ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ
Team Udayavani, Oct 28, 2024, 6:20 AM IST
ದೇಶದ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡುತ್ತಿರುವ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸುತ್ತಿದೆ. ಈಗ ಈ ಹುಸಿ ಬೆದರಿಕೆ ಒಡ್ಡುವ ಪ್ರಕರಣಗಳು ದೇಶದ ವಿವಿಧೆಡೆಗಳ ಐಷಾರಾಮಿ ಹೊಟೇಲ್‌ಗಳಿಗೂ ವ್ಯಾಪಿಸಿದೆ.
ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ದೇಶದ ತನಿಖಾ ಸಂಸ್ಥೆಗಳು ಮತ್ತು ಗುಪ್ತಚರ ದಳಗಳಿಗೆ ಭಾರೀ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಇದನ್ನು ನಿಯಂತ್ರಿಸಲು ಈಗ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮುಂದಡಿ ಇರಿಸಿದೆ.
ಶಾಲಾಕಾಲೇಜು, ಬಸ್ ನಿಲ್ದಾಣ, ರೈಲು ನಿಲ್ದಾಣಗಳಾದಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಬೆದರಿಕೆಗಳನ್ನು ಕಳೆದೊಂದು ವರ್ಷ ದಿಂದೀಚೆಗೆ ನಿರಂತರವಾಗಿ ದೇಶದ ಅಲ್ಲಲ್ಲಿ ಒಡ್ಡುತ್ತಲೇ ಬರಲಾಗಿದೆ. ಇತ್ತೀಚಿನ ವಾರಗಳಲ್ಲಂತೂ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ಅಂತಾರಾಷ್ಟ್ರೀಯ ಯಾನದ ವಿಮಾನಗಳನ್ನು ಗುರಿಯಾಗಿಸಿ ಇಂತಹ ಹುಸಿ ಬೆದರಿಕೆಗಳನ್ನು ಒಡ್ಡುವುದು ಸಾಮಾನ್ಯವಾಗಿದೆ.
ಈ ಬೆದರಿಕೆಗಳ ಪರಿಣಾಮವಾಗಿ ವಿಮಾನಗಳ ಹಾರಾಟವನ್ನು ಕೊನೇ ಕ್ಷಣದಲ್ಲಿ ರದ್ದುಗೊಳಿಸುವುದು ಇಲ್ಲವೇ ಈ ವಿಮಾನಗಳ ಹಾರಾಟವನ್ನು ತಾಸುಗಳ ಕಾಲ ವಿಳಂಬಗೊಳಿಸಲೇ ಬೇಕಾದ ಅನಿವಾರ್ಯತೆಗೆ ವಿಮಾನಯಾನ ಕಂಪೆನಿಗಳು ಸಿಲುಕುತ್ತಿವೆ. ಪ್ರಧಾನಿ ಅವರ ಸೂಚನೆಯ ಬಳಿಕ ಕೊನೆಗೂ ಐಟಿ ಸಚಿವಾಲಯ ಇಂತಹ ಹುಸಿ ಬೆದರಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಸದ್ಯ ಬಹುತೇಕ ಬೆದರಿಕೆ ಸಂದೇಶಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಒಡ್ಡಲಾಗುತ್ತಿರುವುದರಿಂದ ಐಟಿ ಇಲಾಖೆ, ಈ ಸಾಮಾಜಿಕ ಜಾಲತಾಣಗಳ ಮಾತೃ ಕಂಪೆನಿಗಳಿಗೆ ಈಗ ಕಟ್ಟುನಿಟ್ಟಿನ ನಿರ್ದೇಶನವೊಂದನ್ನು ನೀಡಿದೆ. ಇಂತಹ ಬೇಕಾಬಿಟ್ಟಿ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವವರ ಸಂಪೂರ್ಣ ಮಾಹಿತಿಗಳನ್ನು ತನಿಖಾ ಸಂಸ್ಥೆಗಳಿಗೆ ಒದಗಿಸುವಂತೆ ಮತ್ತು ಹುಸಿ ಬೆದರಿಕೆ ಕುರಿತಾಗಿನ ಎಲ್ಲ ಪೋಸ್ಟ್ ಯಾ ಸಂದೇಶಗಳನ್ನು ತತ್‌ಕ್ಷಣವೇ ಜಾಲತಾಣದಿಂದ ಅಳಿಸಿ ಹಾಕುವಂತೆ ಸೂಚನೆ ನೀಡಿದೆ. ಸಾಮಾಜಿಕ ಜಾಲತಾಣಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರಕಾರ ರೂಪಿಸಿರುವ ನಿಯಮಗಳನ್ನು ಅನುಸರಿಸದೇ ಹೋದಲ್ಲಿ ಅಂತಹ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ತನ್ಮೂಲಕ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಹುಸಿ ಬೆದರಿಕೆ ಒಡ್ಡುವವರ ಹೆಡೆಮುರಿ ಕಟ್ಟಲು ಇಲಾಖೆ ಮುಂದಾಗಿದೆ.
