ಅನುಷ್ಠಾನ ಅನಿವಾರ್ಯ,ಪಕ್ಷಗಳ ಪ್ರಣಾಳಿಕೆಗಳಲ್ಲಿ ಭರಪೂರ ಆಶ್ವಾಸನೆ
Team Udayavani, May 7, 2018, 8:15 AM IST
ಚುನಾವಣೆ ಸಮಯದಲ್ಲಿ ಮಳೆಯಾದರೂ ತುಸು ವಿಳಂಬವಾಗಿ ಸುರಿಯಬಹುದು ಆದರೆ ಆಶ್ವಾಸನೆಗಳ ಮಳೆ ಮಾತ್ರ ತಪ್ಪದೆ ಸುರಿಯುತ್ತದೆ. ಎಲ್ಲ ರಾಜಕೀಯ ಪಕ್ಷಗಳು ಮೈಕೊಡವಿ ಎದ್ದು ನಿಲ್ಲವುದೇ ಚುನಾವಣೆ ಸಂದರ್ಭದಲ್ಲಿ. ಹಠಾತ್ ಆಗಿ ಪಕ್ಷಗಳಿಗೆ ಬಡವರ ನೆನಪಾಗುತ್ತದೆ. ಅವರು ಆಶೋತ್ತರಗಳನ್ನು ತುರ್ತಾಗಿ ಈಡೇರಿಸುವ ಹುರುಪು ಮೂಡುತ್ತದೆ. ಮಹಿಳೆಯರು, ಯುವಜನರು, ಪರಿಶಿಷ್ಟ ಜಾತಿ/ಪಂಗಡದವರು, ಆದಿವಾಸಿಗಳು, ಅಲ್ಪಸಂಖ್ಯಾತರು ಹೀಗೆ ಎಲ್ಲರೂ ಆಪ್ತರೆನ್ನಿಸಿಕೊಳ್ಳುತ್ತಾರೆ, ಎಲ್ಲರಿಗೂ ಸುಂದರವಾದ ಬದುಕು ಕಟ್ಟಿಕೊಡಬೇಕೆಂಬ ಉಮೇದು ಮೂಡುತ್ತದೆ. ಅವರ ಅಗತ್ಯಗಳ ಮತ್ತು ಬೇಡಿಕೆಗಳ ಬಗ್ಗೆ ಕಾಳಜಿ ಮೂಡುತ್ತದೆ.
ಇವೆಲ್ಲ ಪಕ್ಷಗಳ ಪ್ರಣಾಳಿಕೆಯಲ್ಲಿ ಜಾಗ ಪಡೆದುಕೊಳ್ಳುತ್ತವೆ. ಉಚಿತ ವಿದ್ಯುತ್, ಅಕ್ಕಿ, ನೀರು, ಅಗ್ಗದ ಆಹಾರ ಧಾನ್ಯ, ಪುಕ್ಕಟೆ ಟಿವಿ, ವಾಶಿಂಗ್ ಮೆಶಿನ್, ಕುಕ್ಕರ್, ಕೃಷಿ ಸಾಲ ಮನ್ನಾ, ಸಮವಸ್ತ್ರ, ಸೈಕಲ್, ಪುಸ್ತಕ ಹೀಗೆ ಬಡವರಿಗೆ ಮತ್ತು ಕೃಷಿಕರಿಗೆ ಭರಪೂರ ಕೊಡುಗೆಗಳಿರುವ ಪ್ರಣಾಳಿಕೆಗಳನ್ನು ಎಲ್ಲ ಪಕ್ಷಗಳು ಚುನಾವಣೆಗಾಗುವಾಗ ಬಿಡುಗಡೆಗೊಳಿಸುತ್ತವೆ. ಇದರ ಜತೆಗೆ ತಂತ್ರಜ್ಞಾನದಲ್ಲೂ ನಾವು ಮುಂದಿದ್ದೇವೆ ಎಂದು ತಿಳಿಸಲು ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ , ಟ್ಯಾಬ್ಲೆಟ್‌ನಂತಹ ಕೊಡುಗೆಗಳು ಈಗ ಪ್ರಣಾಳಿಕೆಯಲ್ಲಿ ಜಾಗ ಪಡೆದುಕೊಂಡಿವೆ. ಹಿಂದೆ ಜನರು ಪ್ರಣಾಳಿಕೆಗಳಿಗೆ ಅಷ್ಟೇನೂ ಮಹತ್ವ ಕೊಡುತ್ತಿರಲಿಲ್ಲ. ಅಂತೆಯೇ ಪಕ್ಷಗಳು ಕೂಡಾ ಚುನಾವಣೆ ಮುಗಿದ ಬಳಿಕ ಪ್ರಣಾಳಿಕೆಯನ್ನು ಮರೆತು ಬಿಡುತ್ತಿದ್ದವು. ಪ್ರಣಾಳಿಕೆಗಳ ಮೂಲಕವೂ ಚುನಾವಣೆ ಗೆಲ್ಲಬಹುದು ಎನ್ನುವುದನ್ನು ತೋರಿಸಿಕೊಟ್ಟದ್ದು ತಮಿಳುನಾಡಿನ ಪಕ್ಷಗಳು. ಅಲ್ಲಿನ ಪಕ್ಷಗಳು ನೀಡಿದ ಉಚಿತ ಟಿವಿ, ಅಕ್ಕಿ, ಕುಕ್ಕರ್, ಮಿಕ್ಸಿಯಂತಹ ಭರವಸೆಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಳಿಕ ಈಗ ಎಲ್ಲ ಪಕ್ಷಗಳು ಅದನ್ನು ಅನುಸರಿಸುತ್ತಿವೆ.
