ಚುನಾವಣಾ ನೀತಿಸಂಹಿತೆ, ಕರ್ತವ್ಯಗಳು ಅಗತ್ಯ ಸೇವೆಗಳಿಗೆ ತಡೆಯಾಗಬಾರದು
Team Udayavani, Apr 24, 2023, 6:00 AM IST
ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇದೇ ವೇಳೆ ಚುನಾವಣಾ ಕರ್ತವ್ಯಗಳಿಗಾಗಿ ಗ್ರಾಮ ಪಂಚಾಯತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗಿನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಸರಿಸುಮಾರು ಕಳೆದೊಂದು ತಿಂಗಳಿನಿಂದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಜನಸಾಮಾನ್ಯರು ದಾಖಲೆ ಪತ್ರಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದ್ದು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಮತದಾರರ ಪಟ್ಟಿ ಅಂತಿಮಗೊಳಿಸುವಿಕೆ, ಚುನಾವಣ ಪೂರ್ವ ಸಿದ್ಧತೆ, ತರಬೇತಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಲ್ಲೀನರಾಗಿದ್ದರು. ಚುನಾವಣಾ ಆಯೋಗ ಅಧಿಕೃತವಾಗಿ ವೇಳಾಪಟ್ಟಿಯನ್ನು ಪ್ರಕಟಿಸಿದ ಬಳಿಕ ಈ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಚುನಾವಣಾ ಸಂಬಂಧಿ ವಿವಿಧ ಕೆಲಸಕಾರ್ಯಗಳಿಗೆ ನಿಯೋಜಿಸಲಾಯಿತು. ಇದರಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಜನರಿಗೆ ತುರ್ತು ಸೇವೆ ಲಭಿಸದಂತಾಗಿದೆ. ಅದರಲ್ಲೂ ಮುಖ್ಯವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳು ಬಹುತೇಕ ಸ್ಥಗಿತವಾಗಿವೆ.
ಇದರಿಂದಾಗಿ ಜನರು ಇಕ್ಕಟ್ಟಿಗೆ ಸಿಲುಕವಂತಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಪ್ರದೇಶಗಳ ಜನರ ಸ್ಥಿತಿಯಂತೂ ಹೇಳತೀರದಾಗಿದೆ. ಗ್ರಾಮಲೆಕ್ಕಿಗರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವುದರಿಂದ ಜನಸಾಮಾನ್ಯರಿಗೆ ಈ ಅಧಿಕಾರಿಗಳ ಸೇವೆ ಲಭಿಸುತ್ತಿಲ್ಲ.
ಸದ್ಯದಲ್ಲಿಯೇ ಶಾಲಾಕಾಲೇಜುಗಳ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳುವುದರಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ಜಾತಿ ಪ್ರಮಾಣಪತ್ರ, ಕುಟುಂಬದ ಆದಾಯ ಪ್ರಮಾಣಪತ್ರಗಳು ಅತ್ಯಗತ್ಯವಾಗಿದ್ದು ಇವುಗಳನ್ನು ಪಡೆಯಲು ವಿದ್ಯಾರ್ಥಿಗಳ ಹೆತ್ತವರು ಇನ್ನಿಲ್ಲದ ತ್ರಾಸ ಪಡುವಂತಾಗಿದೆ. ವಿದ್ಯಾರ್ಥಿ ವೇತನ ಸಹಿತ ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ಇನ್ನಿತರ ಕೆಲವೊಂದು ಸೌಲಭ್ಯಗಳನ್ನು ಪಡೆದುಕೊಳ್ಳಲು ಈ ಪ್ರಮಾಣಪತ್ರಗಳು ಅತ್ಯಗತ್ಯವಾಗಿದ್ದು ಇವುಗಳನ್ನು ಸಲ್ಲಿಸಲು ವಿಳಂಬವಾದಲ್ಲಿ ಈ ಸೌಲಭ್ಯಗಳಿಂದ ಅರ್ಹ ವಿದ್ಯಾರ್ಥಿಗಳು ವಂಚಿತರಾಗಲಿದ್ದಾರೆ. ಜಾಗದ ಆರ್‌ಟಿಸಿ, ಮರಣಪ್ರಮಾಣ ಪತ್ರ ಮತ್ತಿತರ ದಾಖಲೆಪತ್ರಗಳನ್ನು ಪಡೆಯಲೂ ಜನರು ಹೆಣಗಾಟ ನಡೆಸಬೇಕಿದೆ.
