ಖೇಣಿ ಸೇರ್ಪಡೆ, ಉಪೇಂದ್ರ ನಿರ್ಗಮನ, ಅನುಭವವೂ ಮುಖ್ಯ
Team Udayavani, Mar 7, 2018, 8:30 AM IST
ಸೋಮವಾರದ ಎರಡು ರಾಜಕೀಯ ಬೆಳವಣಿಗೆಗಳು ಕರ್ನಾಟಕದ ಮಟ್ಟಿಗೆ ಗಮನಾರ್ಹವಾಗಿವೆ. ಒಂದು ಉದ್ಯಮಿ ಹಾಗೂ ರಾಜಕಾರಣಿ ಅಶೋಕ್ ಖೇಣಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಮತ್ತು ಇನ್ನೊಂದು, ರಾಜಕೀಯದಲ್ಲಿ ಹೊಸ ಭಾಷ್ಯ ಬರೆಯಲು ಹೊರಟಿದ್ದ ನಟ ಉಪೇಂದ್ರ ಆರಂಭದಲ್ಲೇ ಎಡವಿರುವುದು. ರಾಜ್ಯ ರಾಜಕೀಯದಲ್ಲಿ ಈ ಎರಡು ಬೆಳವಣಿಗೆಗಳು ಭಾರೀ ಎನ್ನುವಂತಹ ಪ್ರಭಾವ ಬೀರದಿದ್ದರೂ ಇವಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿರುವುದಂತೂ ಸತ್ಯ. ಖೇಣಿ ಸೇರ್ಪಡೆ ಯಿಂದ ಕಾಂಗ್ರೆಸ್‌ಗೆ ಲಾಭವಾಗುತ್ತೋ ನಷ್ಟವಾಗುತ್ತೋ ಎನ್ನುವುದನ್ನು ಈಗಲೇ ಹೇಳಲಾಗದು. ಆದರೆ ಅವರ ರೊಕ್ಕದ ಥೈಲಿಯನ್ನು ನೋಡಿಯೇ ಕಾಂಗ್ರೆಸ್ ಬರಮಾಡಿಕೊಂಡಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಕೇಳಿ ಬರುತ್ತಿದೆ. ಹಾಗೆ ನೋಡಿದರೆ ಕಾಂಗ್ರೆಸಿನಲ್ಲಿಯೇ ಖೇಣಿ ಸೇರ್ಪಡೆಗೆ ಬಲವಾದ ವಿರೋಧ ವ್ಯಕ್ತವಾಗಿದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೋಮವಾರ ಖೇಣಿಗೆ ರತ್ನ ಗಂಬಳಿಯ ಸ್ವಾಗತ ನೀಡಿದ್ದಾರೆ. ಕೆಲ ಸಮಯದ ಹಿಂದೆ ಬಿಜೆಪಿಯಿಂದ ವಲಸೆ ಬಂದ ಆನಂದ್ ಸಿಂಗ್ ಅವರನ್ನೂ ಇದೇ ರೀತಿ ಸೇರಿಸಿಕೊಳ್ಳಲಾಗಿತ್ತು. ಈ ಇಬ್ಬರೂ ಕಳಂಕಿತ ಹಿನ್ನೆಲೆ ಹೊಂದಿರುವವರು. ಒಂದು ಕಾಲದಲ್ಲಿ ಇದೇ ಕಾಂಗ್ರೆಸ್ ಅವರ ವಿರುದ್ಧ ಉಗ್ರ ಹೋರಾಟ ನಡೆಸಿತ್ತು. ಈಗ ಅವರನ್ನೇ ಪಕ್ಕದಲ್ಲಿಟ್ಟುಕೊಂಡು ಮತ ಕೇಳಲು ಹೋಗುವ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡಿದೆ. ರಾಜಕೀಯದಲ್ಲಿ ಖಾಯಂ ಮಿತ್ರರೂ ಇಲ್ಲ ಖಾಯಂ ಶತ್ರುಗಳೂ ಎನ್ನುವ ಮಾತು ಖೇಣಿ ಮತ್ತು ಸಿಂಗ್ ವಿಚಾರದಲ್ಲಿ ನಿಜವಾಗಿದೆ. ಈ ಮೂಲಕ ಕಾಂಗ್ರೆಸ್ ಎದುರಾಳಿಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ತಾನಾಗೇ ಪ್ರಬಲ ಅಸ್ತ್ರವೊಂದನ್ನು ಬೆಳ್ಳಿತಟ್ಟೆಯಲ್ಲಿಟ್ಟು ನೀಡಿದಂತಾಗಿದೆ.
