ವಿದ್ಯುತ್ ಹಕ್ಕು ಜಾರಿಯಾದರೆ ಸಾರ್ಥಕ
Team Udayavani, Feb 28, 2018, 8:10 AM IST
ಮುಂಬರುವ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರಕಾರ ವಿದ್ಯುತ್ ಹಕ್ಕು ಮಸೂದೆಯನ್ನು ಮಂಡಿಸುವ ಇರಾದೆಯಲ್ಲಿದೆ. ಈ ವಿಷಯ ಕೇಳಿದಾಗ ಭಾರತೀಯರಿಗೆ ತುಸು ಅಚ್ಚರಿಯಾಗಬಹುದು. ಈಗಲೂ ಜನರಲ್ಲಿ ವಿದ್ಯುತ್ ಅನಿವಾರ್ಯವಲ್ಲ ಬದಲಾಗಿ ಐಷಾರಾಮ ಎಂಬ ಭಾವನೆಯಿದೆ. ಹೀಗಿರುವಾಗ ಆಹಾರದ ಹಕ್ಕು, ಶಿಕ್ಷಣದ ಹಕ್ಕಿನಂತೆ ವಿದ್ಯುತ್ತನ್ನು ಹಕ್ಕು ಎಂದು ಪ್ರತಿಪಾದಿಸಬಹುದೇ ಎನ್ನುವುದು ಅವರ ಅಚ್ಚರಿಗೆ ಕಾರಣ. ಹೌದು ಮುಂದುವರಿದ ದೇಶಗಳಿಗೆ ಹೋಲಿಸಿ ನೋಡಿದರೆ ವಿದ್ಯುತ್ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಪ್ರಗತಿ ಬಹಳ ನಿಧಾನಗತಿಯದ್ದು. ಮೂರು ದಶಕ ಹಿಂದಿನವರೆಗೂ ವಿದ್ಯುತ್ ನಗರ ದಲ್ಲಿರುವವರ ಮತ್ತು ಶ್ರೀಮಂತರ ಸೊತ್ತಾಗಿತ್ತು. ಆದರೆ ಆ ಬಳಿಕ ವಿದ್ಯುತ್ ಕ್ಷೇತ್ರದಲ್ಲಿ ತುಸು ವೇಗವಾಗಿ ಪ್ರಗತಿ ಸಾಧಿಸಿದ್ದೇವೆ. ಇದಕ್ಕೆ ಮುಖ್ಯ ಕಾರಣ ಅಣು ವಿದ್ಯುತ್ ಸ್ಥಾವರಗಳ ಸ್ಥಾಪನೆ. ಇದೀಗ ವಿದ್ಯುತ್ ಕೊರತೆ ಎಂಬಲ್ಲಿಂದ ವಿದ್ಯುತ್ ಮಿಗತೆ ಎನ್ನುವ ತನಕ ನಮ್ಮ ಸಾಧನೆ ಇದೆ. ಈ ಹಿನ್ನೆಲೆಯಲ್ಲಿ ಸರಕಾರ ವಿದ್ಯುತ್ ಹಕ್ಕು ಕಾನೂನು ತರುವ ಮೂಲಕ ದೇಶದ ಪ್ರತಿಯೊಂದು ಮನೆಗೂ ಬೆಳಕು ತರಲು ಮುಂದಾಗಿದೆ. 2019, ಎ.1 ಕ್ಕಾಗುವಾಗ ಸಾಮಾನ್ಯ ಪರಿಸ್ಥಿತಿಯಲ್ಲಿ ಪ್ರತಿ ಮನೆಗೆ ನಿತ್ಯ 24 ತಾಸು ಅಡೆತಡೆಯಿಲ್ಲದೆ ವಿದ್ಯುತ್ ಪೂರೈಕೆಯಾಗುತ್ತಿರಬೇಕೆಂಬ ಮಹತ್ತರ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಇಟ್ಟುಕೊಂಡಿದ್ದಾರೆ. ಆದರೆ ಇದನ್ನು ಸಾಧಿಸುವುದು ನಿರೀಕ್ಷಿಸಿದಷ್ಟು ಸುಲಭವಲ್ಲ.
