Homemaker; ಗೃಹಿಣಿಯರ ಘನತೆ ಎತ್ತಿ ಹಿಡಿದ ಸುಪ್ರೀಂ ತೀರ್ಪು
Team Udayavani, Feb 20, 2024, 5:45 AM IST
ಮನೆಗಳಲ್ಲಿ ಮಹಿಳೆಯರು ಪ್ರತಿನಿತ್ಯ ನಿರ್ವಹಿಸುವ ಕೆಲಸಗಳನ್ನು ಮತ್ತು ಆ ಮೂಲಕ ಕುಟುಂಬಕ್ಕೆ ನೀಡುತ್ತಿರುವ ಕೊಡುಗೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲಾಗದು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪು, ದೇಶದ ಗೃಹಿಣಿಯರ ಘನತೆ, ಗೌರವವನ್ನು ಎತ್ತಿ ಹಿಡಿದಿದೆ. ಕಚೇರಿಗಳಲ್ಲಿ ದುಡಿಯುವ ತಮ್ಮ ಸಂಗಾತಿಗೆ ಲಭಿಸುವ ವೇತನಕ್ಕೆ ಗೃಹಿಣಿಯರ ಶ್ರಮ, ಕಾರ್ಯವನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ದೇಶದ ಸರ್ವೋಚ್ಚ ನ್ಯಾಯಾಲಯ, ಗೃಹಿಣಿಯರ ಬಗೆಗೆ ಯಾವುದೇ ತಾರತಮ್ಯದ ಧೋರಣೆ ಅಥವಾ ಮನೋಭಾವ ಹೊಂದುವುದು ತರವಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
18 ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆಯೋರ್ವರಿಗೆ ವಾಹನವೊಂದು ಢಿಕ್ಕಿ ಹೊಡೆದು ಸಾವನ್ನಪ್ಪಿದ ಪ್ರಕರಣದಲ್ಲಿ ವಿವಿಧ ನ್ಯಾಯಾಲಯಗಳು ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ ಈ ಮಹತ್ತರ ತೀರ್ಪನ್ನು ನೀಡಿದೆ.
ಪ್ರಸ್ತುತ ಸಮಾಜದಲ್ಲಿ ಉದ್ಯೋಗ ನಿರತ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯ ಲಭಿಸುತ್ತಿದ್ದು, ಮನೆವಾರ್ತೆಯನ್ನು ನೋಡಿಕೊಳ್ಳುವ ಮಹತ್ತರ ಹೊಣೆಗಾರಿಕೆ ಯನ್ನು ನಿರ್ವಹಿಸುತ್ತಿರುವ ಗೃಹಿಣಿಯರ ಬಗೆಗೆ ಅಸಡ್ಡೆಯ ಮನೋಭಾವ ಹೆಚ್ಚುತ್ತಿದೆ. ವಿಭಕ್ತ ಕುಟುಂಬದಲ್ಲಂತೂ ಗೃಹಿಣಿಯರ ಬಗೆಗೆ ತೀರಾ ನಿರ್ಲಕ್ಷ್ಯದ ಧೋರಣೆ ತಾಳುತ್ತಿರುವುದು ಸಾಮಾನ್ಯವಾಗಿದೆ. ದಿನವಿಡೀ ಮನೆಕೆಲಸ, ಹಿರಿಯರು ಮತ್ತು ಮಕ್ಕಳ ಪಾಲನೆ, ಆರೈಕೆಯಾದಿಯಾಗಿ ದೈನಂದಿನ ಎಲ್ಲ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೂ ಗೃಹಿಣಿಯರ ಈ ಕಠಿನ ಶ್ರಮಕ್ಕೆ ಕುಟುಂಬದಿಂದಾಗಲೀ, ಸಮಾಜದಿಂದಾಗಲೀ ಕನಿಷ್ಠ ಮೆಚ್ಚುಗೆ, ಪ್ರೋತ್ಸಾಹದ ಮಾತುಗಳೂ ಇಲ್ಲವಾಗಿವೆ. ಇದು ದೇಶದೆಲ್ಲೆಡೆಯ ಸಾಮಾನ್ಯ ಚಿತ್ರಣವಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಅತ್ಯಂತ ಪ್ರಮುಖವಾಗಿದೆಯಲ್ಲದೆ ಗೃಹವಾರ್ತೆ ನೋಡಿಕೊಳ್ಳುತ್ತಿರುವ ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬಿದೆ.