ಇನ್ನು ಉಪೇಂದ್ರ ಅವರದ್ದು ಇದಕ್ಕಿಂತಲೂ ಶೋಚನೀಯ ವಿಚಾರ. ಆರು ತಿಂಗಳ ಹಿಂದೆ ಅವರು ರಾಜಕೀಯಕ್ಕೆ ಧುಮುಕುವ ನಿರ್ಧಾರ ಕೈಗೊಂಡಾಗ ವಿಶೇಷವಾದ ಸಂಚಲನವೇನೂ ಉಂಟಾಗಿರಲಿಲ್ಲ. ಆದರೆ ಪ್ರತಿಪಾದಿಸಿದ ಕೆಲವು ವಿಚಾರಗಳು ಮಾತ್ರ ಆಕರ್ಷಣೀಯವಾಗಿದ್ದವು. ಅದರಲ್ಲೂ ಅವರು ರಾಜಕೀಯದ ಬದಲು ಪ್ರಜಾಕೀಯ ಎಂಬ ಶಬ್ದ ಬಳಸಿದ್ದು ಗಮನಸೆಳೆದಿತ್ತು. ತನ್ನದು ನಾಯಕರನ್ನು ಸೃಷ್ಟಿಸುವ ಪಕ್ಷವಲ್ಲ ಬದಲಾಗಿ ಕಾರ್ಮಿಕರನ್ನು ಸೃಷ್ಟಿಸುವ ಪಕ್ಷ ಎಂದು ಹೇಳಿಕೊಂಡಿದ್ದ ಉಪೇಂದ್ರ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ಖಾಕಿ ಉಡುಪು ಮತ್ತು ಅಟೋರಿಕ್ಷಾವನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದರು. ಆದರೆ ಇನ್ನುಳಿದ ಕೆಲವು ನಟರಂತೆ ತನ್ನದೇ ಆದ ಹೊಸ ಪಕ್ಷ ಸ್ಥಾಪಿಸುವ ಬದಲು ಅದಾಗಲೇ ಅಸ್ತಿತ್ವದಲ್ಲಿದ್ದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮೂಲಕ ಎಂಟ್ರಿ ಕೊಟ್ಟರು. ಇದು ತಾನು ಮಾಡಿದ ಮೊದಲ ತಪ್ಪು ಎನ್ನುವುದು ಉಪೇಂದ್ರಗೆ ಈಗ ಅರಿವಾಗಿರಬಹುದು. ನಾಯಕರನ್ನು ಸೃಷ್ಟಿಸುವುದಿಲ್ಲ ಎಂದಿದ್ದ ಪಕ್ಷದಲ್ಲಿ ನಾಯಕತ್ವಕ್ಕಾಗಿಯೇ ಕಚ್ಚಾಟ ಪ್ರಾರಂಭ ವಾಗಿದೆ. ಅಂತಿಮವಾಗಿ ಪಕ್ಷದಿಂದ ಉಪೇಂದ್ರ ಹೊರಬಂದು ಹೊಸ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಹಿಂದೆ ಯಡಿಯೂರಪ್ಪ ಬಿಜೆಪಿ ಯಿಂದ ಮುನಿಸಿಕೊಂಡು ಹೋಗಿ ಕೆಜೆಪಿ ಎಂಬ ಪಕ್ಷವನ್ನು ಸೇರಿಕೊಂಡಿ ದ್ದರು. ಅಷ್ಟರತನಕ ಯಾರಿಗೂ ಪರಿಚಯವಿರದಿದ್ದ ಕೆಜೆಪಿಗೆ ಆ ಬಳಿಕ ಭಾರೀ ಪ್ರಚಾರ ಸಿಕ್ಕಿತ್ತು.
