ಮುಗ್ಧರೂ ಜೈಲು ಸೇರುವ ಪರಿ!
Team Udayavani, Apr 18, 2018, 4:24 PM IST
ನ್ಯಾಯದೇವತೆಯ ಅಂಗಳದಲ್ಲಿ ಕೆಲವೊಮ್ಮೆ ಮುಗ್ಧªರೂ ಜೈಲು ಪಾಲಾಗುವ ತೀರ್ಪಿಗೆ ಒಳಗಾಗಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಪ್ರಕರಣಗಳ ವಿಚಾರಣೆಗೆಂದೇ ಕೋರ್ಟಿಗೆ ಅಲೆದಾಡಬೇಕಾಗುತ್ತದೆ. ನ್ಯಾಯಕ್ಕಾಗಿ ಹೋರಾಟ ನಡೆಸುವ ಸಮಯದಲ್ಲಿ ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನೇ ಕಳೆದುಕೊಳ್ಳಬೇಕಾಗುತ್ತದೆ. ತಪ್ಪು ಮಾಡದೆ ಜೈಲು ಪಾಲಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆಯಲ್ಲ, ಅದೇ ನರಕ ಸದೃಶ. ಸ್ವಾಮಿ ಅಸೀಮಾನಂದ ಮತ್ತು ಅವರೊಡನೆ ಜೈಲು ಪಾಲಾದ ಇತರ ನಾಲ್ವರ ಪರಿಸ್ಥಿತಿ ಇದಕ್ಕೆ ಭಿನ್ನವಾದುದೇನಲ್ಲ. ಆಂಧ್ರಪ್ರದೇಶದ ಮೆಕ್ಕಾ ಮಸೀದಿಯಲ್ಲಿ ಹನ್ನೊಂದು ವರ್ಷಗಳ ಹಿಂದೆ ಸಂಭವಿಸಿದ ಬಾಂಬ್ ನ್ಪೋಟ ಪ್ರಕರಣದಲ್ಲಿ ಅಸೀಮಾನಂದ ಮತ್ತು ಇತರ ನಾಲ್ವರು ಶಿಕ್ಷೆಗೊಳಗಾಗಿ ಜೈಲು ಪಾಲಾಗಬೇಕಾಯಿತು.
ಇದೀಗ ಎನ್‌ಐಎ ವಿಶೇಷ ನ್ಯಾಯಾಲಯ ಇಷ್ಟೂ ಜನರನ್ನು ದೋಷಮುಕ್ತಗೊಳಿಸಿದೆ. ಸಾಕ್ಷ್ಯಾಧಾರ ಗಳ ಕೊರತೆಯೇ ದೋಷಮುಕ್ತಗೊಳಿಸಲು ನ್ಯಾಯಾಲಯ ನೀಡಿದ ಪ್ರಮುಖ ಕಾರಣ. ಅಸೀಮಾನಂದ ಜತೆಗೆ ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮ, ಭರತ್ ಮೋಹನ್ ಲಾಲ್ ರಾತೇಶ್ವರ್ ಮತ್ತು ರಾಜೇಂದ್ರ ಚೌಧರಿ ಅವರನ್ನೂ ಬಿಡುಗಡೆಗೊಳಿಸಲಾಗಿದೆ. ಹಿಂದು ಸಂಘಟನೆಯ ವ್ಯಕ್ತಿಗಳು ಈ ಪ್ರಕರಣದಲ್ಲಿ ಸಿಲುಕಿದ್ದರಿಂದಲೇ ದೇಶವ್ಯಾಪಿ ಪ್ರಕರಣ ಭಾರೀ ಪ್ರಚಾರಕ್ಕೆ ಒಳಗಾಗಿತ್ತು. ಕೇಸರಿ ಭಯೋತ್ಪಾದನೆ ಎಂಬ ಹೊಸ ವ್ಯಾಖ್ಯಾನವನ್ನು ಹೆಣೆಯಲು ಅಂದಿನ ಕೇಂದ್ರದ ಯುಪಿಎ ಸರ್ಕಾರ ಹೂಡಿದ ಫಲಿತಾಂಶ ಅದಾಗಿತ್ತು. ಅಂದಿನ ಸಂದರ್ಭದಲ್ಲಿ ಯುಪಿಎ ಸರ್ಕಾರ ತನ್ನ ಕಾರ್ಯತಂತ್ರದಲ್ಲಿ ಯಶಸ್ಸನ್ನು ಕಂಡಿತ್ತು. ಹಿಂದು ಸಂಘಟನೆಗಳ ಆಯ್ದ ಪ್ರಮುಖರನ್ನು ಜೈಲಿಗೆ ಕಳುಹಿಸಿ, ಸನ್ಯಾಸಿಗಳ ಬಗ್ಗೆ ದೇಶದ ಜನರಿಗೆ ಸಂಶಯ ಬರುವ ರೀತಿಯಲ್ಲಿ ಆರೋಪ ಮತ್ತು ಸಾಕ್ಷ್ಯಗಳನ್ನು ಸಿದ್ದಪಡಿಸಿತ್ತು ಯುಪಿಎ ಸರ್ಕಾರ. ಅದಕ್ಕಾಗಿ ಸಿಬಿಐ ದುರ್ಬಳಕೆ ಮಾಡಿಕೊಂಡಿತ್ತು ಎಂದೇ ಹೇಳಬಹುದು.
ಸಮಾಜದಲ್ಲಿ ನಾನಾ ರೀತಿಯ ಸೇವೆಗಳನ್ನು ಮಾಡುತ್ತ, ಸಮಾಜದ ಸ್ವಾಸ್ಥ್ಯದ ಬಗ್ಗೆಯೇ ಯೋಚನೆ ಮತ್ತು ಕೆಲಸ ಮಾಡುವವರಿಗೆ ಹೀಗೆ ಹಠಾತ್ ಆರೋಪಗಳ ಮೂಲಕ ಚಾರಿತ್ರ್ಯವಧೆ ಮಾಡುವ ಕೆಲಸ ಸರ್ಕಾರದಿಂದಲೇ ಆಗಿದ್ದು ವಿಪರ್ಯಾಸ. ಅಸೀಮಾನಂದ ಅವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, ಈಗ ಆರೋಪ ಮುಕ್ತರಾದರು. ಆದರೆ, ಇವರ ಮೇಲೆ ಇದುವರೆಗೆ ಸಮಾಜದಲ್ಲಿ ಇದ್ದ ಕೆಟ್ಟ ಹೆಸರಿನಿಂದಾಗಿ ಅವರು ಅನುಭವಿಸಿದ ಅವಮಾನ, ಮುಜುಗರವನ್ನು ಇಲ್ಲವಾಗಿಸಲು ಸಾಧ್ಯವಾದೀತೇ? ದೇಶವನ್ನು ಆಳುವ ಯಾವುದೇ ಸರ್ಕಾರಕ್ಕೆ ಇದೊಂದು ಎಚ್ಚರಿಕೆಯ ಗಂಟೆ. ರಾಜಕೀಯ ದುರುದ್ದೇಶವೊಂದೇ ಸರ್ಕಾರಕ್ಕೆ ಇರಕೂಡದು. ಪೋಲೀಸರ ತನಿಖೆಯಲ್ಲಿ ಹಸ್ತಕ್ಷೇಪ ಯಾವ ರೀತಿ ಮಾಡಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ
ಯಾಗಿದೆ. ತಮ್ಮ ಅನುಕೂಲಕ್ಕೆ ತನಿಖೆಯ ದಿಕ್ಕನ್ನು ಬದಲಾಯಿಸಿ, ತಮಗೆ ಆಗದವರನ್ನು ಜೈಲಿಗೆ ಕಳುಹಿಸಲು ಸಂಚು ಹೂಡಬಾರದು ಎಂಬ ಪಾಠ ಕಲಿಯಬೇಕಾಗಿದೆ.
ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಪಕ್ಷಗಳೇ ಇರಲಿ, ದ್ವೇಶವನ್ನು ಸಾಧಿಸುವ ಪರಿಪಾಠ ಇಟ್ಟುಕೊಳ್ಳಲೇಬಾರದು. ಅಂದು ಪ್ರಕರಣ ಸಂಭವಿಸಿದಾಗ ಕೇಂದ್ರದಲ್ಲಿ ಗೃಹಸಚಿವರಾಗಿದ್ದರು ಶಿವರಾಜ್ ಪಾಟೀಲ್. ಪ್ರತಿ ಬಾರಿಯೂ ಬಾಂಬ್ ಸ್ಫೋಟ ಸಂಭವಿಸಿದಾಗ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ತಪ್ಪಿತಸ್ಥರನ್ನು ಶೀಘ್ರವೇ ಸೆರೆಹಿಡಿ ಯಲಾಗುವುದು ಎಂದು ಹೇಳಿಕೆ ನೀಡುವುದರಲ್ಲೇ ನಿಸ್ಸೀಮರಾಗಿದ್ದವರು ಪಾಟೀಲರು. ಇದಕ್ಕಿಂತ ಬೇರೇನೂ ಅವರು ಸಾಧಿಸಲಿಲ್ಲ. ಇದೇ ವೈಫಲ್ಯದಿಂದಾಗಿ ಅವರು ಹುದ್ದೆಯನ್ನೇ ಕಳೆದುಕೊಳ್ಳಬೇಕಾಯಿತು. ಆದರೆ, ಅವರ ಗೃಹ ಸಚಿವ ಹುದ್ದೆಯ ಅವಧಿಯಲ್ಲಿ ಸಮಾಜ ವಿದ್ರೋಹಿಗಳನ್ನು ಸದೆಬಡಿಯುವುದಕ್ಕಿಂತ ಅಸೀಮಾನಾಂದ ರಂತಹ ಮುಗ್ಧರನ್ನು ಆರೋಪಿಗಳನ್ನಾಗಿ ಮಾಡಿದರು.
ಯುಪಿಎ ಸರ್ಕಾರ ವರ್ಚಸ್ಸನ್ನು ಕಳೆದುಕೊಳ್ಳಲು ಇಂತಹ ಪ್ರಕರಣಗಳೂ ಕಾರಣವಾಯಿತು. ಸ್ವಾಮಿ ಅಸೀಮಾನಂದ ಆರೋಪಮುಕ್ತರಾಗುವ ಸುದ್ದಿ ಸೋಮವಾರ ಬಿತ್ತರವಾದ ಕೆಲವೇ ಹೊತ್ತಿಗೆ ತೀರ್ಪು ನೀಡಿದ ನ್ಯಾಯಾಧೀಶರೂ ರಾಜೀನಾಮೆ ನೀಡಿದ್ದು ಅಚ್ಚರಿಯ ಸಂಗತಿ. ಇದರ ಹಿಂದೆ ಏನಾದರೂ ನಡೆಯಿತೇ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಆದಕ್ಕಾಗಿಯೇ ಅವರ ರಾಜೀನಾಮೆಗೆ ನಿಖರ ಕಾರಣಗಳೂ ಬಹಿರಂಗಗೊಂಡರೆ ಒಳ್ಳೆಯದು. ಇಲ್ಲದಿದ್ದಲ್ಲಿ ರಾಜೀನಾಮೆಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಗದೇ ಹೋಗಬಹುದು. ನ್ಯಾಯದೇಗುಲದ ಗೌರವಕ್ಕೆ ಚ್ಯುತಿ ಬಾರದಿರಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.