ಸಾಲ ಮನ್ನಾ ಸಮರ್ಪಕ ಪರಿಹಾರವೇ?
Team Udayavani, Dec 23, 2017, 11:20 AM IST
ಸಾಲ ಮನ್ನಾವನ್ನು ಜಾರಿಗೊಳಿಸಿದರೆ ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳ ಸಾಲ ವಸೂಲಾತಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಹಾಗೂ ಠೇವಣಿದಾರರಿಗೆ ಸಮಸ್ಯೆಯಾಗುತ್ತದೆ.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಕೃಷಿ ಕ್ಷೇತ್ರದ ಕೊಡುಗೆ ರಾಷ್ಟ್ರೀಯ ಆದಾಯದ 50%ರಷ್ಟು ಇತ್ತು. ಕಾಲಕ್ರಮೇಣ ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಕೊಡುಗೆಯು ಕುಗ್ಗುತ್ತಾ ಬಂದು ಈಗ ಅದು ಶೇ.15ಕ್ಕೆ ಕುಸಿದಿದೆ. ಕಳೆದ ಏಳು ದಶಕಗಳಲ್ಲಿ ಆಹಾರ ಉತ್ಪಾದನೆಯು ದ್ವಿಗುಣಗೊಂಡಿದೆ ಹಾಗೂ ಒಂದು ಅಂದಾಜಿನ ಪ್ರಕಾರ ಪ್ರಸ್ತುತ ವರ್ಷದಲ್ಲಿ 270 ಮಿಲಿಯ ಟನ್ ಉತ್ಪಾದನೆ ಯಾಗುವ ನಿರೀಕ್ಷೆಯಿದೆ. ಸ್ವಾತಂತ್ರÂದ ನಂತರ ಮೊತ್ತಮೊದಲು ಕೈಗಾರಿಕಾಭಿವೃದ್ಧಿಯತ್ತ ಸರಕಾರ ನಡೆ ಇಟ್ಟಿತು. ಅನಂತರ 1965ರಲ್ಲಿ ಹಸಿರು ಕ್ರಾಂತಿಯನ್ನು ಪ್ರಾರಂಭಿಸಿ ದೇಶಕ್ಕೆ ಬೇಕಾಗು ವಷ್ಟು ಆಹಾರವನ್ನು ಉತ್ಪಾದಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿ ಕ್ಷೇತ್ರಕ್ಕೆ ಬಹಳಷ್ಟು ಸವಲತ್ತುಗಳನ್ನು ಕೊಟ್ಟಿರು ತ್ತವೆ. ಇದಕ್ಕೆ ಪೂರಕವಾಗಿ ಆಹಾರ ಉತ್ಪಾದನೆಗೆ ಹಸಿರು ಕ್ರಾಂತಿ, ಹೈನುಗಾರಿಕೆಗೆ ಬಿಳಿ ಕ್ರಾಂತಿ, ಮೀನುಗಾರಿಕೆಗೆ ನೀಲಿ ಕ್ರಾಂತಿಯ ಯೋಜನೆಗಳನ್ನು ಹಾಕಿಕೊಂಡವು. ಇದರ ಜೊತೆಗೆ ಕೃಷಿಗೆ ಪ್ರೋತ್ಸಾಹ ನೀಡಲು ಕೃಷಿ ವಿಶ್ವವಿದ್ಯಾನಿಲಯಗಳು, ವಲಯ ಕೃಷಿ ಸಂಶೋಧನಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು, ರೈತಮಿತ್ರ ಕೇಂದ್ರಗಳು, ಅಗ್ರಿ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಯಿತು. ತೋಟಗಾರಿಕಾ ಮಿಷನ್ ಮೂಲಕ ಹೆಚ್ಚು ಇಳುವರಿಯನ್ನು ಪಡೆಯುವ ಹಾಗೂ ರಫ್ತಿಗೆ ಯೋಗ್ಯವಾದ ಬೆಳೆಗಳನ್ನು ಬೆಳೆಸಲು ರೈತರಿಗೆ ಪ್ರೋತ್ಸಾಹವನ್ನು ಕೊಡಲಾಯಿತು. ಕೇಂದ್ರ ಸರಕಾರ 2022ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಇರಿಸಿಕೊಂಡಿದೆ.
