ಸಾರ್ವಜನಿಕ ಗಣೇಶೋತ್ಸವ ನಿರ್ಧಾರ ತಡವೇಕೆ?
Team Udayavani, Aug 31, 2021, 6:00 AM IST
ಕೊರೊನಾ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಜನ ಸಂಕಷ್ಟದಲ್ಲೇ ಕಾಲ ಕಳೆಯುತ್ತಿದ್ದಾರೆ. ಈಗ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಅವರಲ್ಲಿ ಮಾನಸಿಕವಾಗಿಯೂ ಧೈರ್ಯ ತುಂಬ
ಬೇಕಾದ ಕೆಲಸವೂ ಸರಕಾರದ ಮುಂದೆಯೇ ಇದೆ. ಕೊರೊನಾ ಬಗ್ಗೆ ಹೆದರಿಕೆ ಬೇಡ, ಮುನ್ನೆಚ್ಚರಿಕೆ ಅಗತ್ಯ ಎಂದು ಎಷ್ಟು ಬಾರಿ ಹೇಳಿದರೂ, ಕೇಳುವ ಸ್ಥಿತಿಯಲ್ಲಿ ಜನರೂ ಇಲ್ಲ. ಇದಕ್ಕೆ ಕಾರಣ ಮೊದಲ ಎರಡು ಅಲೆಗಳು. ಅದರಲ್ಲೂ ಎರಡನೇ ಅಲೆ ಸಂದರ್ಭದಲ್ಲಂತೂ ಜನ ಕೊರೊನಾದಿಂದಾಗಿ ಅತೀ ಹೆಚ್ಚು ಭಯಭೀತರಾಗಿದ್ದರು.
ಸದ್ಯ ಜನರ ಭೀತಿ ಹೋಗಲಾಡಿಸಲು ಅದೆಷ್ಟೇ ಮಾನಸಿಕ ವೈದ್ಯರ ಬಳಿ ಸಮಾಲೋಚನೆ ನಡೆಸಿದರೂ ಒಂದೇ ಬಾರಿಗೆ ಧೈರ್ಯ ಬರಲು ಸಾಧ್ಯವಿಲ್ಲ. ಇದರ ಬದಲಾಗಿ ಜನ ನಂಬುವಂಥ ಆಚರಣೆಗಳನ್ನು ಮಾಡಿಕೊಂಡು, ದೇವರ ಪೂಜೆಯಲ್ಲೋ ಅಥವಾ ಇನ್ನಿತರ ಹಬ್ಬಗಳಲ್ಲೋ ಕಾಲ ಕಳೆಯುವಂತೆ ಮಾಡಬೇಕು. ಅದು ಯಾವ ಧರ್ಮದವರೇ ಆಗಿರಲಿ, ದೇವರ ಮೇಲಿನ ಒಂದು ನಂಬುಗೆ ಮಾನಸಿಕವಾಗಿ ಜನರನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯವಿದೆ.
ರಾಜ್ಯ ಸರಕಾರದ ಅಂಕಿ ಅಂಶಗಳೇ ಹೇಳುವ ಲೆಕ್ಕದಲ್ಲಿ ರಾಜ್ಯದಲ್ಲಿ ಕೊರೊನಾ ಸ್ಥಿತಿ ಒಂದಷ್ಟು ಸ್ಥಿರವಾಗಿದೆ. ಕೇರಳದಂತೆ ಅಥವಾ ಮಹಾರಾಷ್ಟ್ರದಂತೆ ಹೆಚ್ಚಾಗಿಲ್ಲ. ಇತ್ತೀಚೆಗಷ್ಟೇ ನಡೆದ ವರಮಹಾಲಕ್ಷ್ಮೀ ಹಬ್ಬದ ವೇಳೆ ಕೊರೊನಾ ಹೆಚ್ಚಾಗುವ ಭೀತಿ ಇತ್ತು. ಆದರೆ ಈಗ ಆ ಭೀತಿಯೂ ಕಳೆದಿದೆ. ಇಂಥ ಸಂದರ್ಭದಲ್ಲಿ ಜನರ ಬೇಡಿಕೆಯಂತೆ ಗಣೇಶೋತ್ಸವಕ್ಕೆ ಒಪ್ಪಿಗೆ ನೀಡಬಹುದಾಗಿತ್ತು. ಸೋಮವಾರ ಈ ಸಂಬಂಧವೇ ಚರ್ಚೆ ನಡೆಸುವ ಸಲುವಾಗಿ ಸಭೆ ಕರೆದು, ಕಡೆಗೆ ಗಣೇಶೋತ್ಸವದ ಬಗ್ಗೆ ನಿರ್ಧಾರ ತೆಗೆದುಕೊಳ್ಳದೇ ದಿನವನ್ನು ಮುಂದಕ್ಕೆ ಹಾಕಿದ್ದು ಸರಿಯಲ್ಲ. ಗಣೇಶೋತ್ಸವಕ್ಕೆ ಇನ್ನು ಐದು ದಿನ ಇರುವಾಗ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುವುದು ತಕ್ಕುದಲ್ಲ.
