ಐತಿಹಾಸಿಕ ದಿಟ್ಟ ನಡೆ
Team Udayavani, Aug 6, 2019, 3:00 AM IST
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಗೊಳಿಸಿರುವುದು ಐತಿಹಾಸಿಕ ನಡೆ. ಈ ಮೂಲಕ ಮೋದಿ ನೇತೃತ್ವದ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯನ್ನು ಮಾತ್ರ ಈಡೇರಿಸಿಲ್ಲ, ಬಹುದೊಡ್ಡ ಐತಿಹಾಸಿಕ ಪ್ರಮಾದವೊಂದನ್ನು ಕೂಡಾ ಸರಿಪಡಿಸಿದೆ. ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಳ್ಳಲು ರೂಪಿಸಿದ ಯೋಜನೆ ಅತ್ಯಂತ ವ್ಯವಸ್ಥಿತವಾಗಿತ್ತು.
ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡೇ ಸರಕಾರ ರಂಗಕ್ಕಿಳಿದಿರುವುದು ಅದರ ನಡೆಯಿಂದ ಸ್ಪಷ್ಟವಾಗುತ್ತದೆ. ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಹೀಗೊಂದು ಬಹುದೊಡ್ಡ ನಿರ್ಧಾರವನ್ನು ಕೈಗೊಂಡ ಮೋದಿ ಸರಕಾರವನ್ನು ಅಭಿನಂದಿಸಲೇಬೇಕು. ಇದರ ಶ್ರೇಯಸ್ಸಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರೂ ಸಮಾನ ಪಾಲುದಾರರಾಗುತ್ತಾರೆ. ಮೋದಿ-ಶಾ ಜೋಡಿ ಅಸಾಧ್ಯವಾಗಿರುವುದನ್ನು ಸಾಧ್ಯ ಮಾಡಿ ತೋರಿಸಿದೆ.
ಕಾಶ್ಮೀರಕ್ಕೆ ಹೆಚ್ಚುವರಿ ಪಡೆಯನ್ನು ರವಾನಿಸಲು ತೊಡಗಿದಾಗಲೇ ರಾಜ್ಯಕ್ಕೆ ಸಂಬಂಧಿಸಿದಂತೆ ದೊಡ್ಡದೊಂದು ನಿರ್ಧಾರ ಹೊರ ಬೀಳುವ ನಿರೀಕ್ಷೆಯಿತ್ತು. ಅನಂತರ ನಡೆದ ಬೆಳವಣಿಗೆಗಳೂ ಇದಕ್ಕೆ ಪೂರಕವಾಗಿಯೇ ಇದ್ದವು.ಎಲ್ಲರೂ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೇ ವಿಧಿಯನ್ನು ರದ್ದುಪಡಿಸುವ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗುವ ನಿರೀಕ್ಷೆಯಲ್ಲಿದ್ದರು.
ಆದರೆ ಸರಕಾರ ಯಾವುದೇ ಸುಳಿವು ಬಿಟ್ಟುಕೊಡದೆ ದಿಢೀರ್ ಎಂದು 370 ವಿಧಿಯೇ ನಿಷ್ಪ್ರಯೋಜಕವಾಗುವಂಥ ನಿರ್ಧಾರವನ್ನು ಕೈಗೊಳ್ಳಬಹುದು ಎಂಬ ಸಣ್ಣದೊಂದು ಸುಳಿವು ಕೂಡಾ ಯಾರಿಗೂ ಸಿಕ್ಕಿರಲಿಲ್ಲ. ವಿಶೇಷ ಸ್ಥಾನಮಾನ ರದ್ದುಗೊಳಿಸಲು ಬಳಸಿದ ಮಾರ್ಗ ನಿಜಕ್ಕೂ ಸರಕಾರದ ಬುದ್ಧಿವಂತಿಕೆಯ ನಡೆಯನ್ನು ಸೂಚಿಸುತ್ತದೆ. 370ನೇ ವಿಧಿಯ ಉಪವಿಧಿ 370 (3)ನ್ನೇ ಬಳಸಿಕೊಂಡು ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಳ್ಳಲಾಗಿದೆ.
ಎಲ್ಲರೂ ಭಾವಿಸಿರುವಂತೆ 370 ವಿಧಿ ರದ್ದಾಗಿಲ್ಲ. ಅದನ್ನು ರದ್ದುಪಡಿಸುವುದು ಅಷ್ಟು ಸುಲಭವೂ ಅಲ್ಲ. 368ನೇ ಪರಿಚ್ಛೇದದಡಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿಯೇ 370 ವಿಧಿಯನ್ನು ರದ್ದುಪಡಿಸಬೇಕಾಗುತ್ತದೆ. ಆದರೆ 370ರಲ್ಲೇ ಇರುವ 3ನೇ ಸೆಕ್ಷನ್ ರಾಷ್ಟ್ರಪತಿಗೆ 370ನೇ ವಿಧಿಯನ್ನು ನಿಷ್ಕ್ರಿಯಗೊಳಿಸುವ ಅಧಿಕಾರವನ್ನು ನೀಡಿದೆ. ಇದನ್ನೇ ಸರಕಾರ ಬಳಸಿಕೊಂಡಿದೆ.
