ಭಾರತದ ಬಗ್ಗೆ ನೇಪಾಲದ ಅಪಸ್ವರ ವಿವಾದ ಬಗೆಹರಿಯಲಿ
Team Udayavani, May 21, 2020, 6:04 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕಳೆದ ಕೆಲವು ದಿನಗಳಿಂದ ಭಾರತ ಮತ್ತು ನೇಪಾಲದ ನಡುವಿನ ಸಂಬಂಧದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿಬಿಟ್ಟಿದೆ.
ಅದರಲ್ಲೂ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ಪ್ರದೇಶಗಳ ವಿಚಾರವಾಗಿ ಎರಡೂ ದೇಶಗಳ ನಡುವಿನ ವಿವಾದ ಹೆಚ್ಚಾಗಲಾರಂಭಿಸಿದೆ.
ನೇಪಾಲವು ಹೊಸ ನಕ್ಷೆಯನ್ನು ಜಾರಿಗೊಳಿಸುವ ಘೋಷಣೆ ಮಾಡುತ್ತಿದ್ದಂತೆಯೇ, ಆ ದೇಶದ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ಕೂಡ ಭಾರತದ ಮೇಲೆ ಹರಿಹಾಯ್ದಿದ್ದಾರೆ.
ಭೂ ವಿವಾದವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು “ಭಾರತ ಸತ್ಯಮೇವ ಜಯತೇ’ ಎಂಬುದಕ್ಕೆ ವಿರುದ್ಧವಾಗಿ ಹೋಗಬಾರದು ಎಂದು ಎಚ್ಚರಿಸಿದ್ದಾರೆ. ಇದಷ್ಟೇ ಅಲ್ಲದೇ, ಚೀನದ ಕೋವಿಡ್ ಗಿಂತಲೂ ಕ್ಕಿಂತಲೂ ಭಾರತದ ಕೋವಿಡ್ ಅಪಾಯಕಾರಿ ಎಂದು ಕೊಂಕು ನುಡಿದಿದ್ದಾರೆ.
ನೇಪಾಳ ಸರಕಾರದ ಈ ಹಠಾತ್ ಅಸಮಾಧಾನದ ಹಿಂದೆ ಹಲವು ಕಾರಣಗಳಿವೆ. ಈ ತಿಂಗಳ ಆರಂಭದಿಂದಲೂ ನೇಪಾಲ – ಭಾರತದ ನಡುವೆ ಕಾಲಾಪಾನಿ, ಲಿಪುಲೇಖ್ ವಿಚಾರವಾಗಿ ವಿವಾದ ನಡೆದೇ ಇದೆ.
ಇತ್ತೀಚೆಗಷ್ಟೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಸುಗಮಗೊಳಿಸುವ 80 ಕಿ.ಮೀ ರಸ್ತೆಯನ್ನು ಉದ್ಘಾಟಿಸಿದ್ದರು.
ಭಾರತ ಈ ವಿಚಾರದಲ್ಲಿ ತನ್ನ ಅನುಮತಿ ಪಡೆದಿಲ್ಲ, ಉತ್ತರಾಖಂಡದಿಂದ ಲಿಪುಲೆಖ್ ಪಾಸ್‌ವರೆಗಿನ ಈ ರಸ್ತೆ ತನ್ನ ಗಡಿಯಲ್ಲೂ ಹಾದು ಹೋಗಿದೆ ಎಂದು ನೇಪಾಳ ತಗಾದೆ ತೆಗೆಯಿತು.
ಮೊದಲಿನಿಂದಲೂ ನೇಪಾಳ ಭಾರತದೊಂದಿಗಿರುವ ಪಶ್ಚಿಮ ಗಡಿಯ ಕಾಲಾಪಾನಿ ಒಳಗೊಂಡಂತೆ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶಗಳು ತನ್ನದೆಂದು ಹೇಳುತ್ತಾ ಬಂದಿದೆ.
ಆದಾಗ್ಯೂ ನೇಪಾಲದ ಈ ಆರ್ಭಟದ ಹಿಂದೆ ಚೀನದ ಕುಮ್ಮಕ್ಕೂ ಆಡಗಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. 2015ರಲ್ಲಿ ನೇಪಾಳ ತನ್ನ ಸಂವಿಧಾನದಲ್ಲಿ ಬದಲಾವಣೆ ಮಾಡಿದಾಗಿನಿಂದಲೂ ಭಾರತದೊಂದಿಗಿನ ಅದರ ಸಂಬಂಧ ಸಮತೋಲನ ಕಳೆದುಕೊಂಡಿದೆ. ಇದರ ಲಾಭ ಪಡೆದು ಚೀನ ನೇಪಾಲವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂದು ನೇಪಾಲವು ಸಂವಿಧಾನದಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಭಾರತಕ್ಕೆ ಸಹಮತವಿರಲಿಲ್ಲ.