ಗಣೇಶೋತ್ಸವ ಕೇವಲ ಆಚರಣೆಯಲ್ಲ ಅಥವಾ ಹಬ್ಬ ಅಲ್ಲ. ಈ ಸಂದರ್ಭದಲ್ಲಿ ಆರ್ಥಿಕತೆಗೆ ಚೇತರಿಕೆ ಮಾಡುವಂಥ ಬೆಳವಣಿಗೆಗಳೂ ನಡೆಯುತ್ತವೆ. ಈಗಾಗಲೇ ಕೊರೊನಾ ಲಾಕ್‌ಡೌನ್‌ಗೆ ಸಿಲುಕಿ ವ್ಯಾಪಾರಸ್ಥರು ನಲುಗಿದ್ದಾರೆ. ಈ ವೇಳೆಯಲ್ಲಾದರೂ ಒಂದಷ್ಟು ವ್ಯಾಪಾರ- ವಹಿವಾಟು ಮಾಡಿಕೊಳ್ಳುತ್ತಿದ್ದರು. ಈಗ ಸೆ.5ನೇ ತಾರೀಕು ಸಾರ್ವಜನಿಕ ಗಣೇಶೋತ್ಸವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ವ್ಯಾಪಾರಸ್ಥರಿಗೆ ದೃಢವಾದ ನಿರ್ಧಾರ ತೆಗೆದುಕೊಳ್ಳದಂತೆ ಮಾಡಲಾಗಿದೆ. ಈಗಲೇ ನಿರ್ಧಾರ ತೆಗೆದುಕೊಂಡಿದ್ದರೆ ಸಮಂಜಸವಾಗಿರುತ್ತಿತ್ತು.
ಇನ್ನು ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಕಡ್ಡಾಯ ಕ್ವಾರಂಟೈನ್ ಮತ್ತು ಪರೀಕ್ಷೆಯಂಥ ನಿರ್ಧಾರವನ್ನು ಈಗ ತೆಗೆದುಕೊಳ್ಳಲಾಗಿದೆ. ಇದೂ ತೀರಾ ತಡವಾದ ನಿರ್ಧಾರ. ಈಗಾಗಲೇ ಹಾಸನ ಮತ್ತು ಕೋಲಾರದಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಹೆಚ್ಚು ಕೊರೊನಾ ಕಾಣಿಸಿಕೊಂಡಿದೆ. ಮೊದಲೇ ಕಠಿನವಾದ ನಿರ್ಧಾರ ತೆಗೆದುಕೊಂಡಿದ್ದರೆ ಸೋಂಕು ಹರಡುವುದನ್ನಾದರೂ ತಪ್ಪಿಸಬಹುದಾಗಿತ್ತು.
ಇದರ ನಡುವೆಯೇ ದಿನ ಬಿಟ್ಟು ದಿನ 6ರಿಂದ 8ನೇ ತರಗತಿ ಶಾಲೆ ತೆರೆಯಲು ಒಪ್ಪಿಗೆ ಕೊಟ್ಟಿರುವುದು ಸರಿಯಾದ ನಿರ್ಧಾರ. ಆದರೆ ಎಲ್ಲ ಕೊರೊನಾ ನಿಯಮಾವಳಿಗಳನ್ನು ಪಾಲಿಸಬೇಕಾದುದು ಸರಕಾರದ ಮತ್ತು ಜನರ ಆದ್ಯ ಕರ್ತವ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.