ಮೊದಲ ಜಂಟಿ ಅಧಿವೇಶನ ಜನರತ್ತ ಗಮನಹರಿಸಿ
Team Udayavani, Feb 6, 2019, 12:30 AM IST
ರಾಜ್ಯದಲ್ಲಿ ಎಂಟು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಜಂಟಿ ಅಧಿವೇಶನ ಮಂಗಳವಾರ ನಡೆಯಲಿದೆ. ಜತೆಗೆ ಶುಕ್ರವಾರ ಬಜೆಟ್ ಸಹ ಮಂಡನೆಯಾಗಲಿದೆ. ಸರ್ಕಾರ ರಚನೆಯಾದಾಗಿನಿಂದಲೇ “ಸ್ಥಿರತೆ’ ಬಗ್ಗೆ ಅನುಮಾನವಂತೂ ಇದ್ದೇ ಇದೆ. ಆಪರೇಷನ್ ಕಮಲ, ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟ, ಸಚಿವ ಸ್ಥಾನ ಸಿಗದ ಅತೃಪ್ತರ ಕಣ್ಣಾ ಮುಚ್ಚಾಲೆ ನಡುವೆಯೇ ಎಂಟು ತಿಂಗಳು ಸರ್ಕಾರ ಪೂರೈಸಿದ್ದೇ ಸಾಧನೆ ಎಂದರೂ ಅತಿಶಯೋಕ್ತಿಯೇನಲ್ಲ. ಮಂಗಳವಾರದಿಂದ ಆರಂಭವಾಗಲಿರುವ ಆಧಿವೇಶನವೂ ಒಂದು ರೀತಿಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯೇ.
ಕಾಂಗ್ರೆಸ್‌ನ ಆರು ಶಾಸಕರು ಇದೇ ಸಂದರ್ಭದಲ್ಲಿ ರಾಜೀನಾಮೆ ನೀಡುತ್ತಾರಂತೆ, ಬಜೆಟ್ ಅನುಮೋದನೆ ಸಮಯದಲ್ಲಿ ಕೆಲವರು ಕೈ ಕೊಡುತ್ತಾರಂತೆ. ಸರ್ಕಾರದ ಪತನಕ್ಕೆ ಬಿಜೆಪಿ ಕಾರ್ಯತಂತ್ರ ರೂಪಿಸಿದೆಯಂತೆ ಎಂಬ ಅಂತೆ ಕಂತೆಗಳೇ ಕೇಳಿಬರುತ್ತಿವೆ. ಕಳೆದ ಒಂದೂವರೆ ತಿಂಗಳಿನಿಂದ ನಿತ್ಯ ಈ ರೀತಿಯ ಊಹಾಪೋಹಗಳಿಗಂತೂ ಬರ ಇಲ್ಲದಂತಾಗಿದೆ.
ರಾಷ್ಟ್ರೀಯ ಕಾರ್ಯಕಾರಿಣಿ ನೆಪದಲ್ಲಿ ಬಿಜೆಪಿ ಶಾಸಕರನ್ನು ಗುರುಗ್ರಾಮದ ಹೋಟೆಲ್‌ನಲ್ಲಿ ವಾರಗಟ್ಟಲೆ ಕೂಡಿಹಾಕಿಕೊಂಡಿದ್ದು, ಇದನ್ನು ನೋಡಿ ಕಾಂಗ್ರೆಸ್‌ನವರು ಈಗಲ್‌ಟನ್ ರೆಸಾರ್ಟ್‌ನಲ್ಲಿ ತಮ್ಮ ಶಾಸಕರನ್ನು ಕಾಯ್ದಿಟ್ಟುಕೊಂಡಿದ್ದು, ಅಲ್ಲೇ ಇಬ್ಬರು ಶಾಸಕರ ನಡುವೆ ಮಾರಾಮಾರಿ ನಡೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ರೀತಿಯಲ್ಲಿ ಕಪ್ಪು ಚುಕ್ಕೆಯೇ ಸರಿ.
ಈ ಎಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾತ್ರ ನಿರಮ್ಮಳರಾಗಿದ್ದು ಒಳ್ಳೆಯ ಬಜೆಟ್ ಮಂಡಿಸಲಿದ್ದೇನೆ. ಕಾಂಗ್ರೆಸ್‌ನ ಅತೃಪ್ತರು ನಿರಂತರವಾಗಿ ನನ್ನ ಸಂಪರ್ಕದಲ್ಲಿದ್ದಾರೆ. ನನಗೇನೂ ಸರ್ಕಾರ ಪತನದ ಆತಂಕವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರಿಗೆ ಆಪರೇಷನ್ ಕಮಲ ಆತಂಕ ಮಾತ್ರ ದೂರವಾಗಿಲ್ಲ. ಕೊನೇ ಕ್ಷಣದವರೆಗೂ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು ನಡೆಸುತ್ತಲೇ ಇದೆ. ವಿಪ್ ಅಸ್ತ್ರವನ್ನೂ ಪ್ರಯೋಗಿಸಿದೆ.
