ಇಂಟರ್‌ನೆಟ್ ಸ್ಥಾಗಿತ್ಯವೊಂದೇ ಪರಿಹಾರವಲ್ಲ
Team Udayavani, Dec 23, 2019, 4:26 AM IST
ಅನೇಕ ದೇಶಗಳು ಇಂಟರ್‌ನೆಟ್ ಸೇವೆಯನ್ನು ಜನರ ಮೂಲಭೂತ ಹಕ್ಕು ಎಂದು ಪರಿಗಣಿಸಿವೆ. ನಮ್ಮ ದೇಶದಲ್ಲಿ ಇನ್ನೂ ಇಂಟರ್‌ನೆಟ್ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಬಂದಿಲ್ಲ. ಆದರೆ ನ್ಯಾಯಾಲಯಗಳು ಆಗಾಗ ಈ ಕುರಿತು ಆಳುವವರನ್ನು ಎಚ್ಚರಿಸುತ್ತಿವೆ.
ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಯ ಕಾವು ಹೆಚ್ಚುತ್ತಿರುವಂತೆ ಅದನ್ನು ನಿಯಂತ್ರಿಸಲು ಆಡಳಿತ ವ್ಯವಸ್ಥೆ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸುವುದು ಸೇರಿದಂತೆ ಹಲವು ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಂಗಳೂರಿನಲ್ಲೂ ಗೋಲಿಬಾರ್‌ಗೆ ಇಬ್ಬರು ಬಲಿಯಾದ ಬಳಿಕ ಎರಡು ದಿನ ಕರ್ಫ್ಯೂ ವಿಧಿಸಿದ್ದಲ್ಲದೆ 48 ತಾಸು ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಈಗ ಹಿಂಸಾಚಾರ ನಡೆದಾಗೆಲ್ಲ ಪೊಲೀಸರು ಮೊದಲು ಮಾಡುವ ಕೆಲಸ ಇಂಟರ್‌ನೆಟ್ ಸ್ಥಗಿತಗೊಳಿಸುವುದು. ವದಂತಿಗಳನ್ನು ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು ಇದಕ್ಕಿರುವ ಕಾರಣ. ಆದರೆ ಇಂಟರ್‌ನೆಟ್ ಸ್ಥಾಗಿತ್ಯದಿಂದ ಆಗುವ ಇತರ ಸಮಸ್ಯೆಗಳತ್ತ ತುಸು ಗಮನ ಹರಿಸುವುದು ಕೂಡ ಅಗತ್ಯ.
ಮಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಇಂಟರ್‌ನೆಟ್ ಇಲ್ಲದ ಪರಿಣಾಮವಾಗಿ ಎರಡು ದಿನ ಓಲಾ, ಉಬರ್ ಟ್ಯಾಕ್ಸಿ ಚಾಲಕರು ಬಾಡಿಗೆ ಇಲ್ಲದೆ ಖಾಲಿ ಕುಳಿತರು, ಝೊಮಟೊ, ಸ್ವಿಗ್ಗಿಯಂಥ ಆಹಾರ ಪೂರೈಕೆ ಜಾಲದ ಹುಡುಗರು ಎರಡು ದಿನ ಕೆಲಸವಿಲ್ಲದೆ ಪರದಾಡಿದರು. ಪತ್ರಿಕೆ, ಟಿವಿ ವಾಹಿನಿ ವರದಿಗಾರರು ಸುದ್ದಿ ಕಳುಹಿಸಲು ಹರಸಾಹಸ ಪಡಬೇಕಾಯಿತು. ವಿದ್ಯಾರ್ಥಿಗಳಿಗೆ ಸಂವಹನ ಸಾಧ್ಯವಾಗದೆ ಕಷ್ಟವಾಯಿತು. ಹೀಗೆ ಇಂಟರ್‌ನೆಟ್ ಸೇವೆಯನ್ನು ಅವಲಂಬಿಸಿ ನಡೆಯುವ ಅನೇಕ ವ್ಯಾಪಾರ ವಹಿವಾಟುಗಳು ಬಾಧಿತವಾಯಿತು. ಇದು ಮಂಗಳೂರಿನ ಕತೆ ಮಾತ್ರವಲ್ಲ ದೇಶದ ಯಾವುದೇ ಭಾಗದಲ್ಲಿ ಇಂಟರ್‌ನೆಟ್ ಸ್ಥಗಿತಗೊಂಡಾಗಲೂ ಹೀಗೆ ಆಗುತ್ತದೆ. ಆದರೆ ಆಳುವವರ ದೃಷ್ಟಿಗೆ ಇದು ದೊಡ್ಡ ಸಮಸ್ಯೆಯಾಗಿ ಕಾಣದಿರುವುದು ಮಾತ್ರ ದುರದೃಷ್ಟಕರ.
ಕಾಶ್ಮೀರದಲ್ಲಿ ಸುಮಾರು ನಾಲ್ಕು ತಿಂಗಳಿಂದ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದೆ. ಬರೀ 48 ತಾಸು
ಇಂಟರ್‌ನೆಟ್ ಇಲ್ಲದೆ ನಾವು ಇಷ್ಟು ಅಸಹಾಯಕರಾಗಬೇಕಾದರೆ ಅಲ್ಲಿನ ಜನರ ಸ್ಥಿತಿ ಏನಿರಬಹುದು? ಅಲ್ಲಿನ ಅರ್ಥ ವ್ಯವಸ್ಥೆಯ ಬೆನ್ನೆಲು ಬಾಗಿರುವ ಪ್ರವಾಸೋದ್ಯಮಕ್ಕೆ ಎಷ್ಟು ಹೊಡೆತ ಬಿದ್ದಿರಬಹುದು ಎನ್ನುವುದನ್ನು ಕೂಡಾ ಆಲೋಚಿ ಸಬೇಕಾಗಿದೆ.
