ಕ್ರಿಕೆಟ್‌ ಕಳಂಕ ಮುಕ್ತವಾಗಬೇಕು


Team Udayavani, Nov 10, 2019, 4:38 AM IST

ss-32

ಭಾರತದ ಕ್ರಿಕೆಟ್‌ ಮತ್ತೂಮ್ಮೆ ಅವಮಾನದಿಂದ ತಲೆತಗ್ಗಿಸುವಂತಾಗಿದೆ. ಇದಕ್ಕೆ ಕಾರಣ ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ನಡೆದಿರುವ ಮ್ಯಾಚ್‌ ಫಿಕ್ಸಿಂಗ್‌. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ನಡೆಯುತ್ತಿದ್ದ ಫಿಕ್ಸಿಂಗ್‌ ಇತ್ತೀಚೆಗಿನ ವರ್ಷಗಳಲ್ಲಿ ಸ್ಥಳೀಯವಾಗಿ ನಡೆಯುವ ಪಂದ್ಯಗಳಿಗೂ ಕಾಲಿರಿಸಿರುವುದು ಕಳವಳಕಾರಿ ಬೆಳವಣಿಗೆ. ಇದರಿಂದಾಗಿ ಸಭ್ಯರ ಆಟಕ್ಕೆ ಕೆಲವು ಅಸಭ್ಯರಿಂದಾಗಿ ಕಳಂಕ ಅಂಟಿಕೊಳ್ಳುತ್ತಿರುವುದು ದುರದೃಷ್ಟಕರ.

ಕೆಪಿಎಲ್‌ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್‌ ತಂಡದ ನಾಯಕ ಸಿ.ಎಂ.ಗೌತಮ್‌ ಮತ್ತು ಅದೇ ತಂಡದ ಆಟಗಾರ ಅಬ್ರಾರ್‌ ಖಾಜಿ ಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಂಡದ ಮಾಲಕ ಈ ಹಿಂದೆಯೇ ಸೆರೆಯಾಗಿದ್ದಾರೆ. ಈ ತಂಡವನ್ನು ಅಮಾನತಿನಲ್ಲಿಡಲಾಗಿದೆ. ಈಗ ಕ್ರಿಕೆಟ್‌ ಎಂದಲ್ಲ ಕಬಡ್ಡಿ, ಮಹಿಳಾ ಕ್ರಿಕೆಟ್‌, ಟೆನಿಸ್‌ ಸೇರಿದಂತೆ ಹಲವು ಆಟಗಳಿಗೆ ಫಿಕ್ಸಿಂಗ್‌ ಭೂತ ಕಾಡುತ್ತಿದೆ. ಇದಕ್ಕೆ ಕಾರಣ ಈ ಆಟಗಳಲ್ಲಿ ಒಳಗೊಂಡಿರುವ ಭಾರೀ ಮೊತ್ತದ ಹಣ. ಬೆಟ್ಟಿಂಗ್‌ ನಡೆಸುವವರು ತಮ್ಮ ಪರವಾಗಿ ಫ‌ಲಿತಾಂಶ ಪಡೆದುಕೊಳ್ಳುವ ಸಲುವಾಗಿ ಆಟಗಾರರನ್ನೇ ಬುಟ್ಟಿಗೆ ಹಾಕಿಕೊಂಡು ಆಡುವ ಆಟಗಳಿಂದಾಗಿ ನೈಜ ಕ್ರೀಡಾಸ್ಫೂರ್ತಿಗೆ ಆಗಿರುವ ಹಾನಿ ಅಷ್ಟಿಷ್ಟಲ್ಲ.