ಹೀಗಾಗಿ, ಸಹಜವಾಗಿ ಏನಾದರೂ ಆಗಲಿದೆಯಾ ಎಂಬ ಕುತೂಹಲವೂ ರಾಜಕೀಯ ವಲಯದಲ್ಲಿ ಇದೆ. 104 ಶಾಸಕರನ್ನು ಹೊಂದಿರುವ ಹಾಗೂ ಇತ್ತೀಚೆಗಷ್ಟೇ ಇಬ್ಬರು ಪಕ್ಷೇತರ ಶಾಸಕರನ್ನು ತನ್ನತ್ತ ಸೆಳೆದಿರುವ ಬಿಜೆಪಿಗೆ 106 ಶಾಸಕರಿದ್ದರೂ ಪ್ರತಿಪಕ್ಷದಲ್ಲಿ ಕೂರುವುದು ಒಂದು ರೀತಿಯಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 118 ರಿಂದ 110ಕ್ಕೆ ಇಳಿದರೂ ಸರ್ಕಾರ ಪತನಗೊಂಡು ನಮ್ಮ ಸರ್ಕಾರ ಬರಬಹುದು ಎಂಬ ಕನಸು ಕಾಣುತ್ತಿದೆ.
ಆದರೆ, ರಾಜಕೀಯದಲ್ಲಿ ಎಲ್ಲ ರೀತಿಯ ಪಟ್ಟು ಕಲಿತಿರುವ ಹಾಗೂ ರಾಜಕಾರಣ ಚೆನ್ನಾಗಿಬಲ್ಲ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೂ ಕಡಿಮೆಯೇನಲ್ಲ. ಲೋಕಸಭೆ ಚುನಾವಣೆವರೆಗಾದರೂ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಹೈಕಮಾಂಡ್ ಸೂಚನೆಯೂ ಇರುವುದರಿಂದ ಕಾಂಗ್ರೆಸ್‌ನ ಕೆಲವು ನಾಯಕರಿಗೆ ಮನಸ್ಸಿಲ್ಲದಿದ್ದರೂ ಸರ್ಕಾರ ರಕ್ಷಣೆ ಮಾಡಲೇ
ಬೇಕಾಗಿದೆ. ಇದರ ನಡುವೆಯೂ ಬಿಜೆಪಿಗೆ ಎಲ್ಲೋ ಒಂದು ಸಣ್ಣ ಭರವಸೆಯೂ ಇದೆ. ಹೀಗಾಗಿ, ಫೆ.15 ರವರೆಗೆ ಸಮ್ಮಿಶ್ರ ಸರ್ಕಾರಕ್ಕೆ ಅಗ್ನಿಪರೀಕ್ಷೆಯಂತಾಗಿದೆ. ಆದರೆ ಪಕ್ಷಗಳ ಸಮಸ್ಯೆಗಳೇ ಜನರ ಸಮಸ್ಯೆಗಳಲ್ಲ ಎನ್ನುವುದನ್ನು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು. ಜನರಿಗೆ ಬೇಕಾಗಿರುವುದು ಉತ್ತಮ ಆಡಳಿತ- ಜನಸ್ನೇಹಿ ನೀತಿಗಳೇ ಹೊರತು ಇವರ ರಾಜಕೀಯ ತಂತ್ರಗಾರಿಕೆಗಳಲ್ಲ. ಸಮ್ಮಿಶ್ರ ಸರ್ಕಾರದ ಮೊದಲ ಜಂಟಿ ಅಧಿವೇಶನ ನಡೆಯಲಿದೆ.
ಈ ಅಧಿವೇಶನ ಸುಸೂತ್ರವಾಗಿ ನಡೆಯಲಿ. ರಾಜ್ಯದ ಜನರನ್ನು ಕಾಡುತ್ತಿರುವ ಸಮಸ್ಯೆಗಳು ಇಲ್ಲಿ ಚರ್ಚೆಯಾಗಲಿ. ಪಕ್ಷಗಳೆಲ್ಲ ಈಗಲಾದರೂ ಸ್ವಹಿತಾಸಕ್ತಿಯನ್ನು ಬಿಟ್ಟು ರಾಜ್ಯದ ಸಮಸ್ಯೆಗಳತ್ತ ನೋಡಲಿ. ಬರದಿಂದ ನಾಡು ಕಂಗೆಟ್ಟಿದೆ, ಜನರು ಗುಳೆ ಹೋಗುತ್ತಿದ್ದಾರೆ, ಸರ್ಕಾರಿ ಶಾಲೆಗಳು ಬಾಗಿಲು ಹಾಕುತ್ತಿವೆ, ಹಲವು ರೋಗಗಳು ಜನಸಾಮಾನ್ಯರನ್ನು ಕಾಡುತ್ತಿವೆ…ಈ ಎಲ್ಲಾ ವಿಷಯಗಳಿಗೆ ಪರಿಹಾರ ಹುಡುಕುವ ಪ್ರಯತ್ನವನ್ನು ಜನನಾಯಕರು ಮಾಡಲಿ ಎನ್ನುವುದೇ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.