ಐಪಿಎಲ್ ಕೂಟದ ಅಮಾನತು; ಆಟಗಾರರ ದೃಷ್ಟಿಯಿಂದ ಉತ್ತಮ ನಿರ್ಧಾರ
Team Udayavani, May 5, 2021, 6:10 AM IST
ದೇಶದಲ್ಲಿ ಕೋವಿಡ್ ಭೀಕರ ಸ್ವರೂಪ ತಾಳಿರುವುದು ಐಪಿಎಲ್ ಮೇಲೂ ಪರಿಣಾಮ ಬೀರಿದೆ. ಕೋಲ್ಕತಾ ನೈಟ್‌ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗ ಳಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಪೈಕಿ ಚೆನ್ನೈ ಕಿಂಗ್ಸ್ ತಂಡದಲ್ಲಿನ ಯಾವ ಆಟಗಾರರಿಗೂ ಸೋಂಕು ತಗಲಿಲ್ಲ. ಆದರೆ ಸಹಾಯಕ ಸಿಬಂದಿ ಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದ ಮೂರೂ ತಂಡಗಳಲ್ಲಿ ಒಬ್ಬಿಬ್ಬರು ಆಟಗಾರರಿಗೆ ಕೊರೊನಾ ಬಂದಿರುವುದು ಖಾತ್ರಿಯಾಗಿದೆ. ಸೋಮವಾರ ಪ್ರಕರಣಗಳು ಬೆಳಕಿಗೆ ಬಂದಾಗ ಬಿಸಿಸಿಐ ಪಂದ್ಯಗಳನ್ನು ಮರುಹೊಂದಾಣಿಕೆ ಮಾಡಲು ಚಿಂತಿಸಿತ್ತು. ಮಂಗಳವಾರ ಇನ್ನೆರಡು ತಂಡಗಳಲ್ಲಿ ಸೋಂಕು ಕಾಣಿಸಿಕೊಂಡಾಗ ಕೂಟವನ್ನು ಮುಂದೂಡದೇ ಬೇರೆ ದಾರಿಯೇ ಇಲ್ಲ ಎನ್ನುವ ಸ್ಥಿತಿಗೆ ಬಿಸಿಸಿಐ ತಲುಪಿತು. ಕಾರಣ ಈ ನಾಲ್ಕು ತಂಡಗಳು ಉಳಿದ ನಾಲ್ಕು ತಂಡಗಳೊಂದಿಗೆ ಆಡಿವೆ. ಹಾಗಾಗಿ ಎದುರಾಳಿ ತಂಡಗಳ ಆಟಗಾರರಲ್ಲೂ ಸದ್ಯೋಭವಿಷ್ಯದಲ್ಲಿ ಸೋಂಕು ಕಾಣಿಸಿಕೊಳ್ಳುವುದು ಖಚಿತ.
ಈ ಪರಿಸ್ಥಿತಿಯಲ್ಲಿ ಪಂದ್ಯಗಳ ದಿನಾಂಕವನ್ನು ಮರು ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಅದರ ಬದಲು ಕೂಟವನ್ನು ಮುಂದೂಡುವುದೇ ಸುರಕ್ಷಿತ ದಾರಿ. ಇವೆಲ್ಲವನ್ನೂ ಪರಿಗಣಿಸಿಯೇ ಬಿಸಿಸಿಐ ಮಂಗಳವಾರ ಮುಂದೂಡಿಕೆ ನಿರ್ಧಾರವನ್ನು ಪ್ರಕಟಿಸಿದೆ. ಅರ್ಥಾತ್ ಮುಂದೆ ಸೂಕ್ತ ಸಂದರ್ಭ ನೋಡಿಕೊಂಡು ಬಿಸಿಸಿಐ ಐಪಿಎಲ್ ಅನ್ನು ಮುಂದುವರಿಸಲಿದೆ. ಯಾವ ದೇಶದಲ್ಲಿ ಎನ್ನುವುದು ಈಗಿನ ಪ್ರಶ್ನೆ. ಕಳೆದ ವರ್ಷವೂ ಕೊರೊನಾ ಕಾರಣದಿಂದ ಐಪಿಎಲ್ ರದ್ದು ಎಂದೇ ಹೇಳಲಾಗಿತ್ತು. ಆದರೆ ಕಡೆಗೂ ಬಿಸಿಸಿಐ ಸೆಪ್ಟಂಬರ್-ನವೆಂಬರ್ ಅವಧಿಯಲ್ಲಿ ಯುಎಇಯಲ್ಲಿ ಕೂಟವನ್ನು ನಡೆಸಲು ಯಶಸ್ವಿಯಾಗಿತ್ತು. ಇದರಲ್ಲಿ ಬೃಹತ್ ಹಣಕಾಸಿನ ಲೆಕ್ಕಾಚಾರವೂ ಇದೆ.
