ಭಾರತದಲ್ಲಿ ದಾಳಿಗೆ ಐಸಿಸ್ ಸಂಚು; ಎಚ್ಚರಿಕೆ ಅಗತ್ಯ
Team Udayavani, Aug 23, 2022, 6:00 AM IST
ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಐಸಿಸ್ ಉಗ್ರನೊಬ್ಬನನ್ನು ರಷ್ಯಾದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಮೂಲಕ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಬಿಜೆಪಿ ನಾಯಕಿಯಾಗಿದ್ದ ನೂಪುರ್ ಶರ್ಮ ಅವರ ಪ್ರವಾದಿ ಮಹಮ್ಮದ್ ಕುರಿತ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ದಾಳಿಗೆ ಸಂಚು ರೂಪಿಸಲಾಗಿತ್ತಂತೆ. ಈ ಬಗ್ಗೆ ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವೀಸ್ (ಎಫ್ಎಸ್‌ಬಿ) ಖಚಿತಪಡಿಸಿದೆ.
ನೂಪುರ್ ಶರ್ಮ ಮತ್ತು ನವೀನ್ ಕುಮಾರ್ ಜಿಂದಾಲ್ ಎಂಬ ಇಬ್ಬರು ಬಿಜೆಪಿ ನಾಯಕರು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬ ವಿಷಯ ಭಾರೀ ವಿವಾದವನ್ನು ಸೃಷ್ಟಿಸಿತ್ತು. ದೇಶದಲ್ಲೂ ಮುಸ್ಲಿಂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಅಲ್ಲದೆ, ಜಗತ್ತಿನ ಬೇರೆ ಬೇರೆ ಮುಸ್ಲಿಂ ದೇಶಗಳೂ ಈ ಬಗ್ಗೆ ತೀವ್ರ ಪ್ರತಿರೋಧ ತೋರಿದ್ದವು. ಇದಾದ ಮೇಲೆ ನೂಪುರ್ ಶರ್ಮರನ್ನು ಬಿಜೆಪಿ ಸಸ್ಪೆಂಡ್ ಮಾಡಿತ್ತು. ಅದೇ ರೀತಿ ನವೀನ್‌ಕುಮಾರ್ ಜಿಂದಾಲ್‌ರನ್ನು ಪಕ್ಷದಿಂದ ವಜಾ ಮಾಡಲಾಗಿತ್ತು. ಇದಾದ ಮೇಲೆ ಕೆಲವು ದಿನಗಳ ಬಳಿಕ ವಿವಾದ ತಣ್ಣಗಾಗಿತ್ತು.
ಆದರೆ ದೇಶದಲ್ಲಿ ಈ ವಿವಾದ ತಣ್ಣಗಾಗಿದ್ದರೂ ಭಯೋತ್ಪಾದನಾ ಸಂಘಟನೆಗಳು ಮಾತ್ರ ಈ ಬಗ್ಗೆ ಇನ್ನೂ ಆಕ್ರೋಶ ಇರಿಸಿಕೊಂಡಿದ್ದವು. ಈ ಹಿಂದೆಯೇ ಭಾರತ ಉಪಖಂಡದಲ್ಲಿರುವ ಅಲ್‌ಖೈದಾ ಸಂಘಟನೆ, ದಿಲ್ಲಿ, ಮುಂಬಯಿ, ಉತ್ತರ ಪ್ರದೇಶ, ಗುಜರಾತ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಬೆದರಿಕೆ ಹಾಕಿತ್ತು.
