Five state elections: ಅಕ್ರಮಗಳ ಮೇಲಾಟವಾಗದಿರಲಿ
Team Udayavani, Oct 10, 2023, 6:00 AM IST
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಪರಿಗಣಿಸಲ್ಪಟ್ಟಿರುವ ಐದು ರಾಜ್ಯಗಳ ವಿಧಾನಸಭೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದರೆ, ಮಧ್ಯಪ್ರದೇಶ, ರಾಜಸ್ಥಾನ ತೆಲಂಗಾಣ ಮತ್ತು ಮಿಜೋರಾಂನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿ. 3 ರಂದು ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣ ಆಯೋಗ ಸೋಮವಾರ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ತಿಳಿಸಿದೆ.
ಈ ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದರೆ ತೆಲಂಗಾಣದಲ್ಲಿ ಹಾಲಿ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಗೆ ಈ ಎರಡು ಪಕ್ಷಗಳು ಪ್ರಬಲ ಸ್ಪರ್ಧೆಯೊಡ್ಡಲು ಸಜ್ಜಾಗಿವೆ. ಇನ್ನು ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಶನಲ್ ಫ್ರಂಟ್, ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟದಿಂದ ತೀವ್ರ ಪೈಪೋಟಿ ಎದುರಿಸಲಿದೆ.
ಈ ಐದೂ ರಾಜ್ಯಗಳಲ್ಲಿ ಹಾಲಿ ಆಡಳಿತಾರೂಢ ಪಕ್ಷಗಳು ವಿವಿಧ ಕಾರಣಗಳಿಂದಾಗಿ ಭಾರೀ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿವೆ. ಆಡಳಿತ ಪಕ್ಷದೊಳಗಿನ ಆಂತರಿಕ ಕಚ್ಚಾಟ, ನಾಯಕತ್ವಕ್ಕಾಗಿ ಕಿತ್ತಾಟ, ಭ್ರಷ್ಟಾಚಾರದ ಆರೋಪಗಳು ಈ ಬಾರಿ ಆಡಳಿತ ಪಕ್ಷಗಳಿಗೆ ಬಲುದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳುಗಳಿಂದೀಚೆಗೆ ಈ ರಾಜ್ಯಗಳಲ್ಲಿನ ಎಲ್ಲ ಪಕ್ಷಗಳೂ ಚುನಾವಣ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ಈಗಾಗಲೇ ಒಂದೆರಡು ಸುತ್ತಿನ ಪ್ರಚಾರವನ್ನೂ ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರದ ಸಚಿವರಾದಿಯಾಗಿ ಬಿಜೆಪಿಯ ಉನ್ನತ ನಾಯಕರು ಹಲವು ಬಾರಿ ಈ ರಾಜ್ಯಗಳಿಗೆ ಭೇಟಿ ನೀಡಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ. ಇತ್ತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಕೂಡ ಈ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ.
ಏತನ್ಮಧ್ಯೆ ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನ ಜನತೆಗೆ ನೀಡಿದ್ದ ಹಲವು ಉಚಿತಗಳ ಗ್ಯಾರಂಟಿಯನ್ನು ಈಗ ಈ ರಾಜ್ಯಗಳಲ್ಲೂ ಘೋಷಿಸಲಾರಂಭಿಸಿದೆ. ಕರ್ನಾಟಕದಲ್ಲಿನ ಗೆಲುವಿನ ತಂತ್ರಗಾರಿಕೆಯನ್ನೇ ಈ ರಾಜ್ಯಗಳಲ್ಲೂ ಅನುಸರಿಸಲು ಕಾಂಗ್ರೆಸ್ ಮುಂದಾಗಿದೆ.
ಈ ಉಚಿತಗಳ ಆಮಿಷದಿಂದಾಗಿಯೇ ಕರ್ನಾಟಕದಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಮನಗಂಡಿರುವ ಬಿಜೆಪಿಯೂ ಉಚಿತ ಭರವಸೆಗಳಿಗೆ ಮೊರೆ ಹೋಗಿದೆ. ಒಟ್ಟಿನಲ್ಲಿ ಈ ಐದು ರಾಜ್ಯಗಳ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆಯಾಯ ರಾಜ್ಯಗಳಲ್ಲಿನ ಸ್ಥಿತಿಗತಿಗಳು, ಸಮಸ್ಯೆಗಳು ಚುನಾವಣ ವಿಷಯಗಳಾಗಿರುವುದರಿಂದ ಲೋಕಸಭೆ ಚುನಾವಣೆ ಮತ್ತು ಈ ಚುನಾವಣೆಗಳಿಗೂ ತಾಳೆ ಹಾಕಲಾಗದು. ಆದರೂ ಈ ಐದು ರಾಜ್ಯಗಳ ಚುನಾವಣೆಯಲ್ಲಿನ ಗೆಲುವು ಪಕ್ಷಗಳ ಪಾಲಿಗೆ ಮುಂಬರುವ ಲೋಕಸಭೆ ಚುನಾವಣೆಗೆ “ಟಾನಿಕ್’ ಆಗಲಿರುವುದಂತೂ ನಿಶ್ಚಿತ.
ಈ ಎಲ್ಲದರ ಮಧ್ಯೆ ಪ್ರತೀ ಚುನಾವಣೆಯಲ್ಲೂ ಹಣಹಂಚಿಕೆ, ಮದ್ಯದ ಹೊಳೆ, ಆಮಿಷಗಳು ಎಗ್ಗಿಲ್ಲದೇ ನಡೆಯುತ್ತವೆ. ಆಯೋಗವು ಸೂಕ್ತ ಕ್ರಮ ತೆಗೆದುಕೊಂಡರೂ ಇವುಗಳ ನಿಯಂತ್ರಣ ಕಷ್ಟಸಾಧ್ಯ ಎಂಬಂತಾಗಿದೆ. ಈ ಚುನಾವ ಣೆಯಲ್ಲಿ ಈ ಎಲ್ಲ ಅಕ್ರಮಗಳು ಮೇಳೈಸದಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.