HSRP ಅಳವಡಿಕೆ: ಗಡುವು ವಿಸ್ತರಣೆ ಅನಿವಾರ್ಯ
Team Udayavani, Feb 12, 2024, 6:20 AM IST
ರಾಜ್ಯದಲ್ಲಿ 2019ರ ಎ.1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ(ಎಚ್‌ಎಸ್‌ಆರ್‌ಪಿ)ಅಳವಡಿಕೆಯನ್ನು ಕಡ್ಡಾಯಗೊಳಿಸಿ ರಾಜ್ಯದ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಕಳೆದ ವರ್ಷದ ಆಗಸ್ಟ್ 18ರಂದು ಆದೇಶ ಹೊರಡಿಸಿದ್ದರು. ಆರಂಭದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ 2023ರ ನವೆಂಬರ್ 17ರ ವರೆಗೆ ವಾಹನ ಮಾಲಕರಿಗೆ ಗಡುವು ನೀಡಲಾಗಿದ್ದರೂ ಆ ಬಳಿಕ ಈ ಗಡುವನ್ನು 2024ರ ಫೆ. 17ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಸಾರಿಗೆ ಇಲಾಖೆ ಮತ್ತು ವಾಹನ ಮಾಲಕರ ನಿರಾಸಕ್ತಿಯ ಪರಿಣಾಮ ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕ್ರಿಯೆ ತೀರಾ ನಿಧಾನಗತಿಯಲ್ಲಿ ಸಾಗಿತ್ತು. ಈಗ ಗಡುವು ಸಮೀಪಿಸುತ್ತಿದ್ದಂತೆಯೇ ವಾಹನಗಳ ಮಾಲಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಮುಗಿ ಬೀಳಲಾರಂಭಿಸಿದ್ದು ಸಹಜವಾಗಿಯೇ ಹತ್ತು ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ.
ನಿಗದಿತ ದಿನದೊಳಗಾಗಿ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಷ್ಟಸಾಧ್ಯವಾಗಿರುವುದರಿಂದ ಎಲ್ಲಿ ದಂಡ ತೆರಬೇಕಾದ ಅನಿವಾರ್ಯತೆ ಸೃಷ್ಟಿಯಾಗುವುದೋ ಎಂಬ ಆತಂಕ ವಾಹನ ಮಾಲಕರನ್ನು ಕಾಡತೊಡಗಿದೆ.
ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಸಂಬಂಧ ಆದೇಶ ಹೊರಡಿಸಿ 6 ತಿಂಗಳುಗಳೇ ಕಳೆದಿದ್ದರೂ ವಾಹನ ಮಾಲಕರು ಎಚ್ಚೆತ್ತುಕೊಳ್ಳದಿ ದ್ದುದು ಅವರ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕನ್ನಡಿ ಎನ್ನಲಡ್ಡಿಯಿಲ್ಲ. ಇದೇ ವೇಳೆ ಸಾರಿಗೆ ಅಧಿಕಾರಿಗಳು ಕೂಡ ಈ ವಿಷಯದಲ್ಲಿ ಆದೇಶ ಹೊರಡಿಸುವುದಷ್ಟೇ ತಮ್ಮ ಜವಾಬ್ದಾರಿ ಎಂಬ ನಿರ್ಧಾರಕ್ಕೆ ಬಂದಂತೆ ತೋರುತ್ತಿದೆ. ಎಚ್‌ಎಸ್‌ಆರ್‌ಪಿ ಅಳವಡಿಕೆ ವಿಷಯದಲ್ಲಿ ಸಾರಿಗೆ ಇಲಾಖೆ ಹೆಚ್ಚಿನ ಆಸ್ಥೆ ವಹಿಸದಿರುವುದರಿಂದಾಗಿಯೇ ಈಗ ಗಡುವು ಸಮೀಪಿಸುತ್ತಿರುವಾಗ ವಾಹನಗಳ ಮಾಲಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಕಸರತ್ತು ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಆದೇಶ ಹೊರಡಿಸಿದ ಬಳಿಕ ಫಲಕ ಅಳವಡಿಕೆ ಪ್ರಕ್ರಿಯೆ ಮೇಲೆ ನಿಗಾ ಇರಿಸಿ, ಕಾಲಕಾಲಕ್ಕೆ ಸಂಬಂಧಿತರಿಗೆ ಸೂಕ್ತ ನಿರ್ದೇಶನಗಳನ್ನು ನೀಡುತ್ತಿದ್ದಲ್ಲಿ ಇಷ್ಟೊಂದು ಸಮಸ್ಯೆಗಳು ತಲೆದೋರುತ್ತಿರಲಿಲ್ಲ. ಇನ್ನು ಸಾರ್ವಜನಿಕರಂತೂ ಎಂದಿನಂತೆ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸದಲ್ಲಿ ತೊಡಗಿಕೊಳ್ಳುವ ಸಂಪ್ರದಾಯ ಈ ವಿಷಯದಲ್ಲೂ ಮುಂದುವರಿದಿರುವುದು ಸ್ಪಷ್ಟ.
