Editorial; ಅನರ್ಹ ಬಿಪಿಎಲ್ ಕಾರ್ಡ್: ಶಾಶ್ವತ ಪರಿಹಾರ ಬೇಕು
Team Udayavani, Jul 10, 2024, 6:10 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನರ್ಹ ಬಿಪಿಎಲ್ ಕಾರ್ಡ್ ದಾರರನ್ನು ಪತ್ತೆ ಹಚ್ಚಿ ಅವರನ್ನು ಪಟ್ಟಿಯಿಂದ ಕೈ ಬಿಡುವಂತೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ್ದಾರೆ. ಅರ್ಹರಿಗೆ ಪಡಿತರ ಸಿಗಬೇಕು ಎಂಬ ಯೋಜನೆಯ ಸಾಕಾರಕ್ಕೆ ಮುಖ್ಯಮಂತ್ರಿಗಳ ಆದೇಶ ಸ್ವಾಗತಾರ್ಹವಾಗಿದೆ. ವಿಪರ್ಯಾಸ ಎಂದರೆ, ಇದು ಕೇವಲ ಕಾಗದದ ಮೇಲಿನ ಆದೇಶವಾಗಿ ಉಳಿಯುತ್ತಿದೆ! ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲವಾದ್ದರಿಂದ ವರ್ಷದಿಂದ ವರ್ಷಕ್ಕೆ ಅನರ್ಹ ಬಿಪಿಎಲ್ ಕಾರ್ಡುದಾರರ ಸಂಖ್ಯೆ ಹೆಚ್ಚಳವಾಗುತ್ತಿದೆ.
ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕುಟುಂಬಗಳಿದ್ದು, 4.37 ಕೋಟಿ ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಅಂದರೆ ಈ ಲೆಕ್ಕವನ್ನು ಗಂಭೀರವಾಗಿ ಪರಿಗಣಿಸಿದರೆ, ಒಟ್ಟಾರೆ ಜನಸಂಖ್ಯೆಯ ಶೇ.80ರಷ್ಟು ಕುಟುಂಬಗಳು ಬಡತನ ರೇಖೆಯ ಕೆಳಗೆ ಇದೆ. ಜತೆಗೆ, ಹೊಸ ಕಾರ್ಡ್‌ಗಳಿಗೆ ಸಲ್ಲಿಕೆಯಾಗಿರುವ 2.95 ಲಕ್ಷ ಅರ್ಜಿಗಳು ಬಾಕಿ ಇವೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದ್ದರೂ, ಬಿಪಿಎಲ್ ಕಾರ್ಡ್ ಪ್ರಮಾಣ ಕಡಿಮೆಯಾಗಿಲ್ಲ! ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಬಿಪಿಎಲ್ ಪ್ರಮಾಣ ಶೇ.40ರಷ್ಟಿದೆ. ನಮ್ಮಲ್ಲಿ ಇದರ ದುಪ್ಪಟ್ಟಿದೆ. ಈ ಕುರಿತು ಪರಿಶೀಲನೆ ನಡೆಸಿ, ಅನರ್ಹರರನ್ನು ಕೈಬಿಟ್ಟು, ಅರ್ಹರಿಗೆ ಮಾತ್ರವೇ ಯೋಜನೆಯ ಲಾಭ ದೊರೆಯುವಂತೆ ಮಾಡುವುದು ಅಗತ್ಯವಾಗಿದೆ. ಜತೆಗೆ, ಬಿಪಿಎಲ್ ಕಾರ್ಡ್‌ನಲ್ಲಿ ಮೃತ ಸದಸ್ಯರಿದ್ದರೆ ಅವರ ಹೆಸರನ್ನು ತೆಗೆದು ಹಾಕುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು.
ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆಯು ಪ್ರತೀ ವರ್ಷದ ವಾಡಿಕೆಯಂತಾಗಿದೆ! ಸರಕಾರದ ಬೇರೆ ಬೇರೆ ಯೋಜನೆಗಳಲ್ಲಿ “ನಕಲಿ’ ಮತ್ತು “ಅನರ್ಹ’ ಫಲಾನುಭವಿಗಳನ್ನು ತಂತ್ರಜ್ಞಾನದ ಸಹಾಯದ ಮೂಲಕ ಗುರುತಿಸಲು ಸಾಧ್ಯವಾಗುತ್ತಿರುವಾಗ, ಬಿಪಿಎಲ್ ಅನರ್ಹ ಕಾರ್ಡ್‌ದಾರರನ್ನು ಗುರುತಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಯಕ್ಷ ಪ್ರಶ್ನೆ ಎಲ್ಲರ ಮುಂದಿದೆ. ಇದಕ್ಕೆ ಸರಕಾರವೇ ಉತ್ತರಿಸಬೇಕು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು “ಅನರ್ಹ ಬಿಪಿಎಲ್ ಕಾರ್ಡ್’ದಾರರ ಸಮಸ್ಯೆಯನ್ನು ಮಟ್ಟ ಹಾಕಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಡ್ ನೀಡುವಾಗಲೇ ತಳಮಟ್ಟದ ಪರೀಕ್ಷೆ ಮತ್ತು ಪರಿಶೀಲನೆ ನಡೆಸಬೇಕು. ಆಗ ಅರ್ಧಕ್ಕರ್ಧ ಸಮಸ್ಯೆ ಬಗೆಹರಿಯುತ್ತದೆ. ಇಲ್ಲದಿದ್ದರೆ, ಇದು ಪ್ರತೀ ವರ್ಷದ ಪ್ರಹಸನವಾಗಿಯೇ ಮುಂದುವರಿಯುತ್ತದೆ.
ಇನ್ನು ನಾಗರಿಕರಾಗಿ ಈ ವಿಷಯದಲ್ಲಿ ನಾವು ಪ್ರಜ್ಞಾವಂತಿಕೆಯನ್ನು ಮೆರೆಯಬೇಕಿದೆ. ಬಿಪಿಎಲ್ ಕಾರ್ಡ್ ಪಡೆಯಲು ನಾವು ಅರ್ಹರಾ ಗಿದ್ದೇವೆಯೇ ಅಥವಾ ಇಲ್ಲವೇ ಎಂಬುದು ನಮಗೆ ಗೊತ್ತೇ ಇರುತ್ತದೆ. ಹಾಗಿದ್ದೂ ಸರಕಾರದ ಯೋಜನೆಯ ಆಸೆಗಾಗಿ ಹಲವರು ತಪ್ಪು ಮಾಹಿತಿ ನೀಡಿ, ಕಾರ್ಡ್ ಪಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸರಕಾರಿ ಕೆಲಸದಲ್ಲಿರುವವರು, ವಾಹನಗಳನ್ನು ಹೊಂದಿರುವವರು, ಒಳ್ಳೆಯ ಆದಾಯ ಇರುವವರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್‌ಗಳಿರುವುದು ಈ ಹಿಂದೆ ಪತ್ತೆಯಾಗಿದ್ದವು. ಈಗಲೂ ಸಮಗ್ರವಾಗಿ ಪರಿಶೀಲನೆ ನಡೆಸಿದರೆ, ಈ ರೀತಿಯ ಪ್ರಕರಣಗಳು ಪತ್ತೆಯಾ ಗಬಹುದು. ಉಳ್ಳವರು ಬಿಪಿಎಲ್ ಕಾರ್ಡ್ ಪಡೆಯುವುದು, ಅರ್ಹರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬುದನ್ನು ಮರೆಯಬಾರದು. ಎಲ್ಲ ಇದ್ದೂ ಬಿಪಿಎಲ್ ಕಾರ್ಡ್ ಪಡೆಯುವ ಪ್ರವೃತ್ತಿಯು, ನಾಗರಿಕರಾಗಿ ನಾವು ನಮ್ಮ ನೈತಿಕತೆಯನ್ನು ಕೈ ಬಿಟ್ಟಿರುವುದನ್ನೂ ಸೂಚಿಸುತ್ತದೆ. ಅನರ್ಹ ಬಿಪಿಎಲ್ ಕಾರ್ಡ್ ಸಮಸ್ಯೆಯ ನಿವಾರಣೆಯಲ್ಲಿ ಸರಕಾರದ ಎಷ್ಟು ಪಾಲಿದೆಯೋ ಅಷ್ಟೇ ಪಾಲು ನಾಗರಿಕರದ್ದೂ ಇದೆ ಎಂಬುದನ್ನು ಮರೆಯಬಾರದು. ಹಾಗಾಗಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ವೈಜ್ಞಾನಿಕವಾದ ವ್ಯವಸ್ಥೆಯನ್ನು ರಚಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಯೋಚಿಸಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.