ಗೃಹಿಣಿಯರು ತಮ್ಮ ಮನೆಗಳಲ್ಲಿ ಮಾಡುವ ಕೆಲಸ, ಶ್ರಮ, ತ್ಯಾಗಗಳು ಮೌಲ್ಯಾತೀತವಾಗಿದ್ದು ಅದನ್ನು ವೇತನದ ಆಧಾರದಲ್ಲಿ ತಾಳೆ ಹಾಕಲು ಸಾಧ್ಯವಿಲ್ಲ. ಯಾವುದೇ ವೇತನವಿಲ್ಲದೆ ದಿನವಿಡೀ ದುಡಿಯುವ ಗೃಹಿಣಿಯರಿಗೆ ವೇತನವನ್ನು ನಿಗದಿಪಡಿಸಿದಲ್ಲಿ ಆ ಕುಟುಂಬದಿಂದ ಆಕೆಗೆ ಸೂಕ್ತ ವೇತನ ನೀಡಲು ಸಾಧ್ಯವಾಗದು.
ಪ್ರತಿಯೊಂದೂ ಮನೆ ಅಥವಾ ಕುಟುಂಬಕ್ಕೆ ಈ ಗೃಹಿಣಿಯರು ನೀಡುತ್ತಿರುವ ಕೊಡುಗೆಯನ್ನು ಆದಾಯ, ವೇತನದ ಮಾನದಂಡದಲ್ಲಿ ಅಳೆಯುವುದು ಕಷ್ಟಸಾಧ್ಯ. ಹೀಗಾಗಿ ಮನೆಕೆಲಸ ನೋಡಿಕೊಳ್ಳುತ್ತಿರುವ ಮಹಿಳೆಯರನ್ನು ನಿರ್ಲಕ್ಷಿಸುವುದಾಗಲೀ ಆಕೆಯ ಬಗೆಗೆ ತಾರತಮ್ಯ ನಿಲುವನ್ನು ತಾಳುವುದು ಸಾಧ್ಯವಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ನ ಈ ತೀರ್ಪು ಗಟ್ಟಿದನಿಯಲ್ಲಿ ಹೇಳಿದೆ.
ದಿನಗೂಲಿ ಕಾರ್ಮಿಕರಿಗೆ ನೀಡಲಾಗುತ್ತಿರುವ ವೇತನಕ್ಕಿಂತ ಕಡಿಮೆ ಮೊತ್ತವನ್ನು ಗೃಹಿಣಿಯರ ಆದಾಯ ಎಂದು ಲೆಕ್ಕ ಹಾಕಲಾಗದು. ಆಕೆ ಪ್ರತಿನಿತ್ಯ ನಿರ್ವಹಿಸುವ ಕೆಲಸಕ್ಕೆ ಇಂತಿಷ್ಟು ಕೂಲಿ ಅಥವಾ ಮೌಲ್ಯ ಎಂದು ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಗೃಹಿಣಿಯರ ಮೌಲ್ಯ ಉನ್ನತವಾದುದಾಗಿದ್ದು ಈ ಬಗ್ಗೆ ಯಾವುದೇ ಸಂಶಯ ಬೇಡ ಎನ್ನುವ ಮೂಲಕ ಸುಪ್ರೀಂ ಕೋರ್ಟ್ ಮತ್ತೂಮ್ಮೆ ಮನೆ ಕೆಲಸದಲ್ಲಿ ತೊಡಗಿಕೊಂಡವರ ಮಹಿಳೆಯರ ಘನತೆ, ಗೌರವವನ್ನು ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾದರೂ ಮುಂದಿನ ದಿನಗಳಲ್ಲಿ ಗೃಹಿಣಿಯರ ಬಗೆಗಿನ ಸಮಾಜದ ಚಿಂತನೆ, ಭಾವನೆಗಳು ಬದಲಾಗಿ ಅವರಿಗೂ ಗೌರವ ಲಭಿಸುವಂತಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.