ಚುನಾವಣೆ ಬಳಿಕ ಯಡಿಯೂರಪ್ಪ ಮರಳಿ ಬಿಜೆಪಿ ಬಂದಿದ್ದಾರೆ. ಆ ಬಳಿಕ ಕೆಜೆಪಿಯನ್ನು ಕೇಳುವವರಿಲ್ಲ. ಸದ್ಯ ಕೆಪಿಜೆಪಿಯಲ್ಲೂ ಇದೇ ಪರಿಸ್ಥಿತಿ. ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಯಾರು ಸಹಿ ಹಾಕಬೇಕು ಎನ್ನುವ ವಿಚಾರವೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ಮತ್ತು ಸಂಸ್ಥಾಪಕ ಮಹೇಶ್ ಗೌಡ ನಡುವಿನ ಭಿನ್ನಮತಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ ಇದು ಅರ್ಧ ಸತ್ಯ. ಒಳಗಿನ ಗುಟ್ಟು ಬೇರೆಯೇ ಇದೆ ಎನ್ನುವ ಗುಸುಗುಸು ಇದೆ. ನಾನು ನಾಯಕನಲ್ಲ ಎಂದಿದ್ದ ಉಪೇಂದ್ರ ಎಲ್ಲದರಲ್ಲೂ ನನ್ನ ಮಾತೇ ನಡೆಯಬೇಕು ಎಂದು ಹೇಳುತ್ತಿದ್ದರು. ಪಕ್ಷದ ಬೇರೆ ಯಾವ ನಾಯಕರ ಮಾತನ್ನೂ ಕೇಳುತ್ತಿರಲಿಲ್ಲ ಎನ್ನುವುದು ಮಹೇಶ ಗೌಡರ ಆರೋಪ. ನಾಯಕ ಎಂಬ ಪರಿಕಲ್ಪನೆಯನ್ನೇ ತಿರಸ್ಕರಿಸುವ ಮಾತನಾಡಿದ್ದ ಉಪೇಂದ್ರ ತಾನೇ ಪರಮೋಚ್ಚ ನಾಯಕ ಆಗಲು ಹೊರಟದ್ದು ಒಂದು ರೀತಿಯಲ್ಲಿ ಪರಿಸ್ಥಿತಿಯ ವಿಡಂಬನೆಯಂತಿದೆ. ಈ ಬೆಳವಣಿಗೆಯಿಂದ ಒಂದು ವಿಚಾರ ವಂತೂ ಸ್ಪಷ್ಟವಾಗಿದೆ.
ರಾಜಕೀಯದಲ್ಲಿ ಬರೀ ಆದರ್ಶವಿದ್ದರೆ ಸಾಕಾಗು ವುದಿಲ್ಲ, ತಳಮಟ್ಟದ ಅನುಭವವೂ ಇರಬೇಕು ಎನ್ನುವುದು. ಹಣವಿಲ್ಲದೆ ರಾಜಕೀಯ ಮಾಡುತ್ತೇನೆ ಎಂದಾಗ ಕೇಳುವುದಕ್ಕೇನೋ ಆಕರ್ಷಕ. ಆದರೆ ವಾಸ್ತವದಲ್ಲಿ ಸಾಧ್ಯವೇ? ಕೆಎಸ್‌ಆರ್‌ಟಿಸಿ ಬಸ್ಸಲ್ಲಿ, ರೈಲಿನಲ್ಲಿ, ರಿಕ್ಷಾದಲ್ಲಿ ಹೋಗಿ ಪ್ರಚಾರ ಮಾಡಿ ಬರಲು ಆದೀತೇ? ಕಾರ್ಯ ಕರ್ತರ ಚಹಾ ತಿಂಡಿ ವ್ಯವಸ್ಥೆಗಾದರೂ ಹಣ ಬೇಡವೆ? ವಾಸ್ತವ ಅರಿಯದೆ ಆದರ್ಶದ ಬೆನ್ನೇರಿ ಹೊರಟರೆ ಹೀಗೇ ಆಗಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.