ಕೃಷಿ ಬಂಡವಾಳದ ವ್ಯವಸ್ಥೆ
ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಲು ಬಂಡ ವಾಳದ ಅವಶ್ಯಕತೆಯನ್ನು ಮನಗಂಡು ಸಹಕಾರ ಸಂಘಗಳ ವ್ಯವಸ್ಥೆ ಇದ್ದರೂ ಭಾರತ ಸರಕಾರ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿ ಹಳ್ಳಿಗಳಲ್ಲಿ ಶಾಖೆಗಳನ್ನು ತೆರೆದು ರೈತರಿಗೆ ಸಕಾಲದಲ್ಲಿ ಸಾಲ ಸಿಗುವ ವ್ಯವಸ್ಥೆಯನ್ನು ಮಾಡಿತು. ರಿಸರ್ವ್ ಬ್ಯಾಂಕ್ ದೇಶದ ಬ್ಯಾಂಕುಗಳಿಗೆ ಒಟ್ಟು ಸಾಲದಲ್ಲಿ ಕನಿಷ್ಠ ಶೇ.18ರಷ್ಟನ್ನು ಕೃಷಿ ಕ್ಷೇತ್ರಕ್ಕೆ ನಿಗದಿಪಡಿಸಿದೆ. ಒಟ್ಟಾರೆ ಕೃಷಿ ಸಾಲದಲ್ಲಿ ಶೇ.8ರಷ್ಟು ಹಣವು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೊಡಬೇಕೆಂಬ ಗುರಿಯನ್ನು ನಿಗದಿ ಪಡಿಸಲಾಯಿತು. ಪ್ರತಿಯೊಂದು ಶಾಖೆಯವರು ವಾರ್ಷಿಕ ಕೃಷಿ ಸಾಲದ ಯೋಜನೆಯನ್ನು ತಯಾರಿಸಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಬ್ಯಾಂಕರುಗಳ ಸಮಿತಿಯಲ್ಲಿ ಮಂಡಿಸಿ ಮಾರ್ಚ್ ತಿಂಗಳೊಳಗೆ ಅನುಮೋದನೆ ಪಡೆದುಕೊಂಡು ಏಪ್ರಿಲ್ ತಿಂಗಳಿ ನಿಂದ ಸಾಲ ಬಿಡುಗಡೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಕೃಷಿ ಸಾಲ ವ್ಯವಸ್ಥೆಯ ಸಮರ್ಪಕ ನಿರ್ವಹಣೆಗೆ ನಬಾರ್ಡ್ ಸ್ಥಾಪಿಸ ಲಾಯಿತು. ಇವೆಲ್ಲರ ಮೇಲ್ವಿಚಾರಣೆಗೆ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಒಂದು ವಿಶೇಷ ಇಲಾಖೆ ಕೂಡಾ ಇದೆ. ಇತ್ತೀಚೆಗೆ ಹಣಕಾಸಿನ ಸೇರ್ಪಡೆಯ ಯೋಜನೆಯಲ್ಲಿ ಎಲ್ಲಾ ರೈತರಿಗೆ ಸಕಾಲದಲ್ಲಿ ಸಾಲದ ವ್ಯವಸ್ಥೆಯನ್ನು ಕಿಸಾನ್ ಕ್ರೆಡಿಟ್‌ಕಾರ್ಡ್ ಮೂಲಕ ಅಳವಡಿಸಲಾಗಿದೆ. ಇದರಿಂದ ರೈತರು ತಮಗೆ ಬೇಕಾದ ಸವಲತ್ತುಗಳನ್ನು ನಗದು ರಹಿತ ವ್ಯವಹಾರದಿಂದ ಪಡೆಯಬಹು ದಾಗಿದೆ. 2017ರ ಮಾರ್ಚ್ ಅಂತ್ಯದ ವೇಳೆಗೆ ಕೃಷಿ ಸಾಲದಡಿಯಲ್ಲಿ 12 ಲಕ್ಷ ಕೋಟಿಯಷ್ಟು ಸಾಲ ಕೊಡಲಾಗಿದೆ.
