ಐಪಿಎಲ್ ಯಶಸ್ಸು ಗಂಗೂಲಿ ಯಶಸ್ಸೂ ಹೌದು
Team Udayavani, Nov 12, 2020, 6:30 AM IST
ಕೆಲವೊಂದು ಸಂದರ್ಭ, ಸನ್ನಿವೇಶ, ಘಟನೆಗಳೇ ಹಾಗೆ. ಆರಂಭದಲ್ಲಿ ಅಗ್ನಿಪರೀಕ್ಷೆಗಳನ್ನೊಡ್ಡಿ, ಕಂಗಾಲು ಮಾಡಿ, ಮುಕ್ತಾಯದ ಹೊತ್ತಿಗೆ ಶಾಂತಿ, ನೆಮ್ಮದಿ, ನಿಟ್ಟುಸಿರಿಗೆ ಕಾರಣವಾಗುತ್ತವೆ. 2020ರ ಐಪಿಎಲ್ ಅನ್ನು ಇದೇ ವರ್ಗಕ್ಕೆ ಸೇರಿಸಬಹುದು. ಈ ಬಾರಿ ಇಡೀ ಜಗತ್ತಿನಲ್ಲಿ ಕೊರೊನಾ ಅಬ್ಬರವಿದ್ದಾಗ ಐಪಿಎಲ್ ನಡೆಯುವುದಿರಲಿ, ಅದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಕ್ರೀಡಾ ಜಗತ್ತಿನಲ್ಲಂತೂ ಒಲಿಂಪಿಕ್ಸ್ ಕ್ರೀಡಾಕೂಟವೇ ಒಂದೇ ಏಟಿಗೆ ರದ್ದಾಗಿ, ಪರಿಸ್ಥಿತಿಯ ತೀವ್ರತೆಯನ್ನು ತೋರಿಸಿತು. ಆ ಕೂಟ ಮುಂದಿನ ವರ್ಷವೂ ನಡೆಯುವುದು ಅನುಮಾನ. ಇನ್ನು ಟೆನಿಸ್, ಬ್ಯಾಡ್ಮಿಂಟನ್, ಫುಟ್‌ಬಾಲ್, ಶೂಟಿಂಗ್, ಅಮೆರಿಕದ ವಿಶ್ವವಿಖ್ಯಾತ ಬಾಸ್ಕೆಟ್‌ಬಾಲ್ ಲೀಗ್, ಸಣ್ಣಪುಟ್ಟ ಕೂಟಗಳ ಸಂಘಟಕರು ಅಪಾಯ ಮೈಮೇಲೆ ಹಾಕಿಕೊಳ್ಳುವ ಮನಸ್ಸು ಮಾಡದೇ ರದ್ದು ಮಾಡಿಬಿಟ್ಟರು. ಕ್ರಿಕೆಟ್ ವಿಷಯಕ್ಕೇ ಬಂದರೆ, ದ್ವಿಪಕ್ಷೀಯ ಸರಣಿಗಳಂತೂ ಮರುಯೋಚನೆಗೆ ಆಸ್ಪದವಿಲ್ಲದಂತೆ ನಿಂತುಹೋದವು. ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ನಡೆಯುವ ಬಗ್ಗೆ ದೀರ್ಘಕಾಲ ಗೊಂದಲವಿತ್ತು. ಕಡೆಗೆ ಅದೂ ರದ್ದಾಯಿತು.
ಟಿ20 ವಿಶ್ವಕಪ್ ರದ್ದಾಗಿದ್ದೇ ಆಗಿದ್ದು ಬಿಸಿಸಿಐಗೆ ಭಾರೀ ಬೆಳಕೊಂದು ಕಾಣಿಸಿತು. ಈ ವರ್ಷ ಐಪಿಎಲ್ ಸಾಧ್ಯವೇ ಇಲ್ಲ ಎಂದು ಎಲ್ಲರೂ ಭಾವಿಸಿದ್ದಾಗಲೇ ಸೌರವ್ ಗಂಗೂಲಿ ಅಧ್ಯಕ್ಷತೆಯ ಬಿಸಿಸಿಐ, ಕೂಟವನ್ನು ನಡೆಸುವ ಬಗ್ಗೆ ಲೆಕ್ಕಾಚಾರ ಶುರು ಮಾಡಿತು. ಆದರೆ ಕೂಟವನ್ನು ಹೇಗೆ ನಡೆಸುವುದು ಎನ್ನುವುದು ದೊಡ್ಡ ಪ್ರಶ್ನೆ. ಜನರನ್ನಂತೂ ಒಳಬಿಡುವ ಹಾಗೆಯೇ ಇಲ್ಲ. ಇನ್ನು ರೋಚಕತೆ ಹೇಗೆ ಸಾಧ್ಯ? ಇಂತಹ ಮೂಲಭೂತ ಪ್ರಶ್ನೆಗಳನ್ನಿಟ್ಟುಕೊಂಡೇ ಹೊರಟ ಬಿಸಿಸಿಐ, ಮೊದಲ ಹೆಜ್ಜೆಯಾಗಿ ಯುಎಇಗೆ ಕೂಟವನ್ನು ವರ್ಗಾಯಿಸುವುದು ಎಂದು ತೀರ್ಮಾನಿಸಿತು. ಅಲ್ಲಿಗೆ ಅರ್ಧ ತಲೆಬಿಸಿ ಮುಗಿಯಿತು. ಯುಎಇಯಲ್ಲಿರುವ ಮೂರು ಮೈದಾನಗಳು ಹತ್ತಿರದಲ್ಲೇ ಇರುವುದರಿಂದ ಸುರಕ್ಷಿತವಾಗಿ ಸಂಘಟಿಸಲು ಸಾಧ್ಯ ಎಂಬ ಲೆಕ್ಕಾಚಾರ ಇಲ್ಲಿತ್ತು.
ಆದರೆ ಯುಎಇಯಲ್ಲಿನ ದೊಡ್ಡ ಸಮಸ್ಯೆ ಅಲ್ಲಿನ ಉರಿಬಿಸಿಲು. ಅದಕ್ಕಿಂತ ದೊಡ್ಡ ತಲೆಬೇನೆ ಕೊರೊನಾ. ಈ ರೋಗದ ಕಾರಣಕ್ಕೆ ಪ್ರತ್ಯೇಕವಾಸ, ಜೈವಿಕ ಸುರûಾ ವಲಯ, ಅದನ್ನು ಉಲ್ಲಂ ಸಿದರೆ ಎದುರಿಸಬೇಕಾದ ಕ್ರಮಗಳು…ಈ ಸರಣಿ ಸಮಸ್ಯೆಗಳು ಆಟಗಾರರು, ಸಂಘಟಕರನ್ನು ಕಾಡಿದವು. ಒಬ್ಬರಿಗೆ ಅನಾರೋಗ್ಯವಾದರೂ ಸರಪಳಿಯಂತೆ ಅದು ಉಳಿದವರನ್ನೂ ಬಾಧಿಸುತ್ತದೆ. ಅಲ್ಲದೇ ವಾರಕ್ಕೆ ಮೂರು ಬಾರಿ ಕೊರೊನಾ ಪರೀಕ್ಷೆ, ಪ್ರತೀದಿನದ ವೈದ್ಯಕೀಯ ಪರೀಕ್ಷೆ. ಇವನ್ನೆಲ್ಲ ಮುಗಿಸುವಾಗ ಯುಎಇನಲ್ಲಿರುವವರು ಹೈರಾಣಾಗಿ ಹೋಗಿರುತ್ತಾರೆ. ಯಾರೇನೆ ಹೇಳಿದರೂ ಎರಡು ತಿಂಗಳ ದೀರ್ಘಕಾಲ ಜೈವಿಕ ಸುರûಾ ವಲಯದಲ್ಲಿ ಅಂದರೆ, ಹೊರಗಿನ ಜನರೊಂದಿಗೆ ಬೆರೆಯಲು ಅವಕಾಶವಿರದ, ಸೀಮಿತ ಜಾಗದಲ್ಲಿ ಬಂಧಿಯಾಗಿರಬೇಕಾದ ಸ್ಥಿತಿಯನ್ನು ನೆನಪಿಸಿಕೊಳ್ಳಿ…
ಇಂತಹ ಸವಾಲಿನ ಸನ್ನಿವೇಶಕ್ಕೆ ಆಟಗಾರರನ್ನು ಒಪ್ಪಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವ್ಯಕ್ತಿತ್ವದ ಪ್ರಭಾವ ಕೆಲಸ ಮಾಡಿತು. ಭಾರತ ಕ್ರಿಕೆಟ್ ನಾಯಕರಾಗಿ ಇಡೀ ತಂಡವನ್ನು ಮರುರೂಪಿಸಿದ ಅವರು, ಬಿಸಿಸಿಐ ಅಧ್ಯಕ್ಷರಾಗಿ ಈ ವ್ಯವಸ್ಥೆಯನ್ನು ಇಲ್ಲಿನ ವ್ಯವಸ್ಥೆಯನ್ನು ಪುನರ್‌ರೂಪಿಸಿದ್ದಾರೆ. ಈ ಬಾರಿಯ ಐಪಿಎಲ್ ಬಿಸಿಸಿಐನ ಯಶಸ್ಸು ಹೇಗೋ, ಗಂಗೂಲಿಯ ಯಶಸ್ಸೂ ಹೌದೆನ್ನುವುದು ಅಷ್ಟೇ ಸತ್ಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.