ಸೀಮಿತ ಚೌಕಟ್ಟು ಇದ್ದರೆ ಒಳ್ಳೆಯದು: ಮುಗಿಯದ ಆಧಾರ್ ಗೊಂದಲ
Team Udayavani, Nov 1, 2017, 12:34 PM IST
ಆಧಾರ್‌ಗೆ ಸಂಬಂಧಿಸಿದಂತೆ ಸರಕಾರ ಮತ್ತು ಸರ್ವೋಚ್ಚ ನ್ಯಾಯಾಲಯದ ನಡುವೆ ನಡೆಯುತ್ತಿರುವ ಸಂಘರ್ಷ ನಿರ್ಣಾಯಕ ಹಂತ ತಲುಪಿದೆ. ಸರಕಾರದ ವಿವಿಧ ಸೌಲಭ್ಯಗಳು ಮತ್ತು ಸೇವೆಗಳನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ದೂರುಗಳ ಗುತ್ಛವನ್ನು ವಿಚಾರಣೆಗೊಳಪಡಿಸಲು ಸುಪ್ರೀಂ ಕೋರ್ಟ್ ಸಂವಿಧಾನ ಪೀಠವನ್ನು ರಚಿಸುವುದರೊಂದಿಗೆ ಆಧಾರ್ ಕುರಿತಾಗಿರುವ ಗೊಂದಲಗಳು ಬಗೆಹರಿಯುವ ಸಾಧ್ಯತೆ ಗೋಚರಿಸಿದೆ. ಆಧಾರ್ ವಿವಾದ ಖಾಸಗಿತನದ ಹಕ್ಕಿನ ಜತೆಗೆ ತಳಕು ಹಾಕಿಕೊಳ್ಳುವುದರೊಂದಿಗೆ ಈ ವಿವಾದಕ್ಕೀಗ ಹೊಸ ಆಯಾಮ ದೊರಕಿದೆ. ಕೆಲ ಸಮಯದ ಹಿಂದೆ ಸುಪ್ರೀಂ ಕೋರ್ಟ್ ಖಾಸಗಿತನ ಮೂಲಭೂತ ಹಕ್ಕು ಎಂದು ತೀರ್ಪು ನೀಡಿದೆ. ಅನಂತರ ಆಧಾರ್‌ನಿಂದಾಗಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ.
ಈ ಕುರಿತು ಸುಪ್ರೀಂ ಕೋರ್ಟ್ ನೀಡುವ ತೀರ್ಪು ಆಧಾರ್‌ನ ಭವಿಷ್ಯವನ್ನು ನಿರ್ಧರಿಸಲಿದೆ. ಆಧಾರ್ ಮಾಡಿಸಿಕೊಳ್ಳುವಾಗ ಬೆರಳಚ್ಚು, ಕಣ್ಣಿನ ಅಕ್ಷಿಪಟಲದಂತಹ ದೈಹಿಕ ಗುರುತುಗಳನ್ನು ನೀಡುವ ವಿಚಾರವೂ ಭಾರೀ ಚರ್ಚೆಗೊಳಗಾಗಿದೆ. ಜನರಿಗೆ ಅವರ ದೇಹದ ಮೇಲೆ ಪರಿಪೂರ್ಣ ಹಕ್ಕು ಇದೆಯೇ ಇಲ್ಲವೇ ಎನ್ನುವುದು ಕೂಡ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗಬೇಕಾಗಿದೆ. ಜನರು ತಮ್ಮ ದೇಹದ ಮೇಲೆ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ. ಭದ್ರತೆಯ ಕಾರಣಗಳಿಗಾಗಿ ದೇಹಗಳನ್ನು ಬಳಸಿಕೊಳ್ಳುವ ಅಧಿಕಾರ ಸರಕಾರಕ್ಕಿದೆ ಎಂದು ಸರಕಾರ ಇತ್ತೀಚೆಗೆ ಸುಪ್ರೀಂ ಕೋರ್ಟಿನಲ್ಲಿ ವಾದಮಂಡಿಸಿದೆ. ಅನಂತರ ಹಣಕಾಸು ಸಚಿವ ಅರುಣ್ ಜೈಟ್ಲೀ ಇದು ವಾದವನ್ನು ಪುಷ್ಟೀಕರಿಸಲು ನೀಡಿದ ಉದಾಹರಣೆ ಎಂದು ತೇಲಿಸಿದ್ದರೂ ಜನರಿಗೆ ತಮ್ಮ ಶರೀರದ ಮೇಲಿನ ಪರಿಪೂರ್ಣ ಹಕ್ಕಿನ ಗೊಂದಲವನ್ನು ಈ ವಾದ ಸೃಷ್ಟಿಸಿದೆ.