ನಮ್ಮ ದೇಶದಲ್ಲಿ ಈ ವರ್ಷವೊಂದರಲ್ಲೇ 95 ಸಲ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎನ್ನುವುದು ಉತ್ತಮ ದಾಖಲೇಯೇನಲ್ಲ. ಜಗತ್ತಿನಾದ್ಯಂತದ ಇಂಟರ್‌ನೆಟ್ ಸ್ಥಾಗಿತ್ಯದಲ್ಲಿ ಭಾರತದ ಪಾಲು ಶೇ.65 ಎನ್ನುತ್ತದೆ ಒಂದು ವರದಿ. ನಮ್ಮ ಸರಕಾರಗಳು ನಿತ್ಯ ಡಿಜಿಟಲ್ ಇಂಡಿಯಾ, ನಗದು ರಹಿತ ವ್ಯವಹಾರದ ಮಂತ್ರವನ್ನು ಜಪಿಸುತ್ತಿವೆ. ಕ್ಷಿಪ್ರವಾಗಿ ದೇಶವನ್ನು ಡಿಜಿಟಲೀಕರಣ ಮಾಡಲು ಮುಂದಾಗಿರುವ ದೇಶದಲ್ಲಿ ಡಿಜಿಟಲೀಕರಣದ ಜೀವಾಳವಾಗಿರುವ ಇಂಟರ್‌ನೆಟ್ ಮೇಲೆ ಇಷ್ಟು ನಿರ್ಬಂಧ ಇಟ್ಟುಕೊಳ್ಳುವುದು ಸರಿಯಲ್ಲ.
ಅನೇಕ ದೇಶಗಳು ಇಂಟರ್‌ನೆಟ್ ಸೇವೆಯನ್ನು ಜನರ ಮೂಲಭೂತ ಹಕ್ಕು ಎಂದು ಪರಿಗಣಿಸಿವೆ. ನಮ್ಮ ದೇಶದಲ್ಲಿ ಇನ್ನೂ ಇಂಟರ್‌ನೆಟ್ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಬಂದಿಲ್ಲ. ಆದರೆ ನ್ಯಾಯಾಲಯಗಳು ಆಗಾಗ ಈ ಕುರಿತು ಆಳುವವರನ್ನು ಎಚ್ಚರಿಸುತ್ತಿವೆ. ಕೇರಳದ ಹೈಕೋರ್ಟ್ ಕೆಲ ತಿಂಗಳ ಹಿಂದೆ ಪ್ರಕರಣವೊಂದರಲ್ಲಿ ಜನರ ಇಂಟರ್‌ನೆಟ್ ಸೌಲಭ್ಯ ಪಡೆದುಕೊಳ್ಳುವ ಹಕ್ಕನ್ನು ನಿರ್ಬಂಧಿಸುವುದು ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವುದಕ್ಕೆ ಸಮ ಎಂಬ ತೀರ್ಪು ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈಗ ಜಗತ್ತು ನಡೆಯುವುದೇ ಇಂಟರ್‌ನೆಟ್ ಮೂಲಕ ಎಂಬ ಪರಿಸ್ಥಿತಿಯಿದೆ. ಹೀಗಿರುವಾಗ ದಿನಗಟ್ಟಲೆ ಜನರಿಗೆ ಇಂಟರ್‌ನೆಟ್ ಲಭ್ಯವಾಗದಂತೆ ಮಾಡುವುದೆಂದರೆ ಅವರ ಹಕ್ಕುಗಳನ್ನು ಕಿತ್ತುಕೊಂಡಂತೆಯೇ. ಪ್ರತಿಭಟನೆ, ಪ್ರಕ್ಷುಬ್ಧ ತೆಯಂಥ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಇಂಟರ್‌ನೆಟ್ ಮೂಲಕ ಕಾರ್ಯವೆಸಗುವ ಹಲವು ಸಾಮಾಜಿಕ ಮಾಧ್ಯಮ ಆ್ಯಪ್‌ಗ್ಳು ಕಾರಣವಾಗುತ್ತವೆ ಎನ್ನುವುದು ನಿಜ.
ಹಾಗೆಂದು ಇದೊಂದೇ ಕಾರಣಕ್ಕೆ ದಿನಗಟ್ಟಲೆ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸುವ ಕ್ರಮ ಸರಿಯಲ್ಲ. ಇಂಥ ಸಂದರ್ಭದಲ್ಲಿ ಆಳುವ ವ್ಯವಸ್ಥೆ ಜನರಲ್ಲಿ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು. ಇಂಟರ್‌ನೆಟ್ ಸ್ಥಗಿತಗೊಳಿಸುವ ಬದಲು ಪ್ರಚೋದನಕಾರಿ ವಿಷಯಗಳ ಸೃಷ್ಟಿಯ ಮೂಲವನ್ನು ಪತ್ತೆಹಚ್ಚಿ ಕಠಿನ ಕ್ರಮ ಕೈಗೊಳ್ಳಬೇಕು. ಎಲ್ಲ ಸಮಸ್ಯೆಗಳಿಗೂ ಇಂಟರ್‌ನೆಟ್ ಸ್ಥಾಗಿತ್ಯವೊಂದೇ ಪರಿಹಾರವಲ್ಲ ಎನ್ನುವುದನ್ನು ಆಳುವವರು ಅರ್ಥಮಾಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.