ಈ ವರ್ಷವೊಂದಕ್ಕೆ ನೇರಪ್ರಸಾರ ಮಾಡುವ ಸ್ಟಾರ್‌ನ್ಪೋರ್ಟ್ಸ್ ಬಿಸಿಸಿಐಗೆ 3,269 ಕೋಟಿ ರೂ. ನೀಡುತ್ತದೆ. ಇನ್ನು ವಿವೋದಿಂದ 440 ಕೋಟಿ ರೂ. ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬರುತ್ತದೆ. 220 ಕೋಟಿ ರೂ. ಇತರ ಪ್ರಾಯೋಜಕತ್ವದಿಂದ ಬರುತ್ತದೆ. ಪಂದ್ಯಗಳಲ್ಲಿ ಬರುವ ಟೈಮ್‌ಔಟ್, ಅಂಪೈರ್ ಪ್ರಾಯೋಜಕತ್ವ ರೂಪದಲ್ಲಿ 60 ಕೋಟಿ ರೂ. ಬರುತ್ತದೆ. ಒಂದು ವೇಳೆ ಕೂಟ ರದ್ದಾದರೆ ಬಿಸಿಸಿಐಗೆ ಹತ್ತಿರಹತ್ತಿರ 4,000 ಕೋಟಿ ರೂ.ಗಳ ನಷ್ಟ ಖಚಿತ. ಹಾಗೆಯೇ ಕೂಟದಲ್ಲಿ ಪಾಲ್ಗೊಳ್ಳುವ ಆಟಗಾರರು, ಸಹಾಯಕ ಸಿಬಂದಿ, ಅಂಪೈರ್‌ಗಳಿಗೆಲ್ಲ ಸೇರಿ ಸಾವಿರಾರು ಕೋಟಿ ರೂ. ತಪ್ಪಿಹೋಗುತ್ತದೆ. ಇನ್ನು ಪ್ರತಿ ಫ್ರಾಂಚೈಸಿಗಳು ಬೇರೆಬೇರೆ ರೂಪದಲ್ಲಿ ನೂರಾರು ಕೋಟಿ ರೂ. ನಷ್ಟವನ್ನು ಅನುಭವಿಸುತ್ತವೆ. ಇಂತಹ ಸ್ಥಿತಿಯಲ್ಲಿ ವಿದೇಶದಲ್ಲಾದರೂ ಸರಿಯೇ, ಕೂಟವನ್ನು ನಡೆಸಲೇಬೇಕು ಎಂಬ ಒತ್ತಡವನ್ನು ಬಿಸಿಸಿಐ ಅನುಭವಿಸುವುದು ಸಹಜ. ಆದ್ದರಿಂದ ಈ ತಿಂಗಳ ಕೊನೆಯಲ್ಲಿ ಕೂಟ ಬೇರೆ ದೇಶಕ್ಕೆ ಸ್ಥಳಾಂತರವಾಗುವ ಮಾಹಿತಿ ಸಿಕ್ಕಿದರೆ, ಆಶ್ಚರ್ಯವೇನಿಲ್ಲ.
ದೇಶದಲ್ಲಿ ಕೋವಿಡ್ ಹೆಚ್ಚುತ್ತಿದ್ದುರಿಂದಾಗಿ ಐಪಿಎಲ್ ಸ್ಥಗಿತ ಗೊಳಿಸ ಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇಡೀ ದೇಶವೇ ಸಂಕಷ್ಟದಲ್ಲಿರುವಾಗ ಇಂಥ ಕೂಟಗಳನ್ನು ನಡೆಸುವುದರಲ್ಲಿ ಅರ್ಥವಿದೆಯೇ ಎಂಬ ಮಾತುಗಳೂ ಕೇಳಿಬಂದಿದ್ದವು.
ಅಲ್ಲದೆ ಐಪಿಎಲ್ ಫ್ರಾಂಚೈಸಿಗಳು ಕೋವಿಡ್ ಸಂಕಷ್ಟದಲ್ಲಿರುವವರಿಗೆ ಹಣಕಾಸಿನ ಸಹಾಯ ಮಾಡಲಿ ಎಂದೂ ಆಗ್ರಹಿಸಲಾಗಿತ್ತು. ಈ ಆಕ್ಷೇಪಗಳ ನಡುವೆಯೇ ಐಪಿಎಲ್ ಕೂಟ ಮುಂದುವರಿದೇ ಇತ್ತು. ಈಗ ತನ್ನದೇ ಆಟಗಾರರಿಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಧಿ ಇಲ್ಲದೇ ಐಪಿಎಲ್ ಅನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ. ಒಟ್ಟಿನಲ್ಲಿ ಇದೊಂದು ಸಕಾಲಿಕ ಮತ್ತು ಉತ್ತಮ ನಿರ್ಧಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.