National Security Guard: ವಿಐಪಿ ಭದ್ರತೆಯಿಂದ ಎನ್‌ಎಸ್‌ಜಿಗೆ ಮುಕ್ತಿ: ಸಮುಚಿತ ನಿರ್ಧಾರ
Team Udayavani, Oct 18, 2024, 6:20 AM IST
ಅತೀ ಗಣ್ಯ ವ್ಯಕ್ತಿಗಳ ಭದ್ರತಾ ಕಾರ್ಯದಿಂದ ರಾಷ್ಟ್ರೀಯ ಭದ್ರತಾ ದಳದ ಕಮಾಂಡೋಗಳನ್ನು ಮುಕ್ತಿಗೊಳಿಸಲು ಕೇಂದ್ರ ಗೃಹ ಇಲಾಖೆ ತೀರ್ಮಾನಿಸಿದೆ.
ಕಳೆದ ಕೆಲವು ವರ್ಷಗಳಿಂದ ಈ ಸಂಬಂಧ ಚರ್ಚೆಗಳು ನಡೆಯುತ್ತಿದ್ದವಾದರೂ ರಾಜಕೀಯ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಸಂಬಂಧ ಅಂತಿಮ ನಿರ್ಧಾರಕ್ಕೆ ಬರಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೂ ಗೃಹ ಇಲಾಖೆ ದೇಶದಲ್ಲಿನ 9 ಮಂದಿ ಗಣ್ಯರಿಗೆ ನೀಡಲಾಗುತ್ತಿರುವ ಎನ್‌ಎಸ್‌ಜಿ ಬ್ಲ್ಯಾಕ್ ಕಮಾಂಡೋ ಭದ್ರತೆಯನ್ನು ಹಿಂದೆಗೆದುಕೊಳ್ಳುವ ಅತ್ಯಂತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇವರ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಎಲ್ಲ 450 ಬ್ಲ್ಯಾಕ್ ಕಮಾಂಡೋಗಳು ಅವರ ಮೂಲ ಕರ್ತವ್ಯಕ್ಕೆ ಮರಳಲಿರುವುದರಿಂದ ಎನ್‌ಎಸ್‌ಜಿಗೆ ಮತ್ತಷ್ಟು ಬಲ ತುಂಬಿದಂತಾಗಲಿದೆ.
ಕಳೆದೊಂದು ದಶಕದಿಂದ ಗಣ್ಯರು ಮತ್ತು ಅತೀ ಗಣ್ಯ ವ್ಯಕ್ತಿಗಳ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹಲವಾರು ಮಾರ್ಪಾಡುಗಳನ್ನು ಮಾಡುತ್ತಲೇ ಬಂದಿದ್ದು, ಇಂತಹ ವ್ಯಕ್ತಿಗಳ ಸಂಖ್ಯೆಯಲ್ಲಿ ಬಹಳಷ್ಟು ಕಡಿತ ಮಾಡಿದೆ. ಅಷ್ಟು ಮಾತ್ರವಲ್ಲದೆ ಭದ್ರತಾ ವಿಧಾನ ಮತ್ತು ವ್ಯವಸ್ಥೆಯಲ್ಲೂ ಕೆಲವು ಮಹತ್ವದ ಬದಲಾವಣೆ ಮತ್ತು ಸುಧಾರಣೆಗಳನ್ನು ಜಾರಿಗೆ ತಂದಿದೆ. ಈಗ ಕೇಂದ್ರ ಸರಕಾರ ಈ ದಿಸೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ಗಣ್ಯರ ಭದ್ರತಾ ಕಾರ್ಯಕ್ಕೆ ಎನ್‌ಎಸ್‌ಜಿ ಕಮಾಂಡೋಗಳನ್ನು ನಿಯೋಜಿಸದಿರಲು ತೀರ್ಮಾನಿಸಿದೆ.
ಭಯೋತ್ಪಾದಕ ದಾಳಿ, ವಿಮಾನಗಳ ಹೈಜಾಕ್ ಸಹಿತ ಕೆಲವು ಘನಘೋರ ಅಪರಾಧ ಕೃತ್ಯಗಳ ಸಂದರ್ಭದಲ್ಲಿ ನಡೆಸಲಾಗುವ ಕ್ಷಿಪ್ರ ಕಾರ್ಯಾಚರಣೆಗಳಲ್ಲಿ ರಾಷ್ಟ್ರೀಯ ಭದ್ರತಾ ದಳದ ಕಮಾಂಡೋಗಳು ಮಹತ್ತರ ಪಾತ್ರವನ್ನು ನಿರ್ವಹಿಸುತ್ತಾರೆ. ಇಂತಹ ಕಾರ್ಯಾಚರಣೆಗಳಿಗೆಂದೇ ಈ ಕಮಾಂಡೋಗಳಿಗೆ ವಿಶೇಷ ಮತ್ತು ಉನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ. ಇಂತಹ ಸಮರ್ಥ, ಕೌಶಲಭರಿತ ಎನ್‌ಎಸ್‌ಜಿ ಕಮಾಂಡೋಗಳನ್ನು ಗಣ್ಯ ವ್ಯಕ್ತಿಗಾಗಿ ಭದ್ರತೆಗಾಗಿ ನಿಯೋಜಿಸುವುದರಿಂದ ತುರ್ತು ಸಂದರ್ಭಗಳಲ್ಲಿ ಇವರ ಸೇವೆ ಲಭಿಸುವುದು ಕಷ್ಟಸಾಧ್ಯವಾಗುತ್ತದೆ.