ಹಿಂದೆ ಚುನಾವಣೆ ಘೋಷಣೆಯಾದ ಬೆನ್ನಿಗೆ ಪ್ರಣಾಳಿಕೆ ಬಿಡುಗಡೆಯಾಗುತ್ತಿತ್ತು. ಈಗ ಮತದಾನದ ದಿನ ಹತ್ತಿರವಾಗುವಾಗ ಬಿಡುಗಡೆಯಾಗುತ್ತವೆ. ಇನ್ನೊಂದು ಪಕ್ಷ ಯಾವೆಲ್ಲ ಭರವಸೆಗಳನ್ನು ಪ್ರಕಟಿಸಿದೆ ಎಂದು ಕಾದು ನೋಡಿ ತಮ್ಮ ಪ್ರಣಾಳಿಕೆಯನ್ನು ರೂಪಿಸುವುದು ಈಗಿನ ಕಾಯಂತಂತ್ರ. ಜತೆಗೆ ಪ್ರಣಾಳಿಕೆಯಲ್ಲಿರುವ ಭರವಸೆಗಳನ್ನು ಜನರು ಮತದಾನದ ತನಕ ನೆನಪಿನಲ್ಲಿಟ್ಟುಕೊಳ್ಳಬೇಕೆಂಬ ತವಕ. ಪ್ರಣಾಳಿಕೆ ಬಿಡುಗಡೆಯಾದ ಕೂಡಲೇ ಎದುರಾಳಿಗಳ ಅದರಲ್ಲಿರುವ ಆಶ್ವಾಸನೆಗಳ ಕುರಿತು ಅಪಸ್ವರ ಎತ್ತಿ ಟೀಕಿಸುವುದು, ಚುನಾವಣಾ ಆಯೋಗಕ್ಕೆ ದೂರು ನೀಡುವುದೆಲ್ಲ ಮಾಮೂಲು ವಿಷಯ. ವಿಶೇಷವೆಂದರೆ ಪ್ರಣಾಳಿಕೆಯಲ್ಲಿ ಏನೇ ಕೊಡುಗೆಯನ್ನು ಬೇಕಾದರೂ ಘೋಷಿಸಬಹುದು. ಚುನಾವಣಾ ಆಯೋಗವಾಗಲಿ, ನ್ಯಾಯಾಲಯವಾಗಲಿ ಅದನ್ನು ತಡೆಯುವಂತಿಲ್ಲ. 2015ರಲ್ಲೇ ಸುಪ್ರೀಂಕೋರ್ಟ್ ಪ್ರಣಾಳಿಕೆಯಲ್ಲಿರುವ ಕೊಡುಗೆಗಳನ್ನು ಆಮಿಷಗಳು ಎಂದು ಪರಿಗಣಿಸುವುದು ಅಸಾಧ್ಯ ಎಂದು ಪಿಐಎಲ್ ಒಂದರ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಅದಾಗ್ಯೂ ಚುನಾವಣಾ ಆಯೋಗಕ್ಕೆ ಪ್ರಣಾಳಿಕೆಗಳ ಮೇಲೊಂದು ಕಣ್ಣಿಡಲು ಸೂಚಿಸಿದೆ. ಪ್ರಣಾಳಿಕೆ ಮೇಲೆ ಯಾವುದೇ ರೀತಿಯ ಅಂಕುಶ ಇಡುವುದನ್ನು ಎಲ್ಲ ಪಕ್ಷಗಳೂ ತೀವ್ರವಾಗಿ ವಿರೋಧಿಸುತ್ತಿವೆ. ಪ್ರಜಾತಂತ್ರದಲ್ಲಿ ಭವಿಷ್ಯದ ಕಾರ್ಯಯೋಜನೆಗಳನ್ನು ಜನರಿಗೆ ತಿಳಿಸುವುದು ನಮ್ಮ ಹಕ್ಕು, ಕರ್ತವ್ಯ ಎನ್ನುವುದು ಪಕ್ಷಗಳ ವಾದ.