ಹಿಂದಿನ ಯುಪಿಎ ಸರಕಾರ ರಾಷ್ಟ್ರೀಯ ಭದ್ರತೆಗಾಗಿ ಜನರಿಗೆ ಸಮಗ್ರವಾದ ಗುರುತಿನ ಕಾರ್ಡು ನೀಡಲು ಪ್ರಾರಂಭಿಸಿದ ಆಧಾರ್ ಯೋಜನೆ ಈಗ ಜನರ ಬದುಕನ್ನು ನಿರ್ದೇಶಿಸುವ ಹಂತಕ್ಕೆ ಬಂದು ತಲುಪಿದೆ. ಪಡಿತರ, ಪಿಂಚಣಿ ಸೇರಿದಂತೆ ಹಲವು ಸೇವೆ, ಸೌಲಭ್ಯ ಮತ್ತು ಜನ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಇದರ ಜತೆಗೆ ಬ್ಯಾಂಕ್ ಖಾತೆ, ಪಾನ್ ಕಾರ್ಡ್, ಭವಿಷ್ಯ ನಿಧಿ ಖಾತೆ, ಮೊಬೈಲ್ ನಂಬರ್ ಇತ್ಯಾದಿಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದೀಗ ಖಾಸಗಿಯವರೂ ಕೂಡ ಆಧಾರ್ ನಂಬರ್ ಕೇಳತೊಡಗಿದ್ದಾರೆ. ಶಾಲೆಗಳಿಗೆ ಮಕ್ಕಳನ್ನು ಸೇರಿಸುವಾಗ ಆಧಾರ್ ನಂಬರ್ ನೀಡುವುದನ್ನು ಹಲವು ಶಾಲೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಆರಂಭದಲ್ಲಿ ಆಧಾರ್ ಮಾಡಿಸಿಕೊಳ್ಳಲು ಜನರು ಇನ್ನಿಲ್ಲದ ಕಷ್ಟ ಅನುಭವಿಸಿದ್ದರು. ಈಗ ಸರಕಾರ ಆಧಾರ್ ಲಿಂಕ್ ಮಾಡುವ ನೆಪದಲ್ಲಿ ಜನರನ್ನು ಗೋಳು ಹೊಯ್ದುಕೊಳ್ಳುತ್ತಿದೆ. ಒಟ್ಟಾರೆಯಾಗಿ ಆಧಾರ್‌ನಿಂದಾಗಿ ಜನರ ಸಂಕಷ್ಟ ಹೆಚ್ಚಿದೆಯೇ ಹೊರತು ಕಡಿಮೆಯಾಗಿಲ್ಲ. ಪಡಿತರಕ್ಕೆ ಆಧಾರ್ ಕಡ್ಡಾಯ ಮಾಡಿದ ಬಳಿಕ ಹಲವೆಡೆ ಜನರಿಗೆ ಪಡಿತರವೇ ಸಿಗದಂತಹ ಪರಿಸ್ಥಿತಿ ಉಂಟಾಗಿದೆ. ಜಾರ್ಖಂಡ್‌ನಲ್ಲಿ ಇತ್ತೀಚೆಗೆ ಬಾಲಕಿಯೊಬ್ಬಲು ಹಸಿವೆಯಿಂದ ಮೃತಪಟ್ಟಾಗ ಆಧಾರ್‌ನ ಈ ಕರಾಳ ಮುಖ ಬೆಳಕಿಗೆ ಬಂದಿದೆ. ಆಧಾರ್ ಲಿಂಕ್ ಆಗದ ಕಾರಣ ಈ ಕುಟುಂಬಕ್ಕೆ ಕೆಲ ವಾರಗಳಿಂದ ಪಡಿತರ ಸಿಕ್ಕಿರಲಿಲ್ಲ. ಇದರಿಂದಾಗಿ ಉಪವಾಸ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ. ಆದರೆ ಸರಕಾರ ಇದನ್ನು ಕಾಯಿಲೆಯಿಂದ ಸಂಭವಿಸಿದ ಸಾವು ಎಂದು ಹೇಳಿ ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಬೇರೆ ವಿಷಯ.