ವಿದ್ಯುದೀಕರಣಕ್ಕೆ ಮುಖ್ಯ ಅಡಚಣೆಯಾಗಿರುವುದು ಉತ್ಪಾದನೆಯಲ್ಲ ಬದಲಾಗಿ ವಿತರಣೆ. ಪ್ರಸ್ತುತ ವಿತರಣೆ ಕಂಪೆನಿಗಳು ಅಥವಾ ಡಿಸ್ಕೊಂಗಳು ವಿದ್ಯುತ್ ವಿತರಣೆಯ ಹೊಣೆ ಹೊಂದಿವೆ. ಉತ್ಪಾದಕ ಕಂಪೆನಿಗಳಿಂದ ಖರೀದಿಸಿ ಜನರಿಗೆ ಪೂರೈಸುವುದು ಈ ಕಂಪೆನಿಗಳ ಹೊಣೆ. ಮುಂಬಯಿ, ದಿಲ್ಲಿಯಂತಹ ಕೆಲವು ಮಹಾನಗರಗಳನ್ನು ಹೊರತು ಪಡಿಸಿದರೆ ಎಲ್ಲೆಡೆ ಸರಕಾರಿ ಡಿಸ್ಕೊಂಗಳೇ ಇವೆ. ಮಹಾನಗರಳ ಕೆಲವು ಭಾಗಗಳಿಗೆ ವಿದ್ಯುತ್ ವಿತರಿಸುವ ಹೊಣೆಯನ್ನು ರಿಲಯನ್ಸ್‌ನಂತಹ ಕೆಲ ಖಾಸಗಿ ಕಂಪೆನಿಗಳು ವಹಿಸಿಕೊಂಡಿವೆ ಮತ್ತು ಅವುಗಳು ಇದನ್ನು ದಕ್ಷತೆಯಿಂದ ಮಾಡಿ ಸೈ ಎನಿಸಿಕೊಂಡಿವೆ. ಆದರೆ ಈಗಲೂ ವಿದ್ಯುತ್ ಕ್ಷೇತ್ರದ ಮೇಲೆ ಸರಕಾರದ ಏಕಸ್ವಾಮ್ಯವಿದೆ. ಈಗ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ವಿತರಿಸಿದರೆ ಎಲ್ಲ ಮನೆಗಳಿಗೂ ನಿರಂತರ 24 ತಾಸು ವಿದ್ಯುತ್ ಪೂರೈಕೆ ಮಾಡಬಹುದು ಎಂಬ ವಿಶ್ವಾಸದಲ್ಲಿದೆ ಸರಕಾರ. ಪೂರೈಕೆ ಸರಿಯಾಗಬೇಕಾದರೆ ಡಿಸ್ಕೊಂಗಳ ದಕ್ಷತೆಯನ್ನು ಹೆಚ್ಚಿಸಬೇಕು. ಹೀಗಾಗಿ ಮಸೂದೆಯಲ್ಲಿ ಸಾಮಾನ್ಯ ಪರಿಸ್ಥಿತಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ವಿಫಲವಾಗುವ ಕಂಪೆನಿಗಳಿಗೆ ದಂಡ ವಿಧಿಸುವ ಪ್ರಸ್ತಾವವನ್ನು ಸೇರಿಸಲಾಗಿದೆ. ಮಸೂದೆಯೇನೋ ಆಕರ್ಷಕವಾಗಿದೆ ಮತ್ತು ಜಾರಿಗೆ ಬಂದರೆ ಪ್ರಯೋಜನಕಾರಿಯೂ ಹೌದು. ಆದರೆ ವಾಸ್ತವದಲ್ಲಿ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವೇ ಎನ್ನುವುದು ಪ್ರಶ್ನೆ.