ಅಲ್ಲದೆ ಇಂತಹ ಅತ್ಯಾಧುನಿಕ ತರಬೇತಿ ಪಡೆದ ಸಮರ್ಥ ಎನ್‌ಎಸ್‌ಜಿ ಕಮಾಂಡೋಗಳನ್ನು ವ್ಯಕ್ತಿಗಳ ಭದ್ರತಾ ಕಾರ್ಯಗಳಿಗೆ ನಿಯೋಜಿಸುವುದರಿಂದ ಅವರ ಒಟ್ಟಾರೆ ಕಾರ್ಯನಿರ್ವಹಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹೀಗಾದಲ್ಲಿ ತುರ್ತು ಸಂದರ್ಭಗಳಲ್ಲಿ ಇವರು ಪರಿಣಾಮಕಾರಿಯಾಗಿ ಕಾರ್ಯಾಚರಿಸಲು ಸಾಧ್ಯವಾಗಲಾರದು. ಇವೆಲ್ಲವನ್ನು ಪರಿಗಣಿಸಿ ಗೃಹ ಇಲಾಖೆ ಎನ್‌ಎಸ್‌ಜಿ ಕಮಾಂಡೋಗಳನ್ನು ವ್ಯಕ್ತಿಗಳ ಭದ್ರತಾ ಕಾರ್ಯದಿಂದ ಹಿಂದೆಗೆದುಕೊಳ್ಳಲು ತೀರ್ಮಾನಿಸಿದೆ. ಈ ಮೂಲಕ ಎನ್‌ಎಸ್‌ಜಿಯನ್ನು ಪೂರ್ಣಪ್ರಮಾಣದಲ್ಲಿ ದೇಶದ ಭದ್ರತೆ ಮತ್ತು ಭಯೋತ್ಪಾದನೆ ದಮನ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ.
ಇನ್ನು ಮುಂದೆ ಈ 9 ಮಂದಿ ಅತೀ ಗಣ್ಯ ವ್ಯಕ್ತಿಗಳ ಭದ್ರತೆಯನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಭದ್ರತೆಯನ್ನು ನೀಡಲಾಗಿದೆ. ಎನ್‌ಎಸ್‌ಜಿ ಮಾದರಿಯಲ್ಲಿಯೇ ಸಿಆರ್‌ಪಿಎಫ್ ಯೋಧರು ಗಣ್ಯರ ಭದ್ರತಾ ಕಾರ್ಯವನ್ನು ನಿರ್ವಹಿಸಲಿರುವರು. ಗೃಹ ಖಾತೆಯ ಈ ನಿರ್ಧಾರ ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಸೂಕ್ತ ಮತ್ತು ಸಮುಚಿತವಾದುದಾಗಿದೆ. ಆದರೆ ಇದೇ ವೇಳೆ ಸರಕಾರದ ಈ ನಿರ್ಧಾರದಿಂದ ಈ ವ್ಯಕ್ತಿಗಳ ಭದ್ರತೆಯಲ್ಲಿ ಯಾವ ಲೋಪಗಳಾಗದಂತೆ ಕಟ್ಟೆಚ್ಚರ ವಹಿಸಬೇಕು. ಗಣ್ಯ ವ್ಯಕ್ತಿಗಳ ರಾಜಕೀಯ, ಹಿನ್ನೆಲೆ, ಸಿದ್ಧಾಂತಗಳೇನೇ ಇರಲಿ ಹಾಲಿ ಗಣ್ಯರ ಪಟ್ಟಿಯಲ್ಲಿರುವ ವ್ಯಕ್ತಿಗಳ ಭದ್ರತೆಯಲ್ಲಿನ ಸಣ್ಣ ಲೋಪ ಕೂಡ ಬಲು ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇದರ ಕಳಂಕ ಸರಕಾರಕ್ಕೆ ತಟ್ಟಲಿದೆ. ಹೀಗಾಗಿ ಗಣ್ಯರ ಭದ್ರತೆಯ ವಿಷಯದಲ್ಲಿ ಯಾವುದೇ ತಾರತಮ್ಯ, ಲೋಪದೋಷಗಳಾಗದಂತೆ ಗೃಹ ಖಾತೆ ಕಟ್ಟುನಿಟ್ಟಿನ ನಿಗಾ ಇರಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.