ಕೃಷಿ ಅಭಿವೃದ್ಧಿಗೆ ಯೋಜನೆಗಳು
10 ಲಕ್ಷ ಕೋಟಿಯಷ್ಟು ಕೃಷಿ ಸಾಲದ ಬಿಡುಗಡೆ. ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಗೆ 9 ಸಾವಿರ ಕೋಟಿ, ದೀರ್ಘಾವಧಿ ನೀರಾವರಿ ಯೋಜನೆಗಳಿಗೆ 20 ಸಾವಿರ ಕೋಟಿ, ರೈತರ ಹೊಲಗ ಳಲ್ಲಿ ಹನಿ ನೀರಾವರಿ ಪದ್ಧತಿ ಯನ್ನು ಅಳವಡಿಸಲು 5 ಸಾವಿರ ಕೋಟಿ ಹಾಗೂ 3 ಲಕ್ಷದವರೆಗಿನ ಬೆಳೆ ಸಾಲಕ್ಕೆ ಬಡ್ಡಿಯ ನೇರ ಸಬ್ಸಿಡಿ ಬಿಡುಗಡೆಗೆ 21 ಸಾವಿರ ಕೋಟಿಯನ್ನು ನಿಗದಿಪಡಿಸಲಾ ಗಿದೆ. ಕೃಷಿ ಕ್ಷೇತ್ರಕ್ಕೆ ಅನುಕೂಲ ವಾಗುವ ಸಲುವಾಗಿ 648 ಕೃಷಿ ವಿಜ್ಞಾನ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಕೃಷಿ ಕ್ಷೇತ್ರಕ್ಕೆ ಪೂರಕವಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಹಾಗೂ ಕುಡಿಯುವ ನೀರಿನ ಯೋಜನೆ, ಕೃಷಿ ಮಾರುಕಟ್ಟೆಯ ಆಧುನೀಕರಣ ಇತ್ಯಾದಿಗಳಿಗೆ ಸಾಕಷ್ಟು ಹಣವನ್ನು ನಿಗದಿಪಡಿಸಲಾಗಿದೆ.
ರೈತರ ಸಾಲ ಸಮಸ್ಯೆಗಳು:
ದೇಶದ ಬಹುತೇಕ ರೈತರು ಮಳೆಯಾಶ್ರಿತ ಕೃಷಿಯನ್ನು ಮಾಡುತ್ತಾ ಬಂದಿರುತ್ತಾರೆ. ಉತ್ತಮ ಮಳೆ ಸಕಾಲದಲ್ಲಿ ಬಂದರೆ ನೀರಾವರಿಯನ್ನೇ ಅವಲಂಬಿಸಿರುವ ಹಾಗೂ ಮಳೆಯಾಧಾರಿತ ಕೃಷಿಕರಿಗೆ ಸಮಸ್ಯೆ ಬರುವುದಿಲ್ಲ. ಕಳೆದ ಕೆಲವೊಂದು ವರ್ಷಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿ ರೈತರ ಆದಾಯವು ಕಡಿಮೆಯಾದ್ದರಿಂದ ಸಾಲ ಮರುಪಾವತಿಯ ಸಾಮರ್ಥ್ಯ ಕಡಿಮೆಯಾಯಿತು. ಇದರ ಜೊತೆಗೆ ಕೃಷಿಗೆ ಬೇಕಾದ ಸಾಮಾಗ್ರಿಗಳಾದ ಗೊಬ್ಬರ, ಬೀಜ, ಕ್ರಿಮಿನಾಶಕಗಳ ಬೆಲೆಯೂ ಹೆಚ್ಚಾಯಿತು. ಕೃಷಿ ಕಾರ್ಮಿಕರ ವೇತನದಲ್ಲಿ ಹೆಚ್ಚಳ, ಅಸಮರ್ಪಕ ವಿದ್ಯುತ್ ಸರಬರಾಜು ಇತ್ಯಾದಿ ಸಮಸ್ಯೆಗಳಿಂದ ಕೃಷಿಯ ಲಾಭವೂ ಕಡಿಮೆಯಾಯಿತು. ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆಯೂ ಕೂಡಾ ಹೆಚ್ಚಾಗತೊಡಗಿತು. ರೈತರ ಆತ್ಮಹತ್ಯೆಗೆ ಬ್ಯಾಂಕ್ ಸಾಲ ಒಂದೇ ಕಾರಣವಲ್ಲ. ಸಾಮಾಜಿಕ ಸಮಸ್ಯೆಗಳು, ಮಿತಿಮೀರಿದ ಲೇವಾದೇವಿ ವ್ಯವಹಾರದ ಸಾಲಗಳು ಹಾಗೂ ಇತರ ವ್ಯಸನಗಳು ಕೂಡಾ ಕಾರಣ ಎಂದು ಅನೇಕ ಸಮೀಕ್ಷೆಗಳಲ್ಲಿ ಕಂಡುಬಂದಿದೆ. 1990ರಲ್ಲಿ ಹತ್ತು ಸಾವಿರದವರೆಗಿನ ರೈತರ ಸಾಲವನ್ನು ಮನ್ನಾ ಮಾಡಲಾಯಿತು. ಇದಕ್ಕೆ ಸುಮಾರು 10,500 ಕೋ. ರೂ.ಯಷ್ಟು ಹಣವನ್ನು ಕೇಂದ್ರ ಸರಕಾರ ತೊಡಗಿಸಿತು. ಇದಾದನಂತರ 2008ರಲ್ಲಿ ಕೇಂದ್ರ ದೊಡ್ಡ ಮೊತ್ತದ ರೈತರ ಸಾಲ ಮನ್ನಾ ಯೋಜನೆಯನ್ನು ಜಾರಿಗೊಳಿಸಿತು. ಇದಕ್ಕೆ ಸುಮಾರು 71,000 ಕೋ.ರೂ. ಹಣವನ್ನು ಕೇಂದ್ರದಿಂದ ರೈತರ ಖಾತೆಗೆ ಬ್ಯಾಂಕುಗಳ ಮುಖಾಂತರ ಕೊಡಮಾಡಲಾಯಿತು. ಇನ್ನು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ವಿದರ್ಭ ಪ್ಯಾಕೇಜ್, ಕಾಫಿ ಪ್ಯಾಕೇಜ್ ಮುಂತಾದ ಸಾಲ ಮನ್ನಾ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಬ್ಯಾಂಕು ಗಳು ರೈತರ ಸಮಸ್ಯೆಗಳನ್ನು ಮನಗಂಡು ಅನುತ್ಪಾದಿತ ಸಾಲಗಳ ವಸೂಲಾತಿ ಮಾಡಲು “”ಒನ್ ಟೈಮ್ ಸೆಟಲ್‌ಮೆಂಟ್” ಯೋಜ ನೆ ಗಳನ್ನು ಜಾರಿಗೆ ತಂದು, ಬಹಳಷ್ಟು ರೈತರ ಒಂದು ಭಾಗದ ಬಡ್ಡಿ ಹಾಗೂ ಅಸಲಿನ ಮೊತ್ತವನ್ನು ಮನ್ನಾ ಮಾಡಿದವು. ರೈತರ ಒಳಿತಿಗಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ವಿನಿಯೋಗಿ ಸಿದರೂ ರೈತರ ಆತ್ಮಹತ್ಯೆ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ.