ಪಂಚಾಯತ್‌ರಾಜ್ ಇಲಾಖೆಯಲ್ಲೂ ಇದೇ ತೆರನಾದ ಸಮಸ್ಯೆಗಳು ತಲೆದೋರಿದ್ದು ಜನರಿಗೆ ನೀಡಲಾಗುತ್ತಿರುವ ಸೇವೆಗಳಲ್ಲಿ ವ್ಯತ್ಯಯವಾಗಿದ್ದು ಕೆಲಸಕಾರ್ಯಗಳು ವಿಳಂಬಗೊಳ್ಳುವಂತಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಸೆಳೆದರೆ ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳದೇ ಹೋದಲ್ಲಿ ತಮ್ಮ ಉದ್ಯೋಗಕ್ಕೆ ಸಂಚಕಾರ ಬಂದೊದಗೀತು ಎಂಬ ಆತಂಕ ಅಧಿಕಾರಿಗಳು ಮತ್ತು ಸಿಬ್ಬಂದಿಯದ್ದಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ 20 ದಿನಗಳು ಬಾಕಿ ಇದ್ದು ಅಲ್ಲಿಯವರೆಗೆ ಸಹಕರಿಸಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆಗಳಿಗೆ ನೀಡಲಾಗುವ ಔಷಧಗಳು, ಜೀವರಕ್ಷಕ ಔಷಧಗಳ ಕೊರತೆ ಎದುರಾಗಿದೆ. ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಈ ಔಷಧಗಳ ಖರೀದಿಗಾಗಿ ಟೆಂಡರ್ ಕರೆಯಲು ಅನುಮತಿ ಕೋರಿ ರಾಜ್ಯ ವೈದ್ಯಕೀಯ ನಿಗಮ ಚುನಾವಣ ಆಯೋಗಕ್ಕೆ ಮನವಿ ಸಲ್ಲಿಸಿದ್ದು ಆಯೋಗ ಒಪ್ಪಿಗೆ ನೀಡಿದ ಬಳಿಕವಷ್ಟೇ ನಿಗಮ ಔಷಧ ಖರೀದಿಗಾಗಿ ಟೆಂಡರ್ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಆದರೆ ಇಡೀ ಪ್ರಕ್ರಿಯೆಗೆ ಸುದೀರ್ಘ ಸಮಯ ತಗಲುವುದರಿಂದ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸುವ ಸಾಧ್ಯತೆ ಇದೆ. ಸದ್ಯ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು, ಗಂಭೀರ ಮತ್ತು ಸಾಮಾನ್ಯ ಕಾಯಿಲೆಗಳಿಗೆ ನೀಡಲಾಗುವ ಔಷಧಗಳ ಕೊರತೆ ಎದುರಾಗಿದೆ. ತತ್‌ಕ್ಷಣವೇ ಇದಕ್ಕೊಂದು ಪರಿಹಾರ ಕಂಡುಕೊಳ್ಳದೇ ಹೋದಲ್ಲಿ ಜನಸಾಮಾನ್ಯರ ಪ್ರಾಣಕ್ಕೇ ಸಂಚಕಾರ ಬಂದೊದಗುವ ಸಾಧ್ಯತೆ ಇದೆ.
ಪ್ರತೀ ಚುನಾವಣೆಯ ಸಂದರ್ಭದಲ್ಲೂ ಇಂತಹ ಪರಿಸ್ಥಿತಿ ತಲೆದೋರುತ್ತಿದ್ದು ಇದರ ನಿವಾರಣೆಗೆ ಸರ್ಕಾರವಾಗಲಿ, ಚುನಾವಣಾ ಆಯೋಗವಾಗಲಿ ಗಮನಹರಿಸಿದಂತೆ ಕಾಣುತ್ತಿಲ್ಲ. ಕೆಲವೊಂದು ಸಮಸ್ಯೆಗಳು ಸರ್ಕಾರ ಮತ್ತು ಅಧಿಕಾರಿಗಳ ಅಸಡ್ಡೆಯಿಂದಾಗಿ ಸೃಷ್ಟಿಯಾಗುತ್ತಿದೆ. ಒಂದಿಷ್ಟು ಮುಂದಾಲೋಚನೆಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಿದಲ್ಲಿ ಔಷಧ ಕೊರತೆಯಂಥ ಸಮಸ್ಯೆ ಎದುರಾಗದು.
ನೀತಿ ಸಂಹಿತೆ ಮತ್ತು ಅಧಿಕಾರಿ, ಸಿಬಂದಿಗಳ ಚುನಾವಣಾ ಕರ್ತವ್ಯಗಳು, ಜನಸಾಮಾನ್ಯರ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಚುನಾವಣಾ ಆಯೋಗ ಪರಸ್ಪರ ಚರ್ಚಿಸಿ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.