ಶಕತೆಯ ಮೇಲೆಯೇ ಪರಿಣಾಮವಾಗಲಿದೆ ಎಂದು ಚುನಾವಣ ಆಯೋಗ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಹಿಂದೆ 20,000 ರೂ.ಗಿಂತ ಕೆಳಗಿನ ಮೊತ್ತದ ದೇಣಿಗೆಯ ಮೂಲವನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂಬ ನಿಯಮದಿಂದಾಗಿ ರಾಜಕೀಯ ಪಕ್ಷಗಳಿಗೆ ಸಣ್ಣ ಮೊತ್ತದಲ್ಲೇ ದೇಣಿಗೆಗಳು ಹರಿದು ಬರುತ್ತಿದ್ದವು. ಈ ಮೂಲಕ ಕಪ್ಪು ಹಣ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಿತ್ತು ಎಂಬ ಕಾರಣಕ್ಕೆ ಎನ್‌ಡಿಎ ಸರಕಾರ ಬಾಂಡ್ ಮೂಲಕ ದೇಣಿಗೆ ಸ್ವೀಕರಿಸುವ ಪದ್ಧತಿಯನ್ನು ಪ್ರಾರಂಭಿಸಿದೆ. ಆದರೆ ಬಾಂಡ್ ಮೂಲಕವೂ ಕಪ್ಪುಹಣ ಬರಲು ಸಾಧ್ಯವಿದೆ, ಅಷ್ಟು ಮಾತ್ರವಲ್ಲ ಈ ಕಪ್ಪುಹಣದ ಮೂಲ ಯಾವುದೆಂದೇ ಅರಿಯಲಾಗದು ಎಂಬ ಗಂಭೀರ ಲೋಪವನ್ನು ಆಯೋಗ ಎತ್ತಿ ತೋರಿಸಿದೆ. ಇದು ಬಹಳ ಗಂಭೀರವಾಗಿ ಚಿಂತಿಸಬೇಕಾದ ವಿಚಾರ. ಚುನಾವಣ ಕಾಲದಲ್ಲಿ ಸಹಜವಾಗಿಯೇ ರಾಜಕೀಯ ಪಕ್ಷಗಳಿಗೆ ಧಾರಾಳ ದೇಣಿಗೆ ಹರಿದು ಬರುತ್ತದೆ. ಈ ಸಂದರ್ಭದಲ್ಲೇ ಬಾಂಡ್ ಪಾರದರ್ಶಕತೆ ಚರ್ಚೆಗೆ ಬಂದಿರುವುದು ಕಾಕತಾಳೀಯವೇ ಆಗಿದ್ದರೂ ಸಂದಭೋìಚಿತವೂ ಹೌದು. ಚುನಾವಣ ಬಾಂಡ್‌ಗೆ ಆರಂಭದಿಂದಲೇ ಆಕ್ಷೇಪ ಇತ್ತು. ಹಿಂದಿನ ಮೂವರು ಚುನಾವಣ ಆಯುಕ್ತರು ಇದರಲ್ಲಿರುವ ಲೋಪವನ್ನು ಎತ್ತಿ ತೋರಿಸಿದ್ದರು. ಆದರೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಪಿಐಎಲ್ ಮೂಲಕ ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ. ಹಾಗೇ ನೋಡಿದರೆ ಚುನಾವಣ ಬಾಂಡ್ ಪ್ರಾರಂಭಿಸಿರುವ ಉದ್ದೇಶ ಉತ್ತಮವಾದದ್ದೇ. ರಾಜಕೀಯ ಕ್ಷೇತ್ರಕ್ಕೆ ಹರಿದು ಬರುವ ಬೇನಾಮಿ ಹಣ ಮತ್ತು ಕಾಳಧನವೇ ಎಲ್ಲ ಭ್ರಷ್ಟಾಚಾರಗಳ ಮೂಲ ಎನ್ನುವುದರಲ್ಲಿ ತಕರಾರು ಇಲ್ಲ. ಇದನ್ನು ತಡೆಯುವ ಸಲುವಾಗಿ ಬಾಂಡ್ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆದರೆ ಈ ಪದ್ಧತಿಯಲ್ಲೂ ಪಾರದರ್ಶಕತೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಅದು ರಾಜಕೀಯದ ಪಾವಿತ್ರ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ಅಂಶ. ಹೀಗಾಗಿ ಚುನಾವಣ ಬಾಂಡ್‌ನಲ್ಲಿ ಎಲ್ಲಿ ಲೋಪವಿದೆ ಎಂದು ಕಂಡುಕೊಳ್ಳುವುದು ಈಗಿನ ಅಗತ್ಯ.