ಜನರ ಪ್ರತಿಯೊಂದಕ್ಕೂ ಆಧಾರ್ ಲಿಂಕ್ ಕಡ್ಡಾಯ ಮಾಡುವುದು ಒಂದು ರೀತಿಯಲ್ಲಿ ಮೂರ್ಖ ನಿರ್ಧಾರದಂತೆ ಕಾಣಿಸುತ್ತದೆ. ಉದಾಹರಣೆಗೆ ಹೇಳುವುದಾದರೆ ಬ್ಯಾಂಕ್ ಖಾತೆಗೆ ಮತ್ತು ಪಾನ್ ನಂಬರ್ ಎರಡಕ್ಕೂ ಆಧಾರ್ ಲಿಂಕ್ ಮಾಡುವುದು ಏಕೆ? ಈಗಾಗಲೇ ಪಾನ್‌ಗೆ ಆಧಾರ್ ಲಿಂಕ್ ಆಗಿದೆ. ಬ್ಯಾಂಕ್ ಖಾತೆಗೆ ಪಾನ್ ಲಿಂಕ್ ಆಗಿರುತ್ತದೆ. ತಂತ್ರಜ್ಞಾನವನ್ನು ಬಳಸಿ ಯಾವುದಾದರೊಂದರಿಂದ ಆಧಾರ್ ಲಿಂಕ್ ಮಾಡಿಕೊಳ್ಳಬಹುದಲ್ಲವೆ? ಇದಕ್ಕಾಗಿ ಜನರು ಮತ್ತೂಮ್ಮೆ ಬ್ಯಾಂಕಿಗೆ ಅಲೆದಾಡುವಂತೆ ಮಾಡುವುದು ಏಕೆ? ತಂತ್ರಜ್ಞಾನ ಇಷ್ಟು ಮುಂದುವರಿದಿರುವಾಗ ಯಾವುದಾದರೊಂದು ಕಡೆ ಇರುವ ಆಧಾರ್ ನಂಬರನ್ನು ಉಳಿದೆಡೆ ಉಪಯೋಗಿಸಿಕೊಳ್ಳುವುದು ಸರಳ ಕೆಲಸ. ಆದರೆ ಸರಕಾರ ಪ್ರತಿ ಸಲ ಜನರೇ ಸ್ವತಃ ಹೋಗಿ ಆಧಾರ್ ಲಿಂಕ್ ಮಾಡಿಸಿಕೊಂಡು ಬರಲು ಹೇಳಿ ಇನ್ನಿಲ್ಲದ ಕಾಟ ಕೊಡುತ್ತಿದೆ.
ಆಧಾರ್‌ಗೆ ನೀಡಿದ ಮಾಹಿತಿಗಳು ಸಂಪೂರ್ಣ ಸುರಕ್ಷಿತವಲ್ಲ ಎನ್ನುವುದು ಇತ್ತೀಚೆಗೆ ಸಾಬೀತಾಗಿದೆ. ಸರಕಾರದ ಇಲಾಖೆಗಳಿಂದ ಆಧಾರ್ ಮಾಹಿತಿ ಸೋರಿ ಹೋಗಿರುವುದು ವರದಿಯಾಗಿತ್ತು. ಅಂತೆಯೇ ನಕಲಿ ಆಧಾರ್ ಕಾರ್ಡ್ ಸೃಷ್ಟಿಯೂ ದೊಡ್ಡ ಕಷ್ಟದ ಕೆಲಸವಲ್ಲ. ಹೀಗಾಗಿ ರಾಷ್ಟ್ರೀಯ ಭದ್ರತೆಗಾಗಿ ಆಧಾರ್ ಎನ್ನುವ ಪರಿಕಲ್ಪನೆ ವಿಫಲಗೊಂಡಿದೆ. ಹಾಗೆಂದು ಆಧಾರ್ ಬೇಡವೇ ಬೇಡ ಎಂದು ಅಲ್ಲ. ಆದರೆ ಅದರ ಬಳಕೆಗೆ ಒಂದು ಸೀಮಿತ ಚೌಕಟ್ಟು ಇದ್ದರೆ ಒಳ್ಳೆಯದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.