2017ರ ಮಾರ್ಚ್ ಅಂತ್ಯಕ್ಕೆ ಸುಮಾರು ರೂಪಾಯಿ 2. 40 ಲಕ್ಷ ಸಾವಿರ ಕೋಟಿಯಷ್ಟು ಅನುತ್ಪಾದಿತ ಸಾಲಗಳು ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟದ್ದು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಿದರೆ ದೇಶದ ಆರ್ಥಿಕತೆಯ ಮೇಲೆ ಯಾವ ಪರಿಣಾಮ ಬೀರಬಹುದು ಹಾಗೂ ಈ ಹೆಜ್ಜೆ ಶಾಶ್ವತ ಪರಿಹಾರವೇ ಎಂಬುದನ್ನು ನಾವು ವಿಶ್ಲೇಷಣೆ ಮಾಡಲೇಬೇಕು. ಇಲ್ಲಿಯವರೆಗೆ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರು ಪಾವತಿ ಮಾಡಿದ ರೈತರಿಗೆ ಯಾವ ಲಾಭವೂ ಸಿಗಲಿಲ್ಲ. ಇದರ ಪ್ರಯೋಜನ ಸಾಲ ಮರುಪಾವತಿ ಮಾಡದ ರೈತರಿಗೆ ಮಾತ್ರ ಸಿಕ್ಕಿದೆ. ಈ ವರ್ಷ ಕೆಲವು ರಾಜ್ಯಗಳಲ್ಲಿ ಎಲ್ಲಾ ರೈತರ ಭಾಗಶಃ ಸಾಲ ಮನ್ನಾ ಯೋಜನೆ ಕೂಡಾ ಜಾರಿಯಾಗಿದೆ. ಇದರ ಉಪಯೋಗ ಎಷ್ಟರಮಟ್ಟಿಗೆ ರೈತರಿಗೆ ಸಿಕ್ಕಿದೆಯೆಂದು ಇನ್ನೂ ಕಾದು ನೋಡಬೇಕಾಗಿದೆ. ಸಾಲ ಮನ್ನಾ ಎಂಬ ಘೋಷಣೆಗಳಿಂದ ಸಾಲ ಮರುಪಾವತಿಯ ಇಚ್ಛೆ ಸಾಮಾನ್ಯವಾಗಿ ಎಲ್ಲಾ ವರ್ಗದ ರೈತರಲ್ಲಿ ಕಡಿಮೆಯಾಗಿದೆ. ಇದರಿಂದ ರೈತರು ಇನ್ನೊಮ್ಮೆ ಸಾಲ ಮನ್ನಾ ಯೋಜನೆ ಜಾರಿಗೆ ಬರುತ್ತದೆಯೇ ಎಂದು ಕಾದು ನೋಡುವಂತಾಗಿದೆ. ಸಾಲ ಮನ್ನಾವನ್ನು ಜಾರಿಗೊಳಿಸಿದರೆ ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳ ಸಾಲ ವಸೂಲಾತಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಹಾಗೂ ಠೇವಣಿದಾರರಿಗೆ ಸಮಸ್ಯೆಯಾಗುತ್ತದೆ.
ಲಾಭದಾಯಕ ಕೃಷಿ
ಸಮಗ್ರ ಕೃಷಿ ಯೋಜನೆಯಡಿಯಲ್ಲಿ ಕೃಷಿ, ಹೈನುಗಾರಿಕೆ, ಪಶು ಸಂಗೋಪನೆ, ತೋಟಗಾರಿಕಾ ಬೆಳೆ ಇತ್ಯಾದಿಗಳನ್ನು ಆಳವಡಿಸಿ ಕೊಂಡರೆ ರೈತನಿಗಾಗುವ ನಷ್ಟವು ಕಡಿಮೆಯಾಗುತ್ತದೆ. ಪ್ರಗತಿಪರ ರೈತರು ಆಧುನಿಕ ಕೃಷಿ ಪದ್ಧತಿಯನ್ನು ಆಳವಡಿಸಿಕೊಂಡು ಅತಿ ಹೆಚ್ಚಿನ ಉತ್ಪಾದನೆಯನ್ನು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಕೃಷಿ ಕ್ಷೇತ್ರಕ್ಕೆ ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳಿಂದ ಬಂಡವಾಳದ ಕೊರತೆಯಿಲ್ಲ. ಹಾಗಾಗಿ ಸಾಲ ಮನ್ನಾ ಯೋಜನೆಯಿಂದ ಕೃಷಿಕನು ಸಾಲದ ಕಪಿಮುಷ್ಠಿಯಿಂದ ಹೊರಗೆ ಬರುತ್ತಾನೆಂದು ನಿಖರವಾಗಿ ಹೇಳಲು ಬರುವುದಿಲ್ಲ. ಇದು ಒಂದು ತಾತ್ಕಾಲಿಕ ವ್ಯವಸ್ಥೆಯಾಗಿ ರುತ್ತದೆ. ಆದುದರಿಂದ ಕೃಷಿಯು ಒಂದು ಲಾಭದಾಯಕ ವೃತ್ತಿಯೆಂದು ಪರಿಗಣಿಸಿ ರೈತರು ಮುಂದುವರಿದರೆ ಯಾವ ತೊಂದರೆಯೂ ಬರಲಾರದು.