ನೇಪಾಲದಲ್ಲಿರುವ ಮಧೇಸಿಯರೊಂದಿಗೆ (ಭಾರತೀಯ ಮೂಲದ ಜನ) ಅಲ್ಲಿನ ಸಂವಿಧಾನ ತಾರತಮ್ಯ ಮಾಡುತ್ತದೆ ಎನ್ನುವುದು ಭಾರತದ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈ ವಿರೋಧಕ್ಕೆ ನೇಪಾಳ ಕ್ಯಾರೆ ಎನ್ನದಿದ್ದಾಗ, ನಮ್ಮ ದೇಶ ನೇಪಾಲದ ವಿರುದ್ಧ ಅಘೋಷಿತ ನಾಕಾಬಂದಿ ಹಾಕಿಬಿಟ್ಟಿತು.
ಇದರಿಂದಾಗಿ, ಹಠಾತ್ತನೆ ಆ ದೇಶದಲ್ಲಿ ಅಗತ್ಯ ವಸ್ತುಗಳ ಭಾರೀ ಕೊರತೆ ಎದುರಾಯಿತು. ಆಗ ನೇಪಾಳ ಸರಕಾರ ಚೀನದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿತು. ಚೀನ ತನ್ನ ಬಂದರು ಬಳಸಿಕೊಳ್ಳಲೂ ನೇಪಾಲಕ್ಕೆ ಅನುಮತಿ ನೀಡಿತು. ಅಲ್ಲದೇ, ತನ್ನ ಮಹತ್ವಾಕಾಂಕ್ಷಿ ಬಿಆರ್‌ಐ ಕಾರ್ಯಕ್ರಮದಲ್ಲೂ ಸೇರಿಸಿಕೊಂಡಿತು.
ಅಂದಿನಿಂದಲೂ ಕಟ್ಟರ್ ಕಮ್ಯೂನಿಷ್ಟರಾಗಿರುವ ಕೆ.ಪಿ.ಶರ್ಮಾ ಚೀನದ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿದ್ದಾರೆ. ಯಾವ ಮಟ್ಟಕ್ಕೆ ಎಂದರೆ, ಈಗ ನೇಪಾಲದ ಹಲವು ಶಾಲೆಗಳಲ್ಲಿ ಚೀನಿ ಭಾಷೆಯನ್ನೂ ಬೋಧಿಸಲಾಗುತ್ತಿದೆ. ಇದೆಲ್ಲದರ ಹೊರತಾಗಿಯೂ, ನೇಪಾಲಕ್ಕೆ ಹೆಚ್ಚು ದಿನ ಭಾರತದ ವಿರೋಧ ಕಟ್ಟಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ.
ಭಾರತದ ಮೇಲಿನ ಅವಲಂಬನೆಯನ್ನು ಸಂಪೂರ್ಣ ತಗ್ಗಿಸಿ ಚೀನದ ಕೈ ಹಿಡಿದುಕೊಳ್ಳಬೇಕು ಎಂಬ ನೇಪಾಳ ಸರಕಾರದ ಯೋಚನೆ, ಅಪಾಯಕಾರಿಯಾಗಿದ್ದು, ಟಿಬೆಟ್ – ಹಾಂಕಾಂಗ್‌ನಲ್ಲಿ ಚೀನ ಹೇಗೆ ದಾರ್ಷ್ಟ್ಯ ಮೆರೆಯುತ್ತಿದೆ ಎನ್ನುವುದನ್ನು ಅದು ಮರೆಯಬಾರದು. ಕೆ.ಪಿ. ಶರ್ಮಾಗೆ ಚೀನ ಆಪ್ತವಾಗಿರಬಹುದು, ಆದರೆ ನೇಪಾಲ-ಭಾರತದ ನಡುವಿನ ಸಾಂಸ್ಕೃತಿಕ ಸಂಬಂಧ-ಸಾಮ್ಯತೆ ಬಹಳ ಗಾಢವಾಗಿದ್ದು, ಭಾರತದೊಂದಿಗಿನ ಸ್ನೇಹವೇ ಅದಕ್ಕೆ ಶ್ರೀರಕ್ಷೆಯಾಗಬಲ್ಲದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.