1,000, 10,000, 10 ಲಕ್ಷ, ಮತ್ತು 1 ಕೋ. ರೂ.ಯ ಬಾಂಡ್‌ಗಳನ್ನು ಬ್ಯಾಂಕಿನಿಂದ ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದು ಚುನಾವಣ ಬಾಂಡ್ ಪದ್ಧತಿ. ಎಲ್ಲ ವ್ಯವಹಾರಗಳು ಬ್ಯಾಂಕ್ ಮೂಲಕವೇ ನಡೆಯುವುದರಿಂದ ಇದರ ಬಹಳ ಪಾರದರ್ಶಕ ಎಂದು ಹೇಳುತ್ತಿದೆ ಸರಕಾರ. ಆದರೆ ಈ ಬಾಂಡ್‌ಗಳನ್ನು ವ್ಯಕ್ತಿಗಳು ಮತ್ತು ಕಾರ್ಪೋರೇಟ್ ಕಂಪೆನಿಗಳು ಮಾತ್ರವಲ್ಲದೆ ಯಾವುದೇ ಅನಾಮಿಕ ವ್ಯಕ್ತಿ ಅಥವಾ ಸಂಸ್ಥೆ ಬೇಕಾದರೂ ಖರೀದಿಸಬಹುದು. ಅಷ್ಟು ಮಾತ್ರವಲ್ಲದೆ ನಷ್ಟದಲ್ಲಿ ನಡೆಯುತ್ತಿರುವ ಕಂಪೆನಿಯೂ ಖರೀದಿಸಿ(ಹಿಂದೆ ನಿವ್ವಳ ಲಾಭದ ಶೇ.7.5 ದಾಟಬಾರದು ಎಂಬ ನಿಯಮವಿತ್ತು) ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು. ಬಾಂಡ್ ಖರೀದಿಸಿದವರ ಹೆಸರನ್ನು ಬ್ಯಾಂಕ್ ಆಗಲಿ, ರಾಜಕೀಯ ಪಕ್ಷವಾಗಲಿ ಬಹಿರಂಗಪಡಿಸುವ ಅಗತ್ಯವಿಲ್ಲ. ಹೀಗೆ ಒಟ್ಟು ವ್ಯವಹಾರವೇ ನಿಗೂಢವಾಗಿ ಮುಗಿದು ಹೋಗುತ್ತದೆ. ಬಾಂಡ್‌ನ್ನು ವಿರೋಧಿಸುವವರ ಆಕ್ಷೇಪವಿರುವುದು ಈ ನಿಯಮಕ್ಕೆ. ಯಾರು ದೇಣಿಗೆ ಕೊಟ್ಟಿದ್ದಾರೆ ಎಂದು ಬಹಿರಂಗವಾಗದಿದ್ದರೆ ಪಾರದರ್ಶಕತೆ ಎಲ್ಲಿ ಉಳಿಯಿತು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳಿಗೆ ಕೋಟಿಗಳ ಮೊತ್ತದಲ್ಲಿ ದೇಣಿಗೆ ನೀಡುವುದು ಕಾರ್ಪೋರೇಟ್ ಕಂಪೆನಿಗಳು.ಯಾವ ಕಂಪೆನಿಯೂ ಲಾಭವಿಲ್ಲದೆ ದೇಣಿಗೆ ನೀಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ದೇಣಿಗೆ àಡಿದ ಕಂಪೆನಿ ಸರಕಾರದ ನೀತಿ ತನಗನುಕೂಲಕರವಾಗಿ ಇರಬೇಕು ಎಂದು ಆಶಿಸುವುದು ಸಹಜ. ಆದರೆ ದೇಣಿಗೆ ಕೊಟ್ಟ ವಿಚಾರವೇ ನಿಗೂಢವಾಗಿದ್ದರೆ ಸರಕಾರದ ನೀತಿಯಿಂದಾಗಿ ಯಾವ ಕಂಪೆನಿಗೆ ಲಾಭವಾಗಿದೆ ಎಂಬ ವಿಚಾರ ಸಾರ್ವಜನಿಕರಿಗೆ ಎಂದಿಗೂ ತಿಳಿಯುವ ಸಾಧ್ಯತೆಯಿಲ್ಲ. ಬಾಂಡ್‌ಗಳ ಮೂಲಕ ವಿದೇಶಗಳ ದೊಡ್ಡ ದೊಡ್ಡ ಕುಳಗಳು ಭಾರೀ ಮೊತ್ತದ ದೇಣಿಗೆ ಸಂದಾಯ ಮಾಡಿ ಸರಕಾರದ ನೀತಿಗಳನ್ನು ತಮಗನುಕೂಲವಾಗುವಂತೆ ತಿರುಗಿಸಿಕೊಳ್ಳಬಹುದು ಎಂಬ ವಾದದಲ್ಲಿ ಹುರುಳಿದೆ. ಶತ್ರು ದೇಶಗಳು ಕೂಡಾ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಸಲುವಾಗಿ ಈ ಅವಕಾಶವನ್ನು ಉಪಯೋಗಿಸಿಕೊಳ್ಳುವ ಅವಕಾಶವಿದೆ. ಹೀಗಾಗಿ ಚುನಾವಣ ಬಾಂಡ್ ಕುರಿತಾಗಿರುವ ಪ್ರಕರಣವನ್ನು ತುರ್ತಾಗಿ ಇತ್ಯರ್ಥಪಡಿಸುವುದು ರಾಜಕೀಯ ವ್ಯವಸ್ಥೆಯ ಶುದ್ಧೀಕರಣದ ದೃಷ್ಟಿಯಿಂದ ಮಾತ್ರವಲ್ಲದೆ ರಾಷ್ಟ್ರದ ಹಿತದೃಷ್ಟಿಯಿಂದಲೂ ಉತ್ತಮ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.