ಮಾರ್ಗೋಪಾಯಗಳು
ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಇಲಾಖೆ ಇತ್ಯಾದಿ ಸಂಸ್ಥೆಗಳು ಗ್ರಾಮ ಮಟ್ಟದಲ್ಲಿ ರೈತರೊಡನೆ ನೇರ ಸಂಪರ್ಕವನ್ನು ಸಾಧಿಸಿ, ಬೆಳೆ ಹಂಗಾಮಿನ ಪೂರ್ವದಲ್ಲಿ ತರಬೇತಿಯನ್ನು ನೀಡುತ್ತಾ ಬರಬೇಕು
ಮುಂಗಾರು ಅಥವಾ ಹಿಂಗಾರು ವಿಳಂಬವಾದಲ್ಲಿ ಬೆಳೆ ಪರಿವರ್ತನೆ ಹಾಗೂ ಕಡಿಮೆ ತೇವಾಂಶಕ್ಕೆ ಹೊಂದಿಕೊಳ್ಳುವ ಬೆಳೆಗಳ ಬಗ್ಗೆ ತುರ್ತಾಗಿ ಮಾಹಿತಿ ಕೊಡಬೇಕು
ಆಧುನಿಕ ಕೃಷಿ ಬಗ್ಗೆ ಮೊಬೈಲ್ ಆ್ಯಪ್‌ಗ್ಳ ಮಾಹಿತಿ
ಕೃಷಿ ವಿಮಾ ಕಂಪನಿಗಳ ಮೂಲಕ ಬೆಳೆ ವಿಮೆಯನ್ನು ಎಲ್ಲಾ ಬೆಳೆಗಳಿಗೂ ವಿಸ್ತರಿಸಬೇಕು. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಬೆಳೆ ವಿಮೆ ವೆಚ್ಚವನ್ನು ಸರಕಾರವೇ ಭರಿಸಬೇಕು
ಎಲ್ಲಾ ರೈತರನ್ನು ಹಾಗೂ ಅವರ ಮನೆಯ ಸದಸ್ಯರನ್ನು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರûಾ ಬೀಮಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುವುದು. ಇದಕ್ಕೆ ತಗಲುವ ವಾರ್ಷಿಕ ಪ್ರೀಮಿಯಂ ಕೇವಲ ರೂಪಾಯಿ 342 ರೂ.ಆಗಿದ್ದು, ಇದನ್ನು ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಹೆಚ್ಚುವರಿಯಾಗಿ ನೀಡುವುದು.
3 ಲಕ್ಷದವರೆಗಿನ ಎಲ್ಲಾ ರೀತಿಯ ಕೃಷಿ ಸಾಲಗಳಿಗೆ ಬಡ್ಡಿ ರೂಪದ ಸಬ್ಸಿಡಿಯನ್ನು ಈಗಿನ ಶೇ.3ರಿಂದ ಶೇ.5ರವರೆಗೆ (ಈಗ ಬೆಳೆ ಸಾಲಕ್ಕಷ್ಟೇ ಅನ್ವಯ) ಏರಿಸುವುದು
ಹೈಟೆಕ್ ಕೃಷಿಗಳಾದ ಹೂ, ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಪ್ರೋತ್ಸಾಹ ನೀಡಲು ಪ್ರತಿಯೊಂದು ವಲಯದಲ್ಲಿ ಶೀತಲೀಕರಣದ ವ್ಯವಸ್ಥೆಯನ್ನು ಮಾಡುವುದು
ಎಣ್ಣೆ ಹಾಗೂ ಬೇಳೆ ಕಾಳುಗಳ ಕೃಷಿಗೆ ಪ್ರೋತ್ಸಾಹ ನೀಡಲು ಸಾರಜನಕವನ್ನು ಹೀರಿ ಗಿಡಗಳಿಗೆ ರವಾನೆ ಮಾಡುವ ಬ್ಯಾಕ್ಟೀರಿಯಾಗಳನ್ನು ಶುಲ್ಕ ರಹಿತವಾಗಿ ರೈತರಿಗೆ ನೀಡುವುದು