ಹುಸಿ ಬೆದರಿಕೆ ಕರೆ, ಸಂದೇಶಗಳ ರವಾನೆಯ ಬಹುತೇಕ ಪ್ರಕರಣಗಳಲ್ಲಿ ಉಗ್ರ ಗಾಮಿ ಸಂಘಟನೆಗಳ ಕೈವಾಡವಿದ್ದರೆ, ಬೆರಳೆಣಿಕೆಯ ಪ್ರಕರಣಗಳಲ್ಲಷ್ಟೇ ಕಿಡಿಗೇಡಿಗಳು ಅಥವಾ ಮಾನಸಿಕ ಅಸ್ವಸ್ಥರಿಂದ ಇಂತಹ ವರ್ತನೆಗಳು ಕಂಡುಬರುತ್ತವೆ. ಆದರೆ ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ನಿರಂತರವಾಗಿ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇದ್ದು ಇದರ ಹಿಂದೆ ಬಲವಾದ ಷಡ್ಯಂತ್ರವಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಈವರೆಗೆ ಮುನ್ನೂರಕ್ಕೂ ಹೆಚ್ಚು ವಿಮಾನಗಳ ಮೇಲೆ ಇಂಥ “ಹುಸಿ ಬೆದರಿಕೆ’ ನಡೆದಿದೆ ಎಂದರೆ ಇದು, ಸಂಘಟಿತ ಪ್ರಯತ್ನ ಎಂದು ಅನುಮಾನಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ ಇಂತಹ ಹುಸಿ ಬೆದರಿಕೆಗಳ ಮೂಲಕ ದೇಶದ ಆರ್ಥಿಕತೆಗೆ ಮತ್ತು ಭದ್ರತಾ ವ್ಯವಸ್ಥೆಗೆ ಕುಂದುಂಟು ಮಾಡುವ ಸಂಚು ಕೂಡ ಇದರ ಹಿಂದಿರುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರಕಾರ ಕೇವಲ ಸಾಮಾಜಿಕ ಜಾಲ ತಾಣಗಳ ಮೇಲಣ ತನ್ನ ನಿಯಂತ್ರಣವನ್ನು ಬಿಗಿಗೊಳಿಸುವುದಕ್ಕಷ್ಟೇ ತನ್ನ ಹೊಣೆಗಾರಿಕೆಯನ್ನು ಸೀಮಿತಗೊಳಿಸಬಾರದು. ಇಂತಹ ಹುಸಿ ಬೆದರಿಕೆ ಕರೆ ಯಾ ಪೋಸ್ಟ್‌ಗಳ ಮೂಲ ಮತ್ತು ಅದರ ಹಿಂದಿರುವ ವ್ಯಕ್ತಿಗಳು ಅಥವಾ ಸಂಘಟನೆಗಳು ಮತ್ತು ಜಾಲವನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇದು ಅಂತರ್ಜಾಲ ಮಟ್ಟದಲ್ಲಿ ನಡೆಯುತ್ತಿರುವುದರಿಂದ ಈ ಸಂಬಂಧ ಜಗತ್ತಿನ ಎಲ್ಲ ರಾಷ್ಟ್ರಗಳು ಒಂದಾಗಿ ಹೋರಾಡುವ ಅಗತ್ಯ ಇದೆ. ಹೀಗಾದಾಗಲಷ್ಟೇ ಇಂತಹ ರಣಹೇಡಿ ವರ್ತನೆಗಳಿಗೆ ಕಡಿವಾಣ ಬೀಳಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Manipal: ಅಪಘಾತ ತಡೆಯಲು ಹೀಗೆ ಮಾಡಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.