ಇದೀಗ ರಾಜ್ಯದ ಚುನಾವಣೆ ಸಂದರ್ಭದಲ್ಲೂ ಮೂರು ಪ್ರಮುಖ ಪಕ್ಷಗಳ ಸಹಿತ ಎಲ್ಲ ಪಕ್ಷಗಳು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿವೆ. ಎಂದಿನಂತೆ ಧಾರಾಳ ಕೊಡುಗೆಗಳಿವೆ. ಕಾಂಗ್ರೆಸ್ ತನ್ನನ್ನು ಪ್ರಗತಿಯ ಪಕ್ಷ ಎಂದು ಹೇಳಿಕೊಂಡಿದ್ದರೆ, ಬಿಜೆಪಿ ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಎಂಬ ಶೀರ್ಷಿಕೆಯಲ್ಲಿ ಪ್ರಣಾಳಿಕೆ ಹೊರತಂದಿದೆ. ಜೆಡಿಎಸ್ ಕೃಷಿವಲಯವನ್ನೇ ಗಮನದಲ್ಲಿಟ್ಟುಕೊಂಡು ರೈತ ಪ್ರಣಾಳಿಕೆ ತಯಾರಿಸಿದೆ. ಕಾಂಗ್ರೆಸ್ ಒಂದು ಕೋಟಿ ಉದ್ಯೋಗಗಳ ಭರವಸೆ ನೀಡಿದರೆ ಬಿಜೆಪಿ ಕೌಶಲ ಅಭಿವೃದ್ಧಿಯೊಂದಿಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ.
ಎಲ್ಲ ಪಕ್ಷಗಳು ಕೃಷಿ ಸಾಲ ಮನ್ನಾ ಮಾಡುವ ಭರವಸೆ ನೀಡಿವೆ. ತಾಳಿ, ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್, ವಸತಿ ಯೋಜನೆಗಳು, 24 ತಾಸು ವಿದ್ಯುತ್ ಪೂರೈಕೆ, ಉಚಿತ ಶಿಕ್ಷಣ ಹೀಗೆ ಎಲ್ಲ ಪಕ್ಷಗಳು ವಿವಿಧ ವಲಯಗಳಿಗೆ ಭರವಸೆಗಳ ಪ್ರವಾಹವನ್ನೇ ಹರಿಸಿವೆ. ಮೂರೂ ಪಕ್ಷಗಳು ಜನಪ್ರಿಯತೆಯ ಜತೆಗೆ ಜನೋಪಯೋಗಿ ಯೋಜನೆಗಳನ್ನು ರೂಪಿಸುತ್ತೇವೆ ಎಂದಿರುವುದರಿಂದ ತುಸು ಭಿನ್ನವಾಗಿ ಕಾಣಿಸುತ್ತಿವೆ. ಆದರೆ ಈಗ ಜನರು ಜಾಗೃತರಾಗಿದ್ದಾರೆ. ಹೀಗಾಗಿ ಪ್ರಣಾಳಿಕೆಯಲ್ಲಿ ಆಕರ್ಷಕ ಕೊಡುಗೆಗಳನ್ನು ನೀಡಲು ನೀಡಿದಷ್ಟೇ ಪ್ರಾಮುಖ್ಯತೆಯನ್ನು ಅವುಗಳ ಅನುಷ್ಠಾನಕ್ಕೂ ನೀಡುವುದು ಅನಿವಾರ್ಯ. ಇಲ್ಲದಿದ್ದರೆ ಇನ್ನೊಂದು ಚುನಾವಣೆ ಬರುವಾಗ ಪ್ರಶ್ನಿಸಲು ಜನರು ತಯಾರಿರುತ್ತಾರೆ ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.