ಲಕ್ಷಾಂತರ ಸಂಖ್ಯೆಯಲ್ಲಿ ವಾಹನಗಳ ಮಾಲಕರು ಪ್ರತೀದಿನ ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಆನ್‌ಲೈನ್ ನೋಂದಣಿಗೆ ಮುಗಿ ಬೀಳುತ್ತಿರುವ ಪರಿಣಾಮ ಸರ್ವರ್ ಮೇಲೆ ಇನ್ನಿಲ್ಲದ ಒತ್ತಡ ಬಿದ್ದು ಸ್ಥಗಿತಗೊಳ್ಳುತ್ತಿದೆ. ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕ್ರಿಯೆ ವಿಳಂಬಗೊಳ್ಳುತ್ತಲೇ ವಾಹನಗಳ ಮಾಲಕರು ಸರಕಾರಕ್ಕೆ ಹಿಡಿಶಾಪ ಹಾಕಲಾರಂಭಿಸಿದ್ದು, ಎಂದಿನಂತೆ ವ್ಯವಸ್ಥೆಯನ್ನು ದೂರುವ ಪರಿಪಾಠಕ್ಕೆ ಜೋತು ಬಿದ್ದಿದ್ದಾರೆ. 1.65 ಕೋಟಿಗೂ ಅಧಿಕ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಬಾಕಿ ಉಳಿದುಕೊಂಡಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಸಾಕಷ್ಟು ಕಾಲಾವಕಾಶದ ಅಗತ್ಯವಿದೆ. ಇನ್ನಾದರೂ ಸಾರಿಗೆ ಇಲಾಖೆ ಮತ್ತು ವಾಹನಗಳ ಮಾಲಕರು ಎಚ್ಚೆತ್ತುಕೊಂಡು ತ್ವರಿತಗತಿಯಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕ್ರಿಯೆಯನ್ನು ಸಲೀಸಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಇದಕ್ಕಾಗಿ ಫಲಕ ಅಳವಡಿಕೆಯ ಗಡುವನ್ನು ಕನಿಷ್ಠ ಒಂದು ತಿಂಗಳ ಮಟ್ಟಿಗಾದರೂ ವಿಸ್ತರಿಸುವ ಮೂಲಕ ಸರ್ವರ್ ಮೇಲಣ ಒತ್ತಡವನ್ನು ಕಡಿಮೆ ಮಾಡಿ, ತಾಂತ್ರಿಕ ಸಮಸ್ಯೆಗಳಿಂದ ಮುಕ್ತವಾಗಿಸಬೇಕು. ಇದೇ ವೇಳೆ ಸಾರ್ವಜನಿಕರು, ಇನ್ನೂ ಒಂದು ತಿಂಗಳ ಕಾಲಾವಕಾಶ ಇದೆ ಎಂದು ಕೈಕಟ್ಟಿ ಕುಳಿತುಕೊಳ್ಳದೆ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಆದಷ್ಟು ಬೇಗ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಮುಂದಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.