ಇಂಧನ ಬೆಲೆ ಏರಿಕೆಯ ಪೆಟ್ಟು ಜನರ ಕಷ್ಟ ಕಾಣದೇ?
Team Udayavani, Jun 27, 2020, 5:59 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್-19ನ ನೇರ ಹಾಗೂ ಪರೋಕ್ಷ ಪರಿಣಾಮಗಳು ದೇಶವಾಸಿಗಳನ್ನು ಕಂಗೆಡಿಸಿವೆ. ಅದರಲ್ಲೂ ಲಾಕ್‌ಡೌನ್ ಸಮಯದಲ್ಲಿ ಆರ್ಥಿಕತೆಯ ಮೇಲೆ ಬಿದ್ದ ಹೊರೆಯು ಅಪಾರವಾದದ್ದು.
ಈ ಪೆಟ್ಟಿನಿಂದ ದೇಶವು ಚೇತರಿಸಿಕೊಳ್ಳಲು ಸಿದ್ಧವಾಗುತ್ತಿರುವ ವೇಳೆಯಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಆಗುತ್ತಿರುವ ಹೆಚ್ಚಳವು ಸಾರ್ವಜನಿಕರನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ.
ಕಳೆದ 20 ದಿನಗಳಿಂದಲೂ ಪೆಟ್ರೋಲ್ ಹಾಗೂ ಡೀಸೆಲ್‌ನ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಆತಂಕ ಹುಟ್ಟಿಸುತ್ತಿರುವ ಸಂಗತಿಯೆಂದರೆ, ಕೆಲವು ರಾಜ್ಯಗಳಲ್ಲಂತೂ ಡೀಸೆಲ್‌ನ ಬೆಲೆ ಪೆಟ್ರೋಲನ್ನೂ ಹಿಂದಿಕ್ಕಿರುವುದು! ಹಾಗೆ ನೋಡಿದರೆ, ಜಾಗತಿಕ ಮಾರುಕಟ್ಟೆಯಲ್ಲೇನೂ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿಲ್ಲ. ಹೀಗಿರುವಾಗ, ದೇಶೀಯ ಮಾರುಕಟ್ಟೆಯಲ್ಲೇಕೆ ಇಂಧನ ಬೆಲೆ ಏರಿಕೆಯಾಗುತ್ತಲೇ ಇದೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಪರಿಣಾಮವು ಏಕ ಆಯಾಮ ದಲ್ಲಷ್ಟೇ ಇರುವುದಿಲ್ಲ. ಇಂಧನ ಬೆಲೆ ಏರಿಕೆಯು ಸಹಜವಾಗಿಯೇ ಸಾರಿಗೆ ವ್ಯವಸ್ಥೆಗೆ, ಮುಖ್ಯವಾಗಿ ಸರಕು-ಸಾಗಣೆ ವಲಯಕ್ಕೆ ಪೆಟ್ಟು ನೀಡುತ್ತದೆ. ತತ್ಪರಿಣಾಮವಾಗಿ ಅಗತ್ಯವಸ್ತುಗಳು ಸೇರಿದಂತೆ ಸರಿಸುಮಾರು ಎಲ್ಲದರ ಬೆಲೆ ಏರಿಕೆಗೂ ಇದು ಕಾರಣವಾಗುತ್ತದೆ.
ಅದರಲ್ಲೂ ಕೃಷಿ ವಲಯವೂ ಒಂದಲ್ಲ ಒಂದು ರೀತಿಯಲ್ಲಿ ಡೀಸೆಲ್‌ನ ಮೇಲೆ ಅವಲಂಬಿತವಾಗಿದೆ. ಆದರೆ, ಹೀಗೆ ಡೀಸೆಲ್ ಬೆಲೆಯು ಪೆಟ್ರೋಲ್‌ಗೆ ಸರಿಸಮನಾಗಿ ಓಡುತ್ತಿರುವುದರಿಂದ, ಈ ವಲಯಗಳಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿ ಬದಲಾಗುತ್ತದೆ. ಇದರ ಪರಿಣಾವನ್ನು ಎಲ್ಲರೂ ಎದುರಿಸಲೇಬೇಕಾಗುತ್ತದೆ.
ಲಾಕ್‌ಡೌನ್ ನಂತರದಿಂದ ಅನೇಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ದಿನ ಬೆಳಗಾ ಗುವುದರಲ್ಲಿ ನಿರುದ್ಯೋಗಿಗಳಾದವರೆಷ್ಟೋ ತಿಳಿಯದು. ಉದ್ಯೋಗ ವಲಯ ತತ್ತರಿಸಿದೆ, ಎಂಎಸ್‌ಎಂಇಗಳೂ ಚೇತರಿಸಿಕೊಳ್ಳಲು ಸಮಯ ಹಿಡಿಯಲಿದೆ. ಜನರ ಖರೀದಿ ಸಾಮರ್ಥ್ಯದಲ್ಲಿ ಭಾರೀ ಕುಸಿತ ಕಾಣಿಸಿಕೊಂಡಿದೆ.
ಈ ಹಿಂದೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತ ಗೊಳಿಸುವಾಗ ಸರಕಾರ, ಇದರ ಒಟ್ಟಾರೆ ಪ್ರಯೋಜನವು ಗ್ರಾಹಕರಿಗೇ ಸಿಗಲಿದೆ ಎಂದು ಹೇಳಿತ್ತು. ಆದರೆ, ಅಂತಾರಾಷ್ಟ್ರೀಯ ಸ್ತರದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಕುಸಿತವಾದರೂ ಸಹ, ಸಾರ್ವಜನಿಕರಿಗೆ ಇದರ ಪ್ರಯೋಜನವೇನೂ ಸಿಗುತ್ತಲೇ ಇಲ್ಲ. ನಿರುದ್ಯೋಗ, ಆರ್ಥಿಕ ಬಿಕ್ಕಟ್ಟಿನ ಈ ಸಮಯದಲ್ಲಿ ಬೆಲೆ ಏರಿಕೆಯೂ ಜತೆಯಾದರೆ, ಜನಸಾಮಾನ್ಯರ ಪರಿಸ್ಥಿತಿ ಚಿಂತಾಜನಕವಾಗುತ್ತದೆ ಎನ್ನುವುದು ಆಳುವವರು ಮರೆಯಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.