ಮ್ಯಾಚ್‌ ಫಿಕ್ಸಿಂಗ್‌ನಿಂದಾಗಿ ಹಲವಾರು ಪ್ರತಿಭಾವಂತ ಆಟಗಾರರು ತಮ್ಮ ಕ್ರೀಡಾ ಬದುಕನ್ನೇ ಸರ್ವನಾಶ ಮಾಡಿಕೊಂಡಿದ್ದಾರೆ. ಅಜರುದ್ದೀನ್‌, ಅಜಯ್‌ ಜಡೇಜ, ಶ್ರೀಶಾಂತ್‌ ಹೀಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚಿದ್ದ ಹಲವು ಪ್ರತಿಭಾವಂತರ ಹಣದ ಮೋಹ ಅವರ ಕ್ರೀಡಾ ಬದುಕಿಗೆ ಕೊಳ್ಳಿಯಿಟ್ಟ ಉದಾಹರಣೆ ಕಣ್ಣಮುಂದೆ ಇದ್ದರೂ ಆಟಗಾರರು ಮತ್ತೆ ಮತ್ತೆ ಈ ಸುಳಿಗೆ ಬೀಳುತ್ತಿರುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ.

ಇದೀಗ ಸೆರೆಯಾಗಿರುವ ಗೌತಮ್‌ ಮತ್ತು ಖಾಜಿ ಅವರ ಉದಾಹರಣೆಯನ್ನೇ ತೆಗೆದುಕೊಂಡರೂ, ಇವರಿಬ್ಬರು ಪ್ರತಿಭಾವಂತ ಆಟಗಾರರು ಎನ್ನುವುದರಲ್ಲಿ ಅನುಮಾನವಿಲ್ಲ. ಐಪಿಎಲ್‌ನಲ್ಲೂ ಆಡಿದ ಅನುಭವ ಇರುವವರು. ಉತ್ತಮ ಫಾರ್ಮ್ ತೋರಿಸಿದ್ದರೆ ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗುವ ಸಾಧ್ಯತೆಯಿತ್ತು. ಆಯ್ಕೆಯಾಗಿರದಿದ್ದರೂ ಸ್ಥಳೀಯ ಕ್ರಿಕೆಟಿನಲ್ಲಿ ಇನ್ನಷ್ಟು ವರ್ಷ ಆಡಬಹುದಾಗಿತ್ತು. ಆದರೆ ಕೆಲವೇ ಲಕ್ಷ ರೂಪಾಯಿಗಳ ಆಸೆಗೆ ಬಿದ್ದು ತಮ್ಮ ಇಡೀ ಕ್ರಿಕೆಟ್‌ ಬದುಕನ್ನೇ ಕಳೆದುಕೊಂಡು ಬಿಟ್ಟರು. ಒಮ್ಮೆ ಕಳಂಕ ಹೊತ್ತ ಬಳಿಕ ಮರಳಿ ವೃತ್ತಿಪರ ಕ್ರಿಕೆಟಿಗೆ ಮರಳುವುದು ಸುಲಭದ ಮಾತಲ್ಲ. ಶ್ರೀಶಾಂತ್‌ ಅವರಂಥ ಪ್ರತಿಭಾವಂತನಿಗೆ ಇದು ಸಾಧ್ಯವಾಗಿಲ್ಲ. ಯುವ ಕ್ರಿಕೆಟಿಗರು ಇಂಥ ದೃಷ್ಟಾಂತಗಳನ್ನು ನೋಡಿ ಯಾದರೂ ಬುಕ್ಕಿಗಳ ವಿಚಾರದಲ್ಲಿ ಎಚ್ಚರದಿಂದಿರಬೇಕಿತ್ತು.

ಆಟಗಳ ವ್ಯಾಪಾರೀಕರಣ ಫಿಕ್ಸಿಂಗ್‌ನಂಥ ಅಪಸವ್ಯಗಳಿಗೆ ಹೆಚ್ಚಿನ ಅವಕಾಶ ಕೊಡುತ್ತಿದೆ. ಕ್ರಿಕೆಟ್‌ ಎನ್ನುವುದು ಈಗ ಅಪ್ಪಟ ಹಣದ ಆಟವಾಗಿ ಬದಲಾಗಿದೆ. ಆಟಗಾರರನ್ನು ಹರಾಜು ಹಾಕುವುದು, ಕಾರ್ಪೊರೇಟ್‌ ಕುಳಗಳು, ಸಿನೆಮಾ ತಾರೆಯರು ತಂಡಗಳನ್ನು ಖರೀದಿಸುವುದು ಇವೆಲ್ಲ ಕ್ರೀಡೆಗೆ ಶೋಭೆ ತರುವ ಸಂಗತಿಗಳಲ್ಲ. ಆದರೆ ಇಡೀ ವ್ಯವಸ್ಥೆಯೇ ಈಗ ಇದರ ಪರವಾಗಿ ನಿಂತಿರುವುದರಿಂದ ಯಾರೂ ಏನೂ ಮಾಡದಂಥ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿದರೂ ಆಟದಲ್ಲಿ ಹಣದ ಆಟವನ್ನು ತಡೆಯಲಾಗಿಲ್ಲ.