ಸ್ವತಂತ್ರಗೊಂಡ 70 ವರ್ಷಗಳ ಬಳಿಕ ಇದೇ ಮೊದಲ 2016-17ನೇ ಸಾಲಿನಲ್ಲಿ ದೇಶ ವಿದ್ಯುತ್ ಉತ್ಪಾದನೆಯಲ್ಲಿ ಮಿಗತೆ ಸಾಧಿಸಿದೆ. ಆದರೆ ಮಿಗತೆ ವಿದ್ಯುತ್ ಬರೀ ಶೇ. 1.1 ಮಾತ್ರ. 3 ಕೋಟಿ ಜನರಿಗೆ ಇನ್ನು ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಹಾಗೂ ಜಾಗತಿಕ ತಲಾ ವಿದ್ಯುತ್ ಬಳಕೆ ಮತ್ತು ನಮ್ಮ ತಲಾ ವಿದ್ಯುತ್ ಬಳಕೆಗೂ ಅಜಗಜಾಂತರವಿದೆ. ಜಾಗತಿಕ ತಲಾ ವಿದ್ಯುತ್ ಬಳಕೆ ವಾರ್ಷಿಕ 3026 ಕಿ.ವಾ. ಇದ್ದರೆ ಭಾರತದ ತಲಾ ಬಳಕೆ 1070 ಕಿ. ವಾ. ಮಾತ್ರ. ಬಹಳ ವರ್ಷಗಳ ತನಕ ಉತ್ಪಾದನೆ ಮತ್ತು ಬೇಡಿಕೆ ನಡುವೆ ಭಾರೀ ಪ್ರಮಾಣದ ಅಂತರವಿತ್ತು. ಇದಕ್ಕೆ ಬೆಳೆಯುತ್ತಿರುವ ಜನಸಂಖ್ಯೆಯೂ ಕಾರಣ. ಪ್ರಸ್ತುತ ಈಗಿರುವ ಜನಸಂಖ್ಯೆಯನ್ನು ಆಧರಿಸಿ ಮಿಗತೆ ವಿದ್ಯುತ್ ಎಂದು ಹೇಳುತ್ತಿವೆಯಾದರೂ ಜನ ಸಂಖ್ಯೆಯ ನಿರಂತರ ವಾಗಿ ಹೆಚ್ಚುತ್ತಿರುವ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಧಾರಾಳ ವಿದ್ಯುತ್ ಉತ್ಪಾದನೆಯಾಗುವುದು ಅಪೇಕ್ಷಣೀಯವೇ. ಇದರಿಂದ ಬರೀ ಮನೆ ಬೆಳಗುವ ಸಮಸ್ಯೆ ಮಾತ್ರವಲ್ಲದೆ ಇನ್ನಿತರ ಹಲವು ಸಮಸ್ಯೆಗಳಿಗೂ ಪರಿಹಾರವಿದೆ. ಮುಖ್ಯವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಸಿ ಒಂದೆಡೆ ಪಳೆಯುಳಿಕೆ ಇಂಧನದಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಈ ಇಂಧನದ ಮೇಲಿನ ಅತಿಯಾದ ಅವಲಂಬನೆಯನ್ನು ತಪ್ಪಿಸಬಹುದು. ಅಂತೆಯೇ ಧಾರಾಳ ವಿದ್ಯುತ್ ಪೂರೈಕೆಯಿದ್ದರೆ ಕೈಗಾರಿಕೋದ್ಯಮಗಳ ಉತ್ಪಾದಕತೆಯೂ ಹೆಚ್ಚಿ ದೇಶದ ಆರ್ಥಿಕತೆ ಕ್ಷಿಪ್ರವಾಗಿ ಅಭಿವೃದ್ಧಿಯಾಗಬಹುದು. ಸದ್ಯ ವಿದ್ಯುತ್ ಅನಿವಾರ್ಯ ಸೌಲಭ್ಯ ಆಗಿರುವುದರಿಂದ ಅದನ್ನು ಹಕ್ಕು ಎಂದು ಪರಿಗಣಿಸುವುದು ಅಪೇಕ್ಷಣೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.