ಇದರ ಜತೆಗೆ ಐಸಿಸ್ ಉಗ್ರರೂ, ಪ್ರವಾದಿ ಮಹಮ್ಮದ್ ಅವರಿಗೆ ಅವಹೇಳನ ಮಾಡಿದ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಂದಿನಿಂದಲೂ ಹೊಂಚು ಹಾಕುತ್ತಲೇ ಇದ್ದರು ಎಂಬ ಮಾಹಿತಿಯೂ ಗೊತ್ತಾಗಿತ್ತು. ಈ ಹಿಂದಿನ ವಿದೇಶಿ ಗುಪ್ತಚರ ದಳದ ಮಾಹಿತಿ ಪ್ರಕಾರ, ಐಸಿಸ್ ಸಂಘಟನೆ ಇಬ್ಬರು ಉಗ್ರರನ್ನು ಭಾರತದಲ್ಲಿ ದಾಳಿ ಮಾಡುವ ಸಲುವಾಗಿ ಸಜ್ಜುಗೊಳಿಸಿತ್ತು. ಅಂದರೆ ಜು.27ರಂದೇ ವಿದೇಶಿ ಗುಪ್ತಚರ ಸಂಸ್ಥೆಯೊಂದು ಈ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿತ್ತು.
ಈ ಪ್ರಕಾರ, ಉಗ್ರರಲ್ಲಿ ಒಬ್ಬ ಕಿರ್ಗಿಸ್ಥಾನದವನು, ಮತ್ತೊಬ್ಬ ಉಜ್ಬೇಕಿಸ್ಥಾನದವನಾಗಿದ್ದು,ಇವರು ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ದರು. ಅಷ್ಟೇ ಅಲ್ಲ ಇವರಲ್ಲಿ ಒಬ್ಬ ಟರ್ಕಿಯಲ್ಲಿದ್ದಾನೆ ಎಂದೂ ಹೇಳಿತ್ತು. ಇದಾದ ಮೇಲೆ ಭಾರತವು ರಷ್ಯಾ ಜತೆಗೆ ಈ ಮಾಹಿತಿ ಹಂಚಿಕೊಂಡು, ತಮ್ಮ ಅಧಿಕಾರಿಗಳಿಗೆ ಮಾಸ್ಕೋಗೆ ಬರಲು ಅವಕಾಶ ಕೊಡಬೇಕು ಮತ್ತು ತನಿಖೆಗೆ ಸಹಕಾರ ನೀಡಬೇಕು ಎಂದು ಕೋರಿತ್ತು. ಇದರಂತೆ ಆಗಸ್ಟ್ ನಲ್ಲಿ ಈ ಬಗ್ಗೆ ಕಾರ್ಯಾಚರಣೆ ನಡೆಸಿ ಈಗ ಒಬ್ಬ ಉಗ್ರನನ್ನು ಬಂಧಿಸಲಾಗಿದೆ.
ಉಗ್ರರ ಈ ಎಲ್ಲ ಯೋಜನೆಗಳಿಗೆ ಮೂರನೇ ದೇಶದವರು ಸಾಥ್ ನೀಡುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದೇಉಗ್ರ ಮತ್ತೂಬ್ಬರ ಸಹಾಯವಿಲ್ಲದೆ ಒಂದು ದೇಶದಿಂದ ಮತ್ತೂಂದು ದೇಶಕ್ಕೆ ಸಲೀಸಾಗಿ ಓಡಾಡಲು ಸಾಧ್ಯವಿಲ್ಲ. ಈ ದೇಶಕ್ಕೂ ಕಟ್ಟುನಿಟ್ಟಿನ ಸಂದೇಶ ಮುಟ್ಟಿಸಬೇಕು. ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ, ಇರಾಕ್ ಮತ್ತು ಸಿರಿಯಾದಲ್ಲಿರುವ ಐಸಿಸ್ ಉಗ್ರರು ವ್ಯವಸ್ಥಿತವಾಗಿಯೇ ಭಾರತದಲ್ಲಿ ದಾಳಿ ನಡೆಸಲು ಮುಂದಾಗಿದ್ದರು ಎಂಬುದು ಗೊತ್ತಾಗುತ್ತದೆ. ಅಲ್ಲದೆ, ಇನ್ನೂ ಒಬ್ಬ ಭಯೋತ್ಪಾದಕ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. ಇವನನ್ನೂ ಬಂಧಿಸಬೇಕು. ಅಲ್ಲದೆ, ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ನಾಯಕರಿಗೆ ಸೂಕ್ತ ಭದ್ರತೆ ನೀಡುವ ಕೆಲಸವನ್ನೂ ಕೇಂದ್ರ ಸರಕಾರ ಮಾಡಬೇಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.