ಭಾರೀ ಆಸಕ್ತಿ, ಕುತೂಹಲ ಮತ್ತು ವ್ಯಾಮೋಹದಿಂದ ವೀಕ್ಷಿಸುವ ಆಟದ ಫ‌ಲಿತಾಂಶ ಮೊದಲೇ ನಿರ್ಧಾರವಾಗಿತ್ತು ಎನ್ನುವ ಅಂಶ ತಿಳಿದಾಗ ನಿಜವಾಗಿ ಆಟವನ್ನು ಪ್ರೀತಿಸುವವರ ಪಾಡು ಏನಾಗಬಹುದು ಎನ್ನುವುದನ್ನು ಆಟಗಾರರು ಚಿಂತಿಸಬೇಕು. ಐಪಿಎಲ್‌ ಹಾಗೂ ಅದರ ಅನುಸರಣೆಯಾಗಿ ಹುಟ್ಟಿಕೊಂಡ ಈ ಮಾದರಿಯ ಇತರ ಕೂಟಗಳಿಂದಾಗಿ ಒಟ್ಟಾರೆಯಾಗಿ ಕ್ರಿಕೆಟಿನ ಘನತೆಯೇ ಕುಗ್ಗುತ್ತಿದೆ ಎನ್ನುವ ಆರೋಪದಲ್ಲಿ ತಥ್ಯವಿದೆ. ಆಟಗಾರರನ್ನು ಪ್ರೋತ್ಸಾಹಿಸಲು, ಹೊಸ ಪ್ರತಿಭೆಗಳನ್ನು ಶೋಧಿಸಲು ಪ್ರಾರಂಭವಾದ ಸ್ಥಳೀಯ ಕೂಟಗಳು ತಮ್ಮ ಉದ್ದೇಶದಿಂದ ವಿಮುಖಗೊಂಡಿರುವುದು ಢಾಳಾಗಿ ಗೋಚರಿಸುತ್ತಿದೆ. ಫಿಕ್ಸಿಂಗ್‌ಗೆ ಲಗಾಮು ಹಾಕುವಲ್ಲಿ ಭಾರತದ ಕ್ರಿಕೆಟ್‌ ನಿಯಂತ್ರಣ ಸಂಸ್ಥೆಯಾಗಿರುವ ಬಿಸಿಸಿಐಯ ಜವಾಬ್ದಾರಿ ದೊಡ್ಡದಿದೆ. ಕೆಪಿಎಲ್‌ ಕೂಟವನ್ನು ಮತ್ತು ಕಳಂಕಿತ ಆಟಗಾರರನ್ನು ನಿಷೇಧಿಸುವಂಥ ತಕ್ಷಣದ ಕ್ರಮದಿಂದ ಫಿಕ್ಸಿಂಗ್‌ ಪಿಡುಗನ್ನು ಮೂಲೋತ್ಪಾಟನೆ ಮಾಡಲು ಸಾಧ್ಯವಿಲ್ಲ. ಆದರೆ ರಾಜ್ಯಮಟ್ಟದ ಕೂಟಗಳ ಮೇಲೂ ಬಿಸಿಸಿಐ ನಿಗಾ ಇನ್ನಷ್ಟು ಹೆಚ್ಚಬೇಕು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಂತೆ ರಾಜ್ಯಮಟ್ಟದ ಕೂಟಗಳಿಗೂ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರಬೇಕು. ಕೋಟಿಗಟ್ಟಲೆ ಜನರು ಪ್ರೀತಿಸುವ ಆಟವೊಂದು ಪ್ರತಿ ವರ್ಷ ಈ ರೀತಿಯ ಕಳಂಕ ಹೊತ್ತುಕೊಳ್ಳುವುದು ಸರಿಯಲ್ಲ.

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.