370ನೇ ವಿಧಿ ಕಾಶ್ಮೀರಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ಥಾನಮಾನ ನೀಡುವ ಸಲುವಾಗಿ ಸೇರ್ಪಡೆಗೊಳಿಸಲಾಗಿತ್ತು. ಈ ವಿಧಿಯನ್ವಯ ಕೇಂದ್ರಕ್ಕೆ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನ ಮಾತ್ರ ಕೇಂದ್ರದ ನಿಯಂತ್ರಣದಲ್ಲಿತ್ತು. ಈ ವಿಧಿಯನ್ನು ಬಳಸಿಕೊಂಡೇ ಕಾಶ್ಮೀರಕ್ಕೆ ಪ್ರತ್ಯೇಕವಾದ ಸಂವಿಧಾನವನ್ನು ರಚಿಸಲಾಗಿತ್ತು. 1965ರ ತನಕ ಜಮ್ಮು-ಕಾಶ್ಮೀರಕ್ಕೆ ಸದ್ರ್-ಇ-ರಿಯಾಸತ್ ಹೆಸರನಲ್ಲಿ ರಾಜ್ಯಪಾಲರನ್ನು ಮತ್ತು ಪ್ರತ್ಯೇಕ ಪ್ರಧಾನಿಯನ್ನು ನೇಮಿಸುವ ಸಂಪ್ರದಾಯವಿತ್ತು.
ಇದರ ವಿರುದ್ಧ ತೀವ್ರವಾಗಿ ಹೋರಾಡಿದವರು ಜನಸಂಘದ ಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿ. ಈ ವಿಧಿಯನ್ನು ನಿಷ್ಪ್ರಯೋಜಕಗೊಳಿಸುವ ಮೂಲಕ ಮುಖರ್ಜಿಯವರ ಕನಸನ್ನು ಬಿಜೆಪಿ ಸರಕಾರ ಅವರು ತೀರಿಹೋದ ಬಹುಕಾಲದ ಬಳಿಕ ನನಸು ಮಾಡಿದೆ. ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ಮತ್ತು ಅವರನ್ನು ಬೆಂಬಲಿಸುತ್ತಿರುವ ರಾಜಕೀಯ ನಾಯಕರಿಗೆ ಶ್ರೀರಕ್ಷೆಯಾಗಿದ್ದದ್ದೇ ವಿಶೇಷ ಸ್ಥಾನಮಾನ.
ಸಮೃದ್ಧ ಸಂಪನ್ಮೂಲ, ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂಥ ರಾಜ್ಯವಾಗಿದ್ದರೂ ವಿಶೇಷ ಸ್ಥಾನಮಾನದ ಕಾರಣ ಈ ರಾಜ್ಯ ಹಿಂದುಳಿದಿತ್ತು. ವಿಶೇಷ ಸ್ಥಾನಮಾನ ರಾಜ್ಯವನ್ನು ಅಭಿವೃದ್ಧಿಪಡಿಸುವುದರ ಬದಲು ಶತಮಾನದಷ್ಟು ಹಿಂದಕ್ಕೊ ಯ್ಯಿತು. ಭಯೋತ್ಪಾದನೆ ವಿಫುಲವಾಗಿ ಬೆಳೆಯಲು ಪರೋಕ್ಷವಾಗಿ ಇದುವೇ ಸಹಕಾರಿಯಾಗಿತ್ತು. ಆದರೆ ಅಲ್ಲಿನ ಜನರನ್ನು ಕೆಲವು ಸ್ಥಾಪಿತ ಹಿತಾಸಕ್ತಿ ಹೊಂದಿರುವ ರಾಜಕೀಯ ನಾಯಕರು ವಿಶೇಷ ಸ್ಥಾನಮಾನವೊಂದೇ ನಿಮಗೆ ಶ್ರೀರಕ್ಷೆ.
ಅದು ಹೋದರೆ ನಿಮಗೆ ಯಾವುದೇ ಅಸ್ತಿತ್ವ ಇಲ್ಲ ಎಂದು ನಂಬಿಸಿಕೊಂಡು ಬಂದು ತಮ್ಮ ಬೇಳೆ ಬೇಯಿಸಿಕೊಂಡಿದ್ದರು. ಈಗ ಅವರ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ. ಇನ್ನೀಗ ಕೇಂದ್ರ ಸರಕಾರ ರಾಜ್ಯವನ್ನು ಸಂರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು. ಇನ್ನೆಂದೂ ಕಾಶ್ಮೀರದಲ್ಲಿ ಪ್ರತ್ಯೇಕತೆಯ ಸೊಲ್ಲೇ ಕೇಳದಂತೆ ಜನಪರವಾದ ಆಡಳಿತವನ್ನು ನೀಡುವ ದೊಡ್ಡ ಸವಾಲು ಕೇಂದ್ರದ ಮುಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.