ಯೋಜನಾಬದ್ಧ, ಸುಸ್ಥಿರ ಅಭಿವೃದ್ಧಿಯತ್ತ ಗಮನವಿರಲಿ
Team Udayavani, May 19, 2022, 6:00 AM IST
ಇತ್ತೀಚಿನ ದಶಕಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ “ಹವಾಮಾನ ವೈಪರೀತ್ಯ’ ಎಂದರೆ ಬಹುಶಃ ಇದೇ ಇರಬೇಕು. ಬಿಸಿಲು ಧಗಧಗಿಸುವ ಸಮಯದಲ್ಲಿ ದಾಖಲೆ ಪ್ರಮಾಣದ ಮಳೆಯಾಗುತ್ತಿದೆ. ಇಡೀ ತಿಂಗಳಲ್ಲಿ ಸುರಿಯಬೇಕಾದ ಮಳೆ ಬರೀ 24 ಗಂಟೆಗಳಲ್ಲಿ ಬೀಳುತ್ತಿದೆ. ಬೆಂಗಳೂರಿನ ಬಹುತೇಕ ಪ್ರದೇಶಗಳು ಈಜುಕೊಳಗಳಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು ಇಲ್ಲಿ ಒಂದು ಉದಾಹರಣೆ ಅಷ್ಟೇ. ಮಳೆಗಾಲಕ್ಕೆ ನಾವು ಎಷ್ಟರಮಟ್ಟಿಗೆ ಸಜ್ಜಾಗಿದ್ದೇವೆ ಎಂಬುದನ್ನು ಒಂದೇ ರಾತ್ರಿಯಲ್ಲಿ ವರುಣ ಬಯಲು ಮಾಡಿದ್ದಾನೆ. ಇದು ಒಂದು ದಿನದ ಕತೆ ಅಲ್ಲ; ಪ್ರತಿ ವರ್ಷ ಮಳೆಗಾಲದಲ್ಲೂ ರಾಜ್ಯದಲ್ಲಿ 70ರಿಂದ 80 ಜನರ ಸಾವು, ನೂರಾರು ಜಾನುವಾರುಗಳು ಬಲಿ, ನೂರಾರು ಹೆಕ್ಟೇರ್ ಬೆಳೆ, ಆಸ್ತಿಪಾಸ್ತಿಗೆ ಹಾನಿ ಮಾಮೂಲಾಗಿದೆ. ಕಳೆದ ಎರಡು ದಶಕಗಳಲ್ಲಂತೂ ಇದರ ಪ್ರಮಾಣ ಹೆಚ್ಚಿದೆ. ಉತ್ತರ ಕರ್ನಾಟಕ, ಮಲೆನಾಡು ಹೀಗೆ ಪ್ರತಿ ವರ್ಷ ಒಂದಿಲ್ಲೊಂದು ಪ್ರದೇಶ ತುತ್ತಾಗುತ್ತಲೇ ಇದೆ.
ಹಾಗೆಂದು ಇದರ ನಿಯಂತ್ರಣಕ್ಕೆ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದಲ್ಲ. ಮಳೆಯ ಜತೆಗೆ ಇಂತಹ ಪ್ರದೇಶದಲ್ಲೇ ಸಿಡಿಲು ಬೀಳಲಿದೆ ಅಥವಾ ನೆರೆ ಉಂಟಾಗಲಿದೆ ಎಂಬುದರ ಬಗ್ಗೆ ಮೊಬೈಲ್‌ಗೇ ಸಂದೇಶ ಬರು ವಂತಹ ತಂತ್ರಜ್ಞಾನ ನಮ್ಮಲ್ಲಿದೆ. ಆದಾಗ್ಯೂ ಸಾವು-ನೋವುಗಳು ತಪ್ಪಿಲ್ಲ ಹಾಗೂ ಆಸ್ತಿಪಾಸ್ತಿ ಹಾನಿಯೂ ತಗ್ಗಿಲ್ಲ. ಕೇವಲ ಒಂದೂವರೆ ತಿಂಗಳಲ್ಲಿ 56 ಜನ ಸಾವನ್ನಪ್ಪಿದ್ದು, 702 ಜಾನುವಾರುಗಳು ಬಲಿ ಆಗಿವೆ. 3,752 ಮನೆಗಳು ಹಾನಿಯಾಗಿವೆ. ಹಾಗಿದ್ದರೆ, ಎಡವುತ್ತಿರುವುದು ಎಲ್ಲಿ? ಒಂದು ದಿನದ ಹಿಂದಷ್ಟೇ ಸೂಚನೆ ಇದ್ದಾಗ್ಯೂ ಚಿತ್ರದುರ್ಗದಲ್ಲಿ 150ಕ್ಕೂ ಹೆಚ್ಚು ಕುರಿಗಳ ಬಲಿ ಯಾಕಾಯಿತು? ದಿಢೀರ್ ನೆರೆಯ ಮುನ್ಸೂಚನೆ ಇದ್ದರೂ ಬೆಂಗಳೂರಿನ ಕೆಲವು ಭಾಗಗಳು ಜಲಾವೃತಗೊಂಡು ಅಸ್ತವ್ಯಸ್ತಗೊಂಡಿದ್ದು ಯಾಕೆ? ಈ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಆಗಬೇಕಿದೆ.
ರಾಜ್ಯದಲ್ಲಿ ನೆರೆಭೀತಿ ಎದುರಿಸುತ್ತಿರುವ ಸುಮಾರು 208 ಹಳ್ಳಿಗಳನ್ನು ಗುರುತಿಸಲಾಗಿದೆ. ನಗರದಲ್ಲಿ ಇಂತಹ 84 ಪ್ರದೇಶಗಳಿವೆ. ಅವುಗಳ ಬಗ್ಗೆ ನಿರಂತರವಾಗಿ ಸಂಬಂಧಪಟ್ಟ ಪಂಚಾಯತ್ ಅಥವಾ ಅಧಿಕಾರಿ ವರ್ಗಕ್ಕೆ ಸಂದೇಶ ಹೋಗುತ್ತದೆ. ಅಲ್ಲಿಂದ ಸಂತ್ರಸ್ತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ; ತಲುಪಿದರೂ ಆ ಸಂದೇಶದ ಬಗ್ಗೆ ನಿರ್ಲಕ್ಷ್ಯ ಧೋರಣೆ ಇದೆ. ಆದ್ದರಿಂದ ಮುಖ್ಯವಾಗಿ ಈ ಸಂಬಂಧ ಅರಿವು ಮೂಡಿಸುವ ಕೆಲಸ ಆಗಬೇಕಿದೆ.
ಪ್ರತೀ ವರ್ಷ ನೆರೆಗೆ ತುತ್ತಾಗುವ ಪ್ರದೇಶದಲ್ಲಿ ಸ್ವತಃ ಸರಕಾರವೇ ವಿವಿಧ ವಸತಿ ಯೋಜನೆಗಳಡಿ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುತ್ತದೆ. ಮತ್ತೂಂದೆಡೆ ಅದೇ ಫಲಾನುಭವಿಗಳನ್ನು ನೆರೆ ಭೀತಿ ಹಿನ್ನೆಲೆಯಲ್ಲಿ ಒಕ್ಕಲೆಬ್ಬಿಸುವ ಉದಾಹರಣೆಗಳೂ ಇವೆ. ಈ ಮಧ್ಯೆ ಎಷ್ಟೋ ಕಡೆ ಆಶ್ರಯ ಮನೆಗಳನ್ನು ನಿರ್ಮಿಸಿದರೂ ಅವು ವಾಸಯೋಗ್ಯವಿಲ್ಲ. ಮೂಲಸೌಕರ್ಯ ಗಳೂ ಅಷ್ಟಕ್ಕಷ್ಟೇ. ಸರಕಾರದ ಈ ಧೋರಣೆಗಳು ಕೂಡ ಬದಲಾಗಬೇಕಿದೆ. ಆಗ ಜನರ ಮನಃಸ್ಥಿತಿಯೂ ಬದಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವ ಹಣ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣ ಪಡೆಗಳ ಮಾದರಿಯಲ್ಲೇ ಪಂಚಾಯತ್ ಮಟ್ಟದಲ್ಲಿ ಸ್ವಯಂಸೇವಕರನ್ನಾಗಿ ತಯಾರು ಮಾಡಿ, ಸ್ಥಳೀಯ ವಾಗಿಯೇ ನೆರೆ ಹಾವಳಿಯ ಪರಿಣಾಮಗಳನ್ನು ತಗ್ಗಿಸುವ ಪ್ರಯತ್ನಗಳು ಆಗಬೇಕು. ಇದಕ್ಕಾಗಿ ಕೇಂದ್ರ ಸರಕಾರವು ಆಪ್ತಮಿತ್ರ ಯೋಜನೆ ಅಡಿ ಪ್ರತ್ಯೇಕ ವಾಗಿ ಅನುದಾನ ನೀಡುತ್ತಿದೆ.
ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ಕೊಳ್ಳಬೇಕು. ಜತೆಗೆ ಬೆಂಗಳೂರಿನಂತಹ ಮಹಾನಗರದಲ್ಲಿನ “ದಿಢೀರ್ ನೆರೆ’ಗೆ ಒತ್ತುವರಿಯ ಕೊಡುಗೆ ದೊಡ್ಡದಿದೆ. ಅವುಗಳ ತೆರವು ಕಾರ್ಯ ಆಗಬೇಕು. ಮುಂದಿನ ದಿನಗಳಲ್ಲಾದರೂ ಯೋಜನಾಬದ್ಧ ಮತ್ತು ಸುಸ್ಥಿರ ಅಭಿವೃದ್ಧಿಗೆ ಗಮನಹರಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.