ದೇಶದಲ್ಲಿರುವ ಬಡ್ಡಿ ವ್ಯವಹಾರ ಮಾಡುವವರನ್ನು ನಿಷೇಧಿಸಿ, ರೈತರಿಗೆ ಬೇಕಾದ ಬಂಡವಾಳವನ್ನು ಸಹಕಾರಿ ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳ ಮೂಲಕವೇ ಕೊಡಮಾಡುವುದು
ರೈತರು ಕೆಲವು ವಿಶಿಷ್ಟ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತಹ ಸಾಲಗಳ ಮರುಪಾವತಿಯನ್ನು ಮರುಹೊಂದಾಣಿಕೆ ಮಾಡುವ ಅಧಿಕಾರವನ್ನು ಆಯಾ ಶಾಖಾಧಿಕಾರಿಗಳಿಗೆ “”ರಿಸರ್ವ್ ಬ್ಯಾಂಕಿನ ಸ್ಟ್ಯಾಂಡಿಂಗ್ ಗೈಡ್‌ಲೈನ್”ನಡಿಯಲ್ಲಿ ಕೊಡುವುದು
ರೈತರು ತಮ್ಮ ಬೆಳೆಗೆ ಒಳ್ಳೆಯ ಧಾರಣೆ ಬರುವವರೆಗೆ ಕಾಯುವುದಾದರೆ ಕೃಷಿ ಉತ್ಪನ್ನಗಳನ್ನು ರಾಜ್ಯದ ಆಹಾರ ಉಗ್ರಾಣಗಳಲ್ಲಿ ಅಥವಾ ಇನ್ನಿತರ ಗೋದಾಮುಗಳಲ್ಲಿ ಶೇಖರಿಸಿಡುವ ಸೌಲಭ್ಯ ಒದಗಿಸುವುದು.
ರೈತರು ಹೈನುಗಾರಿಕೆ ಹಾಗೂ ಪಶುಸಂಗೋಪನೆಯನ್ನು ಉಪ ಕಸುಬಾಗಿ ಅಳವಡಿಸುವುದು
ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಬೇಸಾಯಕ್ಕೆ ತಗಲುವ ವೆಚ್ಚವನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಹಾಗೂ ಸಾವಯವ ಸಂತೆಯಲ್ಲಿ ತಮ್ಮ ಉತ್ಪನ್ನವನ್ನು ಹೆಚ್ಚಿನ ಧಾರಣೆಗೆ ಮಾರಾಟ ಮಾಡುವುದು
ಕೃಷಿಕರಿಗೆ ಎಕರೆವಾರು ಪ್ರೋತ್ಸಾಹ ಧನವನ್ನು ಈಗಿನ ಹೈನುಗಾರಿಕೆ ಮಾದರಿಯಲ್ಲಿ ಕೊಡಮಾಡಿದರೆ ಸಾಕಷ್ಟು ಅನುಕೂಲ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ವ್ಯವಸ್ಥೆಯು ಯುರೋಪಿಯನ್ ದೇಶಗಳಲ್ಲಿ ಹಲವಾರು ವರ್ಷಗಳಿಂದ ಜಾರಿಯಲ್ಲಿದೆ.
ಭಾರತ ಪ್ರಪಂಚದಲ್ಲಿ ಕೃಷಿ ಉತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೇ ರಲು ಮೇಲ್ಕಾಣಿಸಿದ ಸಲಹೆಗಳು ಪೂರಕವಾಗುತ್ತವೆ ಎಂಬುದು ದೃಢ ಅನಿಸಿಕೆ. ಆದುದರಿಂದ ರೈತರು ಸಾಲ ಮನ್ನಾದ ಬಗ್ಗೆ ಯೋಚಿಸದೆ ಸರಕಾರದ ಸವಲತ್ತು, ಸಹಾಯಧನ ಇತ್ಯಾದಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅನ್ನದಾತರೆಂಬ ಹೆಗ್ಗಳಿಕೆಯನ್ನು ಮುಂದುವರಿಸಬೇಕು.
ಟಿ. ವಿ. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.